ADVERTISEMENT

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 0:30 IST
Last Updated 11 ಅಕ್ಟೋಬರ್ 2025, 0:30 IST
<div class="paragraphs"><p>ಎ.ಐ ಚಿತ್ರ</p></div>

ಎ.ಐ ಚಿತ್ರ

   

ಸದ್ಯದಲ್ಲೇ ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಮನೆಮಾಡಲಿದೆ. ಎಲ್ಲರ ಬದುಕಲ್ಲೂ ಬೆಳಕನ್ನು ತರುವ ದೀಪಗಳ ಹಬ್ಬವು ನಿರ್ಲಕ್ಷ್ಯ ಹಾಗೂ ಬೇರೆಯವರ ತಪ್ಪಿನಿಂದ ಬಹಳಷ್ಟು ಜನರ ಬದುಕಲ್ಲಿ ಕರಾಳ ಹಬ್ಬವಾಗಿ ಬದಲಾಗುವುದೂ ಇದೆ. ಪಟಾಕಿ ಇಲ್ಲದೇ ದೀಪಾವಳಿ ಸಂಪನ್ನ ಆಗದು. ಹಾಗೆಂದು ಅಪಾಯವನ್ನು ಆಹ್ವಾನಿಸಿಕೊಳ್ಳುವುದು ತರವಲ್ಲ.

ಸುರಕ್ಷಿತ ದೀಪಾವಳಿಗಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕಾಗುತ್ತದೆ. ಅಂತಹ ಕ್ರಮಗಳ ಪಟ್ಟಿ ಹೀಗಿದೆ: ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿರುವುದರಿಂದ ಜನ ಅಂತಹ ಪಟಾಕಿಗಳನ್ನೇ ಖರೀದಿಸಬೇಕು. ಬಹಳಷ್ಟು ಜನ ಮನೆಯ ಕಾಂಪೌಂಡ್‌ ಒಳಗೆ ಅಥವಾ ಹೆಚ್ಚು ಮಂದಿ ಇರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ಇದು ತುಂಬಾ ಅಪಾಯಕಾರಿ. ತೆರೆದ ಸ್ಥಳಗಳಲ್ಲಿ ಮಾತ್ರ ಪಟಾಕಿಗಳನ್ನು ಸಿಡಿಸಬೇಕು. ಮಕ್ಕಳು ಸ್ವತಂತ್ರವಾಗಿ ಪಟಾಕಿಗಳನ್ನು ಸಿಡಿಸಲು ಬಿಡಬೇಡಿ, ಈ ವೇಳೆ ಪಾಲಕರು ಅಥವಾ ಹಿರಿಯರು ಮಕ್ಕಳ ಜೊತೆ ಇರಿ. ದೀಪಾವಳಿಯು ದೀಪಗಳ ಹಬ್ಬ ಆಗಿರುವುದರಿಂದ ದಹಿಸುವ ವಸ್ತುಗಳನ್ನು ದೀಪಗಳಿಂದ ದೂರವಿಡಿ.

ADVERTISEMENT

ಶ್ವಾಸಕೋಶ ಕಾಯಿಲೆಯಿಂದ ಬಳಲುವವರ ಆರೋಗ್ಯವನ್ನು ಪಟಾಕಿಗಳ ಹಾವಳಿಯು ಮತ್ತಷ್ಟು ಹದಗೆಡಿಸಬಹುದು. ಜೊತೆಗೆ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ದೀಪಾವಳಿ ವೇಳೆ ಏನಾದರೂ ಬೆಂಕಿ ಅವಘಡ ಉಂಟಾದರೆ, ಗಾಯ ಆದ ಜಾಗಕ್ಕೆ ತಂಪಾದ ನೀರನ್ನು ಹಾಕುತ್ತಾ ಇರಿ. ಬೆಣ್ಣೆ, ಎಣ್ಣೆ ಅಥವಾ ಇತರ ಮನೆಮದ್ದುಗಳನ್ನು ಬಳಸಬೇಡಿ. ಚರ್ಮಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ತೆಗೆಯಬೇಡಿ. ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಸಾಮಾನ್ಯವಾಗಿ ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ಜನ ಹಾಗೂ ಮಕ್ಕಳು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅನೇಕರಿಗೆ ಕಣ್ಣಿನ ಗಾಯಗಳು ಆಗಿರುತ್ತವೆ. ಒಂದು ವೇಳೆ ಪಟಾಕಿಯ ಮದ್ದು ಕಣ್ಣಿಗೆ ಬಿದ್ದರೆ, ಕಣ್ಣನ್ನು ತೊಳೆಯಲು ಶುದ್ಧ ನೀರನ್ನು ಬಳಸಬೇಕು. ಆದರೆ, ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜಬಾರದು. ಗಾಯಾಳುಗಳು ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯಬೇಕು. ಒಂದು ವೇಳೆ ಅಲರ್ಜಿಯಿಂದ ಉಸಿರಾಟದ ಸಮಸ್ಯೆ ಉಂಟಾದರೆ ವೈದ್ಯರು ಸೂಚಿಸಿರುವ ಇನ್‌ಹೇಲರ್‌ಗಳನ್ನು ಬಳಸಬಹುದು. ಚೆನ್ನಾಗಿ ಗಾಳಿಯಾಡುವ ಕೋಣೆಗೆ ಹೋಗಿ ಅಥವಾ ಉತ್ತಮ ಗಾಳಿಗಾಗಿ ವಾಯು ಶುದ್ಧೀಕಾರಕವನ್ನು ಬಳಸಿ. ಆದರೆ, ಉಸಿರಾಟದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಹಾಯವನ್ನು ಪಡೆಯಿರಿ.

ಇನ್ನು, ದೀಪಾವಳಿ ಸಮಯದಲ್ಲಿ, ಪಟಾಕಿಗಳನ್ನು ಸಿಡಿಸುವಾಗ ಬರುವ ಭಾರಿ ಶಬ್ದವು ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಪಟಾಕಿ ಶಬ್ದದಿಂದ ಯಾರಿಗಾದರೂ ಸಮಸ್ಯೆಯಾದರೆ ಅವರನ್ನು ನಿಶ್ಶಬ್ದ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕುಡಿಯಲು ನೀರು ಕೊಡಿ. ನಂತರ ಅವರ ಒತ್ತಡವನ್ನು ಕಡಿಮೆ ಮಾಡಲು ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಅವರಿಂದ ಮಾಡಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿ. ಹೀಗೆ ಎಲ್ಲಾ ಬಗೆಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸುರಕ್ಷಿತವಾಗಿ  ದೀಪಾವಳಿಯನ್ನು ಆಚರಿಸಿ.

ಡಾ.ಶ್ರುತಿ ಭಾಸ್ಕರನ್‌‌, ವಾಸವಿ ಆಸ್ಪತ್ರೆ