
ಚಿತ್ರ:ಗೆಟ್ಟಿ
ಬಾಳೆಹಣ್ಣು ಅತ್ಯಂತ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಳ ಅಥವಾ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ನಿಜಕ್ಕೂ ಈ ಹಣ್ಣಿನಲ್ಲಿ ತೂಕ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಗುಣವಿದೆಯಾ ಎಂಬುದನ್ನು ನೋಡೋಣ.
ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಅನೇಕರು ಬಾಳೆಹಣ್ಣಿನ ಸೇವನೆಯನ್ನು ತಪ್ಪಿಸುತ್ತಾರೆ. ಏಕೆಂದರೆ, ಇದು ಸಿಹಿಯಾಗಿದ್ದು, ಹೆಚ್ಚು ಕ್ಯಾಲೊರಿಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬಾಳೆಹಣ್ಣು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಪ್ರತಿದಿನ ಸೇವಿಸುತ್ತಾರೆ. ಈ ಎರಡೂ ಮಿಶ್ರ ಸಲಹೆಗಳಿಂದ ಕೂಡಿವೆ.
ವಾಸ್ತವದಲ್ಲಿ ಬಾಳೆಹಣ್ಣು ’ಕೊಬ್ಬನ್ನು ಹೆಚ್ಚಿಸುವ’ ಅಥವಾ ’ತೂಕ ಕಡಿಮೆ ಮಾಡುವ’ ಹಣ್ಣು ಅಲ್ಲ. ಇತರೆ ಆಹಾರಗಳಂತೆ ತೂಕದ ಮೇಲೆ ಇದರ ಪರಿಣಾಮವು ಈ ಹಣ್ಣಿನ ಸೇವನೆಯ ಆವರ್ತನ, ಆಹಾರದ ಗುಣಮಟ್ಟ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿದೆ.
ಬಾಳೆಹಣ್ಣಿನ ಪೌಷ್ಟಿಕಾಂಶ ಮೌಲ್ಯ ಮತ್ತು ಕ್ಯಾಲೊರಿ:
ಒಂದು ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು 90 ರಿಂದ 105 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಕ್ಯಾಲೊರಿ ಬಹುಪಾಲು ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿರುತ್ತದೆ. ಇದರ ಜೊತೆಗೆ ಫೈಬರ್, ಪೊಟ್ಯಾಸಿಯಂ, ವಿಟಮಿನ್ ಬಿ6, ಮೆಗ್ನೀಸಿಯಮ್ ಮತ್ತು ಸ್ವಲ್ಪ ಪ್ರಮಾಣದ ವಿಟಮಿನ್ ಸಿ ಇರುತ್ತದೆ.
ಬಾಳೆಹಣ್ಣು ನೈಸರ್ಗಿಕವಾಗಿ ಕೊಬ್ಬನ್ನು ಕಡಿಮೆ ಹೊಂದಿದ್ದು, ಕೊಲೆಸ್ಟ್ರಾಲ್ ಹೊಂದಿರುವುದಿಲ್ಲ. ಸಂಸ್ಕರಿತ ಆಹಾರಗಳಿಗಿಂತ ಭಿನ್ನವಾಗಿ, ಬಾಳೆಹಣ್ಣಿನಲ್ಲಿರುವ ಕ್ಯಾಲೊರಿಗಳು ಸ್ನಾಯುಗಳ ಆರೋಗ್ಯ, ಜೀರ್ಣಕ್ರಿಯೆ ಮತ್ತು ನರಗಳ ಆರೋಗ್ಯವನ್ನು ಬೆಂಬಲಿಸುವ ಪೋಷಕಾಂಶಗಳೊಂದಿಗೆ ಕೂಡಿರುತ್ತದೆ.
ಬಾಳೆಹಣ್ಣು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆಯೇ?
ಬಾಳೆಹಣ್ಣು ಸ್ವತಃ ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಒಟ್ಟು ಕ್ಯಾಲೊರಿ ಸೇವನೆಯು ಮೀರಿದಾಗ ಮಾತ್ರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಅತಿಯಾದ ಸೇವನೆ ಹಾಗೂ ಇತರೆ ಹೆಚ್ಚಿನ ಕ್ಯಾಲೊರಿಯಿಂದ ಕೂಡಿದ ಆಹಾರಗಳೊಂದಿಗೆ ಸಂಯೋಜಿಸಿ ಸೇವಿಸಿದರೆ ಮಾತ್ರ ತೂಕದ ಹೆಚ್ಚಳಕ್ಕೆ ಕಾರಣವಾಗಬಹುದು.
ಬಾಳೆಹಣ್ಣು ತೂಕ ಕಡಿಮೆಯಾಗಲು ಸಹಾಯ ಮಾಡಬಲ್ಲದೇ?
ಮಿತವಾಗಿ ಸೇವಿಸಿದಾಗ ಬಾಳೆಹಣ್ಣು ತೂಕ ಕಡಿಮೆಗೆ ಸಹಕಾರಿಯಾಗಿದೆ. ಇದರಲ್ಲಿರುವ ಫೈಬರ್ ಅಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ನೈಸರ್ಗಿಕ ಸಕ್ಕರೆ ಆರೋಗ್ಯಕ್ಕೆ ಸಹಕಾರಿಯಾಗಿದೆ. ವ್ಯಾಯಾಮದ ಮೊದಲು ಬಾಳೆಹಣ್ಣಿ ಸೇವನೆ ಉತ್ತಮವಾಗಿದೆ.
ದಿನಕ್ಕೆ ಒಂದು ಬಾಳೆ ಹಣ್ಣಿನ ಸೇವನೆ ತೂಕದ ನಿರ್ವಹಣೆ ಅಥವಾ ತೂಕ ಕಡಿಮೆ ಮಾಡಲು ಸೂಕ್ತವಾಗಿದೆ. ದೈಹಿಕವಾಗಿ ಸಕ್ರಿಯವಾಗಿರುವವರು ಅಥವಾ ಕ್ರೀಡಾಪಟುಗಳು ದಿನಕ್ಕೆ ಒಂದರಿಂದ ಎರಡು ಬಾಳೆ ಹಣ್ಣುಗಳನ್ನು ಸೇವಿಸಬಹುದು. ದಿನದ ಆರಂಭದಲ್ಲಿ, ಉಪಾಹಾರದ ಭಾಗವಾಗಿ ತಿನ್ನುವುದು ರಾತ್ರಿ ಸೇವನೆಗಿಂತ ಉತ್ತಮವಾಗಿದೆ.
ಲೇಖಕರು: ಡಾ. ಅದಿತಿ ಪ್ರಸಾದ್ ಆಪ್ಟೆ, ಹಿರಿಯ ಕ್ಲಿನಿಕಲ್ ಪೌಷ್ಟಿಕತಜ್ಞ, ಆಸ್ಟರ್ ಆರ್‌ವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.