ADVERTISEMENT

ಕ್ಷೇಮ–ಕುಶಲ | ಆಯುರ್ವೇದದಲ್ಲಿ ‘ಆ್ಯಸಿಡಿಟಿ’

ಡಾ.ಗೀತಾ ಸತ್ಯ
Published 12 ಮೇ 2025, 22:30 IST
Last Updated 12 ಮೇ 2025, 22:30 IST
   

ಸುರೇಶ ಹೆತ್ತವರ ಅತಿ ಮುದ್ದು ಕಂದ. ಕೇವಲ ಐದರ ಹರೆಯ. ಕೊಂಚ ಸ್ಥೂಲಕಾಯ. ಮನೆತಿಂಡಿಗಳಿಗಿಂತ ಹೊರಗಿನ ತಿಂಡಿಗಳತ್ತ ಬಾಯಿ ಚಪಲ. ಬಿಡುವಿಲ್ಲದ ನಾಲಗೆ ಚಪಲ. ಅಪ್ಪ ಅಮ್ಮನಷ್ಟೆ ಅಲ್ಲ. ಅಜ್ಜಿ ತಾತನ ಕಾಳಜಿ ಬೇರೆ. ಹೀಗಾಗಿ ಬೆಳೆದ ಮೈ. ಮಲಪ್ರವೃತ್ತಿಗೆ ಮಾತ್ರ ಬಹಳ ಸಮಸ್ಯೆ. ವೈದ್ಯರ ಬಳಿಗೆ ಹೋದಾಗಲೆಲ್ಲ ಒಂದೇ ಉತ್ತರ. ಆತನ ನಾಲಗೆ ಚಪಲಕ್ಕೆ ಕಡಿವಾಣವಿರಲಿ. ತೂಕ ಇಳಿಸಿ. ಸರಿ ಹೋಗುವನು. ಇಷ್ಟು ಕಿರಿಹರೆಯದಲ್ಲಿಯೇ ಸುರೇಶನಿಗೆ ‘ಗ್ಯಾಸ್ಟ್ರಿಕ್’ (ಆ್ಯಸಿಡಿಟಿ) ಕಾಯಿಲೆ ಎಂಬ ಪಟ್ಟ. ಇಂದು ಇದು ಮನೆ ಮನೆ ಕತೆ.

ಆಯುರ್ವೇದವು ತ್ರಿದೋಷಗಳ ಸಿದ್ಧಾಂತದ ಅಸ್ತಿಭಾರದಲ್ಲಿ ನಿಂತ ಪ್ರಾಚೀನ ವೈದ್ಯಶಾಸ್ತ್ರ. ದೇಹದ ಹುಟ್ಟು, ಬೆಳವಣಿಗೆ, ದೇಹರಚನೆ ಮತ್ತು ಕ್ರಿಯಾವಿಜ್ಞಾನಗಳೆಲ್ಲ ಇದೇ ತಳಹದಿಯ ಮೇಲೆ ನಿಂತಿವೆ. ಪಿತ್ತವು ಎರಡನೆಯದು. ವಿಶ್ವದ ಸೂರ್ಯಶಕ್ತಿ, ಅಗ್ನಿತತ್ವದ ಪ್ರತೀಕ. ಸಕಲ ಜೀವಕೋಶಗಳ ಮೂಲತತ್ವ. ಹಸಿವೆ, ಜೀರ್ಣಪ್ರಕ್ರಿಯೆ ಮತ್ತು ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಹಾಗೂ ಶುಕ್ರ (ಸ್ತ್ರೀ ಬೀಜ ಆರ್ತವ) ಧಾತು, ಅಂದರೆ ಅಂಗಾಂಶಗಳ ಪೂರಣ, ನಿರ್ಮಿತಿ ಮತ್ತು ವಿನಾಶಗಳಿಗೂ ಮೂರು ತತ್ವಗಳೇ ಆಧಾರ. ಪಿತ್ತವು ಕೊಂಚ ಆಮ್ಲ ಅಂದರೆ ‘ಆ್ಯಸಿಡಿಕ್ ಪಿಎಚ್’ ಉಳ್ಳದ್ದು. ಅದು ಅತೀವ ಹೆಚ್ಚಿನ ಪಿಎಚ್ ಹೊಂದಿದರೆ ದೇಹದ ದಿನನಿತ್ಯದ ಕೆಲಸಕಾರ್ಯಗಳಿಗೆ ವ್ಯತ್ಯಯ; ಕಾಯಿಲೆಗಳತ್ತ ದಾರಿ.

ಈಗ ಸುರೇಶನ ಮೈಯಲ್ಲಿ ಮೇದೋಧಾತು ಮಾತ್ರ ಸಂಚಯ. ಅನಂತರದ ಮೂಳೆ, ಮಜ್ಜೆ ಮತ್ತು ಅಂತಿಮ ಧಾತು ಉತ್ಪತ್ತಿಗೆ ಸಂಚಕಾರ.

ADVERTISEMENT

ತನ್ನನ್ನು ತಾನೇ ಹೆಚ್ಚು ಸುಡುವ ಗುಣದ ಪಿತ್ತವೇ ಆಮ್ಲಪಿತ್ತ. ಎದೆಯುರಿ, ಕಹಿ ಅಥವಾ ಹುಳಿತೇಗು, ಕೊಂಚ ಶ್ರಮದಿಂದಲೇ ಆಯಾಸ, ಸದಾಕಾಲ ಕಿರಿಕಿರಿ, ಕೆಡುವ ಬಾಯಿರುಚಿ, ಕುಗ್ಗುವ ಹಸಿವೆಗಳಂತಹವು ಪ್ರಧಾನ ಲಕ್ಷಣಗಳು. ಮಲಪ್ರವೃತ್ತಿಗೆ ತುಂಬ ಸಮಸ್ಯೆ. ಆದರೂ ಒಂದೇ ಬಾರಿಗೆ ಹೊರ ಹಾಕಲಾಗದ ಸ್ಥಿತಿ. ಪದೇ ಪದೇ ತೆರಳುವ ಸಮಸ್ಯೆ.

ಸುರೇಶನದು ಕುರುಕು ತಿಂಡಿಯನ್ನು ಪದೇ ಪದೇ ತಿನ್ನುವ ಚಪಲವೇ ಕಾರಣ ಎಂದಾಯಿತು. ತಂಬಾಕುಸೇವನೆಯ ಯಾವುದೇ ಪ್ರಕಾರವೂ ಆಮ್ಲಪಿತ್ತದ ಮೂಲಕಾರಣ. ಪದೇ ಪದೇ ಹತ್ತಾರು ಬಾರಿ ಕುಡಿಯುವ ಕಾಫಿ ಚಹಾದಂಥ ಉತ್ತೇಜಕ ಪಾನೀಯಗಳು, ಬಾಟಲೀಕರಿಸಿದ ದ್ರವಗಳು, ಮದ್ಯದ ಚಟವೂ ಆಮ್ಲಪಿತ್ತಕ್ಕೆ ಕಾರಣ. ಎಲ್ಲಕ್ಕಿಂತ ಮಿಗಿಲಾಗಿ ತಾಸುಗಟ್ಟಲೆ ಕುಳಿತು ಮಾಡುವ ಕಾಯಕವೂ ಈ ಸಮಸ್ಯೆಗೆ ಕಾರಣ. ಕಚೇರಿಗಳಲ್ಲಿ ಮತ್ತು ಅಹರ್ನಿಶಿ ಗಣಕಯಂತ್ರದ ಮುಂದೆ ತಾಸುಗಟ್ಟಲೆ ಕುಳಿತ ದುಡಿಮೆ ಹೊಸಪೀಳಿಗೆಯ ಕಾಯಿಲೆಯ ರಹದಾರಿ. ತಾಸುಗಟ್ಟಲೆ ‘ಜಿಮ್’ ಕೈಗೊಳ್ಳುವುದೂ ಕಾಯಿಲೆಯ ಕಾರಣವಾದೀತು. ಒಂದೇ ಮಾತಿನ ಚಿಕಿತ್ಸೆ ಎಂದರೆ ರೋಗದ ಕಾರಣಗಳನ್ನು ದೂರ ಮಾಡಿರಿ. ಮೇಲಿನ ಉದ್ದನೆಯ ಪಟ್ಟಿಯಲ್ಲಿ ನಿಮ್ಮ ಸಮಸ್ಯೆಯ ಮೂಲ ತಿಳಿಯಿರಿ. ಅದರಿಂದ ದೂರವಾಗಿರಿ. ಇದೇ ಜೀವನಶೈಲಿಯ ಬದಲಾವಣೆ.

ಬಸಳೆಸೊಪ್ಪು, ಬಾಳೆಹಣ್ಣು ಪಿಎಚ್ ಕೊಂಚ ಕ್ಷಾರೀಯತೆಯದು. ಇವು ರೋಗದ ತಡೆಗೆ ಪೂರಕ. ಬೆಣ್ಣೆಯನ್ನು ತೆಗೆದ ಮಜ್ಜಿಗೆಯನ್ನು ಧಾರಾಳ ಬಳಸಿರಿ. ಆಯುರ್ವೇದವು ಇದನ್ನು ಅಮೃತ ಎನ್ನುತ್ತದೆ. ಸಪ್ಪೆ ಇರಲಿ, ಹುಳಿ ಬೇಡ; ಶೀತಲೀಕರಿಸಿದ್ದೂ ಸಲ್ಲದು. ಈರುಳ್ಳಿಯ ಸತತ ಸೇವನೆಯಿಂದ ಮಲಪ್ರವೃತ್ತಿಗೆ ಉಪಕಾರ. ಬೂದುಗುಂಬಳ, ಸೋರೆಕಾಯಿ, ಸಂಬಾರ ಸೌತೆಯಂತಹ ತರಹೇವಾರಿ ಬಳ್ಳಿಯ ತರಕಾರಿಗಳ ಸೇವನೆಯಿಂದ ಸಹಕಾರ. ಒತ್ತಡರಹಿತ ಜೀವನ ನಿಮ್ಮದಾಗಲಿ. ಕಾಲಕ್ಕೆ ಸರಿಯಾದ ವಿಶ್ರಾಂತಿ–ನಿದ್ರೆಗಳು ಬೇಕು. ಶಿಸ್ತುಬದ್ಧ ಆಹಾರಕಾಲದ ಪಾಲನೆ ಕೂಡ ಅತ್ಯಗತ್ಯ. ‘ಹಸಿದು ಹಸಿದಿರ ಬೇಡ, ಹಸಿಯದಿರೆ ಉಣಬೇಡ, ಬಿಸಿ ಬೇಡ, ತಂಗೂಳನುಣಬೇಡ, ವೈದ್ಯನಾ ಬೇಸನವೆ ಬೇಡ ಸರ್ವಜ್ಞ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.