ADVERTISEMENT

ಮರೆಯಾಗುತ್ತಿರುವ ಮಳೆಗಾಲದ ಖಾದ್ಯಗಳು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 23:53 IST
Last Updated 2 ಆಗಸ್ಟ್ 2025, 23:53 IST
ಹಲಸಿನ ಬೀಜ
ಹಲಸಿನ ಬೀಜ   

ಗುಡು ಗುಡು ಗುಡುಗಮ್ಮಾ

ಹಪ್ಪಳ ತಾರೆ ನಾಗಮ್ಮಾ

ಸಪ್ಪಳ ಮಾಡದೇ ತಿನ್ನೋಣ

ADVERTISEMENT

ಮಳೆರಾಯನ ಪದ ಹಾಡೋಣ

ಇದು ಚುಟುಕು ಕವಿ ದಿನಕರ ದೇಸಾಯಿಯವರ ಪದ್ಯ. ಮಳೆಗಾಲದ ಮಲೆನಾಡಿನ ಬದುಕು ತೆರೆದಿಡುವ ಕವಿತೆಯೂ ಹೌದು. ಮೇ ತಿಂಗಳ ಅಂತ್ಯದಿಂದ ಮಳೆ ಶುರುವಾದರೆ ಗಣೇಶ ಚೌತಿ ಮುಗಿಯು ವವರೆಗೂ ಮಲೆನಾಡು ಮಳೆನಾಡಾಗಿರುತ್ತದೆ. ಮನೆಯಿಂದ ಆಚೆ ಹೋಗಲು ಸಾಧ್ಯವಾಗದಷ್ಟು ಮಳೆ ಹೊಯ್ಯುತ್ತಿರುತ್ತದೆ. ಹೀಗಾಗಿಯೇ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದಷ್ಟು ಖಾದ್ಯಗಳು ಮಳೆಗಾಲದ ತಿನಿಸುಗಳೆಂದೇ ಸಿದ್ಧಗೊಳ್ಳುತ್ತಿದ್ದವು. ಮನೆಯ ಅಪ್ಪ‍ಪಕ್ಕದಲ್ಲಿ ಸಿಗುವ ಪದಾರ್ಥಗಳಿಂದ ಸಿದ್ಧಗೊಳ್ಳುವ ತಿನಿಸುಗಳಿಂದ ಮಳೆಗಾಲ ಪೂರ್ತಿ ಬಾಯಿ ಚಪಲ ತೀರಿಸಿಕೊಳ್ಳಬಹುದಿತ್ತು. 

ಹುರಿದ ಹಲಸಿನಬೇಳೆ (ಬೀಜ), ನೆಲಗಡಲೆ, ಕಡಲೆ, ಕೆಂಡದಲ್ಲಿ ಸುಟ್ಟು, ಸಿಪ್ಪೆತೆಗೆದ ಗೇರುಬೀಜ, ಹಲಸಿನ ಹಪ್ಪಳ, ಖಾರ ಹಪ್ಪಳ, ಗೆಣಸಿನ ಹಪ್ಪಳ, ವಿಶೇಷ ರೀತಿಯಲ್ಲಿ ಬೆರಕೆ ಹಾಕಿ ಮಾಡಿದ ಕಳಲೆ, ತಗಟೆ ಸೊಪ್ಪು, ಅಣಬೆ, ಕೆಸುವಿನ ಪಲ್ಯಗಳು, ಪತ್ರೊಡೆ... ಇವೆಲ್ಲದರ ಜೊತೆಗೆ ಕರಾವಳಿ ಭಾಗದ ಜನರ ಸಿಹಿ ತಿನಿಸು ಹುರಿಯಕ್ಕಿ ಉಂಡೆ ಮಳೆಗಾಲಕ್ಕೆ ಹೇಳಿ ಮಾಡಿಸಿದ ತಿಂಡಿಗಳಾಗಿದ್ದವು. 

ಬಿದಿರಿನ ಕಳಲೆ

ಮಳೆಗಾಲದಲ್ಲಿ ಮಾತ್ರ ಲಭ್ಯವಿರುವ ಗುಳ್ಳೆ, ಕಲ್ಲೇಡಿ, ಕಂಯ್ಜಿಬ್ಬು, ಕೊಚ್ಚಗ್ಯಾ ಮುಂತಾದ ಮಾಂಸಾಹಾರಿ ಖಾದ್ಯಗಳೂ ಬಲುರುಚಿಕರ. ಊರವರೆಲ್ಲಾ ಸೇರಿ ಬೆಟ್ಟಕ್ಕೆ ಜಾರುತ್ತ, ಏರುತ್ತ ಅಣಬೆ ಹುಡುಕುವ ಪರಿ, ಬಿದಿರಿನ ಹಿಂಡಿನಲ್ಲಿ ಕಳಲೆ ಕಡಿಯುವ ಚಾಕಚಕ್ಯ, ಗದ್ದೆಗಳಲ್ಲಿ ಗುಳ್ಳೆಗಳನ್ನು ಆರಿಸುವ ಬಗ್ಗೆ, ನೀರು ತುಂಬಿದ ಗದ್ದೆಗಳಲ್ಲಿ ಕಂಯ್ಜಿಬ್ಬಿನ ಬೇಟೆ, ಮಳೆಗಾಲದ ಸಮಯದಲ್ಲಿ ಮಾತ್ರ ಹರಿಯುವ ಕಚ್ಚರ್ಕಿ(ಸಣ್ಣ ಹಳ್ಳ)ಯ ಕಲ್ಲುಗಳ ನಡುವೆ ಕಲ್ಲೇಡಿ ಹಿಡಿಯುವ ಸಾಹಸ ಇವೆಲ್ಲವೂ ಒಂದು ತೆರನಾದ ಮಳೆಗಾಲದ ಮನರಂಜನೆ ಕೂಡ ಆಗಿತ್ತು.

ಇವುಗಳಲ್ಲಿ ಕೆಲವು ತಿನಿಸುಗಳಲ್ಲಿ ಔಷಧೀಯ ಗುಣಗಳು ಇವೆ. ಹೀಗಾಗಿ ವರ್ಷಕ್ಕೊಮ್ಮೆಯಾದರೂ ಆರೋಗ್ಯದ ದೃಷ್ಟಿಯಿಂದಲೂ ಇವುಗಳನ್ನು ತಿನ್ನಬೇಕೆಂಬ ಪ್ರತೀತಿ ಇತ್ತು. ಈಗೀಗ ಹಳ್ಳಿಗಳಲ್ಲಿ ಜನರೇ ಮಾಯವಾಗಿ, ಮಲೆನಾಡಿನ ಮಳೆಗಾಲ ಒಂದು ರೀತಿ ಬರಡಾಗಿದೆ. ಹಲಸಿನ ಹಪ್ಪಳ, ಗೇರುಬೀಜದ ಹೊರತಾಗಿ ಬಹುತೇಕ ತಿನಿಸುಗಳು ಕಾಣೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.