ADVERTISEMENT

ಏನಾದ್ರೂ ಕೇಳ್ಬೋದು: ಹೆಣ್ಣಿನ ಲೈಂಗಿಕ ಅಗತ್ಯಗಳೇನು?

ವಸಂತ ನಡಹಳ್ಳಿ
Published 7 ಅಕ್ಟೋಬರ್ 2022, 19:30 IST
Last Updated 7 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲೈಂಗಿಕತೆಯ ವಿಚಾರ ಬಂದಾಗ ಹೆಣ್ಣನ್ನು ಭೋಗದ ವಸ್ತುವಾಗಿ ನೋಡಲಾಗುತ್ತದೆ. ಆದರೆ ಹೆಣ್ಣಿಗೂ ಲೈಂಗಿಕ ಆಸೆಗಳಿವೆ ಎಂಬುದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನನಗೆ ನನ್ನ ಗಂಡನಿಂದ ಸರಿಯಾದ ತೃಪ್ತಿ ಸಿಗುತ್ತಿಲ್ಲ. ಪರಪುರುಷನ ಜೊತೆ ಸಂಬಧ ಬೆಳೆಸದೆ ಲೈಂಗಿಕ ತೃಪ್ತಿ ಅನುಭವಿಸುವುದು ಹೇಗೆ?
-ಹೆಸರು ಊರು ತಿಳಿಸಿಲ್ಲ

ಉತ್ತರ: ಇಂತಹ ಪ್ರಶ್ನೆ ಕೇಳುವ ನಿಮ್ಮ ಧೈರ್ಯ ಮೆಚ್ಚುಗೆಗೆ ಅರ್ಹವಾಗಿದೆ. ಇದು ಹೆಚ್ಚಿನ ವಿವಾಹಿತ ಮಹಿಳೆಯರ ಸಮಸ್ಯೆ ಕೂಡ. ಹಾಗೆಯೇ ಸಾಕಷ್ಟು ಪುರುಷರ ಸಮಸ್ಯೆಯೂ ಹೌದು. ಇದಕ್ಕೆ ಪರಿಹಾರ ಹುಡುಕುವಾಗ ಸಮಸ್ಯೆಯ ಸಂಕೀರ್ಣತೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಮೊದಲನೆಯದಾಗಿ ಲೈಂಗಿಕತೆಯ ಕುರಿತಾಗಿ ಎಲ್ಲರಲ್ಲಿಯೂ ಸಾಕಷ್ಟು ಅಜ್ಞಾನ ತಪ್ಪುತಿಳಿವಳಿಕೆಗಳಿವೆ. ಹಾಗಾಗಿ ಯಾವುದೇ ವಿಚಾರಗಳು ಮುಕ್ತವಾಗಿ ಚರ್ಚೆಯಾಗುವುದೇ ಇಲ್ಲ. ಲೈಂಗಿಕಕ್ರಿಯೆ ಪೂರ್ಣ ಖಾಸಗಿಯಾಗಿರಬೇಕು ಎನ್ನುವುದೇನೋ ನಿಜ. ಹಾಗೆಂದು, ಅದರ ಕುರಿತಾದ ಮಾಹಿತಿಗಳೂ ಕೂಡ ಸಾರ್ವಜನಿಕ ಚರ್ಚೆಗೆ ಅನರ್ಹ ಎನ್ನುವ ಮನೋಭಾವದಿಂದಾಗಿ ಈ ಕ್ಷೇತ್ರದಲ್ಲಿ ಕೇವಲ ಗೊಂದಲ ಅತೃಪ್ತಿಗಳು ಸೇರಿಕೊಂಡಿವೆ.

ಎರಡನೆಯದಾಗಿ ಮದುವೆಯಂತಹ ದೀರ್ಘಕಾಲದ ಸಂಬಂಧದಲ್ಲಿ ಸಂತೃಪ್ತ ಲೈಂಗಿಕ ಜೀವನ ನಡೆಸುವುದಕ್ಕೆ ಸಾಕಷ್ಟು ಮಾಹಿತಿ ಮತ್ತು ಸಿದ್ಧತೆಗಳು ಬೇಕಾಗುತ್ತದೆ. ಮೂರನೆಯದಾಗಿ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಲೈಂಗಿಕತೆಯನ್ನು ಕೀಳಾಗಿ ನೋಡುತ್ತಾ ಬಂದಿರುವುದರಿಂದ ಹೆಚ್ಚಿನ ಮಹಿಳೆಯರು ತಮ್ಮ ಅಗತ್ಯಗಳನ್ನು ಒಪ್ಪಿಕೊಂಡು ವ್ಯಕ್ತಪಡಿಸುವುದಿರಲಿ, ಅದನ್ನು ಗುರುತಿಸುವುದನ್ನೂ ಮರೆತುಬಿಟ್ಟಿದ್ದಾರೆ. ಇದರಿಂದ ಕೇವಲ ಮಹಿಳೆಯರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವಂತಿಲ್ಲ. ಸಮಾನತೆಯ ವಾತಾವರಣದಲ್ಲಿ ಸಂಗಾತಿಯಿಂದ ಪಡೆಯಬಹುದಾದ ಸಂಪೂರ್ಣ ಲೈಂಗಿಕ ಸುಖದಿಂದ ಪುರುಷನೂ ಕೂಡ ವಂಚಿತನಾಗಿ ಅತೃಪ್ತನಾಗಿಯೇ ಉಳಿದಿದ್ದಾನೆ. ‘ಶಯನೇಷು ವೇಶ್ಯಾ……’ ಎನ್ನುವ ಮಾತಿನಲ್ಲಿಯೇ ದಾಂಪತ್ಯವನ್ನು ಮತ್ತು ಲೈಂಗಿಕತೆಯನ್ನು ಕೀಳಗೈಯಲಾಗಿದೆ.

ADVERTISEMENT

ಇನ್ನು ನಿಮ್ಮ ವಿಚಾರಕ್ಕೆ ಬರೋಣ. ಪ್ರಶ್ನೆಯಲ್ಲಿ ವಾಸ್ತವಾಂಶದ ಜೊತೆಗೆ ಆಳವಾದ ಬೇಸರ ಅಸಹಾಯಕತೆಗಳಿವೆ. ಪರಪುರುಷನ ಜೊತೆ ಸಿಗಬಹುದಾದ ಲೈಂಗಿಕ ಸುಖವನ್ನು ದಾಂಪತ್ಯದಲ್ಲಿ ಹುಡುಕ ಬೇಕಾದರೆ ಗಂಡ ಹೆಂಡತಿಯರ ಸಂಬಂಧ ಪ್ರೇಮಿಗಳ ನಡುವಿನ ಸಂಬಂಧದಷ್ಟು ಮುಕ್ತವಾಗಬೇಕಲ್ಲವೇ? ದಾಂಪತ್ಯದ ಸೌಹಾರ್ದತೆ ಎಂದರೆ ಭಿನ್ನಾಭಿಪ್ರಾಯ ಇಲ್ಲದ ಸ್ಥಿತಿಯಲ್ಲ. ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಚರ್ಚೆಮಾಡಿ ಪರಿಹರಿಸಿಕೊಳ್ಳಬೇಕಾಗುತ್ತದೆ. ಇದು ಒಮ್ಮೆ ನಡೆಯುವ ಕ್ರಿಯೆಯಲ್ಲ. ದಿನನಿತ್ಯ ನಡೆಯಬೇಕಾದ ಪ್ರಕ್ರಿಯೆ. ಪ್ರಶ್ನೆಯಲ್ಲಿ ನಿಮ್ಮ ದಾಂಪತ್ಯದ ಕುರಿತಾಗಿ ಯಾವುದೇ ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ಮೊದಲು ಯೋಚಿಸಿ. ನಿಮ್ಮ ಲೈಂಗಿಕ ಅಗತ್ಯಗಳು, ಆಯ್ಕೆಗಳು, ರುಚಿ ರೀತಿ ನೀತಿ ಎಲ್ಲದರ ಕುರಿತಾಗಿ ಮೊದಲು ನೀವೇ ಯೋಚಿಸಿ. ನಿಮಗೆ ಬೇಕಾಗಿರುವುದೇನು, ಎಂತಹ ಸ್ಪರ್ಶ ಹಿತಕರ, ಎಂತಹ ವಾತಾವರಣ ನಿಮ್ಮನ್ನು ಉದ್ರೇಕಿಸುತ್ತದೆ, ಎಂತಹ ಅನುಭವ ಸಂಪೂರ್ಣ ತೃಪ್ತಿ ನೀಡುತ್ತದೆ ಮುಂತಾದವುಗಳನ್ನು ಅರ್ಥಮಾಡಿಕೊಂಡು ಪತಿಯ ಜೊತೆ ನೀವು ಚರ್ಚೆಮಾಡಬೇಕಾಗುತ್ತದೆ.

ಇಲ್ಲಿ ಬಹಳಷ್ಟು ಮಹಿಳೆಯರು ಕಷ್ಟಪಡುತ್ತಾರೆ. ಪುರುಷಪ್ರಧಾನ ಸಮಾಜ ಮಹಿಳೆ ತನ್ನ ಲೈಂಗಿಕ ಆಯ್ಕೆಗಳ ಕುರಿತು ಮಾತನಾಡುವುದನ್ನು ಕೀಳಾಗಿ ನೋಡುತ್ತದೆ. ಹಾಗಾಗಿ ಮೊದಲು ಪತಿಯ ಬಳಿ ನನಗೆ ಸಂಪೂರ್ಣ ಸುಖವನ್ನು ನಿಮ್ಮಿಂದಲೇ ಪಡೆಯುವ ಉದ್ದೇಶವಿದೆ ಎಂದು ಹೇಳಿ. ನಂತರ ನಮ್ಮಿಬ್ಬರ ಸಂಬಂಧ ಹೀಗಿದ್ದರೆ ಇಬ್ಬರೂ ಹೆಚ್ಚು ಆನಂದಿಸಬಹುದು ಎಂದು ಮನವರಿಕೆ ಮಾಡಿಸಿ. ಜೊತೆಗೆ ಅವರ ಆಯ್ಕೆಗಳನ್ನು ಹೇಳಲು ಉತ್ತೇಜಿಸಿ.

ಇಲ್ಲಿ ಇಬ್ಬರೂ ನೆನಪಿಡಬೇಕಾದ ಒಂದು ಪ್ರಮುಖ ಅಂಶವೆಂದರೆ ಲೈಂಗಿಕ ಆಯ್ಕೆಗಳಲ್ಲಿ ಮೇಲು ಕೀಳುಗಳಿಲ್ಲ. ಇಬ್ಬರಿಗೂ ಆನಂದ ಕೊಡುವುದಾದರೆ ಎಲ್ಲವೂ ಸಮ್ಮತವೇ. ಹಾಗಾಗಿ ಸಂಗಾತಿಯ ಆಯ್ಕೆಗೆ ಒಪ್ಪಿಗೆ ಇಲ್ಲದಿದ್ದರೆ ತೊಂದರೆಯೇನಿಲ್ಲ. ಆದರೆ ಅದನ್ನು ಕೀಳಾಗಿ ನೋಡಬಾರದು. ಇಬ್ಬರಿಗೂ ಒಪ್ಪಿಗೆಯಾಗುವ ಆಯ್ಕೆಗಳನ್ನು ಮಾಡಿಕೊಳ್ಳುತ್ತಾ ಹೋದಾಗ ಲೈಂಗಿಕತೆ ಸಂಬಂಧಕ್ಕೆ ಹೊಸ ಸ್ವರೂಪವನ್ನು ಕೊಡುತ್ತದೆ.

ಕುತೂಹಲ, ಹುಡುಕಾಟ, ಹೊಸತನವನ್ನು ಕಳೆದುಕೊಂಡಾಗ ಲೈಂಗಿಕತೆ ನಿರಾಸಕ್ತಿ ಮೂಡಿಸುವುದು ಸಹಜ. ಮಾನವರ ಲೈಂಗಿಕತೆಯಲ್ಲಿ ಕೇವಲ ಇಬ್ಬರ ದೇಹ ಸ್ಪಂದಿಸುತ್ತಿರುವುದಿಲ್ಲ. ಗಂಡು ಹೆಣ್ಣಿನ ಸಂಪೂರ್ಣ ವ್ಯಕ್ತಿತ್ವ ತೊಡಗಿಕೊಂಡಿರುತ್ತದೆ. ಹಾಗಾಗಿ ಇಬ್ಬರೂ ಸೇರಿ ತಮಗೆ ಮಾತ್ರ ಹೊಂದುವ ಸುಖ ಸಾಮ್ರಾಜ್ಯವನ್ನು ತಾವೇ ಕಟ್ಟಿಕೊಳ್ಳಬೇಕಾಗುತ್ತದೆ.

ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು.

-ವಸಂತ ನಡಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.