ADVERTISEMENT

ಸಿಗಡಿ ಪಲಾವ್‌ ಮೀನಿನ ಫ್ರೈಡ್ ರೈಸ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:30 IST
Last Updated 22 ಜನವರಿ 2021, 19:30 IST
ಸಿಗಡಿ ಪಲಾವ್‌
ಸಿಗಡಿ ಪಲಾವ್‌   

ಸಿಗಡಿ ಪಲಾವ್‌

ಬೇಕಾಗುವ ಸಾಮಗ್ರಿಗಳು: ಸಿಗಡಿ – 20, ಅಕ್ಕಿ – 1 ಕಪ್‌ (20 ನಿಮಿಷಗಳ ಕಾಲ ನೆನೆಸಿದ್ದು), ಎಣ್ಣೆ – 3 ರಿಂದ 4 ಚಮಚ, ಏಲಕ್ಕಿ – 3, ದಾಲ್ಚಿನ್ನಿ ಎಲೆ – 2, ಚಕ್ಕೆ – 1 ಇಂಚು, ಕಾಳುಮೆಣಸು – 5, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಹೆಚ್ಚಿಕೊಂಡಿದ್ದು), ಲವಂಗ – 3, ಉಪ್ಪು – ರುಚಿಗೆ, ಖಾರದಪುಡಿ – 1 ಟೀ ಚಮಚ, ಅರಿಸಿನ ಪುಡಿ – 1/4 ಟೀ ಚಮಚ, ಗರಂ ಮಸಾಲೆ – 1 ಟೀ ಚಮಚ.

ತಯಾರಿಸುವ ವಿಧಾನ: ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಏಲಕ್ಕಿ, ದಾಲ್ಚಿನ್ನಿ, ಚಕ್ಕೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿ, ಉಪ್ಪು ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಸಿಗಡಿ, ಖಾರದಪುಡಿ, ಅರಿಸಿನಪುಡಿ, ಗರಂ ಮಸಾಲೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಕ್ಕಿ, ಉಪ್ಪು ಹಾಗೂ ಬೇಕಾದಷ್ಟು ನೀರು ಸೇರಿಸಿ ಸಿಗಡಿ ಹಾಗೂ ಅಕ್ಕಿ ಬೇಯುವವರೆಗೂ ಬೇಯಿಸಿ. ಈಗ ನಿಮ್ಮ ಮುಂದೆ ಸುಲಭವಾಗಿ, ಸರಳವಾಗಿ ತಯಾರಿಸಬಹುದಾದ ಸಿಗಡಿ ಪಲಾವ್ ತಿನ್ನಲು ಸಿದ್ಧ.

ADVERTISEMENT

ಮೀನಿನ ಫ್ರೈಡ್ ರೈಸ್‌

ಬೇಕಾಗುವ ಸಾಮಗ್ರಿಗಳು: ಅನ್ನ – 2 ಕಪ್‌, ಮುಳ್ಳಿಲ್ಲದ ಮೀನಿನ ತುಂಡು – 2 ಕಪ್‌ ಆಗುವಷ್ಟು, ಬೆಣ್ಣೆ – 1 ಚಮಚ, ಆಲಿವ್ ಎಣ್ಣೆ – 1 ಚಮಚ, ಕೊತ್ತಂಬರಿ ಸೊಪ್ಪು – 1 ಚಮಚ (ಸಣ್ಣಗೆ ಹೆಚ್ಚಿದ್ದು), ಕ್ಯಾರೆಟ್ – 2 ಚಮಚ (ಸಣ್ಣಗೆ ಹೆಚ್ಚಿದ್ದು), ಬೆಳ್ಳುಳ್ಳಿ – 3 ಎಸಳು, ಈರುಳ್ಳಿ ದಂಟು – 4 ಚಮಚ, ಸೋಯಾ ಸಾಸ್‌ – 1 ಚಮಚ, ವಿನೆಗರ್ – 1 ಚಮಚ, ಟೊಮೆಟೊ ಸಾಸ್‌ – 1 ಚಮಚ, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಚಿಟಿಕೆ, ಮೊಟ್ಟೆ – 3 (ಒಡೆದು ಒಂದು ಚಮಚ ನೀರಿನೊಂದಿಗೆ ಮಿಶ್ರಣ ಮಾಡಿ ಇರಿಸಿಕೊಂಡಿದ್ದು).

ತಯಾರಿಸುವ ವಿಧಾನ: ಮೀನಿನ ತುಂಡಿಗೆ ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಕಲೆಸಿ. ನಂತರ ಮೊಟ್ಟೆಗೆ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಪ್ಯಾನ್‌ವೊಂದಕ್ಕೆ ಬೆಣ್ಣೆ ಹಾಕಿ ಕರಗಿದ ಮೇಲೆ ಅದನ್ನು ಆಮ್ಲೆಟ್ ಹಾಕಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಬೇರೊಂದು ಪ್ಯಾನ್‌ಗೆ ಎಣ್ಣೆ ಹಾಗೂ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಮೀನಿನ ತುಂಡುಗಳನ್ನು ಹಾಕಿ ಹುರಿದು ತೆಗೆದಿರಿಸಿ. ಅದೇ ಎಣ್ಣೆಗೆ ಈರುಳ್ಳಿ ದಂಟು, ಕ್ಯಾರೆಟ್‌, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ಮೇಲೆ ಸ್ವಲ್ಪ ವಿನೆಗರ್ ಹಾಕಿ ಮತ್ತೆ ಮಿಶ್ರಣ ಮಾಡಿ. ಅದಕ್ಕೆ ಸೋಯಾ ಸಾಸ್‌, ಟೊಮೆಟೊ ಸಾಸ್‌, ಆಮ್ಲೆಟ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊದಲೇ ಹುರಿದಿಟ್ಟುಕೊಂಡ ಮೀನು ಸೇರಿಸಿ, ಮಿಶ್ರಣ ಮಾಡಿ. ನಂತರ ಪ್ಲೇಟ್‌ಗೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.