ADVERTISEMENT

PV Web Exclusive | ರುಚಿ ಮೊಗ್ಗು ಅರಳಿಸುವ ಮಲೆನಾಡಿನ ‘ಕಜ್ಜಾಯ‘

ಪ್ರಕಾಶ ಕುಗ್ವೆ
Published 27 ಅಕ್ಟೋಬರ್ 2020, 8:14 IST
Last Updated 27 ಅಕ್ಟೋಬರ್ 2020, 8:14 IST
ಕಜ್ಜಾಯದ ಸರದೊಂದಿಗೆ ಮಲೆನಾಡಿನ ಮಹಿಳೆಯರು(ಸಾಂದರ್ಭಿಕ ಚಿತ್ರ)
ಕಜ್ಜಾಯದ ಸರದೊಂದಿಗೆ ಮಲೆನಾಡಿನ ಮಹಿಳೆಯರು(ಸಾಂದರ್ಭಿಕ ಚಿತ್ರ)   
""
""
""

ಕಜ್ಜಾಯ ಎಂದಾಕ್ಷಣ ಬಗೆ ಬಗೆಯ ಕಜ್ಜಾಯಗಳು ಕಣ್ಮುಂದೆ ಬರುತ್ತವೆ. ಆದರೆ, ಇದು ಮಲೆನಾಡಿನ ಕಜ್ಜಾಯ. ಅಕ್ಕಿ ಹಿಟ್ಟಿನಿಂದ ಮಾಡುವಂತಹದ್ದು; ಕೊಡುಬಳೆ ಆಕಾರದಲ್ಲಿದ್ದರೂ ಅಷ್ಟು ಸಣ್ಣದಲ್ಲ; ಟೆನ್ನಿಕ್ವಾಯಿಟ್ ರಿಂಗ್‌ ತರಹ ಇದ್ದರೂ ಅಷ್ಟು ದೊಡ್ಡದೂ ಅಲ್ಲ. ಇವೆರಡರ ಮಧ್ಯದ ಗಾತ್ರದ್ದು. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ದೀವರ (ಈಡಿಗರ) ಮನೆಯ ಸ್ವಾದಿಷ್ಟ ಖಾದ್ಯ. ಅವರ ಹಬ್ಬ–ಹರಿದಿನಗಳ ಅಡುಗೆಯಲ್ಲಿ ಈ ಕಜ್ಜಾಯ ಕಡ್ಡಾಯ.

ಮಗಳ ಮದುವೆಯಿಂದ ಹಿಡಿದು, ಅವಳ ಬಾಣಂತನ, ಮಗುವಿನ ಶಾಸ್ತ್ರದವರೆಗೆ, ಅತಿಥಿ ಸತ್ಕಾರದಿಂದ ಹಿಡಿದು, ತಿಥಿವರೆಗೂ ಕಜ್ಜಾಯದ ಅಡುಗೆ ಇದ್ದೇ ಇರುತ್ತದೆ.

ಕಜ್ಜಾಯ ಸವಿಯುತ್ತಿರುವ ಬಂಗಾರಪ್ಪ

ಕಜ್ಜಾಯಕ್ಕೂ ಇದೆ ರಾಜಕೀಯ, ಸಿನಿಮಾ ನಂಟು

ADVERTISEMENT

ಎಚ್‌.ಡಿ. ದೇವೇಗೌಡರು ಪ್ರಧಾನಿಯಾದಾಗ ಮುದ್ದೆ ಹೇಗೆ ಪ್ರಸಿದ್ಧಿ ಪಡೆಯಿತೋ, ಅದೇ ರೀತಿ ಈ ಕಜ್ಜಾಯ ಎಸ್‌. ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಇನ್ನಷ್ಟು ಜನಪ್ರಿಯವಾಯಿತು. ಬಂಗಾರಪ್ಪ ಅವರಿಗಂತೂ ಇದು ಅಚ್ಚುಮೆಚ್ಚಿನ ಖಾದ್ಯ. ಚುನಾವಣೆ ಪ್ರಚಾರಕ್ಕೆ ಹಳ್ಳಿಗಳ ಕಡೆ ಬಂದಾಗಲೆಲ್ಲ ಮುಖಂಡರ ಮನೆಗಳಲ್ಲಿ ಅವರಿಗಾಗಿಯೇ ವಿಶೇಷವಾಗಿ ಕಜ್ಜಾಯದ ಊಟ ಸಿದ್ಧಪಡಿಸಲಾಗುತ್ತಿತ್ತು. ಸೊರಬ ಕಡೆಯ ಕಾರ್ಯಕರ್ತರು ಬೆಂಗಳೂರಿಗೆ ಅವರನ್ನು ಕಾಣಲು ಹೊರಟಾಗಲೆಲ್ಲ ಕೈಯಲ್ಲಿ ಕಜ್ಜಾಯದ ಸರ ಇರುತ್ತಿತ್ತು ಎಂಬುದನ್ನು ಈಗಲೂ ಅವರ ಅಭಿಮಾನಿಗಳು ನೆನಪಿಸಿಕೊಂಡು ಪುಳಕಗೊಳ್ಳುತ್ತಾರೆ.

ಬಂಗಾರಪ್ಪ ಅವರ ಬೀಗರೂ ಆದ ನಟ ಡಾ. ರಾಜಕುಮಾರ್ ಅವರಿಗೂ ಈ ಕಜ್ಜಾಯದ ಸ್ವಾದ ಗೊತ್ತಿತ್ತು. ಬಂಗಾರಪ್ಪ ಅವರೇ ರಾಜಕುಮಾರ್‌ ಅವರಿಗೂ ಇದರ ರುಚಿ ಹತ್ತಿಸಿದ್ದರು. ರಾಜಕುಮಾರ್‌ ಅವರಿಗೆ ಕಜ್ಜಾಯದ ಮೇಲೆ ಎಷ್ಟು ಮೋಹ ಅಂದರೆ, ಆಸೆಯಾದಾಗಲೆಲ್ಲ ಬಂಗಾರಪ್ಪ ಅವರ ಮನೆಗೇ ಬಂದುಬಿಡುತ್ತಿದ್ದರಂತೆ. ಅಲ್ಲೇ ಕಜ್ಜಾಯ ಮಾಡಿಸಿಕೊಂಡು, ಸ್ನೇಹಿತರೊಟ್ಟಿಗೆ ಊಟ ಮಾಡಿ ಹೋಗುತ್ತಿದ್ದದ್ದೂ ಉಂಟು. ಒಮ್ಮೆ ಗೀತಸಾಹಿತಿ ಚಿ.ಉದಯಶಂಕರ್‌ ಅವರನ್ನೂ ಬಂಗಾರಪ್ಪ ಅವರ ಮನೆಗೆ ಕರೆದುಕೊಂಡು ಬಂದು ಕಜ್ಜಾಯ ತಿನ್ನಿಸಿದ್ದು, ಅದಕ್ಕೆ ಅವರು ಮನಸೋತು ‘ಹಾವಿನ ಹೆಡೆ’ ಸಿನಿಮಾಕ್ಕೆ ‘ಬಿಸಿ ಬಿಸಿ ಕಜ್ಜಾಯ, ರುಚಿ, ರುಚಿ ಕಜ್ಜಾಯ ಮಾಡಿಕೊಡಲೇ ನಾನು, ಹಿಂದೆ ಎಂದು ತಿಂದೇ ಇಲ್ಲ, ಮುಂದೆ ಎಂದೂ ತಿನ್ನೊದಿಲ್ಲ’ ಎಂಬ ಹಾಡನ್ನು ಬರೆದಿದ್ದರು. ಇದು ಜನಪ್ರಿಯ ಹಾಡು.

ಬಂಗಾರಪ್ಪ ಅವರಲ್ಲದೆ ಅವರ ಮಕ್ಕಳು, ಅಳಿಯಂದಿರಿಗೂ ಕಜ್ಜಾಯ ಈಗಲೂ ರುಚಿಯ ಅಡುಗೆಯೇ ಸೈ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೂ ಈಗಲೂ ಕಜ್ಜಾಯ ಎಂದರೆ ಆಸೆ.

ಕಜ್ಜಾಯದ ಜತೆ ಕೋಳಿ ಸಾರು ಸೂಪರ್‌ ಜೋಡಿ

ಕಜ್ಜಾಯ, ಕೋಳಿ ಸಾರು

ಕಜ್ಜಾಯದ ಜತೆ ಕೋಳಿಸಾರು ಇಲ್ಲದಿದ್ದರೆ ಅದು ಪರಿಪೂರ್ಣ ಅಡುಗೆ ಅಲ್ಲ. ಅದರಲ್ಲೂ ನಾಟಿಕೋಳಿ ಸಾರಿಗೆ ಕಜ್ಜಾಯ ಸರಿಯಾದ ಜೋಡಿ. ಕಜ್ಜಾಯ ಮಾಡಿದಾಗಲೆಲ್ಲ ಕೋಳಿಸಾರು ಮಾಡುವುದು ಸಾಮಾನ್ಯ.

ಕಜ್ಜಾಯ ಮಾಡಲು ಏನೇನು ಬೇಕು?

ಬಾಯಲ್ಲಿ ನೀರೂರಿಸುವ ರುಚಿಕರ ಖಾದ್ಯಕ್ಕೆ ಗುಣಮಟ್ಟದ ಅಕ್ಕಿ, ಈರುಳ್ಳಿ, ತೆಂಗಿನಕಾಯಿ ತುರಿ, ಅನ್ನ, ಚಿರೋಟಿ ರವೆ, ಬೆಳ್ಳುಳ್ಳಿ, ಉಪ್ಪು ಇಷ್ಟು ಸಾಕು.

ಬುಟ್ಟಿಯಲ್ಲಿ ಬಿಸಿ, ಬಿಸಿ, ಗರಿ, ಗರಿ ಕಜ್ಜಾಯ

ಪ್ರಮಾಣ ಎಷ್ಟು?

1 ಕೆ.ಜಿ. ಅಕ್ಕಿಯಲ್ಲಿ 30 ಕಜ್ಜಾಯ ಮಾಡಬಹುದು. ಅಕ್ಕಿಯನ್ನು ನೀರಲ್ಲಿ ತೊಳೆದು, ಒಣಗಿಸಿದ ನಂತರ ತರಿತರಿಯಾಗಿ ಹಿಟ್ಟು ಮಾಡಿಟ್ಟುಕೊಳ್ಳಬೇಕು.1 ಕೆ.ಜಿ. ಅಕ್ಕಿ ಹಿಟ್ಟು ಬೇಯಿಸಲು 6 ದೊಡ್ಡ ಲೋಟ ನೀರು ಬೇಕು. 2 ಹೆಚ್ಚಿದ ಈರುಳ್ಳಿ, ಒಂದು ಇಡೀ ತುರಿದ ತೆಂಗಿನ ಕಾಯಿ, ಸ್ವಲ್ಪ ಅನ್ನ, ಹದಕ್ಕೆ ಚಿರೋಟಿ ರವೆ, ಹತ್ತು ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ?

ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆ ಮೇಲೆ ಇಡಬೇಕು. ಅದು ಸ್ವಲ್ಪ ಬಿಸಿ ಆಗುತ್ತಿದ್ದಂತೆ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಬೇಕು. ಹಾಗೆಯೇ, ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಅನ್ನ ಹಾಕಿ ಸೌಟಿನಿಂದ ತಿರುಗಿಸಬೇಕು. ಸ್ವಲ್ಪ ಹೊತ್ತು ಬಿಟ್ಟು ಅಕ್ಕಿ ಹಿಟ್ಟನ್ನು ಕುದಿಯುತ್ತಿರುವ ನೀರಿಗೆ ಹಾಕಿ ಆಡಿಸಬೇಕು. ಇದೇ ವೇಳೆ ಉ‍ಪ್ಪು, ಚಿರೋಟಿ ರವೆ ಹಾಕಿ ಇನ್ನಷ್ಟು ಕುದಿಸಬೇಕು. ನಂತರ ಒಲೆ ಬಂದ್‌ ಮಾಡಿ ಸ್ವಲ್ಪ ಹೊತ್ತು ಹಾಗೇ ಪಾತ್ರೆ ಬಾಯಿ ಮುಚ್ಚಿಡಬೇಕು.

ಬಿಸಿ ಕಡಿಮೆ ಆಗುತ್ತಿದ್ದಂತೆ ಹಿಟ್ಟನ್ನು ತೆಗೆದು ಅಗಲವಾದ ಪಾತ್ರೆಗೆ ಸುರಿದುಕೊಳ್ಳಬೇಕು. ರೊಟ್ಟಿ ಮಾಡುವ ವಿಧಾನದಲ್ಲೇ ಈ ಹಿಟ್ಟನ್ನೂ ನಾದಬೇಕು. ನಂತರ ನಾದಿದ್ದನ್ನು ಸ್ವಲ್ಪ, ಸ್ವಲ್ಪವಾಗಿ ಕೋಲಿನ ರೂಪದಲ್ಲಿ ಉದ್ದ ಮಾಡಿ, ಎರಡು ತುದಿಗಳನ್ನು ಜೋಡಿಸಬೇಕು. ಅದು ಕೊಡುಬಳೆ ರೂಪಕ್ಕೆ ಬರುತ್ತದೆ. ಹೀಗೆ ಸಾಕಷ್ಟು ಮಾಡಿಟ್ಟುಕೊಂಡ ನಂತರ ಕುದಿಯುವ ಎಣ್ಣೆಗೆ ಅದನ್ನು ಹಾಕಿ, ಕೆಂಪು ಬಣ್ಣಕ್ಕೆ ಬರುತ್ತಿದ್ದಂತೆ ಬಾಣಲೆಯಿಂದ ತೆಗೆಯಬೇಕು. ಗರಿ, ಗರಿಯಾದ, ಬಿಸಿ, ಬಿಸಿ ಕಜ್ಜಾಯ ಸವಿಯಲು ಸಿದ್ಧ.

ಕಜ್ಜಾಯ ಈಗ ಅಪರೂಪ

ಎಲ್ಲರ ಬಾಯಲ್ಲಿ ನೀರು ಬರಿಸುತ್ತಿದ್ದ ಕಜ್ಜಾಯ ಈಗ ಅಪರೂಪ ಆಗಿದೆ. ಕಜ್ಜಾಯ ಮಾಡುವ ಕರಗತ ಕೈಗಳು ಕಡಿಮೆ ಆಗಿವೆ. ಈಗಿನ ತಲೆಮಾರಿಗೆ ಕಜ್ಜಾಯ ಮಾಡುವ ಕಲೆಗಾರಿಕೆ ಅಷ್ಟಾಗಿ ಸಿದ್ಧಿಸಿಲ್ಲ. ಬೆರಳಣಿಕೆಯ ಹೋಟೆಲ್‌ಗಳಲ್ಲಿ ಈ ಕಜ್ಜಾಯ ಸಿಗುತ್ತದೆಯಾದರೂ ಮನೆಯಲ್ಲಿ ಮಾಡಿದ ರುಚಿ ಸಿಗುತ್ತಿಲ್ಲ ಎಂದು ತಿಂದುಂಡವರು ಹೇಳುತ್ತಾರೆ.

ಕಜ್ಜಾಯ ಮಾಡುವ ಕಲೆಯನ್ನು ಈಗಿನ ಪೀಳಿಗೆ ಏಕೆ ಕರಗತ ಮಾಡಿಕೊಂಡಿಲ್ಲ ಎಂಬುದರ ಬಗ್ಗೆ ಸಾಗರ ತಾಲ್ಲೂಕಿನ ಬರದವಳ್ಳಿಯ ಗಿರಿಜಾ ಹೀಗೆ ಹೇಳುತ್ತಾರೆ–‘ಕಜ್ಜಾಯವನ್ನು ಎಣ್ಣೆಯಲ್ಲಿ ಕರಿಯುವಾಗ ಒಮೊಮ್ಮೆ ಮುಖಕ್ಕೆ ಸಿಡಿಯುತ್ತೆ ಎಂದು ಬಹಳಷ್ಟು ಹೆಣ್ಣು ಮಕ್ಕಳು ಹೆದರುತ್ತಾರೆ. ಎಣ್ಣೆ ಗುಣಮಟ್ಟದ್ದು ಅಲ್ಲದಿದ್ದರೆ, ಗುಣಮಟ್ಟದ ಅಕ್ಕಿ ಬಳಸದಿದ್ದರೆ ಕೆಲವೊಮ್ಮೆ ಹೀಗೆ ಆಗಿದ್ದೂ ಇದೆ. ಕಜ್ಜಾಯ ಮಾಡುವುದು ನಾಜೂಕಿನ ಕೆಲಸ; ತುಂಬಾ ಸಹನೆ ಬೇಕು. ಅದು ಈಗಿನವರಿಗೆ ಕಡಿಮೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.