ADVERTISEMENT

Gouty Arthritis: ಕೀಲುರಿಯೂತದ ವಾತರಕ್ತ

​ಪ್ರಜಾವಾಣಿ ವಾರ್ತೆ
Published 20 ಮೇ 2025, 0:20 IST
Last Updated 20 ಮೇ 2025, 0:20 IST
   

‘ಖುಡವಾತ’ (ಗೌಟಿ ಅರ್ಥ್ರೈಟಿಸ್‌) ಎಂಬ ಹೆಸರಿನಡಿ ಕಿರಿಗಂಟುಗಳ ಉರಿಯೂತದ ವ್ಯಾಧಿಯ ವಿವರಗಳು ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿದೆ. ‘ಖುಡ’ ಎಂದರೆ ಚಿಕ್ಕದು. ಕಿರಿಯ ಸಂದುಗಳನ್ನಷ್ಟೆ ಬಹುತೇಕ ಪ್ರಸಂಗಗಳಲ್ಲಿ ಆವರಿಸುವ ತೊಂದರೆ ಇದು. ತಡೆಯಲು ಸಾಧ್ಯವೆನಿಸುವಷ್ಟು ವೇದನೆ. ಚೇಳು ಕಚ್ಚಿದರೆ ಉಂಟಾಗುವ ನೋವಿಗೆ ಹೋಲಿಕೆ. ಆಢ್ಯವಾತ ಅರ್ಥಾತ್,  ವಾತಜನಿತ ಕಾಯಿಲೆ ಇದು.

ವಾತದೋಷವು ಹಲವು ಕಾರಣಗಳಿಂದ ಪ್ರಕುಪಿತ. ಅದರ ಮಾರ್ಗ ತಡೆಯ ಕೆಲಸ ಪ್ರಕುಪಿತ ರಕ್ತದ್ದು. ಗಾಳಿ ತುಂಬಿದ ಬೆಲೂನಿಗೆ ದಾರ ಕಟ್ಟಿ ಒತ್ತಿದರೆ ಹೇಗಾದೀತು ಊಹಿಸಿರಿ. ಹೀಗೆ ದೇಹದ ಸಹಜ ಕೆಲಸಗಳಲ್ಲಿ ವ್ಯತ್ಯಯ. ಚುಚ್ಚುವಿಕೆ, ಭಾರ ಭಾರ, ಉರಿ, ಸಿಡಿತ, ನೀಲಿಗಟ್ಟುವಿಕೆ, ಸ್ಪರ್ಶ ಹಾನಿ, ಸೀಳುವಂತಹ ನೋವುಗಳು ಏಕಕಾಲದಲ್ಲಿ ಉಂಟಾಗುವುದು. ಕೈ ಮತ್ತು ಕಾಲು ಬೆರಳು, ಅಂಗೈ ಮತ್ತು ಅಂಗಾಲುಗಳಲ್ಲಿ ಇಂತಹ ಲಕ್ಷಣ ಸಮುಚ್ಚುಯ ಪ್ರಕಟ. ಮೊದಲ ಕಾರಣ ಅತಿಯಾದ ಖಾರ, ಹುಳಿ ಹಾಗೂ ಉಪ್ಪಿನಂಶ ಸೇವನೆ! ಯೂರಿಕ್ ಅಮ್ಲದ ಹೆಚ್ಚಳವೇ ಮೊದಲ ಕಾರಣ ಅನ್ನುತ್ತದೆ ಆಧುನಿಕ ವೈದ್ಯ. ಟೊಮೆಟೊದ ಅತಿ ಬಳಕೆಯಿಂದ ಮೂತ್ರ ಕೋಶದ ಕಲ್ಲು ಮತ್ತು ಗೌಟ್ ಕಾಯಿಲೆ ಕಟ್ಟಿಟ್ಟ ಬುತ್ತಿ ಎಂಬುದು ನೆನಪಿಡಿ. ಹಗಲು ನಿದ್ದೆ, ಬೊಜ್ಜು ಮತ್ತು ದೇಹಕ್ಕೆ ಒಂದಿನಿತೂ ವ್ಯಾಯಾಮವೇ ಇಲ್ಲದ ಜೀವನ. ಬೆವರನ್ನೇ ಸುರಿಸದ ಸದಾ ಕಾಲ ಎ.ಸಿ., ಫ್ಯಾನ್ ಮಾತ್ರ ಬಯಸುವ ಹೊಸ ಪೀಳಿಗೆಯ ಕಾಯಿಲೆಗಳ ಪಟ್ಟಿಯಲ್ಲಿದೆ ಗೌಟ್ ಅರ್ಥಾತ್ ವಾತರಕ್ತದ ಸ್ಥಾನ.

ಕೇವಲ ತ್ವಚೆ ಮತ್ತು ಮಾಂಸ ಪೇಶೀ ಮಾತ್ರ ಆವರಿಸಿದ ಕಾಯಿಲೆಗೆ ‘ಉತ್ತಾನ ವಾತರಕ್ತ’ ಎಂಬರು. ರಸ ರಕ್ತಾದಿ ಏಳೂ ಧಾತು ಅವರಿಸಿದ ಆಳವಾಗಿ ಬೇರೂರಿದ ವಾತರಕ್ತವು ಗಂಭೀರ ಎನ್ನುತ್ತದೆ ಚರಕ ಸಂಹಿತೆ. ಸರಿಯಾದ ಚಿಕಿತ್ಸೆ ಮಾಡದ ಉತ್ತಾನವೇ ಗಂಭೀರ ಸ್ವರೂಪ ಪಡೆಯುತ್ತದೆ. ಕೈಕಾಲು ಸೊಟ್ಟಗಾಗುವ, ಮೂಳೆಗಳೇ ವಿರೂಪಗೊಳುವ ಸಂಭಾವ್ಯ ಅವಸ್ಥೆ ಇದು. ಹದ್ದು ಮೀರಿದ ಕಾಯಿಲೆಗೆ ಚಿಕಿತ್ಸೆ ಇಲ್ಲ. ಬಹಳವಾಗಿ ತೂಕ ಕಳೆದುಕೊಂಡ, ಬಲ ಮತ್ತು ಮನೋಬಲ ಕಳೆದುಹೋದ ರೋಗಿಗೆ ಚಿಕಿತ್ಸೆ ಇಲ್ಲ ಎನ್ನುತ್ತದೆ ಚರಕ ಸಂಹಿತೆ. ಜಿಗಣೆ ಕಚ್ಚಿಸುವ ವಿಧಾನದಿಂದ ದೇಹದ ‘ದುಷ್ಟ’ ರಕ್ತವನ್ನು ತೆಗೆಯುವ ಮೊದಲ ಕ್ರಮ ಗಮನಿಸಿ. ಪಂಚಕರ್ಮ ಪ್ರಕಾರದ ಒಂದು ವಿಧ ಜಿಗಣೆಯದು. ಇನ್ನೊಂದು ಪ್ರಕಾರ ಕ್ರಮವರಿತು ನಡೆಸಲಾದ ವಿರೇಚನ ವಿಧಿ. ಅಂದರೆ ಕೆಟ್ಟ ದೋಷ ಹೊರ ಹಾಕುವ ಭೇದಿ ಮಾಡಿಸುವ ವಿಧಾನ. ‘ಉಪನಾಹ’ ಎಂದರೆ ಬಿಸಿ ಪಟ್ಟು ಹಾಕುವ ಪೋಲ್ಟೀಸು. ಅಗಸೆ ಬೀಜ, ಗೋಧಿ ಹಿಟ್ಟು ಕಲಸಿ ಬಿಸಿಯಾಗಿ ನೋವಿನ ಜಾಗಕ್ಕೆ ಹಚ್ಚುವ ಕ್ರಮ.

ADVERTISEMENT

ರೋಗಕಾರಣಗಳಿಂದ ದೂರವಿರಿ. ಅದುವೇ ಮೊದಲ ಅರ್ಧ ಭಾಗದ ಚಿಕಿತ್ಸೆ ಎನ್ನುತ್ತದೆ, ಆಯುರ್ವೇದ. ಹುಳಿ, ಖಾರ. ಮದ್ಯಪಾನ, ಹಗಲು ನಿದ್ದೆ. ಉಷ್ಣಕಾರಕ ಆಹಾರಗಳು ಸಹ ರಕ್ತವನ್ನು ಕೆಡಿಸಿ ಕಾಯಿಲೆಗೆ ಹಾದಿ ಮಾಡಿಕೊಡುತ್ತವೆ. ನಿರಂತರ ಸಂಚಾರವೂ ವಾತರಕ್ತದ ಮೂಲಕಾರಣವಾದೀತು. ಹರಳುಗಿಡದ ಬೇರಿನ ಕಷಾಯ ಪಾನ ಉತ್ತಮ ಪ್ರಥಮ ಚಿಕಿತ್ಸೆ. ಟೊಮೆಟೋ, ಬೇಳೆಗಳಿಂದ ದೂರವಿದ್ದರೆ ಕ್ಷೇಮ. ಹುರುಳಿಬೀಜದ ಸಾರನ್ನು ಬಳಸಿರಿ. ಬೋಧಿ ವೃಕ್ಷ(ಅರಳಿ ಮರ)ದ ಹೊರ ತೊಗಟೆಯ ಕಷಾಯದ ನಿತ್ಯಸೇವನೆಯಿಂದ ಹಿತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.