
ಚಿತ್ರ; ಗೆಟ್ಟಿ
ಸುಲಭವಾಗಿ, ಕೈಗೆಟುಕುವ ದರದಲ್ಲಿ ಸಿಗುವ ಹಣ್ಣು ಅಂದರೆ ಅದು ಬಾಳೆಹಣ್ಣು. ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ನೈಸರ್ಗಿಕ ಶಕ್ತಿ ವರ್ಧನೆಯಾಗುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಶಕ್ತಿಯ ಭಂಡಾರ: ಬಾಳೆಹಣ್ಣು ನೈಸರ್ಗಿಕ ಸಕ್ಕರೆಯಿಂದ (ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್) ಸಮೃದ್ಧವಾಗಿದೆ. ಫೈಬರ್ ಹಾಗೂ ಕಾರ್ಬೋಹೈಡ್ರೇಟ್‌ಗಳು ಸ್ಥಿರವಾದ ಶಕ್ತಿಯ ಮೂಲವಾಗಿವೆ. ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ ಒಂದು ಬಾಳೆಹಣ್ಣು ತಿನ್ನುವುದು ನಿಮ್ಮನ್ನು ದಿನವಿಡೀ ದಣಿವಿನಿಂದ ದೂರವಿರಿಸುತ್ತದೆ.
ಜೀರ್ಣಕ್ರಿಯೆಗೆ ಬಲ: ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ಫೈಬರ್ ಅಂಶವಿರುತ್ತದೆ. ಇದು ಸರಿಯಾದ ಮಲಬದ್ಧತೆಗೆ ಅನುವು ಮಾಡಿಕೊಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಹೃದಯದ ಆರೋಗ್ಯಕ್ಕೆ ಉತ್ತಮ: ಒಂದು ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು 400 ಮಿಲಿ ಗ್ರಾಂ ಪೊಟ್ಯಾಸಿಯಮ್ ಹೊಂದಿರುತ್ತದೆ. ಬಾಳೆಹಣ್ಣುಗಳಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ನರ ಸಂವೇದಕ: ಬಾಳೆಹಣ್ಣು ವಿಟಮಿನ್ ಬಿ6 ನಿಂದ ಸಮೃದ್ಧವಾಗಿರುತ್ತದೆ. ನರ ಸಂವೇದಕಗಳಾದ ಸೆರೊಟೋನಿನ್ ಮತ್ತು ಟ್ರಿಪ್ಟೋಫಾನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ನಿತ್ಯ ಬಾಳೆಹಣ್ಣಿನ ಸೇವನೆ ಒತ್ತಡ ನಿವಾರಕವಾಗಿಯೂ ಕೆಲಸ ಮಾಡುತ್ತದೆ.
ರೋಗನಿರೋಧಕ ಹಾಗೂ ಶಕ್ತಿ ವರ್ಧಕ: ಬಾಳೆಹಣ್ಣು ವಿಟಮಿನ್ ಸಿ ಮತ್ತು ಇತರೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಬೆಳಿಗ್ಗೆ ಅಥವಾ ಮಧ್ಯಾಹ್ನ ಬಾಳೆಹಣ್ಣನ್ನು ಸೇವಿಸುವುದು ಉತ್ತಮ. ಏಕೆಂದರೆ ದೇಹವು ಈ ಸಮಯದಲ್ಲಿ ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಶಕ್ತಿವರ್ಧಕ ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಇದನ್ನು ವ್ಯಾಯಾಮದ ಮೊದಲು ಅಥವಾ ನಂತರ ಲಘು ಆಹಾರವಾಗಿಯೂ ಸೇವಿಸಬಹುದು.
ರಾತ್ರಿ ಮಲಗುವ ಮುನ್ನ ಬಾಳೆಹಣ್ಣಿನ ಸೇವನೆಯನ್ನು ತಪ್ಪಿಸುವುದು ಉತ್ತಮ. ಇದರಲ್ಲಿರುವ ಸಕ್ಕರೆ ಅಂಶ ದೇಹಕ್ಕೆ ಭಾರ ಎನಿಸಬಹುದು ಅಥವಾ ತಡರಾತ್ರಿ ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು.
ಮಧುಮೇಹ ಅಥವಾ ಮೂತ್ರಪಿಂಡ ಕಾಯಿಲೆ ಹೊಂದಿರುವವರು ಬಾಳೆಹಣ್ಣು ಸೇವನೆಗೆ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು.
ದಿನಕ್ಕೆ ಒಂದು ಅಥವಾ ಎರಡು ಬಾಳೆಹಣ್ಣುಗಳ ಸೇವನೆ ಸೂಕ್ತ.
ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಆರೋಗ್ಯದಲ್ಲಿ ಗಣನೀಯ ಬದಲಾವಣೆಗಳನ್ನು ಕಾಣಬಹುದು. ಅತಿ ಹೆಚ್ಚು ಸೇವಿಸಿದರೆ, ಕೆಲವೊಮ್ಮೆ ಶೀತಕ್ಕೂ ಕಾರಣವಾಗಬಹುದು.
ಲೇಖಕರು: ಡಾ. ಅದಿತಿ ಪ್ರಸಾದ್ ಆಪ್ಟೆ, ಹಿರಿಯ - ಕ್ಲಿನಿಕಲ್ ಪೌಷ್ಟಿಕತಜ್ಞ, ಆಸ್ಟರ್ ಆರ್‌ವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.