ADVERTISEMENT

ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿಗಳಲ್ಲಿ ಈ ಅಡ್ಡಪರಿಣಾಮಗಳು ಸಾಮಾನ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2021, 4:57 IST
Last Updated 16 ಮೇ 2021, 4:57 IST
ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆಗಳು
ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆಗಳು    

ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್–19 ಲಸಿಕೆ ನೀಡಿಕೆಗೂ ದೇಶದಲ್ಲಿ ಅಧಿಕೃತ ಚಾಲನೆ ದೊರೆತಿದೆ. ಹೈದರಾಬಾದ್‌ನಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರಿಗೆ ಈ ಲಸಿಕೆ ನೀಡಲಾಗಿದೆ. ಇದರೊಂದಿಗೆ ಸದ್ಯ ದೇಶದಲ್ಲಿ ಒಟ್ಟು ಮೂರು ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತಿದೆ.

ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ, ಈ ಮೂರೂ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಲಸಿಕೆ ಹಾಕಿಸಿಕೊಂಡಾಗ ಉಂಟಾಗುವ ಅಡ್ಡಪರಿಣಾಮಗಳು ಗಂಭೀರವಾದುದಲ್ಲ, ಸಾಮಾನ್ಯವಾದುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳನ್ನು ಯಾವ ವಿಧಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇವುಗಳನ್ನು ಹಾಕಿಸಿಕೊಂಡವರಲ್ಲಿ ಕಾಣಿಸಿಕೊಳ್ಳಬಹುದಾದ ಸಣ್ಣಮಟ್ಟಿನ ಅಡ್ಡಪರಿಣಾಮಗಳ (ಪ್ರತಿಯೊಬ್ಬರಲ್ಲಿಯೂ ಅಡ್ಡಪರಿಣಾಮ ಉಂಟಾಗಬೇಕೆಂದಿಲ್ಲ) ಬಗ್ಗೆ ಇಲ್ಲಿದೆ ಮಾಹಿತಿ;

ADVERTISEMENT

ಸ್ಪುಟ್ನಿಕ್ ವಿ

ಈ ಲಸಿಕೆಯನ್ನು ಸಾಮಾನ್ಯ ಶೀತ, ನೆಗಡಿಗೆ ಕಾರಣವಾಗುವ ‘ಎಡಿ26’, ‘ಎಡಿ5’ ಮತ್ತು ‘ಸಾರ್ಸ್‌–ಕೊವ್–2’ ವೈರಸ್‌ಗಳನ್ನು ಸಂಯೋಜಿಸಿ ಸಿದ್ಧಪಡಿಸಲಾಗಿದೆ. ಈ ಸಂಯೋಜನೆಯು ದೇಹವನ್ನು ಕೋವಿಡ್‌ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಗೆ ಪ್ರೇರೇಪಿಸುತ್ತದೆ. ಹೀಗಾಗಿ ಈ ಲಸಿಕೆಯು ದೇಹದಲ್ಲಿ ಸಣ್ಣಮಟ್ಟಿನ ಉರಿಯೂತದ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.

ಲಸಿಕೆ ಹಾಕಿಸಿಕೊಂಡವರಲ್ಲಿ ತಲೆನೋವು, ಆಯಾಸ, ಚುಚ್ಚುಮದ್ದು ತೆಗೆದುಕೊಂಡ ಜಾಗದಲ್ಲಿ ನೋವು, ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದರೆ, ಗಂಭೀರವಾದ ಯಾವುದೇ ಅಡ್ಡಪರಿಣಾಮಗಳು ಈವರೆಗೆ ಕಂಡುಬಂದಿಲ್ಲ. ವಿರಳಾತಿ ವಿರಳ ಪ್ರಕರಣಗಳಲ್ಲಿ ಲಸಿಕೆ ಹಾಕಿಸಿಕೊಂಡ ಕೆಲವರಲ್ಲಿ ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ. ಆದರೆ ಲಸಿಕೆ ಹಾಕಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂಬುದು ದೃಢಪಟ್ಟಿಲ್ಲ.

ಕೊವ್ಯಾಕ್ಸಿನ್

ನಿಷ್ಕ್ರಿಯಗೊಳಿಸಿದ ‘ಸಾರ್ಸ್‌–ಕೊವ್–2’ ಆಂಟಿಜೆನ್ ವೈರಸ್‌ ಬಳಸಿಕೊಂಡು ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಯು, ಜೀವಂತ ವೈರಸ್ ದೇಹವನ್ನು ಬಾಧಿಸಿದಾಗ ಅದರ ವಿರುದ್ಧ ಹೋರಾಡಲು ಶರೀರವನ್ನು ಅಣಿಗೊಳಿಸುವ ಕೆಲಸ ಮಾಡುತ್ತದೆ.

ಈ ಲಸಿಕೆ ಹಾಕಿಸಿಕೊಂಡವರಲ್ಲಿ, ಚುಚ್ಚುಮದ್ದು ಹಾಕಿಸಿಕೊಂಡ ಜಾಗದಲ್ಲಿ ಕೆಂಪಾಗುವುದು, ಬಾವು, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಕೆಲವರಲ್ಲಿ ಜ್ವರ, ಅತಿಯಾಗಿ ಬೆವರುವುದು ಅಥವಾ ಶೀತ, ತುರಿಕೆ, ದದ್ದುಗಳು, ತಲೆನೋವು ಕಾಣಿಸಿಕೊಳ್ಳಬಹುದು.

ಈವರೆಗೆ, ಈ ಲಸಿಕೆ ಹಾಕಿಸಿಕೊಂಡವರಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮ ಕಾಣಿಸಿಕೊಂಡಿಲ್ಲ.

ಕೋವಿಶೀಲ್ಡ್

ಆಕ್ಸ್‌ಫರ್ಡ್‌–ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಸದ್ಯ 62 ದೇಶಗಳಲ್ಲಿ ನೀಡಲಾಗುತ್ತಿದೆ. ಚಿಂಪಾಂಜಿಯಲ್ಲಿ ಜ್ವರಕ್ಕೆ ಕಾರಣವಾಗುವ ವೈರಸ್ಸೊಂದನ್ನು ನಿಷ್ಕ್ರಿಯಗೊಳಿಸಿ ಅದಕ್ಕೆ ಕೊರೊನಾ ವೈರಸ್‌ ಮಾದರಿಯ ಪ್ರತಿರೂಪವನ್ನು ಸೇರಿಸಿ ಅಭಿವೃದ್ಧಿಪಡಿಸಿದ ಲಸಿಕೆ ಇದು.

ಈ ಲಸಿಕೆ ತೆಗೆದುಕೊಂಡಾಗ ಇದನ್ನು ಕೊರೊನಾ ವೈರಸ್ ಎಂದು ಭಾವಿಸಿ ದೇಹವು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಈ ಲಸಿಕೆ ಪಡೆದವರ ಪೈಕಿ ಕೆಲವರಲ್ಲಿ ಚುಚ್ಚುಮದ್ದು ಹಾಕಿಸಿಕೊಂಡ ಜಾಗದಲ್ಲಿ ನೋವು, ಚರ್ಮ ಕೆಂಪಾಗುವುದು, ಸಾಮಾನ್ಯ ಅಥವಾ ತೀವ್ರ ಜ್ವರ, ನಿದ್ದೆ ತೂಗುವುದು, ಜಡತ್ವ, ತೋಳು ಬಿಗಿಯಾಗುವುದು ಹಾಗೂ ಮೈ–ಕೈ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈ ಲಸಿಕೆ ತೆಗೆದುಕೊಂಡ ಕೆಲವೇ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಕೆಲವು ಗಂಭೀರ ಅಡ್ಡಪರಿಣಾಮಗಳು ವರದಿಯಾಗಿವೆ. ಆದರೆ ಅವು ವಿರಳಾತಿ ವಿರಳವಾಗಿದ್ದು ಅದಕ್ಕೆ ಬೇರೆ ಕಾರಣಗಳೂ ಇರಬಹುದೆಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.