ADVERTISEMENT

ಆರೋಗ್ಯ | ಚರ್ಮದ ಕಿರಿಕಿರಿಗೆ ‘ಕರ್ಮ’ ಎನ್ನದಿರಿ!

ಪ್ರಜಾವಾಣಿ ವಿಶೇಷ
Published 23 ಡಿಸೆಂಬರ್ 2024, 23:30 IST
Last Updated 23 ಡಿಸೆಂಬರ್ 2024, 23:30 IST
   

ಮೈಕೊರೆಯುವ ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರಗಳಲ್ಲದೇ ಕೆಲವು ಚರ್ಮದ ಸಮಸ್ಯೆಗಳೂ ಚಳಿಗಾಲದಲ್ಲಿ ಕಾಡುತ್ತವೆ.

ಒಣಚರ್ಮ: ಒಣಚರ್ಮ ಚಳಿಗಾಲದ ಮುಖ್ಯ ಸಮಸ್ಯೆ. ಶೀತಲವಾದ ಒಣಗಾಳಿ ಚರ್ಮವನ್ನು ಒಣಗಿಸುತ್ತದೆ. ಚರ್ಮದಲ್ಲಿ ಬಿರುಕುಗಳಾಗಿ, ಸತ್ತ ಚರ್ಮದ ಪದರಗಳು ಹೆಚ್ಚುತ್ತಾ ತುರಿಸುತ್ತದೆ. ಇದು ಮುಖ್ಯವಾಗಿ ಕೈಕಾಲುಗಳಲ್ಲಿ ಆಗುತ್ತದೆ. ಕೆಲವರಿಗೆ ಸ್ವಭಾವದಿಂದಲೇ ಒಣಚರ್ಮವಿರುತ್ತದೆ, ಹಾಗೂ ಹುಟ್ಟಿನಿಂದಲೇ ‘ಇಕ್ಥಿಯೋಸಿಸ್’ ಅಥವಾ ‘ಮೀನ್ಚರ್ಮ’ ಎಂಬ ಚರ್ಮ ಒಣಗಿ, ಒಡೆಯುವ ಸಮಸ್ಯೆ ಇರುತ್ತದೆ. ಇದರಲ್ಲಿ ಸತ್ತ ಚರ್ಮ ಬೇಗನೆ ಕಳಚಿ ಹೋಗದೇ ಗಟ್ಟಿಯಾಗಿ ಒಣಗುತ್ತದೆ. ಇದು ಸಾಮಾನ್ಯವಾಗಿ ಕಾಲುಗಳಲ್ಲಾಗುತ್ತದೆ. ಅಂತೆಯೇ ವಯಸ್ಸು ಹೆಚ್ಚಾದಂತೆ ಚರ್ಮದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿ ಚರ್ಮವು ಒಣಗುತ್ತದೆ. ಚಳಿಗಾಲದಲ್ಲಿ ಇವರೆಲ್ಲರಲ್ಲೂ ಚರ್ಮದ ಒಣಗುವಿಕೆ ಹೆಚ್ಚಿ, ತುರಿಸುತ್ತದೆ.

ಇಸುಬು: ಇಸುಬು ಎಂದರೆ ಚರ್ಮದುರಿತ. ಇದನ್ನು ‘ಎಗ್ಸೆಮ’ ಅಥವಾ ‘ಡರ್ಮಟೈಟಿಸ್’ ಎಂದು ಕರೆಯುತ್ತಾರೆ. ಇದು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಒಣಚರ್ಮ ಇದ್ದಾಗ ಚರ್ಮವು ಉರಿಯೆದ್ದು ಇಸುಬು ಉಂಟಾಗುತ್ತದೆ. ಇದನ್ನು ಒಣ ಇಸುಬು (Xerotic eczema) ಎನ್ನುತ್ತಾರೆ. ಒರಟಾದ, ಗಟ್ಟಿಯಾದ, ಕಪ್ಪುಮಚ್ಚೆಗಳಾಗಿ ತುರಿಸುತ್ತವೆ. ಇವು ಹೆಚ್ಚಾಗಿ ಕಾಲುಗಳಲ್ಲಿ ಆಗುತ್ತವೆ. ಈ ಒಣ ಇಸುಬು ಚಳಿಗಾಲದಲ್ಲಿ ಹೆಚ್ಚಾಗಿ ಉಂಟಾಗುತ್ತದೆ.

ADVERTISEMENT

ಎಟೋಪಿಕ್ ಡರ್ಮಟೈಟಿಸ್: ಇದು ಸೂಕ್ಷ್ಮ ಚರ್ಮವಿರುವ ಚಿಕ್ಕ ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ಸೂಕ್ಷ್ಮ ಚರ್ಮವಿರುವವರಿಗೆ ಚರ್ಮವು ಒಣಗಿದ್ದು, ಕೆಲವರಿಗೆ ಮೀನ್ಚರ್ಮವೂ ಇರುತ್ತದೆ. ಇದರಿಂದ ಚರ್ಮದ ಮೇಲ್ಪದರ ಬಿಗಿಯಾಗಿಲ್ಲದೇ ಅದರ ತಡೆಗೋಡೆಯಂಥ ರಕ್ಷಣೆ ಕಡಿಮೆಯಾಗುತ್ತದೆ. ಇಂಥವರಿಗೆ ಶೀತಲಗಾಳಿ, ದೂಳು, ಕಿರಿಕಿರಿ ಉಂಟುಮಾಡುವ ಪದಾರ್ಥಗಳ ಸ್ಪರ್ಶದಿಂದ ಇಸುಬು ಉಂಟಾಗುತ್ತದೆ. ಇದರಲ್ಲಿ ಕಪ್ಪಾದ ಗಟ್ಟಿ, ಒರಟು ಮಚ್ಚೆಗಳು, ಕೈಕಾಲುಗಳ ಹಳ್ಳಗಳಂಥ ಸ್ಥಳಗಳಲ್ಲಿ ಆಗಿ ತುರಿಸುತ್ತವೆ. ಈ ಸಮಸ್ಯೆಯೂ ಚಳಿಗಾಲದಲ್ಲಿ ಉಲ್ಬಣಿಸುತ್ತದೆ.

ಸೋರಿಯಾಸಿಸ್: ಇದು ಚರ್ಮದ ಒಂದು ವಿಶಿಷ್ಟ ಕಾಯಿಲೆಯಾಗಿದ್ದು ಇದುವರೆಗೂ ಇದಕ್ಕೆ ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ಚರ್ಮದ ಮೇಲ್ಭಾಗ ಉದ್ರೇಕಕಾರಿ ಕಿಣ್ವಗಳಿಂದ ಬೇಗನೆ ಬೆಳೆಯುತ್ತಾ ಅತ್ಯಂತ ಮೇಲಿರುವ ಸತ್ತ ಚರ್ಮದ ಪದರ ಹೆಚ್ಚಾಗುತ್ತದೆ. ಹಾಗಾಗಿ ಕೆಂಪು ಮಚ್ಚೆಗಳಾಗಿ ಅವುಗಳ ಮೇಲೆ ಸತ್ತ ಚರ್ಮದ ಬಿಳಿ ಪದರಗಳು ತುಂಬಿಕೊಂಡಿರುತ್ತವೆ. ಸಾಮಾನ್ಯವಾಗಿ ಇವು ಮುಂದೋಳು, ಮಂಡಿ, ಹಸ್ತ ಪಾದಗಳು, ಬೆನ್ನು, ಮೊದಲಾದ ಒತ್ತಡ ಬೀಳುವ ದೇಹದ ಭಾಗಗಳಲ್ಲಿ ಆಗುತ್ತವೆ. ಇವು ಅಷ್ಟಾಗಿ ತುರಿಸುವುದಿಲ್ಲವಾದರೂ ಬಿಳಿಯ ಪದರಗಳು ಉದುರುತ್ತಾ ಕಿರಿಕಿರಿ ಉಂಟುಮಾಡುತ್ತವೆ. ತಲೆ ಮತ್ತು ಉಗುರುಗಳಲ್ಲೂ ಸೋರಿಯಾಸಿಸ್ ಕಂಡುಬರುತ್ತದೆ. ಇದು ಒಣಚರ್ಮದಿಂದ ಹೆಚ್ಚುತ್ತದೆ. ಅಂತೆಯೇ ಚಳಿಗಾಲದಲ್ಲಿ ಉಲ್ಬಣಿಸುತ್ತದೆ.

ಪಾದ ಒಡೆಯುವುದು: ವಯಸ್ಸಾದವರಲ್ಲಿ, ಒಣಚರ್ಮ ಇರುವವರಲ್ಲಿ ಪಾದ ಒಡೆಯುವುದು,ಬಿರಿಯುವುದು ಸಾಮಾನ್ಯ. ಅಂತೆಯೇ ‘ಎಟೋಪಿಕ್ ಡರ್ಮಟೈಟಿಸ್’, ‘ಸೋರಿಯಾಸಿಸ್’ ಇರುವವರಲ್ಲಿ ಕೂಡ ಪಾದ ಒಡೆಯುತ್ತದೆ. ಕೆಲವು ಸೂಕ್ಷ್ಮ ಚರ್ಮವಿರುವ ಮಕ್ಕಳಲ್ಲಿ ಯುವಾವಸ್ಥೆಗೆ ಬರುವವರೆಗೂ ಆಗಾಗ ಪಾದದ ಮುಂಭಾಗ ಒಡೆಯುವ ಸಮಸ್ಯೆ ಇರುತ್ತದೆ. ಇದನ್ನು ‘ಜುವೆನೈಲ್ ಪ್ಲಾಂಟಾರ್ ಡರ್ಮಟೋಸಿಸ್‌’ ಎನ್ನುತ್ತಾರೆ. ಈ ಎಲ್ಲರಲ್ಲೂ ಪಾದ ಒಡೆಯುವಿಕೆ ಚಳಿಗಾಲದಲ್ಲಿ ಉಲ್ಬಣಿಸುತ್ತದೆ.

ತುಟಿ ಬಿರಿಯುವುದು: ಶೀತಲ ಒಣಗಾಳಿಯಿಂದ ತುಟಿಯಲ್ಲಿ ತೇವಾಂಶ ಕಡಿಮೆಯಾಗಿ ಒಣಗಿ ಬಿರಿಯುವುದೂ ಚಳಿಗಾಲದಲ್ಲಿ ಸಾಮ. ಇದರಿಂದ ಕಿರಿಕಿರಿ ಉಂಟಾಗುತ್ತದೆ; ಖಾರದ ಪದಾರ್ಥಗಳನ್ನು ತಿನ್ನುವಾಗ ತುಟಿ ಉರಿಯುತ್ತದೆ.

ಶೀತಲ ಅರ್ಟಿಕೇರಿಯ (Cold Urticaria): ‘ಅರ್ಟಿಕೇರಿಯ’ ಎನ್ನುವುದು ಅಲರ್ಜಿಯಿಂದಾಗುವ ಸಮಸ್ಯೆ. ಅಲರ್ಜಿಯೆಂದರೆ ಒಗ್ಗದಿರುವಿಕೆ. ದೇಹಕ್ಕೆ ಒಗ್ಗದ ಆಹಾರ, ಔಷಧ, ವಾತಾವರಣ, ಇತ್ಯಾದಿಗಳ ಸಂಪರ್ಕಕ್ಕೆ ಬಂದಾಗ, ಕೆಂಪು ಗಂಧೆಗಳು ಮತ್ತು ತುರಿಕೆ ಉಂಟಾಗುತ್ತವೆ. ಈ ಗಂಧೆಗಳು ಹೋಗುತ್ತಾ ಬರುತ್ತಾ ಇರುತ್ತವೆ. ಅರ್ಟಿಕೇರಿಯ ಸೂಕ್ಷ್ಮ ಚರ್ಮವಿರುವ ಜನರಲ್ಲಿ ಉಂಟಾಗುತ್ತದೆ. ಶೀತಲ ಗಾಳಿಯೂ ಅರ್ಟಿಕೇರಿಯ ಆಗಲು ಪ್ರಚೋದಿಸಬಹುದು. ಆಗ ಇದನ್ನು ‘ಶೀತಲ ಅರ್ಟಿಕೇರಿಯ’ ಎನ್ನುತ್ತಾರೆ.

ಪರಿಹಾರೋಪಾಯಗಳು


ಬಹುತೇಕ ಎಲ್ಲ ಸಮಸ್ಯೆಗಳಲ್ಲೂ ಒಣಚರ್ಮವೇ ಮುಖ್ಯವಾಗಿರುವುದರಿಂದ ಅದನ್ನು ನಿವಾರಿಸಿದರೆ ಈ ಸಮಸ್ಯೆಗಳ ಪರಿಹಾರವನ್ನೂ ಮಾಡಬಹುದು. ಅದಕ್ಕಾಗಿ ಪ್ರತಿದಿನವೂ ತೇವಾಂಶವುಳ್ಳ ತೈಲ ಅಥವಾ ದ್ರಾವಣಗಳನ್ನು ಮೈಪೂರಾ ಇಲ್ಲವೇ ಕೈಕಾಲುಗಳಲ್ಲಾದರೂ ಸವರಿಕೊಳ್ಳಬೇಕು. ಬೆಳಿಗ್ಗೆ ಸ್ನಾನವಾದ ಕೂಡಲೇ ಇನ್ನೂ ತೇವಾಂಶ ಇರುವಾಗಲೇ ಸವರಿಕೊಂಡರೆ ಒಳ್ಳೆಯದು. ಅಂತೆಯೇ ರಾತ್ರಿ ಮಲಗುವಾಗ ಇನ್ನೊಮ್ಮೆ ಸವರುವುದು ಒಳ್ಳೆಯದು. ಚರ್ಮವು ಬಹಳ ಒಣಗಿದ್ಧರೆ ಮಧ್ಯೆ ಒಂದೆರಡು ಬಾರಿ ಸವರಿದರೂ ಒಳ್ಳೆಯದು. ಕೊಬ್ಬರಿಎಣ್ಣೆ, ವ್ಯಾಸಲಿನ್, ಲೋಳೆಸರ, ಮೊದಲಾದವುಗಳನ್ನು ಬಳಸಬಹುದು.ಮಾರುಕಟ್ಟೆಯಲ್ಲಿ ಉತ್ಕೃಷ್ಟವಾದ ತೇವಾಂಶ ದ್ರಾವಣಗಳು ದೊರೆಯುತ್ತವೆ. ಇವನ್ನು ಚರ್ಮವೈದ್ಯರ ನಿರ್ದೇಶಾನುಸಾರ ಬಳಸಬಹುದು.

ಇಸುಬು, ಎಟೋಪಿಕ್ ಡರ್ಮಟೈಟಿಸ್, ಮೊದಲಾದ ತೊಂದರೆಗಳಿಗೆ ವೈದ್ಯರ ನಿರ್ದೇಶಾನುಸಾರ ತೇವಾಂಶ ದ್ರಾವಣಗಳ ಜೊತೆಗೆ ಇತರ ಮುಲಾಮುಗಳನ್ನು ಸೇರಿಕೊಳ್ಳಬೇಕು.

ತುರಿಕೆಗೆ ಮಾತ್ರೆಗಳನ್ನು ವೈದ್ಯರ ನಿರ್ದೇಶಾನುಸಾರ ಸೇವಿಸಬೇಕು.

ತುರಿಕೆಯನ್ನು ನಿವಾರಿಸಲು ಕೆರೆದಷ್ಟೂ ತುರಿಕೆ ಇನ್ನೂ ಹೆಚ್ಚುತ್ತದೆ ಹಾಗೂ ಇಸುಬಿನ ಮಚ್ಚೆಗಳೂ ವರ್ಧಿಸುತ್ತವೆ. ಅಲ್ಲದೇ ಕೆರೆತದಿಂದ ಗಾಯಗಳಾಗಿ ಸೋಂಕುಗಳಾಗಬಹುದು. ಹಾಗಾಗಿ ಆದಷ್ಟು ಕೆರೆಯದೇ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಿ ತುರಿಕೆಯನ್ನು ಮರೆಯಲು ಪ್ರಯತ್ನಿಸಬೇಕು.

ಒಡೆದ ತುಟಿಗಳಿಗೆ ವೈದ್ಯರ ನಿರ್ದೇಶಾನುಸಾರ ಗ್ಲಿಸರಿನ್ ಮೊದಲಾದ ದ್ರಾವಣಗಳನ್ನು ಬಳಸಬಹುದು. ಒಡೆದ ಪಾದಗಳಿಗೆ ರಾತ್ರಿ ತೇವಾಂಶದ ದ್ರಾವಣ ಸವರಿದರೆ, ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಸೋಕಿಸುವುದು ಹಿತವನ್ನು ಉಂಟುಮಾಡುತ್ತದೆ.‌ ಶೀತಲ ಗಾಳಿ ಹಾಗೂ ಚಳಿಯನ್ನು ನಿವಾರಿಸಲು ಬೆಚ್ಚಗಿನ ವಸ್ತ್ರಗಳನ್ನು ಧರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.