ADVERTISEMENT

ಶ್ವಾಸಕೋಶದ ಆರೋಗ್ಯ: ಉಸಿರಾಟ ಸಮಸ್ಯೆಯ ಮುಕ್ತಿಗೆ ಸಲಹೆಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 7:55 IST
Last Updated 19 ನವೆಂಬರ್ 2025, 7:55 IST
   

ಉಸಿರಾಟದ ತೊಂದರೆ ಉಂಟುಮಾಡುವ ಕಾಯಿಲೆಗಳ ಗುಂಪನ್ನು ಕ್ರೋನಿಕ್ ಅಬ್ ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಧೂಮಪಾನ ಮಾಡಿದವರಿಗೆ ಮಾತ್ರ ಈ ಕಾಯಿಲೆ ಬರುತ್ತದೆ ಎಂದು ತಿಳಿಯಲಾಗಿತ್ತು. ಏಕೆಂದರೆ ತಂಬಾಕಿನ ಹೊಗೆ ಈ ರೋಗಕ್ಕೆ ಮುಖ್ಯ ಕಾರಣ ಎನ್ನಲಾಗಿತ್ತು. ಆದರೆ ಈಗ ಆಶ್ಚರ್ಯಕರ ಅಂಶಗಳು ಪತ್ತೆಯಾಗಿವೆ. ಧೂಮಪಾನ ಮಾಡದೇ ಇರುವವರಲ್ಲೂ ಸಿಒಪಿಡಿ ಪ್ರಕರಣಗಳು ಕಂಡು ಬರುತ್ತಿವೆ ಮತ್ತು ಈ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿವೆ.

ಇದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಏನೆಲ್ಲ ಅಪಾಯಗಳಿವೆ ಎಂಬುದನ್ನು ನಾವು ಮರುಪರಿಶೀಲಿಸುವ ಅಗತ್ಯ ಉಂಟಾಗಿದೆ. ಪರಿಸರ ಮತ್ತು ಆನುವಂಶಿಕ ಕಾರಣಗಳಿಂದ ಒಂದೇ ಒಂದು ಸಿಗರೇಟ್ ಕೂಡ ಸೇದದೇ ಇರುವ ಅನೇಕ ಜನರಿಗೂ ಉಸಿರುಗಟ್ಟುವಿಕೆ, ದೀರ್ಘಕಾಲದ ಕೆಮ್ಮು, ವೀಸಿಂಗ್ ಅಥವಾ ಯಾವಾಗಲೂ ಗಂಟಲು ಸರಿಪಡಿಸಿಕೊಳ್ಳುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿವೆ.

ಗಾಳಿಯಲ್ಲೇ ಅಡಗಿದೆ ಅಪಾಯ:

ಅತೀ ಹೆಚ್ಚು ಮಾಲಿನ್ಯವಿರುವ ಪ್ರದೇಶದಲ್ಲಿ ವ್ಯಾಯಾಮ ಮಾಡುವುದು ವ್ಯಾಯಾಮವೇ ಮಾಡದಿರುವುದಕ್ಕಿಂತಲೂ ಕೆಟ್ಟದ್ದು. ಓಡಾಟ, ಸೈಕ್ಲಿಂಗ್, ಯೋಗ ಮುಂತಾದ ದೈಹಿಕ ಚಟುವಟಿಕೆಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂಬುದು ಸತ್ಯ. ಆದರೆ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೀರಾ ಹೆಚ್ಚಿರುವ ಸ್ಥಳದಲ್ಲಿ ವ್ಯಾಯಾಮ ಮಾಡಿದರೆ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು.

ADVERTISEMENT

ದೀರ್ಘವಾಗಿ ಉಸಿರಾಡುವಾಗ ಒಳಗೆ ಹೋಗುವ ಗಾಳಿಯ ಪ್ರಮಾಣ ಜಾಸ್ತಿಯಾಗುತ್ತದೆ. ಆಗ ಮಾಲಿನ್ಯದಲ್ಲಿರುವ ಸೂಕ್ಷ್ಮ ಧೂಳಿನ ಕಣಗಳು (ಪಿಎಂ 2.5) ಮತ್ತು ವಿಷಕಾರಕ ಪದಾರ್ಥಗಳು ಶ್ವಾಸಕೋಶದ ಒಳ ಭಾಗದಲ್ಲಿರುವ ಗಾಳಿಯ ಚೀಲಗಳಿಗೆ (ಆಲ್ವಿಯೋಲಿ) ತಲುಪಿ ಒತ್ತಡ ಉಂಟುಮಾಡುತ್ತವೆ. ಕಾಲಾನಂತರ ಇದು ಶ್ವಾಸಕೋಶದಲ್ಲಿ ನಿರಂತರ ಉರಿಯೂತ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ಉಂಟುಮಾಡಿ ಗುಣಮಾಡಲು ಸಾಧ್ಯವಾಗದ ಶ್ವಾಸಕೋಶ ರೋಗಕ್ಕೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದೆಲ್ಲವೂ ಧೂಮಪಾನ ಮಾಡದೇ ಇರುವ ಆರೋಗ್ಯವಂತ ವ್ಯಕ್ತಿಗಳಲ್ಲಿಯೇ ಆಗುವ ಸಾಧ್ಯತೆ ಇದೆ.

ಮನೆಯಲ್ಲೂ ಇದೆ ಅಪಾಯ

ನಮ್ಮ ಮನೆ ನಮಗೆ ಸುರಕ್ಷಿತ ಎಂದು ನಾವು ಭಾವಿಸುತ್ತೇವೆ. ಆದರೆ ಅನೇಕ ಕಾರಣಗಳಿಂದ ಅದೇ ಮನೆಯೂ ಶ್ವಾಸಕೋಶಕ್ಕೆ ತೊಂದರೆ ಕೊಡುವ ವಾತಾವರಣ ಹೊಂದಿರಬಹುದು. ಅಭಿವೃದ್ಧಿಶೀಲ ಪ್ರದೇಶಗಳಲ್ಲಿ, ಹಲವಾರು ಭಾಗಗಳಲ್ಲಿ ಮರದ ಒಣಗಿದ ಕಟ್ಟಿಗೆ, ಕಲ್ಲಿದ್ದಲು, ಒಣಗಿದ ಬೆಳೆ ತ್ಯಾಜ್ಯ, ಸಗಣಿಯಿಂದ ಮಾಡಿದ ಉಂಡೆಗಳು ಇತ್ಯಾದಿಗಳನ್ನು ಬಳಸುವುದರಿಂದ. ಅದರಲ್ಲೂ ಇಕ್ಕಟ್ಟಾದ ಗಾಳಿ ಹೊರಹೋಗದ ಸ್ಥಳಗಳಲ್ಲಿ ಅಡುಗೆಗೆ ಮತ್ತು ಯಾವುದನ್ನಾದರೂ ಉರಿಸಲು ಬಳಸುವುದರಿಂದ ಧೂಮಪಾನ ಮಾಡದ ಮಹಿಳೆಯರಲ್ಲಿ ಸಿಓಪಿಡಿ ಕಾಣಿಸಿಕೊಳ್ಳಬಹುದಾಗಿದೆ.

ಇಷ್ಟಕ್ಕೆ ಅಪಾಯ ಸೀಮಿತವಾಗಿಲ್ಲ. ಮಸ್ಕಿಟೋ ಕಾಯಿಲ್ ಗಳು, ಕೀಟನಾಶಕ ಸ್ಪ್ರೇ, ಏರ್ ಫ್ರೆಷ್ನರ್ ಗಳು, ಸುಗಂಧಭರಿದ ಮೇಣದ ದೀಪಗಳು ಇವೆಲ್ಲವೂ ಸೂಕ್ಷ್ಮವಾದ ಧೂಳನ್ನು ಮತ್ತು ವಾಸನೆ ಬರುವ ರಾಸಾಯನಿಕಗಳನ್ನು (ವಿಒಸಿ) ಬಿಡುಗಡೆ ಮಾಡಿ ಶ್ವಾಸನಾಳದ ಒಳಪೊರೆಗೆ ಕಿರಿಕಿರಿ ಮಾಡುತ್ತವೆ. ಹಳೆಯ ಗ್ಯಾಸ್ ಒಲೆ, ಹಳೆಯ ಫರ್ನೇಸ್, ತೀವ್ರರೀತಿಯ ಕ್ಲೀನಿಂಗ್ ದ್ರಾವಕಗಳ ಹೊಗೆ ಕೂಡ ಮನೆಯಲ್ಲಿ ಉಳಿದು ದೀರ್ಘಕಾಲದ ಸಣ್ಣ ಪ್ರಮಾಣದ ಉರಿಯೂತಕ್ಕೆ ಕಾರಣವಾಗಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ನಿಧಾನವಾಗಿ ಕಡಿಮೆ ಮಾಡಬಹುದು.

ಆನುವಂಶಿಕ ಕಾರಣಗಳು ಮತ್ತು ಬಾಲ್ಯದ ಅಪಾಯಕಾರಿ ಅಂಶಗಳು:

ಧೂಮಪಾನ ಮಾಡದೇ ಇರುವವರಲ್ಲಿ ಕಾಣಿಸಿಕೊಳ್ಳುವ ಬಹುತೇಕ ಸಿಓಪಿಡಿ ಪ್ರಕರಣಗಳು ಆನುವಂಶಿಕವಾಗಿ ಅಥವಾ ಬಾಲ್ಯದಲ್ಲೇ ಉಂಟಾದ ಕಾರಣಗಳಿಂದ ಆಗಿರುತ್ತವೆ. ಇದನ್ನು ದೊಡ್ಡವಯಸ್ಸಿನಲ್ಲಿ ರೋಗ ಕಾಣಿಸಿಕೊಳ್ಳುವ ಮೊದಲೇ ಗುರುತಿಸಬಹುದು.

ಆಲ್ಫಾ-1 ಆಂಟಿಟ್ರಿಪ್ಸಿನ್ ಕೊರತೆ:

ಅತ್ಯಂತ ಸಾಮಾನ್ಯ ಕಾರಣ ಎಂದರೆ ಆಲ್ಫಾ-1 ಆಂಟಿಟ್ರಿಪ್ಸಿನ್ ಕೊರತೆ. ಇದು ಆನುವಂಶಿಕ ಸಮಸ್ಯೆ. ಈ ಸ್ಥಿತಿಯಲ್ಲಿ ಯಕೃತ್ತು ಸಾಕಷ್ಟು ಎಎಟಿ ಪ್ರೋಟೀನ್ ಉತ್ಪಾದಿಸುತ್ತಿರುವುದಿಲ್ಲ. ಯಾಕೆಂದರೆ ಪ್ರೋಟೀನ್ ಶ್ವಾಸಕೋಶವನ್ನು ನೈಸರ್ಗಿಕ ಎಂಜೈಮ್‌ಗಳ ಹಾನಿಯಿಂದ ಕಾಪಾಡುತ್ತದೆ. ಅದರ ಕೊರತೆಯಿಂದ ಶ್ವಾಸಕೋಶದ ಒಳಭಾಗಕ್ಕೆ ತೊಂದರೆ ಉಂಟಾಗಿ ಸಿಓಪಿಡಿಗೆ ಸಂಬಂಧಿಸಿರುವ ಎಂಫಿಸೀಮಾ ಎಂಬ ಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ 30-40 ವಯಸ್ಸಿನೊಳಗೇ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಅಸ್ತಮಾ:

ಬಾಲ್ಯದಲ್ಲಿ ಅಸ್ತಮಾವನ್ನು ಸೂಕ್ತವಾಗಿ ನಿರ್ವಹಿಸದಿದ್ದಾಗಲೂ ಶ್ವಾಸನಾಳದ ರಚನೆಯಲ್ಲಿ ಬದಲಾವಣೆ ಉಂಟಾಗಿ ವಯಸ್ಕರಾದಾಗ ಸಿಓಪಿಡಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಶ್ವಾಸನಾಳದ ಅಗಲ ಮತ್ತು ಶ್ವಾಸಕೋಶದ ಗಾತ್ರದ ನಡುವೆ ಅಸಮತೋಲನ ಉಂಟಾಗುತ್ತದೆ. ಇದನ್ನು ಡಿಸನ್ಯಾಪ್ಸಿಸ್ ಎಂದು ಕರೆಯುತ್ತಾರೆ. ಈ ಹಂತದಲ್ಲಿ ಆರೋಗ್ಯಕರ ಧೂಮಪಾನ ಮಾಡದವರಿಗೂ “ಉಸಿರಾಟ ರಿಸರ್ವ್” ಭಾಗವು ಬಹಳಷ್ಟು ತುಂಬಾ ಕಡಿಮೆಯಾಗಿ, ಸಣ್ಣ ಮಾಲಿನ್ಯ ಉಂಟಾದಾಗಲೂ ಸುಲಭವಾಗಿ ತೊಂದರೆ ಎದುರಿಸುವಂತಹ ಶ್ವಾಸಕೋಶದ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ.

ಕ್ಷಯರೋಗ:

ಇನ್ನೊಂದು ಮುಖ್ಯ ಕಾರಣ ಎಂದರೆ ಕ್ಷಯರೋಗ (ಟಿಬಿ) ಮುಂತಾದ ಸೋಂಕುಗಳು. ಅವು ಗುಣವಾದ ನಂತರವೂ ಶ್ವಾಸಕೋಶದಲ್ಲಿ ಗಾಯಗಳು ಉಳಿದು ಸಿಓಪಿಡಿ ತರಹದ ಸಮಸ್ಯೆ ಉಂಟುಮಾಡಬಹುದು. ನಿಮ್ಮ ಶ್ವಾಸಕೋಶವನ್ನು ಬಲಪಡಿಸಿಕೊಳ್ಳಲು, ರಕ್ಷಿಸಿಕೊಳ್ಳಲು ಕೆಲವು ಸಲಹೆಗಳು ಮಾಲಿನ್ಯ ಹೆಚ್ಚುತ್ತಿರುವುದರಿಂದ ಅಪಾಯಕಾರಿ ಅಂಶಗಳಿವೆ ಎಂಬುದೇನು ನಿಜ. ಆದರೆ ಶ್ವಾಸಕೋಶದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಅದರ ಕಾರ್ಯಕ್ಷಮತೆ ಹೆಚ್ಚಿಸುವ ಸರಳ ಉಪಾಯಗಳನ್ನು ಅಳವಡಿಸಿಕೊಂಡರೆ ದೊಡ್ಡ ಪ್ರಯೋಜನ ದೊರೆಯಲಿದೆ.

ಪರಿಹಾರ ಕ್ರಮಗಳು:

  • ಧೂಮಪಾನ ಬಿಡುವುದು ಮತ್ತು ಪರೋಕ್ಷ ಧೂಮಪಾನ (ಇತರರ ಧೂಮಪಾನ ಹೊಗೆ ಸೇವನೆ) ತಪ್ಪಿಸವುದು. ಇದು ಒಂದು ಪ್ರಮುಖ ಪರಿಣಾಮಕಾರಿ ಕ್ರಮವಾಗಿದೆ.

  • ಮನೆಯ ಒಳಗಿನ ಗಾಳಿಯ ಗುಣಮಟ್ಟ ಸುಧಾರಿಸಿ, ಚೆನ್ನಾಗಿ ಗಾಳಿ ಆಡುವಂತೆ ನೋಡಿಕೊಳ್ಳುವುದು. ಜೊತೆಗೆ ನಿಯಮಿತವಾಗಿ ಧೂಳು ಹೊಡೆಯುವುದು, ಧೂಳಿಲ್ಲದ ವಾತಾವರಣ ನಿರ್ಮಾಣ ಮಾಡುವುದು. ಈ ರೀತಿಯ ಹಲವು ಜೀವನಶೈಲಿ ಬದಲಾವಣೆ ಮಾಡುವುದು.

  • ವಿಶೇಷವಾಗಿ ಆರೋಗ್ಯಕರ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು. ಇದರಿಂದ ಶ್ವಾಸಕೋಶಕ್ಕೆ ಬೇಕಾದಷ್ಟು ಜಾಗ ದೊರೆತು ಪೂರ್ತಿ ತೆರೆದುಕೊಳ್ಳಲು ಸಹಾಯವಾಗುತ್ತದೆ. 

  • ಆಹಾರ ಮತ್ತು ವ್ಯಾಯಾಮದಿಂದ ಶ್ವಾಸಕೋಶ ಬಲಪಡಿಸುವುದು.

  • ಪೌಷ್ಠಿಕ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ. ಹೈಡ್ರೇಟೆಡ್ ಆಗಿ ಇರುವುದರಿಂದ ಶ್ವಾಸನಾಳದ ಒಳಗಿನ ಮ್ಯೂಕಸ್ ದ್ರವವಾಗಿ ಉಳಿದು ಅದನ್ನು ಸುಲಭವಾಗಿ ಹೊರಹಾಕುವುದು ಸಹಾಯವಾಗುತ್ತದೆ.

  • ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುವ ಅಂದರೆ ವಿಟಮಿನ್ ಸಿ ಜಾಸ್ತಿ ಇರುವ ಹಣ್ಣುಗಳು (ನಿಂಬೆ, ಸಿಟ್ರಸ್ ಹಣ್ಣುಗಳು) ಮತ್ತು ಉರಿಯೂತ ನಿರೋಧಕ ಗುಣಗಳಿರುವ ಅರಿಶಿನ, ಶುಂಠಿ ಮುಂತಾದ ಪದಾರ್ಥಗಳನ್ನು ಸೇವಿಸಬೇಕು.

  • ಒಮೇಗಾ-3 ಫ್ಯಾಟಿ ಆಸಿಡ್ ಜಾಸ್ತಿ ಇರುವ ಮೀನು, ವಾಲ್ ನಟ್, ಫೈಬರ್ ಜಾಸ್ತಿ ಇರುವ ಆಹಾರಗಳನ್ನು ಸೇವಿಸಬೇಕು. ಇವೆಲ್ಲಾ ಒಟ್ಟಾರೆ ದೇಹದ ಆರೋಗ್ಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸಬಹುದಾಗಿದೆ.

  • ಸಿಓಪಿಡಿ ಇರುವವರಿಗೆ ಕೆಮ್ಮು ನಿಯಂತ್ರಿಸುವ ತಂತ್ರ ಅನುಸರಿಸುವುದು ಮತ್ತು ಸ್ಟೀಮ್ ಥೆರಪಿ ಬಳಸುವುದು ಕಫವನ್ನು ಹೊರಹಾಕಲು ತುಂಬಾ ಸಹಾಯಕವಾಗಿದೆ.
    ಈ ಎಲ್ಲಾ ಸಣ್ಣ-ಸಣ್ಣ ಬದಲಾವಣೆಗಳು ಅನುಸರಿಸುವುದರಿಂದ ನಿಮ್ಮ ಶ್ವಾಸಕೋಶವನ್ನು ಬಲಪಡಿಸಿಕೊಳ್ಳಬಹುದು ಮತ್ತು ಆ ಮೂಲಕ ದೀರ್ಘಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬಹುದು.

(ಲೇಖಕರು: ಡಾ. ರಂಗನಾಥ್, ಸೀನಿಯನ್ ಕನ್ಸಲ್ಟೆಂಟ್, ಪಲ್ಮನಾಲಜಿ ವಿಭಾಗ ಮುಖ್ಯಸ್ಥರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.