ADVERTISEMENT

ಋತುಚಕ್ರದಲ್ಲಿ ಆಹಾರದ ಪ್ರಾಮುಖ್ಯತೆ: ಆರೋಗ್ಯಕರ ಚಕ್ರಕ್ಕೆ ಸಹಕಾರಿಯಾದ ಆಹಾರಗಳಿವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 12:27 IST
Last Updated 1 ಡಿಸೆಂಬರ್ 2025, 12:27 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಋತುಚಕ್ರದ ಸಮಯದಲ್ಲಿ ಮಹಿಳೆಯರು ಸೇವಿಸುವ ಆಹಾರ ಅವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ವೇಳೆ ಹೊಟ್ಟೆ ನೋವು, ಹೊಟ್ಟೆಯ ಉಬ್ಬರ, ಮೂಡ್ ಸ್ವಿಂಗ್‌ ಹಾಗೂ ದಣಿವು ಸೇರಿದಂತೆ ಹಲವು ತೊಂದರೆಗಳು ಉಂಟಾಗಬಹುದು.‌ ಈ ಸಂದರ್ಭದಲ್ಲಿ ಸೂಕ್ತ ಆಹಾರ ಸೇವಿಸಬೇಕು. ಹಾಗಾಗಿ ಋತುಚಕ್ರದ ಸಮಯದಲ್ಲಿ ಯಾವ ಆಹಾರವನ್ನು ತಿನ್ನಬೇಕು, ಯಾವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿಯೋಣ.

ಬಿಸಿ ಅಥವಾ ಮನೆ ಆಹಾರ ಮಾತ್ರ ಸೇವಿಸುವುದು: 

ADVERTISEMENT

ಮುಟ್ಟಿನ ಸಮಯದಲ್ಲಿ ದೇಹಕ್ಕೆ ಸ್ವಾಭಾವಿಕ ಬಿಸಿ ಮತ್ತು ಆರಾಮ ಬೇಕೆನಿಸುತ್ತದೆ. ಬಿಸಿ ಆಹಾರ ಸೇವಿಸುವುದರಿಂದ ದೇಹಕ್ಕೆ ಹಿತ ಎನಿಸುತ್ತದೆ. ಬಿಸಿ ಆಹಾರ ಸೇವನೆಯಿಂದ ಹೊಟ್ಟೆಯ ಸ್ನಾಯುಗಳು ಆರಾಮವಾಗುತ್ತವೆ. ರಸಮ್- ಅನ್ನ, ಅನ್ನ–ಸಂಬಾರ್‌, ತರಕಾರಿ ಸಂಬಾರ್, ಉಪ್ಮಾ, ಖಿಚಡಿ, ಓಟ್ಸ್, ರೊಟ್ಟಿ ಹಾಗೂ ಸೂಪ್‌ಗಳಂತಹ ಮನೆಯಲ್ಲಿ ಮಾಡಿದ ತಾಜಾ ಬಿಸಿ ಆಹಾರ ಉತ್ತಮ ಆಯ್ಕೆಯಾಗಿದೆ.

ಕಬ್ಬಿಣ ಅಂಶ ಹೆಚ್ಚಿರುವ ಆಹಾರ ಸೇವನೆ: 

ಮುಟ್ಟಿನ ಸಮಯದಲ್ಲಿ ರಕ್ತದ ಮೂಲಕ ಕಬ್ಬಿಣ ಅಂಶ ಹೊರ ಹೋಗುತ್ತದೆ. ಅದನ್ನು ಆಹಾರದಿಂದ ಮರು ತುಂಬಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ದಣಿವು, ತಲೆ ಸುತ್ತು ಅಥವಾ ಬಲಹೀನತೆ ಹೆಚ್ಚಾಗಬಹುದು. ಆದ್ದರಿಂದ ಪಾಲಕ್, ಮೆಂತೆ ಸೊಪ್ಪು, ಬೀಟ್ರೂಟ್, ಖರ್ಜೂರ, ಒಣ ದ್ರಾಕ್ಷಿ, ಬೆಲ್ಲ, ಮೊಟ್ಟೆ, ಚಿಕನ್ ಹಾಗೂ ಮೀನು ಸೇವನೆ ಉತ್ತಮವಾಗಿದೆ. 

‘ಆಂಟಿ-ಇನ್‌ಫ್ಲಮೇಟರಿ’ ಆಹಾರ: 

ಮುಟ್ಟಿನ ಸಮಯದಲ್ಲಿ ಉತ್ಪತ್ತಿಯಾಗುವ ಗರ್ಭಾಶಯವನ್ನು ಹೊರ ಹಾಕಲು ಹೆಚ್ಚು ಬಲ ಬೇಕಾಗುತ್ತದೆ. ಇದು ದೇಹದಲ್ಲಿ ಉರಿಯೂತ ಅಥವಾ ನೋವನ್ನು ಹೆಚ್ಚಿಸುತ್ತದೆ. ಆದ್ದರಿಂದ ಉರಿಯೂತ ಕಡಿಮೆ ಮಾಡುವ ಕೆಲವು ಸಹಜ ಆಹಾರಗಳನ್ನು ಸೇವಿಸುವುದು ಉತ್ತಮ. ಅವುಗಳೆಂದರೆ, ಹಳದಿ ಹಾಲು, ಶುಂಠಿ ಚಹಾ, ಜೀರಿಗೆ, ಕುಂಬಳಕಾಯಿ, ಬಾಳೆಹಣ್ಣು, ಪಪ್ಪಾಯ, ದಾಳಿಂಬೆ ಹಾಗೂ ಮೊದಲಾದ ಹಣ್ಣುಗಳ ಸೇವನೆ ದೇಹದ ಉರಿಯೂತ ಕಡಿಮೆ ಮಾಡಿ ಸ್ನಾಯುಗಳ ನೋವನ್ನು ಕಡಿಮೆಗೊಳಿಸುತ್ತವೆ.

ನೀರು ಕುಡಿಯುವುದು ಬಹಳ ಮುಖ್ಯ: 

ಮುಟ್ಟಿನ ಸಮಯದಲ್ಲಿ ದೇಹದಿಂದ ಹೆಚ್ಚಿನ ನೀರು ಹೊರ ಹೋಗುತ್ತದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರು ಸೃಷ್ಟಿಯಾಗುತ್ತದೆ.  ಸಾಕಷ್ಟು ನೀರು ಕುಡಿಯುವುದರಿಂದ ಉಬ್ಬರವನ್ನು ಕಡಿಮೆ ಮಾಡಿ, ದೇಹವನ್ನು ಹಗುರವಾಗಿಸುತ್ತದೆ. ಬಿಸಿ ನೀರು ಹಾಗೂ ಎಳನೀರು ಕುಡಿಯುವುದು ಉತ್ತಮ.

ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂ: ಇವು ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಬಾಳೆಹಣ್ಣು, ಡಾರ್ಕ್ ಚಾಕೊಲೇಟ್ (70% ಕಾಕೋ ಮತ್ತು ಅದಕ್ಕಿಂತ ಹೆಚ್ಚು) ಅವೊಕಾಡೊ, ಬದಾಮ ಹಾಗೂ ಕಜೂ ಸೇವಿಸಬೇಕು. 

ಊಟ ತಪ್ಪಿಸಬೇಡಿ:  ಮುಟ್ಟಿನ ಸಮಯದಲ್ಲಿ ಊಟ ತಪ್ಪಿಸುವುದು ಸರಿಯಲ್ಲ. ಊಟ ತಪ್ಪಿಸುವುದರಿಂದ ಕೋಪ ಮತ್ತು ಚಡಪಡಿಕೆ ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಈ ವೇಳೆ ದಿನಕ್ಕೆ 4 ರಿಂದ 5 ಬಾರಿ ಮಿತ ಪ್ರಮಾಣದಲ್ಲಿ ಆಹಾರ ಸೇವಿಸುವುದು ಉತ್ತಮ.

ಯಾವ ಆಹಾರಗಳನ್ನು ಕಡಿಮೆ ಸೇವಿಸಬೇಕು?

ಬರ್ಗರ್, ಪಿಜ್ಜಾ, ಚಿಪ್ಸ್, ಕೇಕ್‌, ತಂಪು ಪಾನೀಯ, ಸಿಹಿ ಪಾನೀಯ, ಚಹಾ ಹಾಗೂ ಕಾಫಿ ಸೇವನೆ ಕಡಿಮೆ ಮಾಡಬೇಕು.

ಮುಟ್ಟಿನ ಸಮಯದಲ್ಲಿ ಆರೋಗ್ಯಕರವಾದ ಆಹಾರ ಸೇವನೆ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಪೋಷಕಾಂಶ ಭರಿತವಾದ ಆಹಾರ ಸೇವಿಸುವುದು ಆರೋಗ್ಯಕಾರವಾಗಿದೆ.

(ಡಾ. ಆಶಿತಾ ಎ. ವಿ. ಸಲಹೆಗಾರ - ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ರೇನ್ಬೋ ಮಕ್ಕಳ ಆಸ್ಪತ್ರೆ, ಮಾರತ್ತಹಳ್ಳಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.