ಆಹಾರ: ಮಕ್ಕಳಿಗಾಗಿ ಆರೋಗ್ಯಕರ ಸ್ನ್ಯಾಕ್ಸ್ ಯಾವವು? ಮಾಡುವುದು ಹೇಗೆ?
ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಓದುವುದರಿಂದ ಅವರಿಗೆ ಏನಾದರೂ ಸವಿಯಬೇಕು ಅನ್ನಿಸುವುದು ಸಹಜ. ಮಕ್ಕಳಿಗಾಗಿ ಅಂಗಡಿಯಲ್ಲಿ ಸಿಗುವ ಪ್ಯಾಕೇಟ್ ಸ್ನ್ಯಾಕ್ಸ್ ಕೊಳ್ಳುವ ಬದಲು ಇಲ್ಲಿರುವ ರೀತಿ ತಯಾರಿಸಿ ಕೊಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಇವುಗಳನ್ನು ಮಕ್ಕಳು ಕೂಡ ಸುಲಭವಾಗಿ ತಯಾರಿಸಬಹುದು. ಒಮ್ಮೆ ತಯಾರಿಸಿದರೆ ತಿಂಗಳವರೆಗೆ ಸವಿಯಬಹುದು. ಇವುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್.ಎಸ್.
***
ರವಾ ಕಾಯ್ನ್ ಮಸಾಲ ಪೂರಿ
ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ 2 ಕಪ್, ಉಪ್ಪು 1/2 ಟೀ ಚಮಚ, ಜೀರಿಗೆ ಪುಡಿ 1/2 ಟೀ ಚಮಚ, ತುಪ್ಪ 1 ಟೀ ಚಮಚ, ನೀರು ಅಂದಾಜು 1/2 ಕಪ್, ಕರಿಯಲು ಎಣ್ಣೆ, ಚೀಸ್ ಪೌಡರ‍್, ಮಿಂಟ್ ಮಸಾಲ ಪೌಡರ‍್, ಚಟ್ ಪಟ್ ಮಸಾಲ ಪೌಡರ‍್.
ಮಿಂಟ್ ಮಸಾಲ ಪುಡಿ: ಜಲ್ ಜೀರಾ ಪೌಡರ‍್ ಅಥವಾ ಚಾಟ್ ಮಸಾಲ ಪೌಡರ‍್ 1 ಟೀ ಚಮಚ, ಪುದೀನಾ ಪೌಡರ‍್ 1 ಟೀ ಚಮಚ (ಪುದೀನಾ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ). ಇವುಗಳನ್ನು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಚಟ್ ಪಟ್ ಮಸಾಲ: ಅಚ್ಚಖಾರದ ಪುಡಿ 1/2 ಟೀ ಚಮಚ, ಉಪ್ಪು 1/2 ಟೀ ಚಮಚ ಪೆರಿ ಪೆರಿ ಮಸಾಲ ಅಥವಾ ಗರಂ ಮಸಾಲ 1/2 ಟೀ ಚಮಚ. ತಿಳಿಸಿರುವ ಸಾಮಗ್ರಿಗಳನ್ನು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
ತಯಾರಿಸುವ ವಿಧಾನ: ಚಿರೋಟಿ ರವೆ, ಉಪ್ಪು, ಜೀರಿಗೆ ಪುಡಿ ಇಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿಕೊಳ್ಳಿ. ಬಳಿಕ ಬಟ್ಟಲಿಗೆ ಹಾಕಿಕೊಳ್ಳಿ. 1 ಟೀ ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಸೇರಿಸಿ ಚೆನ್ನಾಗಿ ನಾದಿಕೊಂಡು ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಕಾಲು ಗಂಟೆ ಮುಚ್ಚಿಡಿ. ಬಳಿಕ ಹಿಟ್ಟಿನಿಂದ ದೊಡ್ಡ ಉಂಡೆಯನ್ನು ತಯಾರಿಸಿಕೊಂಡು ಚಪಾತಿಯಂತೆ ತೆಳುವಾಗಿ ಲಟ್ಟಿಸಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ರೌಂಡ್ ಶೇಪ್‌ನಲ್ಲಿ (ಚಿಕ್ಕ ಮುಚ್ಚಳದಿಂದ ಕತ್ತರಿಸಿಟ್ಟುಕೊಳ್ಳಿ) ಎಲ್ಲವನ್ನೂ ತಯಾರಿಸಿಟ್ಟುಕೊಳ್ಳಿ.
ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿದ ರವಾ ಕಾಯ್ನ್ ಹಾಕಿ. ಪೂರಿಯಂತೆ ಉಬ್ಬಲು ಪ್ರಾರಂಭವಾಗುತ್ತದೆ. ಎರಡೂ ಬದಿಯೂ ಗರಿಗರಿಯಾಗಿ ಕೆಂಬಣ್ಣಕ್ಕೆ ಬಂದ ಬಳಿಕ ಎಣ್ಣೆಯಿಂದ ತೆಗೆಯಿರಿ. ತಯಾರಿಸಿದ ಪೂರಿಗಳನ್ನು ಮೂರು ಭಾಗ ಮಾಡಿಟ್ಟುಕೊಳ್ಳಿ. ಮಸಾಲೆ ಪುಡಿಯನ್ನು ಒಂದೊಂದಾಗಿ ಮೂರು ಡಬ್ಬಿಗೆ ಹಾಕಿ. ಮೂರು ಭಾಗ ಮಾಡಿರುವ ರವಾ ಕಾಯ್ನ್ ಪೂರಿಯನ್ನು ಸೇರಿಸಿ ಮುಚ್ಚಳ ಮುಚ್ಚಿ. ಮಸಾಲೆ ಪೂರಿಗೆ ಅಂಟಿಕೊಳ್ಳುವಂತೆ ನಿಧಾನವಾಗಿ ಮೇಲೆ ಕೆಳಗೆ ಮಾಡಿ. ಇದನ್ನು ಒಂದು ಡಬ್ಬಿಗೆ ಹಾಕಿ ಗಾಳಿಯಾಡದಂತೆ ಮುಚ್ಚಳ ಮುಚ್ಚಿ. ರವಾ ಕಾಯ್ನ್ ಮಸಾಲ ಪೂರಿಯನ್ನು ಒಂದು ತಿಂಗಳವರೆಗೆ ಸವಿಯಬಹುದು.
ಮೆಕ್ಕೆಜೋಳದ ಚೀಸ್ ನ್ಯಾಚೊಸ್
ಬೇಕಾಗುವ ಸಾಮಗ್ರಿಗಳು: ಮೆಕ್ಕೆಜೋಳದ ಹಿಟ್ಟು ಒಂದೂ ಕಾಲು ಕಪ್, ಮೈದಾ ಹಿಟ್ಟು 1/4 ಕಪ್, ನೀರು 1 ಕಪ್, ಓರಿಗಾನೊ ಪೌಡರ‍್ 1 ಟೀ ಚಮಚ, ಚಿಟಿಕೆ ಅರಿಶಿನ, ಚೀಸ್ ಪೌಡರ‍್.
ತಯಾರಿಸುವ ವಿಧಾನ: ಬಾಣಲೆಗೆ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಕುದಿಸಿಕೊಳ್ಳಿ. ಬಳಿಕ ಒಲೆಯನ್ನು ಆರಿಸಿ ಮೆಕ್ಕೆ ಜೋಳದ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ ಐದು ನಿಮಿಷ ಮುಚ್ಚಳ ಮುಚ್ಚಿಡಿ. ನಂತರ ಮೈದಾ ಹಿಟ್ಟು, ಓರಿಗಾನೊ ಪೌಡರ‍್ ಸೇರಿಸಿ ಮೃದುವಾಗಿ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟಿನಿಂದ ದೊಡ್ಡ ದೊಡ್ಡ ಉಂಡೆಗಳನ್ನು ತಯಾರಿಸಿಕೊಳ್ಳಿ. ಚಪಾತಿ ಮಣೆಗೆ ಯಾವುದಾದರೂ ಹಿಟ್ಟನ್ನು ಉದುರಿಸಿಕೊಂಡು ಲಟ್ಟಣಿಗೆಯಿಂದ ಚಪಾತಿಯಂತೆ ತೆಳುವಾಗಿ ಲಟ್ಟಿಸಿಕೊಳ್ಳಿ. ಬಳಿಕ ಒಂದು ಫೋರ್ಕ್ ತೆಗೆದುಕೊಂಡು ನಿಧಾನವಾಗಿ ಅದರ ಮೇಲೆ ಒತ್ತುತ್ತಾ ಹೋಗಿ. ಹೀಗೆ ಮಾಡುವುದರಿಂದ ಕರಿಯುವಾಗ ಉಬ್ಬುವುದಿಲ್ಲ. ನಂತರ ಚಾಕುವಿನಿಂದ ತ್ರಿಕೋನ ರೀತಿಯಲ್ಲಿ ಕತ್ತರಿಸಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿದ ನ್ಯಾಚೊಸ್ ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿ ಕೆಂಬಣ್ಣ ಬರುವರೆಗೆ ಕರಿಯಿರಿ. ಒಂದು ಡಬ್ಬಿಗೆ ಸ್ವಲ್ಪ ಚೀಸ್ ಪೌಡರ‍್ ಹಾಕಿ. ಜೊತೆಗೆ ತಯಾರಿಸಿದ ನ್ಯಾಚೊಸ್ ಸೇರಿಸಿ ಮುಚ್ಚಳ ಮುಚ್ಚಿ. ನಿಧಾನವಾಗಿ ಮೇಲೆ ಕೆಳಗೆ ಮಾಡಿ. ಬಳಿಕ ಸವಿಯಿರಿ. ಈ ನ್ಯಾಚೊಸ್‌ಅನ್ನು ತಯಾರಿಸಿ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ಬೇಕಾದಾಗ ನಿಮಗೆ ಇಷ್ಟವಾದ ಮಸಾಲೆಯೊಂದಿಗೆ ಸವಿಯಬಹುದು.
ಗರಿ ಗರಿಯಾದ ರೈಸ್ ಸ್ನ್ಯಾಕ್ಸ್
ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು 2 ಕಪ್ (250ಗ್ರಾಂ), ಕಡಲೆಹಿಟ್ಟು 1/2 ಕಪ್ (50 ಗ್ರಾಂ), ಉಪ್ಪು 1/2 ಟೀ ಚಮಚ, ತುಪ್ಪ 1 ಟೇಬಲ್ ಚಮಚ, ನೀರು 1 ಕಪ್, ಕರಿಯಲು ಎಣ್ಣೆ.
ಮ್ಯಾಜಿಕ್ ಮಸಾಲೆ: ಅಚ್ಚಖಾರದ ಪುಡಿ 1 ಟೀ ಚಮಚ, ಚಾಟ್ ಮಸಾಲೆ 1 ಟೀ ಚಮಚ, ಕಾಳುಮೆಣಸಿನ ಪುಡಿ 1 ಟೀ ಚಮಚ, ಮ್ಯಾಗಿ ಮಸಾಲೆ 1 ಟೀ ಚಮಚ. ತಿಳಿಸಿರುವ ಮಸಾಲೆಯನ್ನು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಟೊಮೆಟೊ ಮಸಾಲ ಪುಡಿ: ಟೊಮೆಟೊ ಮಸಾಲ ಪುಡಿ 1 ಟೇಬಲ್ ಚಮಚ (ಟೊಮೆಟೊ ಹಣ್ಣನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಿ), ಅಚ್ಚಖಾರದಪುಡಿ 1 ಟೀ ಚಮಚ, ಚಾಟ್ ಮಸಾಲ 1 ಟೀ ಚಮಚ, ಉಪ್ಪು 1/2 ಟೀ ಚಮಚ. ತಿಳಿಸಿರುವ ಸಾಮಗ್ರಿಗಳನ್ನು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
ತಯಾರಿಸುವ ವಿಧಾನ: ಬಾಣಲೆಗೆ ನೀರನ್ನು ಹಾಕಿ ಉಪ್ಪು ಮತ್ತು ತುಪ್ಪವನ್ನು ಸೇರಿಸಿ ಕುದಿಸಿ. ಬಳಿಕ ಒಲೆಯನ್ನು ಆರಿಸಿ. ಜರಡಿ ಹಿಡಿದ ಅಕ್ಕಿಹಿಟ್ಟು ಮತ್ತು ಕಡಲೆಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ಐದು ನಿಮಿಷ ಮುಚ್ಚಳ ಮುಚ್ಚಿಡಿ. ಬಳಿಕ ಮಿಶ್ರಣ ಮಾಡಿ. ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಹಿಟ್ಟಿನಿಂದ ಕಿತ್ತಲೆ ಗಾತ್ರದ ಉಂಡೆಗಳನ್ನು ತಯಾರಿಸಿಕೊಂಡು ಅದನ್ನು ಚಪ್ಪಟೆ ಮಾಡಿಕೊಳ್ಳಿ (ತುಂಬ ತೆಳುವಾಗಿ ಬೇಡ). ಬಳಿಕ ಒಂದು ಕತ್ತರಿಯಿಂದ ತೆಳುವಾಗಿ ಉದ್ದುದ್ದ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವರೆಗೆ ಗರಿ ಗರಿಯಾಗಿ ಕರಿಯಿರಿ. ನಂತರ ತಿಳಿಸಾರು ಮಸಾಲೆಯನ್ನು ಬಟ್ಟಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲಿ ನಿಮಗೆ ಇಷ್ಟವಾದ ಮಸಾಲೆಯನ್ನು ಹಾಕಿಕೊಳ್ಳಬಹುದು. ರುಚಿಕರವಾದ ರೈಸ್ ಸ್ನಾಕ್ಸ್ ಅನ್ನು ಕಾಫಿಯೊಂದಿಗೆ ಸವಿಯಿರಿ. ಇದನ್ನು ಒಮ್ಮೆ ತಯಾರಿಸಿದರೆ ತಿಂಗಳವರೆಗೆ ಸವಿಯಬಹುದು.
ಮಸಾಲೆ ರೈಸ್ ಕ್ರಾಕರ‍್
ಬೇಕಾಗುವ ಸಾಮಗ್ರಿಗಳು: ಹಸಿಮೆಣಸಿನಕಾಯಿ 4, ಶುಂಠಿ 2 ಇಂಚು, ಕರಿಬೇವು 15 ರಿಂದ 20 ಎಲೆಗಳು, ಜೀರಿಗೆ 1 ಟೀ ಚಮಚ, ಅಕ್ಕಿ ಹಿಟ್ಟು 2 ಕಪ್ (400 ಗ್ರಾಂ), ಇಂಗು 1/4 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಳ್ಳು 1 ಟೇಬಲ್ ಚಮಚ, ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟ ಹೆಸರುಬೇಳೆ ಮತ್ತು ಕಡಲೆಬೇಳೆ ಎರಡೆರಡು ಟೇಬಲ್ ಚಮಚ, ಬೆಣ್ಣೆ 2 ಟೇಬಲ್ ಚಮಚ, ಅರಿಶಿನ 1/2 ಟೀ ಚಮಚ, ಬಿಸಿ ನೀರು ಅಂದಾಜು ಒಂದೂವರೆ ಕಪ್, ಎಣ್ಣೆ ಕರಿಯಲು.
ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ಜೀರಿಗೆಯನ್ನು ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಬಟ್ಟಲಿಗೆ ಅಕ್ಕಿಹಿಟ್ಟು, ಪುಡಿಮಾಡಿದ ಪೇಸ್ಟ್, ಇಂಗು, ಉಪ್ಪು, ಎಳ್ಳು, ನೆನೆಸಿಟ್ಟ ಬೇಳೆ (ನೀರನ್ನು ತೆಗೆಯಿರಿ), ಬೆಣ್ಣೆ, ಅರಿಶಿನ
ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನೀರನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಹಿಟ್ಟನ್ನು ಮೃದುವಾಗಿ ಕಲಸಿಕೊಳ್ಳಿ. ತಯಾರಿಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ತೆಳುವಾಗಿ ತಟ್ಟಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಂಡು ಮಧ್ಯಮ ಉರಿಯಲ್ಲಿ ಎರಡೂ ಬದಿ ಗರಿ ಗರಿಯಾಗುವರೆಗೆ ಬೇಯಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.