ADVERTISEMENT

ಮನಸಿಗೂ ಮುದ ಪೌಷ್ಟಿಕ ಪಾನೀಯ

ಜಾನಕಿ ಎಸ್.
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
   
""
""

ಬಿಸಿಲಿನ ಧಗೆ ಹೆಚ್ಚುತ್ತಲೇ ಇದೆ. ಇದರಿಂದ ಬಾಯಾರಿಕೆಯೂ ಜಾಸ್ತಿ. ಅದರಲ್ಲೂ ಈಗ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವುದರಿಂದ ಏನಾದರೂ ಕುಡಿಯಬೇಕು, ತಿನ್ನಬೇಕು ಎನಿಸುವುದು ಸಹಜ. ಆದರೆ ಈ ಸಂದರ್ಭದಲ್ಲಿ ಕೇವಲ ತಂಪು ಪಾನೀಯದ ಬದಲು, ಮನೆಯಲ್ಲೇ ಮಾಡಿಕೊಳ್ಳಬಹುದಾದ ಸಾಕಷ್ಟು ಪೌಷ್ಟಿಕಾಂಶವಿರುವ ಪಾನೀಯಗಳನ್ನು ಸೇವಿಸಬಹುದು. ಅಂತಹ ಕೆಲವು ಪೌಷ್ಟಿಕ ಪಾನೀಯಗಳನ್ನು ಮಾಡುವ ವಿಧಾನವನ್ನು ಪರಿಚಯಿಸಿದ್ದಾರೆ ಜಾನಕಿ ಎಸ್‌.

ದಾಸವಾಳದ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು: ಕೆಂಪು ದಾಸವಾಳದ ಹೂ – 1, ಸಕ್ಕರೆ – 4 ಚಮಚ, ನಿಂಬೆಹಣ್ಣು – 1/2 ಮತ್ತು ನೀರು –1 ದೊಡ್ಡ ಲೋಟ

ADVERTISEMENT

ತಯಾರಿಸುವ ವಿಧಾನ:ನೀರನ್ನು ಒಲೆಯ ಮೇಲೆ ಕುದಿಯಲು ಇಡಿ. ಕುದಿಯುವ ನೀರಿಗೆ ಚೆನ್ನಾಗಿ ತೊಳೆದ ದಾಸವಾಳದ ಹೂ ಹಾಕಿ. ಈ ಬಿಸಿನೀರನ್ನು ಸೋಸಿಕೊಂಡು ತಣಿದ ಮೇಲೆ ನಿಂಬೆರಸ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕುಲುಕಿದಾಗ ಪಾನಕ ರೆಡಿ. ಇದರ ಬಣ್ಣ ಸಹಿತ ಬದಲಾವಣೆ ಆಗಿ ಕೆಂಪಾಗಿರುತ್ತದೆ. ಇನ್ನೂ ತಣಿಸಿ ಕುಡಿದರೆ ದೇಹದ ಉಷ್ಣ ಕಡಿಮೆ ಆಗುತ್ತದೆ.\

ಪುದಿನ ಪಾನಕ

ಬೇಕಾಗುವ ಸಾಮಗ್ರಿಗಳು: ಪುದಿನ ಎಲೆ – 5ರಿಂದ 6, ಶುಂಠಿ –ಸ್ವಲ್ಪ, ಕಾಳುಮೆಣಸಿನ ಪುಡಿ – ಚಿಟಿಕೆ, ಬೆಲ್ಲ – 3 ಚಮಚ, ನಿಂಬೆರಸ – 1/2 ಚಮಚ, ನೀರು – ಒಂದು ಲೋಟ.

ತಯಾರಿಸುವ ವಿಧಾನ:ಪುದಿನ, ಶುಂಠಿ, ಕಾಳುಮೆಣಸಿನ ಪುಡಿ ಇವುಗಳನ್ನು ಕುಟ್ಟಾಣಿಯಲ್ಲಿ ಹಾಕಿ ಚೆನ್ನಾಗಿ ಅರೆದು ನೀರಿಗೆ ಸೇರಿಸಿ, ಬೆಲ್ಲ ಹಾಕಿ. ಈ ಮಿಶ್ರಣಕ್ಕೆ ನಿಂಬೆರಸ ಹಾಕಿ ಕದಡಿದಾಗ ಪಾನಕ ಸಿದ್ಧ. ಇದನ್ನು ಕುಡಿದರೆ ಬಿಸಿಲಿನಿಂದ ಉಂಟಾದ ದಣಿವು ಇಂಗುತ್ತದೆ. ಹಾಗೆ ಈ ಮಿಶ್ರಣವನ್ನು ತಿಳಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಬಹುದು. ಬೆಲ್ಲ ಹಾಕಬಾರದು. ಸಾಸಿವೆ ಕಾಳಿನ ಒಗ್ಗರಣೆ ಕೊಟ್ಟರೆ ಅನ್ನಕ್ಕೆ ಕಲೆಸಿ ಉಣ್ಣಬಹುದು.

ಬೂದುಗುಂಬಳಕಾಯಿ ತಂಬುಳಿ

ಬೇಕಾಗುವ ಸಾಮಗ್ರಿಗಳು:ಬೂದುಗುಂಬಳಕಾಯಿ ಹೋಳು – 1 ಸಣ್ಣ ಕಪ್, ಮಜ್ಜಿಗೆ – 1 ಕಪ್, ತೆಂಗಿನ ತುರಿ – 1 ಟೀ ಚಮಚ, ಕಾಳುಮೆಣಸು – 2 , ಎಳ್ಳು – 1/4 ಟೀ ಚಮಚ, ಹಸಿಮೆಣಸು – ಸಣ್ಣ ತುಂಡು, ಜೀರಿಗೆ, ಸಾಸಿವೆ ಸ್ವಲ್ಪ, ಉಪ್ಪು – 3/4 ಚಮಚ, ಎಣ್ಣೆ 1 ಚಮಚ.

ತಯಾರಿಸುವ ವಿಧಾನ: ಎಳ್ಳು, ಕಾಳುಮೆಣಸು, ಹಸಿಮೆಣಸು ಸ್ವಲ್ಪ ಹುರಿದುಕೊಳ್ಳಬೇಕು. ಸಿಪ್ಪೆ ತೆಗೆದು ಹೆಚ್ಚಿದ ಕುಂಬಳಕಾಯಿ ಹೋಳು, ಹುರಿದ ಸಾಮಾನು, ತೆಂಗಿನತುರಿ ಸೇರಿಸಿ ಮಿಕ್ಸಿಯಲ್ಲಿ ರುಬ್ಬಬೇಕು. ನಯವಾಗಿರುವ ಮಿಶ್ರಣಕ್ಕೆ ಮಜ್ಜಿಗೆ ಸೇರಿಸಿದರೆ ತಂಬುಳಿ ಸಿದ್ದವಾಗುತ್ತದೆ. ಎಣ್ಣೆ, ಸಾಸಿವೆ, ಜೀರಿಗೆ ಒಗ್ಗರಣೆ ಮಾಡಿ ತಂಬುಳಿಗೆ ಹಾಕಬೇಕು. ತೆಳುವಾಗಿರುವ ಈ ಪದಾರ್ಥ ಅನ್ನದೊಂದಿಗೆ ಕಲಸಿ ಉಣ್ಣಲು, ಬೇಸಿಗೆಯಲ್ಲಿ ತುಂಬಾ ಆರಾಮ ಅನಿಸುತ್ತದೆ. ಕುಂಬಳ ಹೋಳು, ಹುರಿದ ಎಳ್ಳು, ಮೆಣಸಿನಕಾಳು, ಜೀರಿಗೆ ಸೇರಿಸಿ ರುಬ್ಬಿ ಮಜ್ಜಿಗೆ ಸೇರಿಸಿ ಜ್ಯೂಸ್ ತರಹ ಕುಡಿಯಬಹುದು.

ಕಲ್ಲಂಗಡಿ ಬೀಜದ ಮಿಲ್ಕ್ ಶೇಕ್‌

ಬೇಕಾಗುವ ಸಾಮಗ್ರಿಗಳು:ಬಾದಾಮಿ – 5 - 6, ಗೋಡಂಬಿ – 4, ಕಲ್ಲಂಗಡಿ ಬೀಜ – ಒಂದೂವರೆ ಟೀ ಚಮಚ, ಸಕ್ಕರೆ – 4 ಟೀ ಚಮಚ, ಹಾಲು – ಒಂದು ದೊಡ್ಡ ಲೋಟ, ನೀರು – ಅರ್ಧ ಲೋಟ, ಏಲಕ್ಕಿ –1/2

ತಯಾರಿಸುವ ವಿಧಾನ:ಗೋಡಂಬಿ, ಬಾದಾಮಿ, ಕಲ್ಲಂಗಡಿ ಬೀಜ ಇವುಗಳನ್ನು ತೊಳೆದು, ಸ್ವಲ್ಪ ಬಿಸಿ ನೀರಿನಲ್ಲಿ ಒಂದು ತಾಸು ನೆನೆಸಿಡಬೇಕು. ನಂತರ ಬಾದಾಮಿ ಸಿಪ್ಪೆ ಸುಲಿದು (ಸುಲಭವಾಗಿ ಸಿಪ್ಪೆ ತೆಗೆಯಬಹುದು), ಈ ಮೂರರ ಜೊತೆಗೆ ಏಲಕ್ಕಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಬೇಕು. ಈ ಪೇಸ್ಟ್‌ಗೆ ನೀರು, ಸಕ್ಕರೆ ಹಾಕಿ ಒಲೆ ಮೇಲೆ ಇಟ್ಟು, ಒಂದು ಕುದಿ ಬರುವವರೆಗೆ ಕಾಯಿಸಿದರೆ ಸಾಕು. ಕಾಸಿದ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಖೀರು ಸಿದ್ಧ. ಬಿಸಿಯಾಗಿದ್ದಾಗ ಕುಡಿಯಲು ಚೆನ್ನಾಗಿರುತ್ತದೆ. ಇದನ್ನ ಆರಿಸಿ ಫ್ರಿಜ್‌ನಲ್ಲಿ ಇಟ್ಟು ಅಥವಾ ತಣ್ಣನೆ ಹಾಲು ಸೇರಿಸಿದರೆ ಮಿಲ್ಕ್ ಶೇಕ್ರೆಡಿ. ಈ ಪಾನೀಯ ತುಂಬಾ ಪೌಷ್ಟಿಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.