ADVERTISEMENT

ಅಡುಗೆ ಬದುಕಿಗಾಯ್ತು ದೀವಿಗೆ! Rekha Aduge ಯೂಟ್ಯೂಬ್ ಚಾನಲ್‌ನ ರೇಖಾ ಸಂದರ್ಶನ

27.9 ಲಕ್ಷ ಚಂದಾದಾರರನ್ನು ಹೊಂದಿರುವ Rekha Aduge ಯೂಟ್ಯೂಬ್ ಚಾನಲ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 0:30 IST
Last Updated 7 ಜೂನ್ 2025, 0:30 IST
<div class="paragraphs"><p>ರೇಖಾ</p></div>

ರೇಖಾ

   
‘ಹಾಯ್‌... ಹಲೋ ಫ್ರೆಂಡ್ಸ್‌... ಎಲ್ಲರಿಗೂ ನಮಸ್ಕಾರ, ರೇಖಾ ಅಡುಗೆ ಚಾನೆಲ್‌ಗೆ ಸ್ವಾಗತ...’

ಹೊಸ ರೆಸಿಪಿ ತಯಾರಿಸಲು, ಸಿಂಪಲ್‌ ಆಗಿ ದಿಢೀರ್‌ ತಿಂಡಿ ಅಣಿಗೊಳಿಸಲು ಅಥವಾ ಸಾಂಪ್ರದಾಯಿಕ ಹಬ್ಬದಡುಗೆ ಮಾಡಲು ಯೂಟ್ಯೂಬ್‌ನಲ್ಲಿ ಹೆಸರು ಟೈಪಿಸಿದರೆ ಸಾಕು, ಮೇಲಿನ ಮಾತುಗಳೊಂದಿಗೆ ತಮ್ಮ ಅಡುಗೆ ಮನೆಗೆ ಆಹ್ವಾನವೀಯುತ್ತಾರೆ ರೇಖಾ. 27.9 ಲಕ್ಷ ಚಂದಾದಾರರನ್ನು ಹೊಂದಿರುವ, ಕಡಿಮೆ ಅವಧಿಯಲ್ಲೇ ಎಲ್ಲರ ಅಡುಗೆ ಮನೆ– ಮನಕ್ಕೆ ಇಳಿದಿರುವ ರೇಖಾ 2016ರಲ್ಲಿ ಯೂಟ್ಯೂಬ್‌ಗೆ ಪದಾರ್ಪಣೆ ಮಾಡಿದವರು. ಈವರೆಗೆ 1,700ಕ್ಕೂ ಹೆಚ್ಚು ರೆಸಿಪಿಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅವರು ಹೇಳಿಕೊಡುವ ಅಡುಗೆಯನ್ನು ಕಲಿತೇ ಕೆಲವರು ಹೋಟೆಲ್‌, ಬೀದಿಬದಿ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ. ಹವ್ಯಾಸಕ್ಕಷ್ಟೇ ಸೀಮಿತವಾಗಿದ್ದ ಅಡುಗೆ ತಯಾರಿ ಈಗ ರೇಖಾ ಅವರ ಬದುಕನ್ನೇ ಬೆಳಗಿಸಿದೆ. ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದ ರೇಖಾ ಅವರಿಗೆ ಓದಿಗಿಂತ. ಅಡುಗೆ, ಹೂ ಕಟ್ಟುವುದು, ರಂಗೋಲಿ ಹಾಕುವುದೆಂದರೆ ಎಲ್ಲಿಲ್ಲದ ಉತ್ಸಾಹ. ಬಡತನದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಲು ಗಾರ್ಮೆಂಟ್ಸ್‌ ಕೆಲಸದತ್ತ ಮುಖ ಮಾಡಿದವರು ಅವರು. ಆ ಬಳಿಕ ತಮ್ಮ ಬದುಕಿನ ಹಾದಿಯನ್ನೇ ಬದಲಿಸಿದ ಯೂಟ್ಯೂಬ್‌ ಚಾನೆಲ್‌ ಪಯಣದ ಅನುಭವವನ್ನು ಅವರಿಲ್ಲಿ ವಿವರಿಸಿದ್ದಾರೆ...

ಅಡುಗೆ ಚಾನೆಲ್‌ಗೆ ತೆರೆದುಕೊಂಡದ್ದು ಹೇಗೆ?

ADVERTISEMENT

ಅಡುಗೆ ನನ್ನ ನೆಚ್ಚಿನ ಹವ್ಯಾಸ. ಚಿಕ್ಕಂದಿನಲ್ಲೇ ಅಮ್ಮ, ಸೋದರತ್ತೆ ತಯಾರಿಸುತ್ತಿದ್ದ ಅಡುಗೆಗಳನ್ನು ಕಲಿತು ಮಾಡುತ್ತಿದ್ದೆ. ಗಾರ್ಮೆಂಟ್ಸ್‌ನಲ್ಲಿ ಒಮ್ಮೆ ‘ಬೆಂಕಿಯಿಲ್ಲದೆ ಅಡುಗೆ’ ಸ್ಪರ್ಧೆ ಇಟ್ಟಾಗ ಒಂದೇ ಗಂಟೆಯಲ್ಲಿ 26 ಬಗೆಯ ತಿನಿಸು ತಯಾರಿಸಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದೆ. ಇದನ್ನು ಮನೆಗೆ ಬಂದು ತಮ್ಮನ ಬಳಿ ಹೇಳಿಕೊಂಡೆ. ಯೂಟ್ಯೂಬ್‌ ಚಾನೆಲ್‌ ಶುರು ಮಾಡಬೇಕೆಂದು ವಿಷಯಕ್ಕಾಗಿ ತಡಕಾಡುತ್ತಿದ್ದ ಅವನಿಗೆ ಅಕ್ಕನ ಅಡುಗೆ ಹವ್ಯಾಸವೇ ವೇದಿಕೆಯಾಯಿತು.

ಚಾನೆಲ್‌ ಪಯಣದ ಆರಂಭದ ಹಾದಿ ಹೇಗಿತ್ತು?

ತುಂಬಾ ಕಷ್ಟಕರವಾಗಿತ್ತು. ನಾನು ಗಾರ್ಮೆಂಟ್ಸ್‌ನಲ್ಲಿ, ತಮ್ಮ ಉದಯ್ ಕುಮಾರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೇ ಚಾನೆಲ್‌ ಆರಂಭಿಸಿದೆವು. ಪುಟ್ಟ ಮನೆ. ಅಡುಗೆ ಕೋಣೆಯಲ್ಲಿ ಒಬ್ಬರಷ್ಟೇ ನಿಂತು ಅಡುಗೆ ಮಾಡಬಹುದಿತ್ತು. ಸರಿಯಾದ ಪಾತ್ರೆಗಳು ಸಹ ಇರಲಿಲ್ಲ. ವಿಡಿಯೊ ಶೂಟ್‌ ಮಾಡಲು ಬೆಳಕಿರಲಿಲ್ಲ.ಇನ್ನು ಕ್ಯಾಮೆರಾ ದೂರದ ಮಾತು. ಮೊಬೈಲ್‌ನಲ್ಲೇ ವಿಡಿಯೊ ಮಾಡಿ, ಎಡಿಟ್‌ ಮಾಡಿ ತಮ್ಮ ಅಪ್‌ಲೋಡ್‌ ಮಾಡುತ್ತಿದ್ದ. ವೀಕ್ಷಕರಿಂದ ‘ಅಂಥ ಪಾತ್ರೆ ಬಳಸಿ’, ‘ಕ್ಯಾಮೆರಾ ಬಳಸಿ’, ‘ಬೆಳಕು ಚೆನ್ನಾಗಿರಲಿ’ ಎಂದೆಲ್ಲ ಸಲಹೆಗಳು ಬರಲು ಶುರುವಾದವು. ಸ್ನೇಹಿತರ ಸಹಾಯದಿಂದ ಕ್ಯಾಮೆರಾ ಕೊಂಡೆವು. ಒಂದೂವರೆ ವರ್ಷ ಕ್ಯಾಮೆರಾ ಕೈಯಲ್ಲಿ ಹಿಡಿದೇ ವಿಡಿಯೊ ಶೂಟ್‌ ಮಾಡಿದೆವು. ಆ ಬಳಿಕ ಟ್ರೈಪಾಡ್‌ ಕೊಂಡುಕೊಂಡೆವು. ಬಳಿಕ ಉದ್ಯೋಗ ಬಿಟ್ಟು ಅಡುಗೆ ಚಾನೆಲ್‌ನಲ್ಲೇ ಸಕ್ರಿಯವಾದೆ.

ನಿಮ್ಮ ಚಾನೆಲ್‌ನ ವಿಶೇಷ ಏನು?

ಒಂದು ಪದಾರ್ಥ ಇಲ್ಲದಿದ್ದರೆ ಅದರ ಬದಲು ಬೇರೆಯದನ್ನು ಬಳಸುವ ಟಿಪ್ಸ್‌ ಕೊಡುತ್ತೇನೆ. 3ರಿಂದ 6 ನಿಮಿಷಗಳವರೆಗೆ ಮಾತ್ರ ವಿಡಿಯೊಗಳನ್ನು ಮಾಡುತ್ತೇವೆ. ಶಾರ್ಟ್‌ ವಿಡಿಯೊಗಳನ್ನು ಜನ ಹೆಚ್ಚು ನೋಡುತ್ತಾರೆ.

ಬಿಸಿಬೇಳೆಬಾತ್‌ ಗಮ್ಮತ್ತು

ಬಿಸಿಬೇಳೆಬಾತ್‌

ರೇಖಾ ಅವರು 2017ರಲ್ಲಿ ತಯಾರಿಸಿದ ಬಿಸಿಬೇಳೆ ಬಾತ್‌ ಅತಿ ಹೆಚ್ಚು ಅಂದರೆ 1.66 ಕೋಟಿ ವ್ಯೂಸ್‌ ಪಡೆದಿದೆ. ಅದನ್ನು ತಯಾರಿಸುವ ವಿಧಾನ:

ಬೇಕಾಗುವ ಸಾಮಗ್ರಿ: ಅಕ್ಕಿ– ಒಂದು ಕಪ್ (ಕಾಲು ಕೆ.ಜಿ.ಗಿಂತ ಕಡಿಮೆ), ತೊಗರಿಬೇಳೆ 100 ಗ್ರಾಂ, ತರಕಾರಿ–ಆಲೂಗೆಡ್ಡೆ,  ಕ್ಯಾಪ್ಸಿಕಂ, ಬೀನ್ಸ್, ಕ್ಯಾರೆಟ್, ಬಟಾಣಿ, ಗೆಡ್ಡೆಕೋಸು.  ಅರ್ಧ ನಿಂಬೆಹಣ್ಣು ಗಾತ್ರದಷ್ಟು ನೆನೆಸಿದ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ: ಎಣ್ಣೆ, ಈರುಳ್ಳಿ, ಕರಿಬೇವು, ಎರಡು ಒಣಮೆಣಸಿನ ಕಾಯಿ, 2 ಟೊಮೆಟೊ, ಶೇಂಗಾ, ಸಾಸಿವೆ, ಅರಸಿನ, ಬಿಸಿಬೇಳೆ‌ಬಾತ್‌ ‍ಪುಡಿ.

ಮಾಡುವ ವಿಧಾನ: ತರಕಾರಿ ಹಾಗೂ ಅಕ್ಕಿ, ಬೇಳೆ ಹಾಕಿ ಸ್ವಲ್ಪ ಎಣ್ಣೆ, ಉಪ್ಪು ಬೆರೆಸಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಸಾಸಿವೆ ಸಿಡಿಸಿ, ಶೇಂಗಾ,  ಈರುಳ್ಳಿ,  ಒಣಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಕ್ಯಾಪ್ಸಿಕಂ, ಟೊಮೆಟೊ, ಅರಿಶಿನ, ಬಿಸಿಬೇಳೆಬಾತ್‌ ಪುಡಿ, ಉಪ್ಪು, ಹುಣಸೆರಸ ಹಾಕಿ ಫ್ರೈ ಮಾಡಿ. ಅದಕ್ಕೆ ಬೆಂದಿರುವ ತರಕಾರಿ, ಅಕ್ಕಿ– ಬೇಳೆ ಹಾಕಿ ಮಿಕ್ಸ್‌ ಮಾಡಿ. ರುಚಿಗೆ ಒಂದು ಚಮಚ ತುಪ್ಪ ಹಾಕಿ ಎರಡು ನಿಮಿಷ ಕುದಿಸಿ. ಬಳಿಕ ಬಿಸಿ ಇರುವಾಗಲೇ ಸವಿಯಿರಿ.

ಬಿಸಿಬೇಳೆಬಾತ್‌ ಪುಡಿ ಮಾಡುವ ವಿಧಾನ

ಬಿಸಿಬೇಳೆಬಾತ್‌ ಪುಡಿ

ಬೇಕಾಗುವ ಸಾಮಗ್ರಿ: ಒಣಗಿದ ಬ್ಯಾಡಗಿ ಮೆಣಸಿನಕಾಯಿ 25, ಗುಂಟೂರು ಮೆಣಸಿನಕಾಯಿ 10ರಿಂದ 12,  ದನಿಯ ಕಾಳು 4 ಟೀ ಚಮಚ, ಗಸಗಸೆ 1/2 ಟೀ ಚಮಚ, ಜೀರಿಗೆ 1 ಟೀ ಚಮಚ, ಮೆಂತ್ಯ 1/4 ಟೀ ಚಮಚ, ಇಂಗು 1/4 ಟೀ ಚಮಚ, ಕಡಲೆಬೇಳೆ 2 ಟೀ ಚಮಚ,  ಉದ್ದಿನಬೇಳೆ 2 ಟೀ ಚಮಚ, ಚೆಕ್ಕೆ 2 ಇಂಚು, ಲವಂಗ 5ರಿಂದ 6, ಏಲಕ್ಕಿ 2 , ಮೆಣಸಿನ ಕಾಳು 1/2 ಟೀ ಚಮಚ, ಬಿಳಿ ಎಳ್ಳು 1/2 ಚಮಚ, ಎಣ್ಣೆ 2 ಟೀ ಚಮಚ, ಸ್ವಲ್ಪ ಕರಿಬೇವು, ಕಲ್ಲುಪ್ಪು.

ಮಾಡುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆ ಬಣ್ಣ ಬದಲಾಗುವವರೆಗೆ ಹುರಿದುಕೊಂಡು ಪ್ಲೇಟ್‌ಗೆ ಹಾಕಿ,  ದನಿಯ ಹುರಿದು ಪ್ಲೇಟ್‌ಗೆ ಹಾಕಿ, ಜೀರಿಗೆ, ಮೆಂತ್ಯ, ಗಸಗಸೆ, ಎಳ್ಳು, ಚೆಕ್ಕೆ, ಲವಂಗ, ಏಲಕ್ಕಿ ಹಾಕಿ ಸಣ್ಣ ಉರಿಯಲ್ಲಿ ಹುರಿದು ತೆಗೆದುಕೊಳ್ಳಬೇಕು. ಬ್ಯಾಡಗಿ, ಗುಂಟೂರು ಮೆಣಸಿನಕಾಯಿಯನ್ನು ಬಾಣಲೆಗೆ ಸ್ವಲ್ಪ ಎಣ್ಣೆ ಬಿಟ್ಟು ಗರಿ ಆಗುವವರೆಗೆ ಹುರಿದು, ಕರಿಬೇವು ಹಾಕಿ ಹುರಿದುಕೊಳ್ಳಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಕಲ್ಲುಪ್ಪು, ಇಂಗು ಹಾಕಿ ಪುಡಿ ಮಾಡಿ. ಈ ಪುಡಿಯನ್ನು ಗಾಜಿನ ಬಾಟಲಿಯಲ್ಲಿ ಎರಡು ತಿಂಗಳವರೆಗೆ ಕೆಡದಂತೆ ಇಡಿ. ಈ ಪ್ರಮಾಣದ ಅಳತೆಯಲ್ಲಿ 4ರಿಂದ 5 ಬಾರಿ ಬಿಸಿಬೇಳೆ ಬಾತ್‌ ತಯಾರಿಸಬಹುದು.

ಸಂದರ್ಶನ: ಸುಮಾ ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.