ರಜೆಯಲ್ಲಿ ಮಕ್ಕಳು ಆರೋಗ್ಯವನ್ನು ಕಾಪಾಡಿಕೊಂಡು ಸಂತೋಷದಿಂದ ಇರುವುದು ಹೇಗೆ ಎಂಬುದೇ ಪೋಷಕರಿಗೆ ಒದಗುವ ಸವಾಲು. ರಜೆಯೆಂದರೆ ಸಾಹಸದ ಉಲ್ಲಾಸದ ಸಮಯ. ವರ್ಷವಿಡೀ ಪಠ್ಯ ವಿಚಾರಗಳಲ್ಲಿ ತೊಡಗಿದ್ದ ಮಕ್ಕಳು ಈಗ ತಮ್ಮ ಮೈ ಮನಸ್ಸುಗಳನ್ನು ಹರಿಬಿಟ್ಟು ಕೊಂಚ ಸಂತೋಷವನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ಬಿಸಿಲಿನ ಝಳ ಮತ್ತು ದಿಢೀರನೆ ಆಗುವ ದಿನಚರಿಯ ಬದಲಾವಣೆಗಳಿಂದಾಗಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗದಂತೆ ಪಾಲಕ ಪೋಷಕರು ಗಮನಹರಿಸಬೇಕು.
ಬೇಸಿಗೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಬೇಕು. ಬೇಸಗೆಯಲ್ಲಿ ಹಣ್ಣುಗಳನ್ನು ಧಾರಾಳವಾಗಿ ನೀಡಬಹುದು. ಇವುಗಳಲ್ಲಿ ವಿಟಮಿನ್, ನಾರಿನ ಅಂಶ ಮತ್ತು ನೀರಿನ ಅಂಶ ಹೆಚ್ಚಾಗಿರುತ್ತದೆ. ಸಾಧ್ಯವಾದಷ್ಟು ಹಸಿರು ತರಕಾರಿಗಳನ್ನು, ಸೋರೆಕಾಯಿಯನ್ನು ಊಟದಲ್ಲಿ ಬಳಸಬೇಕು. ಕರಿದ ಹುರಿದ ಮತ್ತು ಬೇಕರಿ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಜಂಕ್ ಫುಡ್ ಎಂದು ಕರೆಯಲಾಗುವ ಆಧುನಿಕ ತಿನಿಸುಗಳು ಖಂಡಿತವಾಗಿಯೂ ಯಾವ ರೀತಿಯಿಂದಲೂ ಒಳಿತಲ್ಲ. ಪ್ರೋಟೀನ್‌ಯುಕ್ತ ಆಹಾರಗಳು ಅಂದರೆ, ಪನೀರ್, ಮೊಟ್ಟೆ, ಮೀನು ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ಕೊಡಬಹುದು. ಮಕ್ಕಳು ಆಟವಾಡುತ್ತಲೋ ಅಥವಾ ತಮ್ಮ ಬೆಳವಣಿಗೆಯ ಸಹಜ ಕಾರಣದಿಂದಲೋ ಪದೇ ಪದೇ ಹಸಿವು ಎಂದು ಬರುವ ಕಾರಣ ಅವರಿಗೆ ನೈಸರ್ಗಿಕ ಪೂರಕ ಆಹಾರ ಮತ್ತು ಪಾನೀಯಗಳನ್ನು ಒದಗಿಸುವುದು ಒಳ್ಳೆಯದು.
ಬೇಸಿಗೆಯಲ್ಲಿ ಮಕ್ಕಳು ಎದುರಿಸುವ ಮತ್ತೊಂದು ಮುಖ್ಯ ಅಪಾಯವೆಂದರೆ ‘ನಿರ್ಜಲೀಕರಣ’, ಎಂದರೆ ‘ಡಿ ಹೈಡ್ರೇಶನ್’. ಎಷ್ಟು ಬೇಡವೆಂದರೂ ಕುಣಿದು ಕುಪ್ಪಳಿಸುವ ಆಟವಾಡುವ ವಯಸ್ಸದು. ಬಿಸಿಲಿನಲ್ಲೂ ಬಯಲಿನಲ್ಲೂ ಆಡಿ ದಣಿಯುವಾಗ ನೀರು ಕುಡಿಯುವುದನ್ನು ಕಡೆಗಣಿಸಿ ಆಟವಾಡುವ ಸಾಧ್ಯತೆಗಳು ಇದೆ. ಹೀಗಾದಾಗ ಅತಿಯಾದ ಬೆವರಿನ ಜೊತೆಗೆ ದೇಹದ ನೀರಿನ ಅಂಶವು ಬತ್ತಿಹೋಗುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಕೈಗೆಟಕುವಂತೆ ಕುಡಿಯುವ ನೀರಿನ ವ್ಯವಸ್ಥೆ ಮನೆಯಲ್ಲಿರಬೇಕು. ಅಥವಾ ಆಟದ ಮೈದಾನಕ್ಕೆ ಅವರು ನೀರಿನ ಬಾಟಲಿಗಳನ್ನು ಒಯ್ಯುವಂತೆ ಮಾಡಬೇಕು. ನೀರು ಮುಖ್ಯವಾದ ಪಾನೀಯವಾದರೂ ಬಾಯಿರುಚಿಗೆ ಒಗ್ಗುವಂತೆ ದೇಶಿಯ ಪಾನಕಗಳನ್ನು ತಯಾರಿಸಿಟ್ಟು ಮಕ್ಕಳು ಅವುಗಳನ್ನು ಕುಡಿಯಲು ಪ್ರೋತ್ಸಾಹಿಸಬೇಕು. ಅತಿ ಸಕ್ಕರೆ ಬೆರೆಸಿದ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿದರೆ ಹೊಟ್ಟೆಯುಬ್ಬರದ ಜೊತೆಗೆ ನಿರ್ಜಲೀಕರಣವು ಉಂಟಾಗುತ್ತದೆ. ನಾವು ಗಮನಿಸಿದಂತೆ ಕಾರ್ಬೊನೇಟ್‌ಯುಕ್ತ ಪಾನೀಯಗಳನ್ನು ಜಾಹಿರಾತಿನಲ್ಲಿ ಪ್ರಚಾರ ಮಾಡುವ ಆಟಗಾರರು ಕೂಡ ಮೈದಾನದಲ್ಲಿ ಶುದ್ಧವಾದ ನೀರನ್ನೆ ಸೇವಿಸುತ್ತಾರೆಯೇ ಹೊರತು ತಾವು ಜಾಹಿರಾತು ಮಾಡಿದ ಪಾನೀಯವನ್ನು ಕುಡಿಯುವುದಿಲ್ಲ! ಅತಿಯಾದ ಬಿಸಿಲಿನಲ್ಲಿ ಆಡುವುದನ್ನು ತಪ್ಪಿಸಬೇಕು. ಮುಂಜಾನೆ ಮತ್ತು ಸಂಜೆ ಮಾತ್ರ ಆಟವಾಡಲು ಪ್ರೋತ್ಸಾಹಿಸಿ ಮಧ್ಯಾಹ್ನದ ವೇಳೆಯಲ್ಲಿ ಮನೆಯ ಒಳಾಂಗಣ ಆಟಗಳಲ್ಲಿ ಮತ್ತು ಇತರ ಹವ್ಯಾಸಗಳಲ್ಲಿ ತೊಡಗಿಸಬೇಕು.
ನಿದ್ರೆಯೆಂಬ ಆರೋಗ್ಯ ವರ: ಶಾಲೆಗೆ ರಜೆ ಇರುವ ಕಾರಣ ಮಕ್ಕಳು ಏಳುವ ಮತ್ತು ಮಲಗುವ ಸಮಯ ವ್ಯತ್ಯಾಸಗೊಳ್ಳುತ್ತದೆ. ಕೆಲವರು ಬೆಳಗ್ಗೆ ತಡವಾಗಿ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ, ಮತ್ತೆ ಕೆಲವರು ರಾತ್ರಿ ತಡವಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡುಬಿಡುತ್ತಾರೆ. ಹೀಗಾಗದಂತೆ ಶಾಲಾ ಅವಧಿಯಲ್ಲಿ ಏಳುತ್ತಿದ್ದ ಸಮಯಕ್ಕೆ ಏಳುವುದನ್ನು ಮತ್ತು ಯಾವ ಸಮಯದಲ್ಲಿ ಮಲಗುತ್ತಿದ್ದರೋ ಅದೇ ಸಮಯದಲ್ಲಿ ಮಲಗುವುದನ್ನು ಬಿಡದಂತೆ ನೋಡಿಕೊಳ್ಳಬೇಕು. ಮಧ್ಯಾಹ್ನದ ಬಿರುಬಿಸುಲಿನಲ್ಲಿ ಭೋಜನವಾದ ಒಂದೆರಡು ತಾಸಿನ ಬಳಿಕ ತಣ್ಣನೆಯ ವಾತಾವರಣದಲ್ಲಿ ಅವರು ಅಲ್ಪ ನಿದ್ರೆಗೆ ಜಾರುವಂತೆ ಮಾಡಬೇಕು. ಅತಿಯಾಗಿ ಮೊಬೈಲ್ ಫೋನ್ ಟ್ಯಾಬ್ಲೆಟ್ ಅಥವಾ ಟಿವಿ ಬಳಸುವುದನ್ನು ಖಂಡಿತವಾಗಿಯೂ ತಡೆಯಬೇಕು.
ಮಕ್ಕಳು ಕಂಪ್ಯೂಟರ್ ಪರದೆಯ ಮುಂದೆ ಅಥವಾ ಟಿವಿಯ ಮುಂದೆಯೋ ಹೆಚ್ಚು ಹೊತ್ತು ಕಳೆಯದಂತೆ ಅವರನ್ನು ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಡಬೇಕು. ತಾವಾಗಿಯೇ ಮೈದಾನಕ್ಕೆ ಇಳಿದು ಆಡುವುದಾದರೆ ಸಂತೋಷ. ಇಲ್ಲವಾದರೆ ಅವರನ್ನು ಹೊರಾಂಗಣದ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಕರಕುಶಲ ಕೆಲಸ, ಚಿತ್ರಕಲೆ, ಮಾಡಿ-ಕಲಿ ಮತ್ತು ಪಾಟರಿ – ಇವುಗಳಲ್ಲಿ ಅವರನ್ನು ತೊಡಗಿಸಬೇಕು. ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ಬೇಸಿಗೆ ಸರಿಯಾದ ಸಮಯ. ಆರಂಭದಲ್ಲಿ ಸಣ್ಣಪುಟ್ಟ ಕಥೆಗಳನ್ನು ಓದಿ ಹೇಳಿ ಬಳಿಕ ಚಿಕ್ಕ ಪುಸ್ತಕಗಳನ್ನು ಅವರಿಗೆ ಓದಲು ಕೊಡಬೇಕು. ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ಹೊಸ ವಿಚಾರಗಳನ್ನು ಹೊಸ ಕೌಶಲಗಳನ್ನು ಕಲಿಸುವ ಪ್ರಯತ್ನ ಮಾಡಬಹುದು. ಅಡುಗೆಯೂ ಒಂದು ಕಲೆ. ಹಾಗೆ ತೋಟಗಾರಿಕೆ ಅಥವಾ ಅವರ ಆಸಕ್ತಿಕರ ಕ್ಷೇತ್ರದಲ್ಲಿ ಏನಾದರೂ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಯೋಗ, ಉಸಿರಾಟದ ವ್ಯಾಯಾಮ, ಲಘು ಧ್ಯಾನದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬಹುದು.
ಮಕ್ಕಳ ಸುರಕ್ಷತೆಗೆ ಕೆಲವು ಕ್ರಮಗಳು
ಅತಿಯಾದ ಬಿಸಿಲಿಗೆ ಮೈ ಒಡ್ಡದಂತೆ ನೋಡಿಕೊಳ್ಳಿ.
ಬೇಸಿಗೆಗೆ ಸೂಕ್ತವಾದ ಕೊಂಚ ಸಡಿಲವಾದ ಹತ್ತಿಯ ಬಟ್ಟೆಗಳನ್ನು ತೊಡಿಸಿ.
ಬಿಸಿಲಿನಲ್ಲಿ ಹೊರಗೆ ಹೊರಟಾಗ ಸೂಕ್ತವಾದ ಚರ್ಮರಕ್ಷಣಾ ಸಾಧನಗಳನ್ನು ಬಳಸಿ.
ಬೇಸಿಗೆಯಲ್ಲಿ ನೀರಿನಿಂದ ಹರಡುವ ಕೆಲವು ಸಾಂಕ್ರಾಮಿಕ ರೋಗಗಳಿರುತ್ತವೆ. ಆದುದರಿಂದ ಎಲ್ಲೆಂದರಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ, ಸದಾ ಶುದ್ಧ ನೀರನ್ನು ಒದಗಿಸಿ.
ಶುಚಿತ್ವದ ಬಗ್ಗೆ ಗಮನವಿರಲಿ. ಆಟವಾಡುವಾಗ ಕೈಕಾಲುಗಳು ಮಣ್ಣಿನ ಸಂಪರ್ಕಕ್ಕೆ, ಆಟಿಕೆಗಳ ಸಂಪರ್ಕಕ್ಕೆ ಬಂದಿರುತ್ತವೆ. ಹೀಗಾಗಿ ಮಕ್ಕಳು ಆಹಾರವನ್ನು ಸೇವಿಸುವ ಮುನ್ನ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದು ಬಳಿಕ ಆಹಾರವನ್ನು ಸೇವಿಸುವಂತೆ ನೋಡಿಕೊಳ್ಳಿ.
ಮಕ್ಕಳು ನೀರಾಟವಾಡುತ್ತಿದ್ದರೆ ಅಥವಾ ಅವರನ್ನು ಈಜಲು ಕರೆದುಕೊಂಡು ಹೋದ ಸಂದರ್ಭಗಳಲ್ಲಿ ಸಂಪೂರ್ಣ ನಿಗಾ ವಹಿಸಿ.
ಸಾಮಾಜಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.