ಕೆಂಪುಹರಿವೆ ಕಲಸನ್ನ
ಮನೆಯ ಸದಸ್ಯರ ಹಿತಕ್ಕಾಗಿ ಆರೋಗ್ಯಕರ ಆಹಾರಗಳನ್ನು ತಯಾರಿಸುವ ಜವಾಬ್ದಾರಿ ಹೆಣ್ಣುಮಕ್ಕಳಿಗೆ ಸವಾಲಿನ ಕೆಲಸವೇ ಸರಿ. ಅದರಲ್ಲೂ ಹಿರಿಯರು, ಮಕ್ಕಳು ಎಲ್ಲರಿಗೂ ಇಷ್ಟವಾಗುವ ಸತ್ವಭರಿತ ಅಡುಗೆಯನ್ನು ನಿತ್ಯವೂ ಮಾಡುವುದು ಅನಿವಾರ್ಯ. ಆದರೆ, ವಿಧವಿಧವಾದ ಅಡುಗೆ ಮಾಡಲು ಹೆಚ್ಚು ಸಮಯ ಬೇಕು. ಪೋಷಕಾಂಶಭರಿತವಾದ ಕೆಲವು ಸೊಪ್ಪು, ತರಕಾರಿಗಳನ್ನು ಬಳಸಿ ಅತಿ ಸುಲಭವಾಗಿ ರುಚಿರುಚಿಯಾದ ಅಡುಗೆ ಮಾಡಿ ಬಡಿಸುವುದು ತಿಳಿದಿದ್ದಲ್ಲಿ ನಾವು ಗೆದ್ದಂತೆಯೇ ಅಲ್ಲವೇ?
ಅಂತಹ ಸುಲಭ ವಿಧಾನದಲ್ಲಿ ರುಚಿಕಟ್ಟಾಗಿ ತಯಾರಿಸಬಹುದಾದ ಅಡುಗೆ ಪದಾರ್ಥಗಳಲ್ಲಿ ಒಂದು, ಕೆಂಪುಹರಿವೆ ಕಲಸನ್ನ. ಸೊಪ್ಪುಗಳು ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಅದರಲ್ಲೂ ಕೆಂಪುಹರಿವೆ ಸೊಪ್ಪು ಹದವಾದ ಕಂಪು ಮತ್ತು ಕೆಂಪು ಬಣ್ಣದಿಂದ ಕೂಡಿದ ಆರೋಗ್ಯಕಾರಿ ಸೊಪ್ಪು. ಬಹೂಪಯೋಗಿಯಾದ ಕೆಂಪುಹರಿವೆಯಲ್ಲಿ ಸಾಂಬಾರ್, ಪಲ್ಯ, ಪಕೋಡದಂತಹ ಖಾದ್ಯಗಳನ್ನು
ತಯಾರಿಸಬಹುದು. ಆದರೆ, ಈ ಸೊಪ್ಪಿನಲ್ಲಿ ರುಚಿಕರವಾದ ಕಲಸನ್ನ ಮಾಡಿ ತಿನ್ನುತ್ತಿದ್ದರೆ, ಅದರ ಸ್ವಾದ ಬಲ್ಲವರಿಗಷ್ಟೇ ಗೊತ್ತು!
ಅದನ್ನು ಮಾಡುವುದು ಹೇಗೆಂದು ನೋಡಿ
ಬೇಕಾಗುವ ಸಾಮಗ್ರಿ
ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಂಡ ಎರಡು ಕಟ್ಟು ತಾಜಾ ಕೆಂಪುಹರಿವೆ ಸೊಪ್ಪು, ಹುಡಿಹುಡಿಯಾಗಿ ಮಾಡಿದ ಒಂದು ಬಟ್ಟಲು ಅನ್ನ, ಎರಡು ಹಸಿಮೆಣಸಿನಕಾಯಿ, ಎರಡು ಒಣಮೆಣಸಿನಕಾಯಿ, 4 ದೊಡ್ಡ ಚಮಚ ಎಣ್ಣೆ, ಒಗ್ಗರಣೆಗೆ ಸಾಸಿವೆ, ಜೀರಿಗೆ , ಇಂಗು, ಕಡಲೆಬೇಳೆ, ಉದ್ದಿನಬೇಳೆ, ಒಂದು ಬಟ್ಟಲು ತೆಂಗಿನತುರಿ, ವಾಂಗಿಬಾತ್ ಪುಡಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ತುಪ್ಪ, ಒಂದು ಚಮಚ ನಿಂಬೆರಸ.
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಚಿಟಿಕೆ ಇಂಗು ಹಾಕಿ, ಬೇಳೆಗಳು ಹದವಾದ ಕೆಂಬಣ್ಣಕ್ಕೆ ಬಂದಾಗ, ಹೆಚ್ಚಿದ ಹಸಿಮೆಣಸಿನಕಾಯಿ ಹಾಗೂ ಮುರಿದ ಒಣಮೆಣಸಿನಕಾಯಿಯನ್ನು ಒಗ್ಗರಣೆಗೆ ಹಾಕಿ. ನಂತರ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕೆಂಪುಹರಿವೆ ಸೊಪ್ಪನ್ನು ಹಾಕಿ ಸ್ವಲ್ಪ ಕೈಯಾಡಿಸಿ ಮುಚ್ಚಿಡಿ. ಎರಡು ನಿಮಿಷ ಬಿಟ್ಟು ಅದಕ್ಕೆ ಸ್ವಲ್ಪ ಉಪ್ಪು, ಚಿಟಿಕೆ ಅರಿಶಿನ, ಅರ್ಧ ಚಮಚ ಸಕ್ಕರೆ, 3 ದೊಡ್ಡ ಚಮಚ ವಾಂಗಿಬಾತ್ ಪುಡಿ ಸೇರಿಸಿ ಮತ್ತೆ 5 ನಿಮಿಷ ಬೇಯಲು ಬಿಡಿ. ಇದಕ್ಕೆ ನೀರು ಹಾಕುವ ಅವಶ್ಯಕತೆ ಇಲ್ಲ. ಒಗ್ಗರಣೆಗೆ ಹಾಕಿದ ನಂತರ ಸೊಪ್ಪಿನಲ್ಲಿರುವ ನೀರಿನಂಶವೇ ಸಾಕು ಬೇಯಲು. ಪೂರ್ಣ ಬೆಂದ ನಂತರ ತೆಂಗಿನತುರಿ ಹಾಕಿ ಮತ್ತೆ ಕೈಯಾಡಿಸಿ. ಬಳಿಕ ಗ್ಯಾಸ್ ಆರಿಸಿ ಸ್ವಲ್ಪ ನಿಂಬೆರಸ ಹಾಕಿ ಮುಚ್ಚಿಡಿ.
ಹೀಗೆ ತಯಾರಿಸಿದ ಈ ಮಿಶ್ರಣಕ್ಕೆ ಅನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಸಿದರೆ ರುಚಿರುಚಿಯಾದ ಕೆಂಪು ಹರಿವೆ ಕಲಸನ್ನ ರೆಡಿ.
ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟಕ್ಕೂ ಚೆನ್ನಾಗಿರುತ್ತದೆ. ಮಕ್ಕಳಿಗೆ ಲಂಚ್ ಬಾಕ್ಸ್‌ಗೂ ಕೊಡಬಹುದು. ಕೆಂಪುಹರಿವೆಯ ಘಮ ಬಲು ಚೆನ್ನ. ಇದರೊಟ್ಟಿಗೆ ದೊಡ್ಡಪತ್ರೆ ಸೊಪ್ಪಿನ ತಂಬುಳಿ ಇದ್ದರೆ ರುಚಿ ಇನ್ನೂ ಹೆಚ್ಚು. ಇಲ್ಲದಿದ್ದಲ್ಲಿ ಕಾಯಿಚಟ್ನಿ ಜೊತೆಗೂ ಸವಿಯಬಹುದು.
ಏನೆಲ್ಲಾ ವೈಶಿಷ್ಟ್ಯ
ಇದು ವಿಟಮಿನ್ ಇ, ಸಿ, ಕೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಷಿಯಮ್ ಮತ್ತು ಪೊಟ್ಯಾಷಿಯಮ್ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿ.
ಕಬ್ಬಿಣಾಂಶ ಹೆಚ್ಚಿರುವುದರಿಂದ ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡಿ, ರಕ್ತಹೀನತೆಯನ್ನು ನಿವಾರಿಸುತ್ತದೆ. ದೈನಂದಿನ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.