
ಸಾಂದರ್ಭಿಕ ಚಿತ್ರ:
ಎಐ
ಗರ್ಭಧಾರಣೆಯ 37ನೇ ವಾರ ತಲುಪುವ ಮೊದಲು ಜನಿಸಿದ ಯಾವುದೇ ಮಗುವನ್ನು ಅಕಾಲಿಕ ಮಗು ಅಥವಾ ಅವಧಿ ಪೂರ್ವ ಜನನ ಎನ್ನುತ್ತೇವೆ. (ಸಾಮಾನ್ಯ ಪೂರ್ಣಾವಧಿಯ ಗರ್ಭಧಾರಣೆ 38- 40 ವಾರಗಳು)
ಶಿಶುಗಳು ಬೇಗನೆ ಜನಿಸಿದರೆ, ಅವುಗಳ ದೇಹವು ಗರ್ಭಾಶಯದ ಹೊರಗೆ ಬದುಕುಳಿಯಲು ಸಂಪೂರ್ಣವಾಗಿ ಸಿದ್ಧಗೊಂಡಿರುವುದಿಲ್ಲ ಮತ್ತು ಶ್ವಾಸಕೋಶ, ಕರುಳು, ಮೆದುಳು ಬೆಳವಣಿಗೆ ಮತ್ತು ರೋಗನಿರೋಧಕ ವ್ಯವಸ್ಥೆ ಸಂಪೂರ್ಣ ಬೆಳವಣಿಗೆಯಾಗಿರುವುದಿಲ್ಲ.
ಅವಧಿಪೂರ್ವ ಜನನದ ಅವಧಿ ಆಧಾರದಲ್ಲಿ ಈ ಶಿಶುಗಳನ್ನು ಮೂರು ಉಪಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ.
1) ಮಧ್ಯಮ ಅವಧಿಪೂರ್ವ: 32 ರಿಂದ 37ವಾರಗಳ ನಡುವೆ ಜನನ
ಕನಿಷ್ಠ ವೈದ್ಯಕೀಯ ಬೆಂಬಲಗಳು, ತಾಪಮಾನ ಪರಿಶೀಲನೆ, ಜಾಂಡೀಸ್ ಪರೀಕ್ಷೆಯಂಥ ಮೇಲ್ವಿಚಾರಣೆ ಅಗತ್ಯ.
2) ಅಧಿಕ ಅವಧಿಪೂರ್ವ: 28 ರಿಂದ 32ವಾರಗಳು
ಈ ಶಿಶುಗಳಿಗೆ ಕೃತಕ ಉಸಿರಾಟದ ಬೆಂಬಲ, ಆಹಾರ ಬೆಂಬಲ, ಸೋಂಕುಗಳು ಮತ್ತು ನರವೈಜ್ಞಾನಿಕ ಸಮಸ್ಯೆಗಳ ಮೇಲ್ವಿಚಾರಣೆ ಮಾಡುವುದು ಅಗತ್ಯ.
3) ತೀವ್ರ ಅವಧಿಪೂರ್ವ: 28ವಾರಗಳಿಗಿಂತ ಕಡಿಮೆ
ಸುಧಾರಿತ ನವಜಾತ ಶಿಶುವಿನ ಆರೈಕೆಗಳಾದ ವೆಂಟಿಲೇಟರ್‌ಗಳು, ಇಂಟ್ರಾವೆನಸ್ ಪೌಷ್ಟಿಕಾಂಶ ಬೆಂಬಲ, ದ್ರವದ ಸಮತೋಲನ, ಸೋಂಕುಗಳು ಮತ್ತು ನರವೈಜ್ಞಾನಿಕ ಸಮಸ್ಯೆಯಿಂದ ಮೇಲ್ವಿಚಾರಣೆ ಮಾಡುವುದು ಅಗತ್ಯ.
ಪ್ರಸವಪೂರ್ವ ಜನನಕ್ಕೆ ಕಾರಣಗಳು
ತಾಯಿಯ ಅಂಶಗಳು:
ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಪ್ರಿಕ್ಲಾಂಪ್ಸಿಯಾ, ಪ್ರಸವಾನಂತರದ ರಕ್ತಸ್ರಾವ, ತಾಯಿಯ ಸೋಂಕುಗಳು, ಅವಳಿ/ತ್ರಿವಳಿ ಗರ್ಭಧಾರಣೆ.
ಜೀವನಶೈಲಿ:
ಧೂಮಪಾನ, ಮದ್ಯಪಾನ, ಗರ್ಭಾವಸ್ಥೆಯಲ್ಲಿ ಒತ್ತಡ ಮತ್ತು ದುರ್ಬಲ ಪೋಷಣೆ, ಮನೆಯ ವಾತಾವರಣ ಸರಿಯಾಗಿಲ್ಲದಿರುವುದು, ತಾಯಿಯಾಗಲು ಎದುರು ನೋಡುವ ಗರ್ಭಿಣಿಗೆ ಅವಧಿಗೂ ಮುನ್ನವೇ ಮಗುವಿನ ಜನನಕ್ಕೆ ಕಾರಣವಾಗುತ್ತದೆ.
ಆನುವಂಶಿಕ ಮತ್ತು ಸಾಮಾಜಿಕ ಅಂಶಗಳು:
ಕುಟುಂಬದಲ್ಲಿ ಅವಧಿಪೂರ್ವ ಜನನಗಳ ಇತಿಹಾಸ ಮತ್ತು ಆನುವಂಶಿಕ ಪರಿಸ್ಥಿತಿಗಳು, ಆರೋಗ್ಯ ಆರೈಕೆಯ ಕೊರತೆಯು ಅವಧಿಪೂರ್ವ ಜನನಕ್ಕೆ ಕಾರಣವಾಗಬಹುದು.
ಅವಧಿಪೂರ್ವ ಜನನ ತಡೆಗಟ್ಟಲು ಸಾಧ್ಯವೆ
ಕೆಲವೊಮ್ಮೆ ಅವಧಿಪೂರ್ವ ಜನನವನ್ನು ತಪ್ಪಿಸಬಹುದು. ಆದರೆ ಯಾವಾಗಲೂ ತಪ್ಪಿಸಬಹುದು ಎನ್ನಲು ಸಾಧ್ಯವಿಲ್ಲ. ನಿಯಮಿತ ಪ್ರಸವಪೂರ್ವ ತಪಾಸಣೆಗಳು, ಎಚ್ಚರಿಕೆ ಸೂಚನೆಗಳನ್ನು ಪತ್ತೆ ಮಾಡುವುದು, ಸೋಂಕುಗಳನ್ನು ಪರೀಕ್ಷಿಸಿ ಮತ್ತು ಚಿಕಿತ್ಸೆ ನೀಡುವುದು ಸೂಕ್ತ ಸಮಯದ ಹೆರಿಗೆಗೆ ಸಹಕಾರಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ಸಮತೋಲಿತ ಆಹಾರ ಸೇವನೆ ಮತ್ತು ಒತ್ತಡ ಕಡಿಮೆ ಮಾಡುವುದು.
ಪ್ರೊಜೆಸ್ಟರಾನ್ ಚಿಕಿತ್ಸೆ, ದುರ್ಬಲ ಅಥವಾ ಚಿಕ್ಕ ಗರ್ಭಕಂಠಕ್ಕೆ ಗರ್ಭಕಂಠದ ಹೊಲಿಗೆ ಬೆಳೆಯುತ್ತಿರುವ ಗರ್ಭಾಶಯಕ್ಕೆ ಹೆಚ್ಚುವರಿ ಬೆಂಬಲವನ್ನು ಒದಗಿಸುತ್ತದೆ. ಮಗುವಿನ ಶ್ವಾಸಕೋಶದ ಪಕ್ವತೆಯನ್ನು ತ್ವರಿತಗೊಳಿಸಲು ಕಾರ್ಟಿಕೊಸ್ಟೆರಾಯ್ಡ್‌ಗಳು - ವೈಜ್ಞಾನಿಕವಾಗಿ ಸಾಬೀತಾಗಿರುವ ಚಿಕಿತ್ಸೆಗಳನ್ನು ನೀಡುವುದು.
ಅಕಾಲಿಕವಾಗಿ ಜನಿಸಿದ ಮಗುವಿನ ಆರೈಕೆ
ಮಗುವಿನ ಶ್ವಾಸಕೋಶವನ್ನು ಸಕ್ರಿಯಗೊಳಿಸಲು ಮತ್ತು ಮಿದುಳಿನಲ್ಲಿ ರಕ್ತಸ್ರಾವವನ್ನು ತಡೆಯಲು ವೈದ್ಯಕೀಯ ತಂಡವು ತಕ್ಷಣ ಕ್ರಮ ಕೈಗೊಳ್ಳುವುದು.
ಟೋಕೋಲಿಟಿಕ್ಸ್- ಗರ್ಭಾಶಯದ ಸ್ನಾಯುಗಳನ್ನು ಸಡಿಲಗೊಳಿಸಲು ಸಂಕೋಚನಗಳನ್ನು ವಿಳಂಬಗೊಳಿಸಲು ಪ್ರಮುಖ ಔಷಧಿಗಳನ್ನು ನೀಡುವುದು.
ಶ್ವಾಸಕೋಶದ ಪಕ್ವತೆಗೆ ಕಾರ್ಟಿಕೊಸ್ಟೆರಾಯ್ಡ್‌ಗಳು, ದುರ್ಬಲ ಮಿದುಳನ್ನು ರಕ್ತಸ್ರಾವದಿಂದ ರಕ್ಷಿಸಲು ಮೆಗ್ನೀಷಿಯಮ್ ಸಲ್ಫೇಟ್, ಆಮ್ನಿಯೋಟಿಕ್ ದ್ರವ ಸೋರಿಕೆಯಾಗಿದ್ದರೆ ಸೋಂಕುಗಳನ್ನು ತಡೆಗಟ್ಟಲು ಪ್ರತಿಜೀವಕಗಳನ್ನು ನೀಡುವುದು.
ಮಗುವಿಗೆ ಸರಿಯಾದ ಆರೈಕೆ ನೀಡಬಹುದಾದ ನಿಯೋನೇಟಲ್ ಕೇಂದ್ರದಲ್ಲಿ ಮಗುವನ್ನು ಇರಿಸಬೇಕು.
ಅಕಾಲಿಕ ಜನನದ ತಕ್ಷಣದ ಪರಿಣಾಮಗಳು:
ಶ್ವಾಸಕೋಶದ ದುರ್ಬಲ ಬೆಳವಣಿಗೆಯಿಂದ ಉಸಿರಾಟದ ಸಮಸ್ಯೆಗಳು, ಕರುಳು ಬೆಳೆಯದೆ ಹಾಲು ಸೇವನೆ ಸಾಧ್ಯವಾಗದಿರುವುದು.
ತಾಪಮಾನದ ಅಸ್ಥಿರತೆ: ಅಕಾಲಿಕವಾಗಿ ಜನಿಸಿದ ಶಿಶುಗಳು ಬೇಗನೆ ಶಾಖವನ್ನು ಕಳೆದುಕೊಳ್ಳುತ್ತವೆ ಮತ್ತು ಸ್ಥಿರವಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತವೆ ಮತ್ತು ತಾಯಿಯ ಗರ್ಭವನ್ನು ಅನುಕರಿಸಲು ಇನ್ಕ್ಯುಬೇಟರ್‌ಗಳಲ್ಲಿ ಇಡಬೇಕಾಗುತ್ತದೆ.
ಅಪಕ್ವವಾದ ಯಕೃತ್ತಿನಿಂದಾಗಿ ಕಾಮಾಲೆ, ಗ್ಲೂಕೋಸ್‌ನ ಮೂಲವಾಗಿ ಕಾರ್ಯನಿರ್ವಹಿಸುವ ಸಬ್ಕ್ಯುಟೇನಿಯಸ್ ಕೊಬ್ಬಿನ ಕೊರತೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಮತ್ತು ಅಪಕ್ವವಾದ ಮೆದುಳಿನ ಕ್ಯಾಪಿಲ್ಲರಿಗಳಿಂದ ಮೆದುಳಿನ ರಕ್ತಸ್ರಾವದ ಅಪಾಯವು ಅಕಾಲಿಕ ಶಿಶುಗಳು ಎದುರಿಸುವ ಇತರ ಕೆಲವು ಪ್ರಮುಖ ಸಮಸ್ಯೆಗಳಾಗಿವೆ.
ದೀರ್ಘಾವಧಿಯ ಪರಿಣಾಮಗಳು:
ಚಲನೆ, ಮಾತು ಮತ್ತು ಅರಿವಿನ ವಿಳಂಬ. ಪ್ರಾರಂಭದಲ್ಲೇ ಚಿಕಿತ್ಸೆ ನೀಡಿದರೆ ಈ ಸಮಸ್ಯೆ ಪರಿಹರಿಸಬಹುದು. ಸೆರೆಬ್ರಲ್ ಪಾಲ್ಸಿ, ಶ್ರವಣ ದೋಷ ಮತ್ತು ದೃಷ್ಟಿ ದೋಷದಂತಹ ತೊಂದರೆಗಳು (ರೆಟಿನೋಪತಿ ಆಫ್ ಪ್ರಿಮೆಚುರಿಟಿ), ತೀವ್ರ ಅವಧಿ ಪೂರ್ವ ಶಿಶುಗಳಲ್ಲಿ ಕಲಿಕೆಯ ತೊಂದರೆ ಹೆಚ್ಚು.
ನವಜಾತ ಶಿಶುಗಳ ಆರೈಕೆಯಲ್ಲಿನ ಪ್ರಗತಿಗಳು, ಪೋಷಕರ ಶಿಕ್ಷಣ ಮತ್ತು ಬೆಂಬಲ ಮತ್ತು ಮುಂಜಾಗ್ರತಾ ಮಧ್ಯಸ್ಥಿಕೆ ಚಿಕಿತ್ಸೆಗಳು ಅಕಾಲಿಕ ಶಿಶುಗಳ ನರಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆಗೆ ಭರವಸೆಯನ್ನು ನೀಡುತ್ತವೆ.
ಅವಧಿಪೂರ್ವ ಜನಿಸಿದ ಶಿಶುಗಳು ಹಗೂ ನವಜಾತ ಶಿಶುಗಳ ಆರೈಕೆ, ಚಿಕಿತ್ಸೆ ಮತ್ತು ಪೋಷಕರ ಆರೈಕೆಗಳೊಂದಿಗೆ ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಜೀವನಶೈಲಿಯ ಆಯ್ಕೆಗಳು ಅಥವಾ ಆಲೋಚನೆಗಳು ಅವಧಿಪೂರ್ವ ಜನನಕ್ಕೆ ಕಾರಣವಾಗುತ್ತವೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಮೂರನೇ ತ್ರೈಮಾಸಿಕದಲ್ಲಿ ಲೈಂಗಿಕ ಕ್ರಿಯೆ, ವಿಮಾನ ಪ್ರಯಾಣ ಅಥವಾ ಹಗುರವಾದ ದೈಹಿಕ ವ್ಯಾಯಾಮ ಕೂಡ ಅವಧಿ ಪೂರ್ವ ಜನನಕ್ಕೆ ಕಾರಣ ಎಂಬ ಮೂಡನಂಬಿಕೆ ನಮ್ಮಲ್ಲಿದೆ. ಆದರೆ ಇವುಗಳನ್ನು ಆರೋಗ್ಯಕರ ಗರ್ಭಾವಸ್ಥೆಯಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಆದಾಗ್ಯೂ ಕಠಿಣ ದೈಹಿಕ ಶ್ರಮ ಮತ್ತು ಬಾವಿಗಳಿಂದ ನೀರು ತರುವುದು ಅಪಾಯಕಾರಿ.
(ಲೇಖಕರು: ಡಾ. ರಶ್ಮಿ ಜೀನಕೇರಿ, ಸಲಹೆಗಾರ ಶಿಶುವೈದ್ಯೆ ಮತ್ತು ನವಜಾತ ಶಿಶುಶಾಸ್ತ್ರಜ್ಞರು, ಅಪೋಲೋ ಆಸ್ಪತ್ರೆ ಶೇಷಾದ್ರಿಪುರಂ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.