ಚಳಿಗಾಲದಲ್ಲಿ ಹೆಚ್ಚಾಗಿ ಶೀತ ಹವಾಮಾನ ಇರುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಈ ಋತುಮಾನ ಹೆಚ್ಚು ಆಪ್ತ. ಅದರಲ್ಲೂ ಹೃದಯದ ಆರೈಕೆಗೆ ಒಂದು ಕೈ ಹೆಚ್ಚಾಗಿಯೇ ಗಮನಕೊಡುವುದು ಅತ್ಯವಶ್ಯಕ. ಚಳಿಗಾಲದ ಸಂದರ್ಭದಲ್ಲಿ ಹೆಚ್ಚು ತಂಡಿ ವಾತಾವರಣವಿರಲಿದ್ದು, ಇದು ದೇಹವನ್ನು ಚಟುವಟಿಕೆಯಿಂದ ಇರಲು ಬಿಡುವುದಿಲ್ಲ. ಈ ಋತುವಿನಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರೆ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಾಗಿರಲಿದೆ ಎಂದು ಅನೇಕ ಸಂಶೋಧನೆಗಳು ತಿಳಿಸುತ್ತವೆ. ಹೀಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಒಂದಷ್ಟು ಸಲಹೆ ಇಲ್ಲಿವೆ.
ಚಳಿಗಾಲದಲ್ಲಿ ಹೃದಯದ ಆರೈಕೆ ಮೇಲಿರಲಿ ಗಮನ...
ಚಳಿಗಾಲದಲ್ಲಿ ಹೃದಯದ ಆರೋಗ್ಯದ ಅಪಾಯಕ್ಕೆ ಶೀತ ಹವಾಮಾನ ಪ್ರಮುಖ ಕಾರಣ. ವಾತಾವರಣದಲ್ಲಿ ಉಷ್ಣತೆ ಕಡಿಮೆಯಾದಾಗ ನಮ್ಮ ರಕ್ತನಾಳಗಳು ಕಿರಿದಾಗುತ್ತವೆ. ಹೀಗೆ ಕಿರಿದಾದರೆ ರಕ್ತ ಸಂಚಲನಕ್ಕೆ ಅಡೆತಡೆ ಉಂಟಾಗಿ ರಕ್ತದೊತ್ತಡ ಹೆಚ್ಚಿಸುತ್ತದೆ, ಇದು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ, ಶೀತ ಹವಾಮಾನವು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಿ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು. ಇದಲ್ಲದೆ, ತಂಪಾದ ಗಾಳಿಯು ಆಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಯಂತಹ ಉಸಿರಾಟದ ಸಮಸ್ಯೆಗಳನ್ನು ಸಹ ಪ್ರಚೋದಿಸಬಹುದು, ಇದು ಹೃದಯದ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಸೂರ್ಯನ ಬೆಳಕು ಮತ್ತು ವಿಟಮಿನ್ ಡಿ ಕೊರತೆ...
ಚಳಿಗಾಲದ ತಿಂಗಳುಗಳಲ್ಲಿ ಹೃದಯದ ಆರೋಗ್ಯದ ಅಪಾಯಗಳಿಗೆ ಕಾರಣವಾಗುವ ಮತ್ತೊಂದು ಗಮನಾರ್ಹ ಅಂಶವೆಂದರೆ ಸೂರ್ಯನ ಬೆಳಕಿನ ಕೊರತೆ. ವಿಟಮಿನ್ ಡಿ ಉತ್ಪಾದನೆಗೆ ಸೂರ್ಯನ ಬೆಳಕು ಅತ್ಯಗತ್ಯ, ಇದು ಆರೋಗ್ಯಕರ ರಕ್ತನಾಳ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಚಳಿಗಾಲದ ತಿಂಗಳಲ್ಲಿ, ಸೂರ್ಯನ ಬೆಳಕಿನ ಕೊರತೆಯು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸೂರ್ಯನ ಬೆಳಕಿನ ಕೊರತೆಯು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD)ಗೆ ಕಾರಣವಾಗಬಹುದು, ಇದು ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಅದು ಹೃದಯದ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ನಿಯಮಿತ ವ್ಯಾಯಾಮವಿರಲಿ: ಚಳಿಗಾದ ಸಂದರ್ಭದಲ್ಲಿ ದೇಹವು ಜಡತ್ವಕ್ಕೆ ಒಳಗಾಗುತ್ತದೆ. ಯಾವುದೇ ದೈಹಿಕ ಚಟುವಟಿಕೆ ಮಾಡಲು ಸಹಕರಿಸುವುದಿಲ್ಲ. ಆದರೆ, ಇದು ತಪ್ಪು. ಚಳಿಗಾಲದಲ್ಲಿ ದೈಹಿಕ ವ್ಯಾಯಾಮ ಹೆಚ್ಚು ಮುಖ್ಯ. ಆದರೆ, ಅತಿಯಾದ ಚಳಿ ಇರುವ ಸ್ಥಳಗಳಲ್ಲಿ, ಉದಾಹರಣೆಗೆ ಮಂಜು ತುಂಬಿದ ವಾತಾವರಣದಲ್ಲಿ ಹೊರಗಡೆ ಐಸ್ ಸ್ಕೇಟಿಂಗ್, ಹಿಮದಲ್ಲಿ ಬೀಳುವುದು ಇತ್ಯಾದಿ ಚಟುವಟಿಕೆಗಳು ಒಳ್ಳೆಯದಲ್ಲ. ಇದು ನಿಮ್ಮ ಹೃದಯಕ್ಕೆ ಅಪಾಯ ತಂದೊಡ್ಡಬಹುದು. ಹೀಗಾಗಿ ದೇಹವನ್ನು ಬೆಚ್ಚಗಿಡುವುದು, ನಿಯಮಿತ ವ್ಯಾಯಾಮ ಮಾಡುವುದು ಒಳ್ಳೆಯದು.
ಚಳಿಗಾಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆಗಳು...
ಚಳಿಗಾಲದಲ್ಲಿ ಪ್ರಮುಖವಾಗಿ ದೇಹವನ್ನು ಬೆಚ್ಚಗಿಡುವತ್ತಾ ಗಮನವಹಿಸಿ, ಹೀಗೆ ಮಾಡುವುದರಿಂದ ರಕ್ತನಾಳಗಳು ಕಿರಿದಾಗುವುದನ್ನು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು.
ದೈಹಿಕವಾಗಿ ಸಕ್ರಿಯವಾಗಿರುವುದು, ಆದರೆ ಅತಿಯಾದ ಒತ್ತಡದ ವ್ಯಾಯಾಮವನ್ನು ನಿಯಂತ್ರಿಸಿ
ಹೆಚ್ಚು ಹಣ್ಣು, ತರಕಾರಿಗಳು ಮತ್ತು ಧಾನ್ಯಗಳನ್ನೊಳಗೊಂಡ ಸಮತೋಲಿನ ಆಹಾರ ಸೇವಿಸಿ
ದೇಹ ನಿರ್ಜಲೀಕರಣವಾಗದಂತೆ ಸಾಕಷ್ಟು ನೀರು ಕುಡಿಯಿರಿ.
ದೇಹಕ್ಕೆ ನಿದ್ರೆ ಅತಿ ಮುಖ್ಯ, ನಿಮ್ಮ ಒತ್ತಡ ನಿಯಂತ್ರಿಸಲು 8 ಗಂಟೆಗಳ ನಿದ್ರೆ ಮಾಡಿ.
ಚಳಿ ಎಂದು ಹೆಚ್ಚು ಜಡತ್ವ ಜೀವನ ಅನುಸರಿಸದೇ, ದೈಹಿಕವಾಗಿ ಚಟುವಟಿಕೆಯಿಂದ ಇರಿ, ಇದು ಮಾನಸಿಕ ಆರೋಗ್ಯವನ್ನು ಕಾಪಾಡಲಿದೆ.
ಬೆಳಗ್ಗಿನ ಬಿಸಿಲು ದೊರೆತದರೆ, ಕೆಲ ಕಾಲ ಬಿಸಿಲಿನಲ್ಲಿ ದೇಹವನ್ನು ತೆರೆದಿಡಿ.
ಮಕ್ಕಳ ಬಗ್ಗೆಯೂ ಇರಲಿ ಕಾಳಜಿ: ಸಾಮಾನ್ಯವಾಗಿ ಮಕ್ಕಳಿಗೂ ಸಹ ಚಳಿಗಾಲದಲ್ಲಿ ಹೆಚ್ಚು ಆರೈಕೆ ಮಾಡುವುದು ಅತಿ ಮುಖ್ಯ. ಮಕ್ಕಳಿಗೂ ಬೆಚ್ಚಗಿನ ಉಡುಪು ಧರಿಸಿ, ದೇಹವನ್ನು ಬೆಚ್ಚಗಿಡುವುದು, ಉತ್ತಮ ಆಹಾರ ಹಾಗೂ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸುವುದರಿಂದ ಮಕ್ಕಳು ಸಹ ಚಳಿಗಾಲದಲ್ಲಿ ಆರೋಗ್ಯವಾಗಿರಲು ಸಾಧ್ಯ.
ಲೇಖಕರು...
ಡಾ ಪವನ್ ರಾಸಲ್ಕರ್,
ಸಲಹೆಗಾರ-ಇಂಟರ್ವೆನ್ಷನಲ್ ಕಾರ್ಡಿಯಾಲಜಿ
ಫೋರ್ಟಿಸ್ ಆಸ್ಪತ್ರೆ, ನಾಗರಭಾವಿ
ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.