ADVERTISEMENT

ಬಾಯಿಯಲ್ಲಿ ಹುಣ್ಣಾಗಲು ಕಾರಣವೇನು? ಇಲ್ಲಿದೆ ಸರಳ ಮನೆಮದ್ದುಗಳು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 11:31 IST
Last Updated 25 ನವೆಂಬರ್ 2025, 11:31 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಬಾಯಿಯ ಹುಣ್ಣು ಅಥವಾ ಮೌತ್ ಅಲ್ಸರ್ ಎನ್ನುವುದು ಬಾಯಿಯ ಒಳ ಭಾಗದಲ್ಲಿ ನಾಲಿಗೆಯ ಮೇಲೆ, ದವಡೆಯಲ್ಲಿ ಅಥವಾ ತುಟಿಗಳ ಒಳಗಡೆ ಕಾಣಿಸಿಕೊಳ್ಳುವ ಗುಳ್ಳೆಗಳ ಗಾಯವಾಗಿದೆ. ಇವು ಬಿಳಿ ಅಥವಾ ಹಳದಿ ಬಣ್ಣದಿಂದ ಕೂಡಿದ್ದು ಸುತ್ತಲೂ ಕೆಂಪಾಗಿರುತ್ತವೆ. ಹಾಗಾದರೆ ಬಾಯಿ ಹುಣ್ಣಿಗೆ ಕಾರಣಗಳೇನು? ಮತ್ತು ಪರಿಹಾರವೇನು ಎಂಬುದನ್ನು ನೋಡೋಣ.

ಬಾಯಿ ಹುಣ್ಣಿಗೆ ಪ್ರಮುಖ ಕಾರಣಗಳು: 

ADVERTISEMENT
  • ಆಕಸ್ಮಿಕವಾಗಿ ದವಡೆಯ ಚರ್ಮ ‌ಅಥವಾ ನಾಲಿಗೆಯನ್ನು ಕಚ್ಚಿಕೊಳ್ಳುವುದು.

  • ಗಟ್ಟಿಯಾದ ಟೂತ್‌ ಬ್ರೇಶ್ ಅಥವಾ ಚೂಪಾದ ಆಹಾರ ಸೇವಿಸುವಾಗ ಬಾಯಿಗೆ ಗಾಯವಾಗುವುದು. 

  • ಪೌಷ್ಟಿಕಾಂಶಗಳ ಕೊರತೆ: ವಿಟಮಿನ್ ಬಿ12, ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ಜಿಂಕ್‌ನ ಕೊರತೆಯು ಬಾಯಿ ಹುಣ್ಣಿಗೆ ಕಾರಣವಾಗಬಹುದು.

  • ಒತ್ತಡ ಮತ್ತು ಹಾರ್ಮೋನ್ ಬದಲಾವಣೆ: ಮಾನಸಿಕ ಒತ್ತಡ, ಆತಂಕ, ನಿದ್ದೆಯ ಕೊರತೆ ಮತ್ತು ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳು ಬಾಯಿ ಹುಣ್ಣಿಗೆ ಕಾರಣವಾಗುತ್ತವೆ.

  • ಆಹಾರಗಳು: ಹುಳಿ ಹಣ್ಣುಗಳು, ಟೊಮೇಟೊ, ಚಾಕೊಲೇಟ್, ಮಸಾಲೆಯುಕ್ತ ಆಹಾರ ಮತ್ತು ಕೆಲವು ಹಣ್ಣಿನ  ಬೀಜಗಳು ಬಾಯಿ ಹುಣ್ಣನ್ನು ಉಂಟುಮಾಡಬಹುದು.

  • ಇತರೆ ಕಾರಣಗಳು:  ದುರ್ಬಲ ರೋಗನಿರೋಧಕ ಶಕ್ತಿ, ಧೂಮಪಾನ ಬಿಟ್ಟ ನಂತರ, ಕೆಲವು ಔಷಧಿಗಳ ಅಡ್ಡಪರಿಣಾಮ, ಜಠರ ಹಾಗೂ ಕರುಳಿನ ಸಮಸ್ಯೆಗಳೂ ಕಾರಣವಾಗಬಹುದು

ಮನೆಯಲ್ಲಿಯೇ ಚಿಕಿತ್ಸೆಯ ಪರಿಣಾಮಕಾರಿ ವಿಧಾನಗಳು

  • ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು: ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ, ದಿನಕ್ಕೆ 3 ರಿಂದ 4 ಬಾರಿ ಬಾಯಿ ಮುಕ್ಕಳಿಸಿ. ಇದು ಬ್ಯಾಕ್ಟೀರಿಯಾವನ್ನು ನಾಶಗೊಳಿಸಿ ಬಾಯಿಯ ನೋವನ್ನು ಕಡಿಮೆ ಮಾಡುತ್ತದೆ.

  • ಜೇನು ತುಪ್ಪ ಬಳಸಿ: ಶುದ್ಧ ಜೇನು ತುಪ್ಪ ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ. ಹುಣ್ಣಿನ ಮೇಲೆ ಜೇನು ತುಪ್ಪ ಹಚ್ಚಿರಿ. ದಿನಕ್ಕೆ 3 ರಿಂದ 4 ಬಾರಿ ಬಳಸುವುದರಿಂದ ಉರಿಯೂತ ಕಡಿಮೆಯಾಗಿ ಗಾಯ ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.

  • ತೆಂಗಿನ ಎಣ್ಣೆ: ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ10 ರಿಂದ 15 ನಿಮಿಷ ಮುಕ್ಕಳಿಸಿ, ನಂತರ ಉಗುಳಿ. ಇದು ಬಾಯಿಯ ಆರೋಗ್ಯ ಕಾಪಾಡುತ್ತದೆ.

  • ಅರಿಶಿಣದ ಪೇಸ್ಟ್:  ಅರಿಶಿಣ ಪುಡಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಬಾಯಿಯ ಹುಣ್ಣಿನ ಮೇಲೆ ಹಚ್ಚಿ. ಅರಿಶಿಣದಲ್ಲಿರುವ ಕರ್ಕ್ಯುಮಿನ್ ಉರಿಯೂತ ವಿರೋಧಿ ಗುಣ ಹೊಂದಿದೆ.

ಮುನ್ನಜಾಗ್ರತ ಕ್ರಮಗಳು: 

  • ಮೃದುವಾದ ಬ್ರಷ್ ಬಳಸುವುದು.

  • ಮಸಾಲೆಯುಕ್ತ ಮತ್ತು ಆಮ್ಲೀಯ ಆಹಾರವನ್ನು ಕಡಿಮೆ ಸೇವಿಸಿಸುವುದು.

  • ಸಾಕಷ್ಟು ನೀರು ಮತ್ತು ಪೌಷ್ಟಿಕ ಆಹಾರ ಸೇವಿಸುವುದು

  • ಬಾಯಿಯ ಹುಣ್ಣು 2 ವಾರಕ್ಕಿಂತ ಹೆಚ್ಚು ಕಾಲ ಇದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ

(ಡಾ. ಸತೀಶ್ ಎಂ. ಎಸ್. ವಶಿಷ್ಠ, ಕನ್ಸಲ್ಟೆಂಟ್ ,ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.