
ಮಕ್ಕಳಲ್ಲಿ ಶ್ವಾಸಕೋಶದ ಸೋಂಕಿನಿಂದ ಉಂಟಾಗುವ ನ್ಯುಮೋನಿಯಾ ಕಾಯಿಲೆಯು ಪ್ರತಿ ವರ್ಷ ಭಾರತದಲ್ಲಿ ಲಕ್ಷಾಂತರ ಮಕ್ಕಳ ಸಾವಿಗೆ ಕಾರಣವಾಗುತ್ತದೆ. ಮುಖ್ಯವಾಗಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ನವಜಾತ ಶಿಶುಗಳು ನ್ಯುಮೋನಿಯಾ ಕಾಯಿಲೆಗೆ ಹೆಚ್ಚು ಬಲಿಯಾಗುತ್ತಾರೆ. ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿರುವ ಮಗುವಿನ ಆರೋಗ್ಯವು ಶೀಘ್ರವಾಗಿ ಹದಗೆಡುವುದರಿಂದ ಚಿಕಿತ್ಸೆ ನೀಡಲು ತಡವಾಗಬಾರದು. ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆಯು ಸುಸಜ್ಜಿತವಾಗಿಲ್ಲದಿರುವುದರಿಂದ ಮಕ್ಕಳು ಆಸ್ಪತ್ರೆಗೆ ತಡವಾಗಿ ತಲುಪುವ ಸಾಧ್ಯತೆಯಿರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಜೀವ ಕಳೆದುಕೊಳ್ಳುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೈಕಿ ಶೇ 15 ಮಕ್ಕಳು ನ್ಯುಮೋನಿಯಾ ಕಾಯಿಲೆಗೆ ಬಲಿಯಾಗುತ್ತಾರೆ.
ಜ್ವರ, ಕೆಮ್ಮು, ಉಸಿರಾಡಲು ತೊಂದರೆ ಮತ್ತು ವೇಗವಾಗಿ ಉಸಿರಾಡುವುದು ನ್ಯುಮೋನಿಯಾ ರೋಗದ ಲಕ್ಷಣಗಳಾಗಿರುತ್ತದೆ. ಮಕ್ಕಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಕೂಡ ಶ್ವಾಸಕೋಶದಲ್ಲಿ ಸೋಂಕನ್ನು ಹರಡಿ ನ್ಯುಮೋನಿಯಾ ಉಂಟು ಮಾಡಬಹುದು. ಶ್ವಾಸಕೋಶದೊಳಗೆ ಸೋಂಕು ಹರಡಿದಂತೆ ನ್ಯುಮೋನಿಯಾ ಉಲ್ಬಣವಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಆ್ಯಂಟಿಬಯಾಟಿಕ್ಸ್ ಮತ್ತು ಚಿಕಿತ್ಸೆ ನೀಡುವುದು ಅನಿವಾರ್ಯವಾಗಿರುತ್ತದೆ. ಗ್ರಾಮಗಳ ಮಟ್ಟದಲ್ಲಿ ಕೆಲಸ ಮಾಡುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೂ ಕೂಡ ಜ್ವರ, ಕೆಮ್ಮು ಮತ್ತು ವೇಗವಾಗಿ ಉಸಿರಾಡುವ ಮಕ್ಕಳನ್ನು ಪತ್ತೆ ಹಚ್ಚುವ ತರಬೇತಿಯನ್ನು ನೀಡಲಾಗಿದೆ. ಈ ರೀತಿಯ ಲಕ್ಷಣಗಳು ಮಗುವಿಗೆ ಕಾಣಿಸಿಕೊಂಡರೆ ಅಂತಹ ಮಕ್ಕಳಿಗೆ ಆ್ಯಂಟಿಬಯಾಟಿಕ್ಸ್ ಔಷಧವನ್ನು ನೀಡಿ, ಬಳಿಕ ಉನ್ನತ ಆಸ್ಪತ್ರೆಗೆ ಕಳಿಸಲು ಕೂಡ ಅನುಮತಿಯನ್ನು ನೀಡಲಾಗಿದೆ.
ಕೆಲವು ಕಾಯಿಲೆಗಳು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡಿದರೆ, ಕೆಲವು ಕಾಯಿಲೆಗಳು ಗಾಳಿಯ ಮೂಲಕವೂ ಹರಡುತ್ತವೆ. ಗಾಳಿಯ ಮೂಲಕ ಸೂಕ್ಷ್ಮಾಣುಜೀವಿಗಳು ಶ್ವಾಸಕೋಶದೊಳಗೆ ಸೇರಿ ನ್ಯುಮೋನಿಯಾವನ್ನು ಉಂಟುಮಾಡುತ್ತದೆ. ಗಾಳಿಯ ಮೂಲಕ ಹರಡುವ ಕಾಯಿಲೆಗಳಾದ ನ್ಯುಮೋನಿಯಾ ಒಬ್ಬ ರೋಗಿಯಿಂದ ಉಳಿದವರಿಗೆ ಹೆಚ್ಚು ವೇಗವಾಗಿ ಹರಡಬಹುದು. ಕೋವಿಡ್ ಕೂಡ ವೈರಸ್ ಮೂಲಕ ಹರಡುವ ನ್ಯುಮೋನಿಯಾ ಕಾಯಿಲೆಯೇ ಹೌದು.
ನ್ಯುಮೋನಿಯಾವನ್ನು ನಿಖರವಾಗಿ ಪತ್ತೆ ಹಚ್ಚಲು ಶ್ವಾಸಕೋಶದ ಎಕ್ಸ್–ರೆ ಮಾಡಿಸಬೇಕಾಗುತ್ತದೆ. ಶ್ವಾಸಕೋಶದ ಯಾವ ಭಾಗದಲ್ಲಿ ಸೋಂಕು ಉಂಟಾಗಿದೆ ಮತ್ತು ಎಷ್ಟು ಪ್ರತಿಶತ ಶ್ವಾಸಕೋಶದ ಭಾಗವನ್ನು ಸೋಂಕು ಆವರಿಸಿದೆ ಎಂಬುದನ್ನು ಈ ಪರೀಕ್ಷೆ ತಿಳಿಸುತ್ತದೆ. ಎಕ್ಸ್–ರೆಯ ಚಿತ್ರಣದಿಂದಲೂ ವೈದ್ಯರು ನ್ಯುಮೋನಿಯಾದ ವಿಧವನ್ನು ಮತ್ತು ಅದನ್ನು ತಂದ ಕೀಟಾಣುವನ್ನು ಅಂದಾಜಿಸುತ್ತಾರೆ ಮತ್ತು ಆಗ ಸೂಕ್ತ ಚಿಕಿತ್ಸೆಯನ್ನು ಆರಂಭಿಸುತ್ತಾರೆ.
ಮಕ್ಕಳಿಗೆ ಆಕ್ಸಿಜನ್ ಅಗತ್ಯವಿಲ್ಲದಿದ್ದರೆ ಮತ್ತು ಉಸಿರಾಡಲು ಹೆಚ್ಚು ತ್ರಾಸವಾಗದಿದ್ದರೆ ನ್ಯುಮೋನಿಯಾವನ್ನು ಆ್ಯಂಟಿಬಯಾಟಿಕ್ ಗುಳಿಗೆ ಅಥವಾ ಸಿರಫ್ ಮೂಲಕ ಚಿಕಿತ್ಸೆ ನೀಡಬಹುದು. ತೀವ್ರ ಜ್ವರ, ನಿತ್ರಾಣ ಮತ್ತು ಉಸಿರಾಟದ ಸಮಸ್ಯೆಯಿದ್ದರೆ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗಿಬರಬಹುದು. ಉಸಿರಾಟಸ ಸಮಸ್ಯೆ ಹೆಚ್ಚಾಗಿ ಆಕ್ಸಿಜನ್ ಮತ್ತು ಉಸಿರಾಟಕ್ಕೆ ಸಹಾಯ ಮಾಡುವ ಯಂತ್ರಗಳ ಅಗತ್ಯಬಿದ್ದರೆ ತೀವ್ರ ನಿಗಾ ಘಟಕದ ಅವಶ್ಯಕತೆಯೂ ಬೀಳಬಹುದು. ನ್ಯುಮೋನಿಯಾ ಉಂಟು ಮಾಡಿದ ಸೂಕ್ಷ್ಮಾಣು ಜೀವಿಯ ಸಾಮರ್ಥ್ಯ ಮತ್ತು ದೇಹದ ರೋಗ ನಿರೋಧಕ ಶಕ್ತಿಯ ಅಧಾರದ ಮೇಲೆ ನ್ಯುಮೋನಿಯಾ ಕಾಯಿಲೆಯ ತೀವ್ರತೆಯು ನಿರ್ಧಾರವಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಿರುವ ಏಡ್ಸ್ ರೋಗಿಗಳಲ್ಲಿ ಮತ್ತು ಮಧುಮೇಹದ ರೋಗಿಗಳಲ್ಲಿ ನ್ಯುಮೋನಿಯಾವು ಮಾರಕವಾಗಬಹುದು. ಆರೋಗ್ಯವಂತರಲ್ಲಿ ನ್ಯುಮೋನಿಯಾವನ್ನು ಉಂಟು ಮಾಡದ ಫಂಗಸ್ ಕೂಡ ಇವರಲ್ಲಿ ಮಾರಣಾಂತಿಕ ಕಾಯಿಲೆಯನ್ನು ಉಂಟುಮಾಡಬಹುದು.
ವಾಯುಮಾಲಿನ್ಯ, ಅಪೌಷ್ಟಿಕತೆಗಳು ಕೂಡ ನ್ಯೂಮಿನಿಯಾಗೆ ಕಾರಣವಾಗಬಹುದು. ಸಣ್ಣ ಕೊಠಡಿಯಲ್ಲಿ ಹೆಚ್ಚು ಜನರು ವಾಸಿಸುವುದರಿಂದಲೂ ನ್ಯುಮೋನಿಯಾ ಸೋಂಕುಗಳು ಹರಡಲು ಕಾರಣವಾಗುತ್ತದೆ. ಜನರ ಜೀವನ ಮಟ್ಟ ಹೆಚ್ಚಾದಾಗ ಸಾಂಕ್ರಾಮಿಕ ಕಾಯಿಲೆಗಳ ಪ್ರಮಾಣವೂ ಕಡಿಮೆಯಾಗಬಹುದು. ಮುಂದುವರಿದ ದೇಶಗಳಲ್ಲಿ ನ್ಯುಮೋನಿಯಾದ ಪ್ರಮಾಣ ಕಡಿಮೆಯಿದೆ. ನವಜಾತ ಶಿಶುಗಳ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನ್ಯುಮೋನಿಯಾ ಕಾಯಿಲೆಗೆ ಬಲಿಯಾಗುವುದನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವುದು ಬಹಳ ಮುಖ್ಯ. ಮಕ್ಕಳಲ್ಲಿ ಲಿಸಿಕೆ ಹಾಕಿಸಿಕೊಳ್ಳುವ ಪ್ರಮಾಣ ಹೆಚ್ಚಾದಂತೆ ನ್ಯುಮೋನಿಯಾದಿಂದ ಸಾಯುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಉತ್ತಮ ಪೌಷ್ಟಿಕ ಆಹಾರದ ಸೇವನೆಯಿಂದ ಮಕ್ಕಳು ನ್ಯುಮೋನಿಯಾ ಕಾಯಿಲೆಗೆ ಬಲಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
ಭಾರತದ ಹೆಚ್ಚಿನ ನಗರಗಳಲ್ಲಿ ವಾಯುಮಾಲಿನ್ಯದ ಕಾರಣದಿಂದ ಉಸಿರಾಡುವ ಗಾಳಿಯು ಕಲುಷಿತಗೊಂಡಿದೆ. ಗಾಳಿಯ ಶುದ್ಧತೆಯನ್ನು ನಾವು ವಾಯು ಗುಣಮಟ್ಟ ಸೂಚ್ಯಂಕ (Air quality Index) ಮಾನದಂಡದಿಂದ ಅಳೆಯುತ್ತೇವೆ.
ದೆಹಲಿ ಮುಂತಾದ ನಗರಗಳಲ್ಲಿ ವಾಯುಮಾಲಿನ್ಯದ ಕಾರಣದಿಂದ ವಾಯು ಗುಣಮಟ್ಟ ಸೂಚ್ಯಂಕ ಹಾನಿಕಾರಕ ಮಟ್ಟ ತಲುಪಿದೆ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನ್ಯುಮೋನಿಯಾ ಬಂದಾಗ ಶ್ವಾಸಕೋಶಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಧೂಮಪಾನ ಮಾಡುವವರ ಶ್ವಾಸಕೋಶವು ಹಾನಿಗೆ ಒಳಗಾಗಿರುತ್ತದೆ. ಹೀಗಾಗಿ ಅಂತಹ ವ್ಯಕ್ತಿಗಳಿಗೆ ನ್ಯುಮೋನಿಯಾ ಉಂಟಾದಲ್ಲಿ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.
ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮಹಿಳೆಯರ ಶ್ವಾಸಕೋಶವು ಹಾನಿಗೆ ಒಳಗಾಗುವ ಸಂಭವ ಹೆಚ್ಚು. ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮದ ಜತೆಗೆ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಸಹಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.