
ಸೊಪ್ಪುಗಳು
ನಮ್ಮ ಆಹಾರದಲ್ಲಿ ತರಕಾರಿ ಹಾಗೂ ವಿವಿಧ ಸೊಪ್ಪುಗಳು ಮಹತ್ವದ ಪಾತ್ರವಹಿಸುತ್ತವೆ. ಅವು ಕೇವಲ ಆಹಾರದ ಭಾಗವಷ್ಟೇ ಅಲ್ಲ, ಪ್ರಕೃತಿಯೇ ನೀಡಿರುವ ನೈಸರ್ಗಿಕ ಆರೋಗ್ಯದ ಟಾನಿಕ್ ಅಂತಲೂ ಪರಿಗಣಿಸಬಹುದು.
ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಸೊಪ್ಪುಗಳಲ್ಲಿ ವಿಟಮಿನ್ A, C, K, ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಮೆಗ್ನೀಷಿಯಂ ಹಾಗೂ ನಾರು ಪದಾರ್ಥಗಳು ಸಮೃದ್ಧವಾಗಿವೆ. ಇವು ದೇಹದ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಹೆಚ್ಚಳ ಹಾಗೂ ಜೀರ್ಣಕ್ರಿಯೆಗೆ ಬಹಳ ಉಪಕಾರಿ. ಆಯುರ್ವೇದದ ಪ್ರಕಾರ, ಸೊಪ್ಪುಗಳು ಆಹಾರ ಮಾತ್ರವಲ್ಲ, ಆರೋಗ್ಯವನ್ನು ಕಾಪಾಡುವ ಔಷಧಿಯೂ ಆಗಿವೆ.
ಪ್ರಮುಖ ಸೊಪ್ಪುಗಳ ಔಷಧೀಯ ಗುಣಗಳು
ಮೆಂತ್ಯೆ ಸೊಪ್ಪು: ಇದನ್ನು ಬೇಯಿಸಿ ನೀರು ಒತ್ತಿ ತೆಗೆದು, ಇಂಗು ಮತ್ತು ತುಪ್ಪದಲ್ಲಿ ಹುರಿದು ಸೇವಿಸುವುದರಿಂದ ಶ್ವಾಸಕೋಶ ಸಂಬಂಧಿ ತೊಂದರೆಗಳು, ವಿಶೇಷವಾಗಿ ಬ್ರಾಂಕಿಯಲ್ ಅಸ್ತಮಾ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಸಳೆ ಸೊಪ್ಪು:
ಬಸಳೆ ಸೊಪ್ಪನ್ನು ಗಟ್ಟಿಯಾದ ಹುಳಿ ಮಜ್ಜಿಗೆಯಲ್ಲಿ ಬೇಯಿಸಿ, ನಂತರ ಇಂಗು ಮತ್ತು ತುಪ್ಪದಲ್ಲಿ ಒಗ್ಗರಣೆ ಮಾಡಿದರೆ, ದೇಹಕ್ಕೆ ಬಲ ನೀಡುತ್ತದೆ. ಮನಸ್ಸಿಗೆ ಉಲ್ಲಾಸ ತರುತ್ತದೆ. ಜೊತೆಗೆ ನಿದ್ರೆ ಬರಲು ಸಹಾಯಕವಾಗುತ್ತದೆ ಹಾಗೂ ಮದ್ಯಪಾನದಿಂದ ಉಂಟಾಗುವ ಮದವನ್ನು ಕಡಿಮೆ ಮಾಡುತ್ತದೆ.
ಮುಳ್ಳು ಹರಿವೆ ಸೊಪ್ಪು:
ಎಳ್ಳೆಣ್ಣೆಯಲ್ಲಿ ಇಂಗು ಹಾಕಿ ಹುರಿದು, ಸೈಂಧವ ಲವಣ ಸೇರಿಸಿ ಸೇವಿಸಿದರೆ ಪಿತ್ತ, ಕಫ ರೋಗಗಳು ಹಾಗೂ ರಕ್ತಸ್ರಾವ ಸಮಸ್ಯೆ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಇದು ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ.
ಚಕ್ಕವತ್ತೆ ಸೊಪ್ಪು:
ಇದು ಶುಕ್ರಧಾತುವಿನ ವೃದ್ಧಿಗೆ ಸಹಾಯಕವಾಗಿದ್ದು, ಅರ್ಶ (ಮೊಲೆ) ಹಾಗೂ ಕ್ರಿಮಿಕೀಟಗಳ ಸಮಸ್ಯೆ ನಿವಾರಿಸುತ್ತದೆ.
ಪಾಲಕ್ ಸೊಪ್ಪು:
ಇದು ಉತ್ತಮ ವಿರೇಚಕ (ಲ್ಯಾಕ್ಸೇಟಿವ್) ಗುಣ ಹೊಂದಿದೆ. ಸ್ವಲ್ಪ ನಿಧಾನವಾಗಿ ಜೀರ್ಣವಾಗುತ್ತದೆ. ಮದ, ಶ್ವಾಸಕೋಶ ಸಮಸ್ಯೆಗಳು ಮತ್ತು ಪಿತ್ತ-ರಕ್ತದೋಷಗಳಿಂದ ಉಂಟಾಗುವ ತೊಂದರೆಗಳಲ್ಲಿ ಉಪಕಾರಿ.
ಹುಳಿ ಹುಣಿಚೆ :
ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಗ್ರಹಣಿ ರೋಗ ಹಾಗೂ ಮೂಲವ್ಯಾಧಿ ಬಾರದಂತೆ ತಡೆಗಟ್ಟಲು ಸಹಕಾರಿಯಾಗಿದೆ.
ಒಂದೆಲಗ ಸೊಪ್ಪು:
ಕಫ ಮತ್ತು ಪಿತ್ತ ದೋಷಗಳನ್ನು ಕಡಿಮೆ ಮಾಡಲು ಸಹಾಯಕಾರಿ.
ಸಾಂಬಾರ್ ಸೊಪ್ಪು:
ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆಹಾರಕ್ಕೆ ಸುಗಂಧ ನೀಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಹಿತಕರ ಎಂದು ಪರಿಗಣಿಸಲಾಗಿದೆ.
ಸೇವನೆಯಲ್ಲಿ ಜಾಗ್ರತೆ:
ಸೊಪ್ಪುಗಳನ್ನು ಅತಿಯಾಗಿ ಸೇವಿಸುವುದಿಂದ ಅಜೀರ್ಣ ಹಾಗೂ ಭೇದಿ (ಡೈರಿಯಾ) ಉಂಟಾಗುವ ಸಾಧ್ಯತೆ ಇರುತ್ತದೆ. ಜೀರ್ಣಶಕ್ತಿ ಕಡಿಮೆ ಇರುವವರು ಕಚ್ಚಾ ಸೊಪ್ಪನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ ಅಜೀರ್ಣ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸೊಪ್ಪುಗಳನ್ನು ಚೆನ್ನಾಗಿ ತೊಳೆದು, ಸ್ವಲ್ಪ ಬೇಯಿಸಿ ಸೇವಿಸುವುದು ಉತ್ತಮ. ಇಂಗು, ತುಪ್ಪ ಇತ್ಯಾದಿಗಳೊಂದಿಗೆ ಒಗ್ಗರಣೆ ಮಾಡಿದರೆ ರುಚಿ ಹೆಚ್ಚುವುದರ ಜೊತೆಗೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
ಊಟದಲ್ಲಿ ಸೊಪ್ಪು ಹಾಗೂ ಹಸಿರು ತರಕಾರಿಗಳನ್ನು ಸೇವನೆಯು, ದೇಹದ ಆರೋಗ್ಯ ಕಾಪಾಡುವ ನೈಸರ್ಗಿಕ ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಸರಿಯಾದ ವಿಧಾನದಲ್ಲಿ ಸೇವಿಸಿದರೆ ಅವು ಆರೋಗ್ಯಕರ ಜೀವನಕ್ಕೆ ಮೂಲಾಧಾರವಾಗುತ್ತವೆ.
(ಲೇಖಕರು: ಡಾ. ಹರೂನ್ ಇರ್ಷಾದ್, ಪ್ರಾಧ್ಯಾಪಕರು, ಪಿಜಿ ವಿಭಾಗ – ಆಯುರ್ವೇದ ಸಂಹಿತಾ ಸಿದ್ಧಾಂತ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.