
ಗೆಟ್ಟಿ ಚಿತ್ರ
ವ್ಯಕ್ತಿಯ ಯೋಚನೆ, ನಿರ್ಧಾರ ಹಾಗೂ ವರ್ತನೆಯ ಮೇಲೆ ಅವನ ವ್ಯಕ್ತಿತ್ವದ ಲಕ್ಷಣಗಳು (Personality Traits) ಅವಲಂಬಿತವಾಗಿರುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿಗಳು ಭಾವನಾತ್ಮಕ, ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕವಾಗಿ ಯೋಚಿಸುತ್ತಾರೆ. ಈ ಮೂರು ಸ್ವಭಾವವುಳ್ಳ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ.
ಭಾವನೆಗಳು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ತಾರ್ಕಿಕತೆ, ವಿವೇಕ, ನಿರ್ಧಾರ ತೆಗೆದುಕೊಳ್ಳುವುದು, ವ್ಯಕ್ತಿಯ ಮನಸ್ಸು, ಭಾವನೆ ಹಾಗೂ ಬುದ್ಧಿವಂತಿಕೆಯ ಸಂಯೋಜನೆ ಅವನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.
ಭಾವನಾತ್ಮಕವಾಗಿ ಯೋಚಿಸುವವರು:
ಭಾವನಾತ್ಮಕವಾಗಿ ಯೋಚಿಸುವ ವ್ಯಕ್ತಿಗಳು ಸಾಮಾನ್ಯವಾಗಿ ಸಹಾನುಭೂತಿ (Empathy), ಸಹಕಾರ (Cooperation), ಹಾಗೂ ಸಂವೇದನಾಶೀಲತೆ (Sensitivity) ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇವರಿಗಿರುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.
ಉದಾಹರಣೆ: ದುಃಖದ ವೇಳೆ ತಕ್ಷಣ ಸ್ಪಂದಿಸುವವರು, ಇತರರ ನೋವನ್ನು ತಮ್ಮದೇ ನೋವು ಎಂದು ಭಾವಿಸಿ ಸಹಾಯ ಮಾಡುವವರು ಭಾವನಾತ್ಮಕ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದ್ದಾರೆ. ಇಂತಹ ವ್ಯಕ್ತಿಗಳು ಅನುಕಂಪ, ಕಾಳಜಿ, ಪ್ರೀತಿ ಮೊದಲಾದ ಗುಣಗಳಿಂದ ಸಮೃದ್ಧರಾಗಿರುತ್ತಾರೆ. ಆದರೆ ಕೆಲವೊಮ್ಮೆ ಇವರ ಅತಿಯಾದ ಭಾವನಾತ್ಮಕತೆ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು.
ತಾರ್ಕಿಕವಾಗಿ ಆಲೋಚಿಸುವ ವ್ಯಕ್ತಿಗಳು:
ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗಳು ವಿಶ್ಲೇಷಣಾತ್ಮಕ (Analytical), ಭಾವನೆಗಳ ನಿಯಂತ್ರಣ (Self-controlled), ಹಾಗೂ ಯೋಜಿತ (Organized) ಸ್ವಭಾವದವರಾಗಿರುತ್ತಾರೆ. ಇವರು ಭಾವನೆಗಳಿಗಿಂತ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ.
ಈ ಸ್ವಭಾವದವರು ನಿರ್ಧಾರ ತೆಗೆದುಕೊಳ್ಳುವಾಗ ಲಾಭ-ನಷ್ಟ ಎರಡನ್ನು ಮೌಲ್ಯಮಾಪನ ಮಾಡುತ್ತಾರೆ. ಎಲ್ಲವನ್ನೂ ತಾಳ್ಮೆಯಿಂದ ಯೋಚಿಸುತ್ತಾರೆ. ತಾರ್ಕಿಕ ವ್ಯಕ್ತಿತ್ವವುಳ್ಳವರು ಬುದ್ಧಿವಂತಿಕೆ, ಆತ್ಮವಿಶ್ವಾಸ ಹಾಗೂ ಸ್ಥಿರತೆಯನ್ನು ಹೊಂದಿರುತ್ತಾರೆ.
ವಿಶ್ಲೇಷಣಾತ್ಮಕ ಅಥವಾ ಸಮತೋಲನ ವ್ಯಕ್ತಿಗಳು:
ಭಾವನೆ ಹಾಗೂ ತಾರ್ಕಿಕತೆಗಳು ವ್ಯಕ್ತಿತ್ವದ ಅವಿಭಾಜ್ಯ ಅಂಶಗಳಾಗಿವೆ. ಭಾವನಾತ್ಮಕವಾಗಿರುವವರು ಅಸ್ಥಿರರಾಗಬಹುದು, ತಾರ್ಕಿಕರಾಗಿರುವವರು ಶಾಂತ ಸ್ವಭಾವಿಗಳಾಗಬಹುದು. ಆದ್ದರಿಂದ ವ್ಯಕ್ತಿತ್ವದ ಪರಿಪಕ್ವತೆ ಎಂದರೆ, ಈ ಎರಡರ ಮಧ್ಯೆ ಸಮತೋಲನ ಸಾಧಿಸುವುದು. ಭಾವನಾತ್ಮಕತೆಯಿಂದ ಮಾನವೀಯತೆ ಬೆಳೆಯುತ್ತದೆ. ತಾರ್ಕಿಕತೆಯಿಂದ ಜೀವನದ ಗುರಿ ನಿರ್ಧಾರವಾಗುತ್ತದೆ. ಈ ಎರಡು ಲಕ್ಷಣಗಳ ಸಮತೋಲನವೇ ಸಫಲ ಹಾಗೂ ಶಾಂತ ಜೀವನದ ಮೂಲ ಎಂದು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.