
ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವು ಈ ಆಧುನಿಕ ಜೀವನಶೈಲಿಯ ಅಭ್ಯಾಸಗಳು, ಶಾರೀರಿಕ ಸ್ಥಿತಿ, ವಾತಾವರಣ ಪರಿಣಾಮಗಳ ಜೊತೆ ಸಂಕೀರ್ಣ ಸಂಬಂಧವನ್ನು ಹೊಂದಿದೆ. ಇಂದಿನ ಆಧುನಿಕ ನಗರ ನಿವಾಸಿಗಳಲ್ಲಿ ಹೆಚ್ಚಿನ ಒತ್ತಡ, ಕಳಪೆ ಪೌಷ್ಟಿಕಾಂಶ, ದೈಹಿಕ ಚಟುವಟಿಕೆ ಕೊರತೆ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ, ಅಧಿಕ ತೂಕ ಇವು ಸಾಮಾನ್ಯ ಜೀವನಶೈಲಿಯಾಗಿವೆ. ಆದರೆ ಈ ಅಂಶಗಳು ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
ನಿರಂತರ ಒತ್ತಡ ಮತ್ತು ನಿದ್ರಾಹೀನತೆ: ಒತ್ತಡವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರಿಂದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೋನ್ ಮಟ್ಟದಲ್ಲೂ ಏರುಪೇರು ಉಂಟಾಗುತ್ತದೆ. ನಿದ್ರಾಹೀನತೆ, ಪದೇ ಪದೇ ಬದಲಾಗುವ ಉದ್ಯೋಗದ ಸಮಯ ಐಟಿ/ಬಿಪಿಒ ಉದ್ಯೋಗಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದರಿಂದ ಸಂತಾನೋತ್ಪತ್ತಿ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಸರ್‍ಕ್ಯಾಡಿಯನ್ ರಿಥಮ್ ಮೇಲೆ ಪರಿಣಾಮ ಬೀರುತ್ತವೆ.
ಕಳಪೆ ಪೌಷ್ಟಿಕಾಂಶ, ಧೂಮಪಾನ ಮತ್ತು ಮದ್ಯಪಾನ: ಕಬ್ಬಿಣಾಂಶ, ಫೊಲೆಟ್, ಆರೋಗ್ಯಕರ ಕೊಬ್ಬಿನಾಂಶ ಮತ್ತು ಪ್ರೊಟೀನ್ ಕೊರತೆಯು ಅಂಡೋತ್ಪತ್ತಿ ಮತ್ತು ಮುಟ್ಟಿನ ಕ್ರಮಬದ್ಧತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ನೇರ ಅಥವಾ ಪರೋಕ್ಷವಾಗಿ ಧೂಮಪಾನ ಮಾಡುವುದರಿಂದ ಅಂಡಾಶಯದ ವಯಸ್ಸು ಹೆಚ್ಚಿಸುತ್ತದೆ. ಇದರಿಂದ ಫಲವತ್ತತೆ ಕಡಿಮೆಯಾಗಿ ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮದ್ಯಪಾನ ಕೂಡ ಹಾರ್ಮೋನ್ ನಿಯಂತ್ರಣದ ಮೇಲೆ ಪರಿಣಾಮ ಬೀರಿ ಅಂಡಾಶಯದ ಗುಣಮಟ್ಟವನ್ನು ತಗ್ಗಿಸುತ್ತದೆ.
ಇದೇ ರೀತಿ ಬೊಜ್ಜು, ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳದೇ ಇರುವುದು, ಇನ್ಸುಲಿನ್ ಪ್ರತಿರೋಧ ಇವು ಅಂಡೋತ್ಪತ್ತಿ ಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಪಿಸಿಒಎಸ್ ಮತ್ತು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತವೆ. ಅಧಿಕ ಕೆಫೆನ್ , ಚಾಕೊಲೆಟ್, ಮದ್ಯಪಾನದಿಂದ ಅಧಿಕ ರಕ್ತಸ್ರಾವ , ಹೆಚ್ಚಿನ ನೋವಿನ ಋತುಸ್ರಾವದ ಸಾಧ್ಯತೆ ಹೆಚ್ಚುತ್ತದೆ.
ಪರಿಸರ ಮಾಲಿನ್ಯ ವಿಷಕಾರಿ ಅಂಶಗಳು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುವುದೇ?
ಪರಿಸರದಲ್ಲಿನ ವಿಷಕಾರಿ ಅಂಶಗಳು ಎಂಡೊಕ್ರಿನ್ ವ್ಯವಸ್ಥೆಯನ್ನು ಅಡ್ಡಿಪಡಿಸಿ ಅಂಡಾಶಯ ಮತ್ತು ಅಂಡಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಇದು ಬಂಜೆತನ, ಎಂಡೊಮೆಟ್ರಿಯೊಸಿಸ್, ಪಿಸಿಒಎಸ್, ಮುಂಚಿತ ಋತುಬಂಧ ಮತ್ತು ಗರ್ಭಾವಸ್ಥೆಯ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಪ್ಲಾಸ್ಟಿಕ್ ಆಹಾರ ಕಂಟೇನರ್, ಆಹಾರ ಪ್ಯಾಕೇಜ್‌ಗಳು, ಪೆಸ್ಟಿಸೈಡ್‌ಗಳ ಬಳಕೆ, ಕಲುಷಿತ ಗಾಳಿ ಮತ್ತು ನೀರು, ಕೆಲವು ಕಾಸ್ಮೆಟಿಕ್ಸ್ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಉದ್ಯೋಗಸ್ಥ ಮಹಿಳೆಯರಿಗೆ ವೈದ್ಯರ ಸಲಹೆ ಏನು?
ಕಬ್ಬಿಣಾಂಶ, ಕ್ಯಾಲ್ಶಿಯಮ್, ಫೊಲೆಟ್, ಒಮೆಗಾ -3, ಧಾನ್ಯಗಳು, ಹಣ್ಣು, ತರಕಾರಿ, ಆರೋಗ್ಯಕರ ಕೊಬ್ಬಿನಾಂಶದ ಮಿಶ್ರಣವಿರುವ ಸಮತೋಲಿತ ಆಹಾರ ಸೇವಿಸುವುದು ಮುಖ್ಯ. ನಿತ್ಯ ವ್ಯಾಯಾಮ ಉತ್ತಮ, ದಿನದ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ, 7-9 ಗಂಟೆಗಳ ಉತ್ತಮ ನಿದ್ದೆ ಪಡೆಯಿರಿ.
ಸದ್ಯದ ಪರಿಸ್ಥಿತಿಯಲ್ಲಿ ಒತ್ತಡ ಕಡಿಮೆ ಮಾಡುವುದು ಮತ್ತು ನಿಯಂತ್ರಿಸುವುದು ಕಷ್ಟದ ಕೆಲಸವೇ. ಹೀಗಾಗಿ ಒತ್ತಡ ಕಡಿಮೆ ಮಾಡುವ ಅಭ್ಯಾಸಗಳಾದ ಯೋಗ, ಧ್ಯಾನ ಮತ್ತು ದೀರ್ಘ ಉಸಿರಾಟದ ಕಲೆಯನ್ನು ರೂಢಿಸಿಕೊಳ್ಳಿ. ಕೆಲಸದ ದಿನಗಳ ಮಧ್ಯೆ ಒಂದು ಸಣ್ಣ ವಿರಾಮ ತೆಗೆದುಕೊಳ್ಳಿ, ಉದ್ಯೋಗ ಮತ್ತು ವೈಯಕ್ತಿಕ ಸಮಯದ ನಡುವೆ ಸಮತೋಲನ ಕಾಯ್ದುಕೊಳ್ಳಿ.
ಪ್ಲಾಸ್ಟಿಕ್ ಬಳಕೆ ತಗ್ಗಿಸಿ ಬಿಸಿ ಆಹಾರಗಳಿಗೆ ಗ್ಲಾಸ್ ಅಥವಾ ಸ್ಟೇನ್‌ಲೆಸ್ ಸ್ಟೀಲ್‌ಗಳ ಬಳಕೆ ಮಾಡಿ. ಪಾರಾಬೆನ್ (paraben) ಮತ್ತು ಥಾಲೆಟ್ (Phathalate) ಮುಕ್ತ ಸುರಕ್ಷಿತ ಕಾಸ್ಮೆಟಿಕ್‌ಗಳ ಬಳಕೆ ಇರಲಿ. ಬಳಕೆಗೂ ಮೊದಲು ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುವುದರಿಂದ ಪೆಸ್ಟಿಸೈಡ್ ಮತ್ತು ಇತರೆ ಕೆಮಿಕಲ್ಸ್‌ಗಳು ದೇಹ ಸೇರುವುದನ್ನು ತಪ್ಪಿಸಬಹುದು.
ಪ್ರತಿಯೊಬ್ಬ ಮಹಿಳೆಯರೂ ತಮ್ಮ ಋತುಸ್ರಾವದ ದಿನಗಳನ್ನು ಟ್ಯ್ರಾಕ್ ಮಾಡಬೇಕು. ನಿರಂತರ ನೋವು , ಅನಿಯಮಿತ ರಕ್ತಸ್ರಾವ, ಅಸಹಜ ಲಕ್ಷಣಗಳು, ಕಂಡುಬಂದಲ್ಲಿ ಸ್ತ್ರೀರೋಗ ತಜ್ಞರ ಬಳಿ ತಪಾಸಣೆಗೆ ಒಳಗಾಗಿ, ಹಲವು ಸಮಸ್ಯೆಗಳು ಆರಂಭದಲ್ಲೇ ಪತ್ತೆಯಾದಾಗ ಬೇಗ ಗುಣಪಡಿಸಬಹುದಾಗಿದೆ. ಸ್ವಂತ ಆರೋಗ್ಯದ ಬಗ್ಗೆ ಗಮಹರಿಸುವುದು ಲಕ್ಷುರಿಯಲ್ಲ, ಆರೋಗ್ಯ ಸಮಸ್ಯೆಯನ್ನು ತಡೆಯುವುದಾಗಿದೆ.
(ಲೇಖಕರು: ಡಾ. ದೀಪಕ್ ಶೆಡ್ಡೆ, ಕನ್ಸಲ್ಟೆಂಟ್ ಒಬಿಜಿ, ಕೆಎಂಸಿ ಆಸ್ಪತ್ರೆ ಮಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.