ADVERTISEMENT

ರಸಾಸ್ವಾದ: ಮಕ್ಕಳಿಗೆ ಮಾಡಿಕೊಡಿ ಮಾಡಿಸಿ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 0:30 IST
Last Updated 8 ನವೆಂಬರ್ 2025, 0:30 IST
<div class="paragraphs"><p><strong>ಲಾಲಿಪಪ್‌ ಕಟ್ಲೆಟ್‌</strong></p></div>

ಲಾಲಿಪಪ್‌ ಕಟ್ಲೆಟ್‌

   

ಆ ತಿಂಡಿ ಬೇಡ, ಈ ತರಕಾರಿ ಬೇಡ ಎಂದು ಮುಖ ಸಿಂಡರಿಸುವ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದಾದರೂ ಹೇಗೆ? ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬೆಳೆದರಲ್ಲವೇ ಅವರು ಆರೋಗ್ಯದಿಂದ ನಳನಳಿಸುವುದು. ಆದರೆ ಅವರು ಹೀಗೆ ಮೂತಿ ಉಬ್ಬಿಸುತ್ತಾ ಬೇಡಗಳ ಪಟ್ಟಿಯನ್ನು ಮುಂದಿಡುತ್ತಾ ಹೋದರೆ ಏನು ಮಾಡುವುದು? ಮಕ್ಕಳ ಆರೋಗ್ಯ ಹದಗೆಟ್ಟರೆ ಅಮ್ಮಂದಿರೇ ತಾನೆ ಹೆಣಗಾಡಬೇಕು. ಈ ಅವಾಂತರ ತಪ್ಪಿಸಲು ಮಕ್ಕಳಿಗೆ ಅವರು ಕೊಂಚ ಕಣ್ಕಟ್ಟು ಮಾಡಿದರೂ ತಪ್ಪೇನಿಲ್ಲ ಬಿಡಿ.

ಅದೇ ತರಕಾರಿಯನ್ನು ಅಂದಗಾಣುವಂತೆ ಆಕರ್ಷಕ ತಿನಿಸುಗಳನ್ನಾಗಿ ಮಾಡಿಕೊಟ್ಟರೆ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ಬಣ್ಣಬಣ್ಣದ ತಿಂಡಿಗಳನ್ನು ಮುಂದಿಟ್ಟರೆ ಮಕ್ಕಳು ತಿನ್ನದೇ ಇರಲಾರರು. ಅಷ್ಟೇ ಅಲ್ಲ ಸ್ವಲ್ಪ ದೊಡ್ಡ ಮಕ್ಕಳಿಗೆ ಸಮಯವಿದ್ದಾಗ ಖುದ್ದು ಮಾಡುವಂತೆಯೂ ಅಭ್ಯಾಸ ಮಾಡಿಸಬಹುದು. ‘ಮಕ್ಕಳ ದಿನಾ ಚರಣೆ’ಯ ಈ ಹೊತ್ತಿನಲ್ಲಿ ಅಂತಹ ಕೆಲವು ವಿಶೇಷ ತಿನಿಸುಗಳ ಮಾಹಿತಿ ಇಲ್ಲಿದೆ:

ADVERTISEMENT

ಲಾಲಿಪಪ್‌ ಕಟ್ಲೆಟ್‌

ಬೇಕಾಗುವ ಸಾಮಗ್ರಿ: ಆಲೂಗಡ್ಡೆ– 4, ಈರುಳ್ಳಿ 1, ಹಸಿಮೆಣಸಿನಕಾಯಿ– 2, ಕೆಂಪು ಮೆಣಸಿನಕಾಯಿ ಪುಡಿ–1 ಚಮಚ, ಮೆಣಸಿನ ಪುಡಿ– ಕಾಲು ಚಮಚ, ಗರಂ ಮಸಾಲ– ಕಾಲು ಚಮಚ, ಜೀರಿಗೆ ಪುಡಿ ಅಥವಾ ಜೀರಿಗೆ– ಅರ್ಧ ಚಮಚ, ಕಸೂರಿ ಮೇಥಿ– ಸ್ವಲ್ಪ, ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿಸೊಪ್ಪು, ಅರಸಿನ, ಇಂಗು, ಉಪ್ಪು, ನಿಂಬೆ ರಸ, ಐಸ್‌ಕ್ರೀಮ್‌ ಕಡ್ಡಿಗಳು. ಹುರಿದಿಟ್ಟುಕೊಂಡ ಐದಾರು ಚಮಚ ಮೀಡಿಯಮ್‌ ರವೆ ಅಥವಾ ಚಿರೋಟಿ ರವೆ, ಇಲ್ಲವೇ ರೋಸ್ಟ್‌ ಮಾಡಿ ಪುಡಿ ಮಾಡಿದ ಬ್ರೆಡ್‌. 

ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ ಮೂರು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಅದಕ್ಕೆ ಮೇಲೆ ತಿಳಿಸಿದ ಪದಾರ್ಥಗಳನ್ನು ಒಂದರ ನಂತರ ಒಂದು ಹಾಕುತ್ತಾ ಬನ್ನಿ. ಎಲ್ಲವನ್ನೂ ಮಿಕ್ಸ್‌ ಮಾಡಿ ಒಂದೆರಡು ನಿಮಿಷ ಹುರಿದು ಸ್ಟೌ ಆರಿಸಿ ನಿಂಬೆರಸ ಸೇರಿಸಿ. ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಉಂಡೆಗಳನ್ನಾಗಿ ಕಟ್ಟಿಕೊಳ್ಳಿ. ಐಸ್‌ಕ್ರೀಮ್‌ ಕಡ್ಡಿಯ ಅರ್ಧ ಭಾಗಕ್ಕೆ ಈ ಉಂಡೆಯನ್ನು ಸುತ್ತಿ, ಅದು ಸರಿಯಾಗಿ ಹಿಡಿದುಕೊಳ್ಳುವಂತೆ ಮೃದುವಾಗಿ ಅಮುಕಿ. ನಂತರ ಅದನ್ನು ರವೆ ಅಥವಾ ಬ್ರೆಡ್‌ ಪುಡಿಯಲ್ಲಿ ಹೊರಳಿಸಿ. ಇದನ್ನು ಹೆಂಚಿಗೆ 2–3 ಚಮಚ ಎಣ್ಣೆ ಹಾಕಿ ಎರಡೂ ಬದಿಯಲ್ಲಿ ರೋಸ್ಟ್‌ ಮಾಡಿ. ಲಾಲಿಪಪ್‌ನಂತೆ ಹಿಡಿದುಕೊಂಡು ಸಾಸ್‌ನಲ್ಲಿ ಹೊರಳಿಸಿ ತಿನ್ನಲು ಮಕ್ಕಳು ಖಂಡಿತ ಇಷ್ಟಪಡುತ್ತಾರೆ.

ಡ್ರೈಫ್ರೂಟ್‌ ಲಡ್ಡು

ಏನೇನು ಬೇಕು?: ತುರಿದ ಒಣಕೊಬ್ಬರಿ, ಚೂರು ಮಾಡಿದ ಉತ್ತುತ್ತೆ, ಬೆಲ್ಲ –ತಲಾ ಒಂದು ಕಪ್‌, ಗೋಡಂಬಿ, ಬಾದಾಮಿ, ದ್ರಾಕ್ಷಿ, ಖರ್ಜೂರ, ಪಿಸ್ತಾ –ತಲಾ ಅರ್ಧ ಕಪ್‌, ಅಕ್ರೂಟ್‌– ಒಂದೆರಡು ಚಮಚ, ಅಳವಿ ಬೀಜ– ಮೂರು ಟೀ ಚಮಚ, ಕುಂಬಳಬೀಜ– ಮೂರು ಚಮಚ, ಗಸಗಸೆ– ಒಂದು ಚಮಚ, ಅಂಟು– ಎರಡು ಚಮಚ, ತುಪ್ಪ– ಮೂರ್ನಾಲ್ಕು ಚಮಚ.

ಹೀಗೆ ಮಾಡಿ: ಗೋಡಂಬಿ, ಬಾದಾಮಿ, ದ್ರಾಕ್ಷಿ, ಖರ್ಜೂರ, ಪಿಸ್ತಾ ಹಾಗೂ ಅಕ್ರೂಟ್‌ ಅನ್ನು ಡ್ರೈರೋಸ್ಟ್‌ ಮಾಡಿಟ್ಟುಕೊಳ್ಳಿ, ಹಾಗೇ ದ್ರಾಕ್ಷಿ, ಅಳವಿ ಬೀಜ, ಅಂಟನ್ನು ಪ್ರತ್ಯೇಕವಾಗಿ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ತುರಿದ ಒಣಕೊಬ್ಬರಿ, ಉತ್ತುತ್ತೆ ಚೂರುಗಳನ್ನು ಹಾಕಿ ಒಂದು ಸುತ್ತು ಪುಡಿ ಮಾಡಿ ಕೊಳ್ಳಬೇಕು. ಬಳಿಕ ಬೆಲ್ಲ ಹಾಗೂ ಮೇಲೆ ಹೇಳಿದ ಎಲ್ಲಾ ಒಣಹಣ್ಣುಗಳನ್ನು ಹಾಕಿ ತರಿತರಿಯಾಗಿ ಮಿಕ್ಸಿ ಮಾಡಿಕೊಳ್ಳಬೇಕು. ನಂತರ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆ ಕಟ್ಟಿ. ಗಾಳಿಯಾಡದ ಸ್ಟೀಲ್‌ ಬಾಕ್ಸ್‌ನಲ್ಲಿ ಇಟ್ಟುಕೊಂಡರೆ, ತಿಂಗಳವರೆಗೂ ಮಕ್ಕಳ ಸ್ನ್ಯಾಕ್ಸ್‌ ಬಾಕ್ಸ್‌ನ ಚಿಂತೆ ಇರದು.

ಡ್ರೈಫ್ರೂಟ್‌ ಲಡ್ಡು

ಹೆಸರುಬೇಳೆ ಪಿಜ್ಜಾ

ಪಿಜ್ಜಾ ಎಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ? ಕೇಳಿದ ಕೂಡಲೇ ಮಕ್ಕಳ ಬಾಯಲ್ಲಿ ನೀರೂರಿಸುವ ಈ ತಿಂಡಿ, ಮೈದಾಹಿಟ್ಟಿನ ಬಳಕೆಯಿಂದಾಗಿ ಜಂಕ್‌ಫುಡ್‌ನ ಪಟ್ಟಿಗೆ ಸೇರುತ್ತದೆ. ಆದರೆ ಮೈದಾ ಬಳಸದೆ ಹೆಸರುಬೇಳೆಯಲ್ಲಿ ಆರೋಗ್ಯಕರ ಪಿಜ್ಜಾ ತಯಾರಿಸಿದರೆ, ನಿಶ್ಚಿಂತೆಯಿಂದ ಮಕ್ಕಳಿಗೆ ಕೊಡಬಹುದು.

ಹೀಗೆ ಮಾಡಿ: ಒಂದು ಕಪ್‌ ಹೆಸರುಬೇಳೆಯನ್ನು ಎರಡು ಗಂಟೆ ಅಥವಾ ಸಮಯವಿದ್ದರೆ ರಾತ್ರಿ ಪೂರ್ತಿ ನೆನೆಯಲು ಬಿಡಿ. ನೆನೆದ ಹೆಸರುಬೇಳೆಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಎರಡು ಹಸಿಮೆಣಸಿನಕಾಯಿ, ಒಂದು ಇಂಚು ಶುಂಠಿ ಸೇರಿಸಿ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ ಒಂದು ಚಮಚ ಸೂಜಿ ರವೆ (ಚಿರೋಟಿ ರವೆ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ದೋಸೆ ಹಿಟ್ಟಿನ ಹದ ಇರಲಿ. ಈಗ ದೋಸೆ ತವಾದ ಮೇಲೆ ಈ ಹಿಟ್ಟನ್ನು ಸೆಟ್ ದೋಸೆ ಅಳತೆಯಲ್ಲಿ ಹಾಕಿ. ಬೆಂದ ಬಳಿಕ ಮಗುಚಿ ಹಾಕಿ. ಅದಕ್ಕೆ ಪಿಜ್ಜಾ ಸಾಸ್‌ ಸವರಿ, ಚೀಸ್‌ ತುರಿಯನ್ನು ಹರಡಬೇಕು, ಬಳಿಕ ಕಾರ್ನ್‌, ಟೊಮೆಟೊ ಚೂರುಗಳು, ಕ್ಯಾಪ್ಸಿಕಂ ಚೂರುಗಳನ್ನು ಹರಡಿ. ಅದರ ಮೇಲೆ ಮತ್ತೊಮ್ಮೆ ಚೀಸ್‌ ಹಾಕಿ ಅರ್ಧ ನಿಮಿಷ ತಟ್ಟೆ ಮುಚ್ಚಿ ಬೇಯಿಸಿ. ಬಳಿಕ ಚಿಲ್ಲಿ ಫ್ಲೇಕ್ಸ್‌ ಹಾಕಿ. ನಂತರ ತವಾದಿಂದ ತೆಗೆದು ಮಕ್ಕಳಿಗೆ ಸವಿಯಲು ಕೊಡಿ.

ಹೆಸರುಬೇಳೆ ಪಿಜ್ಜಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.