ADVERTISEMENT

ರಸಸ್ವಾದ: ಚುಮುಚುಮು ಚಳಿಯಲಿ ಸಂಗ್ಟಿ ಜತೆಯಲಿ...

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 23:30 IST
Last Updated 2 ಜನವರಿ 2026, 23:30 IST
   

‘ಆರೋಗ್ಯದ ಗುಟ್ಟು ಅಡುಗೆ ಮನೆಯಲ್ಲಿ...

ಅಜ್ಜಿ ಆಗಾಗ ಹೇಳುತ್ತಿದ್ದ ಈ ಮಾತು ಎಷ್ಟು ಅರ್ಥಪೂರ್ಣವಾಗಿತ್ತೆಂದರೆ, ಆಗಿನ ಕಾಲದಲ್ಲಿ ಏನೇ ಅಡುಗೆ ಮಾಡಿದರೂ ಅದರಲ್ಲಿ ಪೌಷ್ಟಿಕಾಂಶ ಹೇರಳವಾಗಿ ಇರುತ್ತಿತ್ತು. ಹವಾಗುಣಕ್ಕೆ ತಕ್ಕಂತೆ ಪಾಕಗಳೂ ಸಿದ್ಧವಾಗುತ್ತಿದ್ದವು. ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪು ನೀಡುವ ಖಾದ್ಯಗಳು ತಯಾರಾದರೆ, ಚಳಿಗಾಲದ ವೇಳೆ ಉಷ್ಣಕಾರಕ ಪಾಕಗಳು ಪಾತ್ರೆಗಳಲ್ಲಿ ಹಬೆಯಾಡುತ್ತಿದ್ದವು.

ರಾಸಾಯನಿಕಮುಕ್ತ ಆಹಾರದಲ್ಲಿ ಅಂದಿನ ಜನರ ಆರೋಗ್ಯದ ಗುಟ್ಟೂ ಅಡಗಿತ್ತು. ಕಾಲದ ಓಘದಲ್ಲಿ ಆಗಿನ ಖಾದ್ಯಗಳು ಮೆಲ್ಲನೆ ತೆರೆಮರೆಗೆ ಸರಿಯುತ್ತಿವೆ. ಅದೆಷ್ಟೋ ಖಾದ್ಯಗಳು ಹೇಳಹೆಸರಿಲ್ಲದಂತೆ ಆಗಿಹೋಗುತ್ತಿವೆ. ಬೆಳಗಿನ ಆರಂಭ ಈಗೆಲ್ಲ ಟೀ, ಕಾಫಿಯಿಂದ ಶುರುವಾದರೆ, ಆಗೆಲ್ಲ ಪೌಷ್ಟಿಕಾಂಶಭರಿತ ಪೇಯಗಳು ಉದರದ ದಾಹವನ್ನು ತಣಿಸುತ್ತಿದ್ದವು. ಬೇಸಿಗೆ ಕಾಲಕ್ಕೆ ಸಬ್ಬಕ್ಕಿ ಗಂಜಿ ಹಾಜರಿ ಹಾಕಿದರೆ, ಚಳಿಗಾಲಕ್ಕೆ ಹುರುಳಿಕಾಳಿನಲ್ಲಿ ತಯಾರಿಸಿದ ಗಂಜಿ ಅಥವಾ ಪೇಯಗಳು ಜೊತೆಯಾಗುತ್ತಿದ್ದವು. ಅಂಥದ್ದೇ ಒಂದು ಪೇಯ ‘ಹುರುಳಿ ಸಂಗ್ಟಿ’. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಮನೆಗಳಲ್ಲಿ ತಯಾರಾಗುತ್ತಿದ್ದ ಈ ಪೇಯ ಕ್ರಮೇಣ ಮರೆಯಾಗುತ್ತಿದೆ. ‘ಟಿ’ ಅಕ್ಷರವನ್ನೂ ಅಂಟಿಸಿಕೊಂಡಿರುವ ಇದು ಒಂದು ರೀತಿಯ ಆರೋಗ್ಯಪೂರ್ಣ ಟೀ ಎಂದೇ ಹೇಳಬಹುದು!

ಮಧುಮೇಹ, ಹೃದ್ರೋಗ, ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು,  ಅಸ್ತಮಾ,  ಶೀತ,  ಕಫ, ವಾತ, ಪಿತ್ತ, ಅಜೀರ್ಣ, ಪಾರ್ಶ್ವವಾಯು ಪೀಡಿತರಿಗೆ ಇದರ ಸೇವನೆ ತುಂಬಾ ಉಪಯುಕ್ತ. ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ಇಳಿಸುವವರಿಗೂ ಇದು ವರದಾನ.

ADVERTISEMENT

ಆಗಿನ ಕಾಲದಲ್ಲಿ ಬಾಣಂತಿಯರಿಗೆ ತಪ್ಪದೇ ಈ ಪೇಯವನ್ನು ಕೊಡುತ್ತಿದ್ದರು. ಸೊಂಟಕ್ಕೆ ಶಕ್ತಿ ನೀಡುವ ಜೊತೆಗೆ ದೇಹವನ್ನು ಬೆಚ್ಚಗಿಡುತ್ತಿತ್ತು. ಬಾಣಂತಿಯರ ಮೂಲಕ ನವಜಾತ ಶಿಶುವಿಗೂ ಪೌಷ್ಟಿಕಾಂಶಯುಕ್ತ ಪೇಯ ನೀಡಿದಂತಾಗುತ್ತಿತ್ತು. ರುಚಿಯಲ್ಲೂ ಇತರ ಗಂಜಿ ಅಥವಾ ಪೇಯಗಳಿಗಿಂತ ಒಂದು ಕೈ ಮೇಲು. ಮಕ್ಕಳು, ವೃದ್ಧರು, ವಯಸ್ಕರು ಎನ್ನುವ ಭೇದವಿಲ್ಲದೆ ಎಲ್ಲರೂ ಸವಿಯಬಹುದಾದ ಪೇಯ ಇದು.

ಹುರುಳಿ ಪೋಷಕಾಂಶದ ಸುರುಳಿ

ಈ ಕಾಳಿನಲ್ಲಿ ಯಥೇಚ್ಛ ಪೋಷಕ ಸತ್ವಗಳು, ಪ್ರೋಟೀನ್‌, ಫೈಬರ್, ಕ್ಯಾಲ್ಸಿಯಂ, ಐರನ್‌, ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ಅಡಕವಾಗಿವೆ. ವಿಟಮಿನ್‌, ಖನಿಜಾಂಶ ಹೇರಳವಾಗಿವೆ. ಅಲ್ಲದೆ ಕಾರ್ಬೊಹೈಡ್ರೇಟ್‌ ಅಂಶ ಅಧಿಕವಾಗಿದೆ.

ಬೆಳಗಿನ ಧಾವಂತದ ಬದುಕಿಗೆ ಈ ಪೇಯ ಹೇಳಿಮಾಡಿಸಿದಂತಿದೆ. ಒಂದು ದೊಡ್ಡ ಲೋಟದ ತುಂಬಾ ಇದನ್ನು ಹೊಟ್ಟೆಗಿಳಿಸಿ ಕಚೇರಿಗೆ ತೆರಳಬಹುದು. ಆ ದಿನದ ತಿಂಡಿಯ ಜಾಗವನ್ನೂ ಇದು ತುಂಬುತ್ತದೆ. ಅವಿವಾಹಿತರು, ಉದ್ಯೋಗಸ್ಥ ಮಹಿಳೆಯರಿಗೆ ಎಷ್ಟೋ ಬಾರಿ ತಿಂಡಿ ತಿನ್ನಲೂ ಪುರಸತ್ತು ಇರುವುದಿಲ್ಲ. ಅಂತಹ ಸಮಯದಲ್ಲಿ ಈ ಪೇಯ ಮಾಡಿಕೊಳ್ಳುವುದು ಆರಾಮದಾಯಕ, ಆರೋಗ್ಯದಾಯಕ.

ಹೀಗೆ ಮಾಡಿ ಹುರುಳಿ ಸಂಗ್ಟಿ

ಏನೇನು ಬೇಕು?: ಒಂದು ಕಪ್‌ ಹುರುಳಿಕಾಳನ್ನು ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಅರ್ಧ ಕಪ್‌ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ಶುಂಠಿ ಪುಡಿ, ಒಂದು ಕಪ್‌ ಕಾಯಿಸಿ ಆರಿಸಿದ ಹಾಲು, ಚಿಟಿಕೆ ಉಪ್ಪು, ಒಂದು ಟೀ ಚಮಚ ತುಪ್ಪ.

ಹೀಗೆ ಮಾಡಿ: ಒಂದು ಪಾತ್ರೆಯಲ್ಲಿ 2 ಲೋಟ ನೀರು ಹಾಕಿ ಅದಕ್ಕೆ ಅರ್ಧ ಕಪ್‌ ಬೆಲ್ಲದ ಪುಡಿ, ಹುರಿದು ಪುಡಿಮಾಡಿಟ್ಟುಕೊಂಡ ಹುರುಳಿಕಾಳಿನ ಪುಡಿ 6 ಟೀ ಚಮಚ ಹಾಕಿ, ಗಂಟಾಗದಂತೆ ಕೈಯಾಡಿಸಿ. ಸ್ವಲ್ಪ ಕುದಿ ಬಂದ ನಂತರ ಒಂದು ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಶುಂಠಿ ಪುಡಿ ಹಾಕಿ ಕೈಯಾಡಿಸಿ. ಬಳಿಕ ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕೆಳಗಿಳಿಸಿ.

ಇದನ್ನು ಬಿಸಿ ಇರುವಾಗಲೂ ಕುಡಿಯಬಹುದು ತಣ್ಣಗೆ ಮಾಡಿಯೂ ಸವಿಯಬಹುದು. ಎರಡು ಬಗೆಯಲ್ಲೂ ರುಚಿಕರವಾಗಿರುತ್ತದೆ. ಉಷ್ಣದ ಗುಣ ಹೊಂದಿರುವುದರಿಂದ ಇದು ಚಳಿಗಾಲಕ್ಕೆ ಹೇಳಿಮಾಡಿಸಿದ ಪಾನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.