ADVERTISEMENT

Home Made Cooldrinks For Summer: ಬಿಸಿಲ ಧಗೆಗೆ ವಿಧವಿಧ ಪಾನೀಯ

ಸೌಗಂಧಿಕ ಚಂದ್ರು
Published 18 ಫೆಬ್ರುವರಿ 2023, 0:30 IST
Last Updated 18 ಫೆಬ್ರುವರಿ 2023, 0:30 IST
ದಾಸವಾಳ ಹೂವಿನ ಜ್ಯೂಸ್‌
ದಾಸವಾಳ ಹೂವಿನ ಜ್ಯೂಸ್‌   

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬಿಸಿಲಿನ ದಾಹಕ್ಕೆ ದೇಹ ಬಳಲುತ್ತದೆ. ಬಳಲಿಕೆ ಹೋಗಲಾಡಿಸಲು ಸಾಮಾನ್ಯವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ತಯಾರಿಸಿಕೊಳ್ಳ ಬಹುದಾದ, ಆರೋಗ್ಯಪೂರ್ಣ ವಿಶೇಷ ತಂಪು ಪಾನೀಯಗಳ ರೆಸಿಪಿಗಳನ್ನು ಪುತ್ತೂರಿನ ಸೌಗಂಧಿಕ ಚಂದ್ರು ಅವರು ಇಲ್ಲಿ ಪರಿಚಯಿಸಿದ್ದಾರೆ.

ದಾಸವಾಳದ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ADVERTISEMENT

ದಾಸವಾಳ – 25, ತುಳಸಿ –10 (ಚಿಗುರು) ತುದಿ, ದೊಡ್ಡಪತ್ರೆ – 5 ಎಲೆಗಳು, ಕಾಮಕಸ್ತೂರಿ – 5 (ಚಿಗುರು) ತುದಿ, ವೀಳ್ಯದೆಲೆ – 5 (ಚಿಗುರು) ತುದಿ, ಒಣಶುಂಠಿ 10 ಗ್ರಾಂ, ಕಾಳುಮೆಣಸು– 50 ಗ್ರಾಂ, ಬೆಲ್ಲ –ಅರ್ಧ ಕೆಜಿ
ನಿಂಬೆ ಹಣ್ಣು – ರುಚಿಗೆ ತಕ್ಕಷ್ಟು, ಜೇನು ತುಪ್ಪ – 100 ಮಿಲಿ ಲೀಟರ್, ಕಚೂರ ಗಡ್ಡೆ – 5 ಗ್ರಾಂ

ಮಾಡುವ ವಿಧಾನ: ಎರಡು ಲೀಟರ್‌ ನೀರಿಗೆ, ತುಳಸಿ, ದೊಡ್ಡಪತ್ರೆ, ಕಾಮಕಸ್ತೂರಿ ಚಿಗುರು, ಕಾಳುಮೆಣಸು, ಒಣಶುಂಠಿ ಹಾಕಿ ಕಾಲುಗಂಟೆ ಕುದಿಸಿ. ಕುದಿಯುವ ನೀರಿಗೆ ದಾಸವಾಳ ಹಾಕಿ. ಜೊತೆಗೆ ಬೆಲ್ಲ ಹಾಕಿ ಕರಗಿಸಿ. ನಂತರ ತಣ್ಣಾಗಿಸಿ. ತಂಪಾದ ನಂತರ, ಆ ಮಿಶ್ರಣಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ. ಈಗ ದಾಸವಾಳ ಜ್ಯೂಸ್ ಟಾನಿಕ್ ಸಿದ್ಧವಾಯಿತು. ಇದನ್ನು ನಿಮಗೆ ಎಷ್ಟು ಬೇಕೋ ಅಷ್ಟು ನೀರಿಗೆ ಬೆರೆಸಿಕೊಂಡು, ಮೇಲೆ ಸ್ವಲ್ಪ ಜೇನುತುಪ್ಪ, ರುಚಿಗೆ ತಕ್ಕಷ್ಟು ನಿಂಬೆಹಣ್ಣಿನ ರಸ ಬೆರೆಸಿಕೊಂಡರೆ ಆರೋಗ್ಯಪೂರ್ಣ ದಾಸವಾಳದ ತಂಪು ಪಾನೀಯ ಕುಡಿಯಲು ಸಿದ್ಧ.

ಉಪಯೋಗ : ಬಿಸಿಲಿನ ದಾಹ ನೀಗಿಸುವ ತಂಪು ಪಾನೀಯ ಇದು. ಅಷ್ಟೇ ಅಲ್ಲ, ಶೀತ, ತಲೆನೋವು ಮತ್ತು ಗಂಟಲ ಕೆರೆತ ನಿವಾರಣೆಗೆ ಔಷಧಿಯೂ ಹೌದು. ನಿಂಬೆಯ ರಸ ಬೆರೆಸುವುದರಿಂದ, ಬಿರುಬಿಸಿಲಿದ್ದಾಗಲೂ ಕುಡಿಯಲು ಬಹಳ ಹಿತವೆನಿಸುತ್ತದೆ. ಯಾವುದೇ ರಾಸಾಯನಿಕ ಬೆರೆಸದೆ ಇರುವುದರಿಂದ ಫ್ರಿಜ್ಜಿನೊಳಗೆ ಕೆಲ ದಿನಗಳವರೆಗೆ ಕೆಡದಂತೆ ಇಡಬಹುದು.


ಗಾಂಧಾರಿ–ಲೆಮೆನ್ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು

ಗಾಂಧಾರಿ ಮೆಣಸು - 50 ಗ್ರಾಂ, ಸಕ್ಕರೆ– ಅರ್ಧ ಕೆಜಿ, ನೀರು – ಎರಡು ಲೀಟರ್.

ಮಾಡುವ ವಿಧಾನ: ಸಕ್ಕರೆಯನ್ನು ಎರಡು ಲೀಟರ್ ನೀರು ಬೆರೆಸಿ ಕುದಿಸಿ ಸಕ್ಕರೆಯ ದ್ರಾವಣ ಮಾಡಿಕೊಳ್ಳಿ. ದ್ರಾವಣ ಸಿದ್ಧವಾದ ಬಳಿಕ, 50 ಗ್ರಾಂ ಗಾಂಧಾರಿ ಮೆಣಸಿನಕಾಯಿಯನ್ನು ಒಮ್ಮೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ (ಮಿಕ್ಸಿ ಒಂದೆರಡು ಸುತ್ತು ತಿರುಗಿದರೆ ಸಾಕು).

ನಂತರ ಆ ಕುದಿಯುತ್ತಿರುವ ಸಕ್ಕರೆ ದ್ರಾವಣಕ್ಕೆ ಪೇಸ್ಟ್‌ ಬೆರೆಸಿ. ಚೆನ್ನಾಗಿ ಕುದಿಸಿ.

ಸುಮಾರು ಐದು ನಿಮಿಷ ಕುದಿಸಿದ ನಂತರ ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ, ಈ ದ್ರಾವಣ ದಿಂದ ಐವತ್ತು ಮಿಲಿ ಲೀಟರ್‌ನಷ್ಟನ್ನು ತೆಗೆದುಕೊಳ್ಳಿ (ಇದು ಒಂದು ಗ್ಲಾಸ್ ಜ್ಯೂಸ್ ತಯಾರಿಸಲು ಸಾಕು). ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಒಂದು ಲಿಂಬೆ ಹಣ್ಣಿನ ರಸವನ್ನು ಬೆರೆಸಿ.

ನಂತರ ಬೇಕಾಗುವಷ್ಟು ನೀರನ್ನು ಹಾಕಿಕೊಳ್ಳಿ ಅಥವಾ ಸೋಡವನ್ನು ಬೆರೆಸಬಹುದು ಅದು ನಿಮ್ಮ ಆಯ್ಕೆ. ಈಗ ಸ್ಪೈಸಿ ಗಾಂಧಾರಿ ಲೆಮನ್ ಸೋಡಾ ರಾಕೆಟ್ ಜ್ಯೂಸ್ ರೆಡಿ.


ಫ್ಯಾಷನ್‌ ಫ್ರೂಟ್‌ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು

ಫ್ಯಾಷನ್‌ಫ್ರೂಟ್‌ – 50 ಹಣ್ಣುಗಳು. ನೀರು– 2 ಲೀಟರ್‌, ಸಕ್ಕರೆ – ಅರ್ಧ ಕೆ.ಜಿ

ಮಾಡುವ ವಿಧಾನ: ಎಲ್ಲ ಫ್ಯಾಷನ್‌ ಫ್ರೂಟ್‌ ಹಣ್ಣುಗಳನ್ನು ಕತ್ತರಿಸಿ, ಅದರಿಂದ ರಸವನ್ನು ತೆಗೆದು ಒಂದು ಕಡೆ ಸಂಗ್ರಹಿಸಿಟ್ಟು ಕೊಳ್ಳಬೇಕು. ಇದಕ್ಕೂ ಮೊದಲು 2 ಲೀಟರ್ ನೀರಿನಲ್ಲಿ ಅರ್ಧ ಕೆ.ಜಿ ಸಕ್ಕರೆಯನ್ನು ಸೇರಿಸಿ, ಕುದಿಸಿ ದ್ರಾವಣ ಸಿದ್ಧ ಮಾಡಿಟ್ಟುಕೊಳ್ಳಬೇಕು. ಈ ದ್ರಾವಣಕ್ಕೆ ಮೊದಲೇ ತಯಾರಿಸಿಟ್ಟುಕೊಂಡ ಹಣ್ಣಿನ ರಸವನ್ನು ಬೆರೆಸಬೇಕು. ಮತ್ತೆ ಈ ದ್ರಾವಣವನ್ನು ಸುಮಾರು ಐದು ನಿಮಿಷ ಕುದಿಸಬೇಕು.

ಒಂದು ವಿಷಯ ಗಮನಿಸಬೇಕು; ಫ್ಯಾಷನ್‌ಫ್ರೂಟ್‌ನಲ್ಲಿ ಸಕ್ಕರೆ ಪ್ರಮಾಣ ಇರುವುದರಿಂದ, ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ನಂತರ ತಣ್ಣಗಾಗಿಸಬೇಕು. ದ್ರಾವಣ ಸಂಪೂರ್ಣ ತಣ್ಣಗಾದ ನಂತರ ಗಾಜಿನ ಶೀಶೆಗಳಲ್ಲಿ ತುಂಬಿಸಿಟ್ಟು ಕೊಳ್ಳಬೇಕು. ಫ್ಯಾಷನ್‌ಫ್ರೂಟ್ ಜ್ಯೂಸ್ ಕುಡಿಯಬೇಕೆನಿಸಿದಾಗ, ಈ ಶೀಶೆಯಲ್ಲಿರುವ ದ್ರಾವಣವನ್ನು 50 ಎಂಎಲ್ ತೆಗೆದುಕೊಂಡು, ಒಂದು ಲೋಟ ನೀರಿಗೆ ಬೆರೆಸಿಕೊಂಡು, ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಜ್ಯೂಸ್ ಮಾಡಿಕೊಂಡು ಸೇವಿಸಬಹುದು. ಸೋಡಾ ಅಭ್ಯಾಸವಿರುವವರು, ನೀರಿನ ಬದಲು ಸೋಡಾ ಬೆರೆಸಿಕೊಳ್ಳಬಹುದು. ಬಿಸಿಲಿನ ಬೇಗೆಯ ಸಮಯದಲ್ಲಿ ಇದು ಉತ್ತಮ ಪಾನೀಯ.

ಇದಕ್ಕೆ ಯಾವುದೇ ರಾಸಾಯನಿಕಗಳನ್ನು ಬೆರೆಸದ ಕಾರಣ ಕೆಲ ದಿನಗಳ ಕಾಲ ಫ್ರಿಜ್‌ನಲ್ಲಿಟ್ಟು ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.