ADVERTISEMENT

ಮಕ್ಕಳಿಗೆ ಕಿರಿಕಿರಿ ಉಂಟುಮಾಡುವ ಜಂತು ಹುಳುಗಳ ಬಗ್ಗೆ ಇರಲಿ ಎಚ್ಚರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 11:24 IST
Last Updated 10 ಫೆಬ್ರುವರಿ 2026, 11:24 IST
   

ಬೆಳೆಯುವ ಮಕ್ಕಳಲ್ಲಿ ಪೋಷಕಾಂಶದ ಕೊರತೆಯುಂಟುವಾಗುವಂತೆ ಮಾಡಿ, ಶಕ್ತಿಯನ್ನು ಕುಂದಿಸುವುದು ಜಂತು ಹುಳುಗಳು.

ಸಾಮಾನ್ಯವಾಗಿ  ಆರು ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತು ಹುಳುಗಳು, ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಹೋಗುವಂತಹ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದೂ ಇದೇ ಕಾರಣಕ್ಕೆ.

ಜಂತು ಹುಳುಗಳ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆ.

ADVERTISEMENT

ಜಂತು ಹುಳುಗಳಾಗಲು ಮುಖ್ಯ ಕಾರಣಗಳೆಂದರೆ...

  • ಜಂತುಹುಳುವಿಗೆ ಮುಖ್ಯ ಕಾರಣ ಅಶುದ್ಧತೆ. ಮಕ್ಕಳು ಮಣ್ಣು, ನೀರಿನಲ್ಲಿ ಆಟವಾಡುವುದು ಹೆಚ್ಚು. ಆಟವಾಡಿ, ಕೈ ಬಾಯಿ ತೊಳೆಯದೆ ಆಹಾರ ಸೇವಿಸುತ್ತಾರೆ. ಆ ಮೂಲಕ ಅವುಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ‌

  • ಕೆಲಮೊಮ್ಮೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೂ ಜಂತುಹುಳುಗಳು ದೇಹವನ್ನು ಸೇರುತ್ತವೆ. ಚಪ್ಪಲಿ ಧರಿಸದೆ ಇದ್ದಾಗ ಕಾಲನ್ನು ಕಚ್ಚಿ ಆ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ.

  • ಕುಡಿಯುವ ನೀರು ಶುದ್ಧವಾಗಿ ಇಲ್ಲದಿದ್ದರೆ, ಶುಚಿಯಾದ ಆಹಾರ ಸೇವನೆ ಮಾಡದಿದ್ದರೆ ಅಥವಾ ಮಾಂಸಹಾರಿಗಳಾಗಿದ್ದರೆ ಅರೆಬೆಂದ ಮಾಂಸವನ್ನು ತಿನ್ನುವುದರಿಂದಲೂ ಜಂತುಹುಳುಗಳು ಕಾಡುತ್ತವೆ.

ಹೀಗೆ ನಿಭಾಯಿಸಿ

  • ಸಾಧ್ಯವಾದಷ್ಟು ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನೆಲಕ್ಕೆ ಬಿದ್ದ ಆಹಾರವನ್ನು ಅಥವಾ ಹಳಸಿದ, ಫ್ರಿಡ್ಜ್‌ನಲ್ಲಿಟ್ಟ ಆಹಾರವನ್ನು ಮಕ್ಕಳಿಗೆ ನೀಡಬೇಡಿ.

  • ಜಂಕ್‌ಫುಡ್‌, ಹೊರಗಿನ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಇದರಿಂದ ಹೊಟ್ಟೆಯಲ್ಲಿ ಜಂತು ಹುಳುಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.

  • ಮಕ್ಕಳಲ್ಲಿ ಗುದದ್ವಾರ ಜಾಗ ಸ್ಚಚ್ಛವಾಗಿರುವಂತೆ ನೋಡಿಕೊಳ್ಳಿ. ಮಲ, ಮೂತ್ರ ವಿಸರ್ಜನೆ ಬಳಿಕ ಬಿಸಿ ನೀರಿನಿಂದ ಶುಚಿಗೊಳಿಸಲು ಮರೆಯದಿರಿ.

  • ಆಟವಾಡಿ ಬಂದ ಮೇಲೆ ಮಕ್ಕಳ ಕೈ ಕಾಲುಗಳನ್ನು ಸ್ವಚ್ಛಗೊಳಿಸಿದ ಬಳಿಕವೇ ಆಹಾರ ನೀಡಿ.

  • ಆಗಾಗ ಸೋರೆಕಾಯಿ ಅಥವಾ ಹಾಗಲಕಾಯಿ ಜ್ಯೂಸ್‌ ನೀಡುತ್ತಿರಿ. ಇದರಿಂದ ರಕ್ತವೂ ಶುದ್ಧವಾಗುತ್ತದೆ, ಜಂತು ಹುಳುಗಳ ಸಮಸ್ಯೆಯೂ ಕಾಡದು. ಆದರೆ ನೆನಪಿಡಿ ಮಕ್ಕಳಿಗೆ 2 ಅಥವಾ 3 ಎಂ.ಎಲ್‌ನಷ್ಟು ಮಾತ್ರ ನೀಡಿ.

ಮುಖ್ಯವಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಜಂತು ಹುಳುಗಳ ಸಮಸ್ಯೆ ಕಾಡುತ್ತದೆ. ಉಗುರುಗಳ ಮೂಲಕ ಕೊಳೆ ಹೊಟ್ಟೆ ಸೇರಿ ಜಂತು ಹುಳುಗಳಾಗುವಂತೆ ಮಾಡುತ್ತದೆ. ದೊಡ್ಡವರಿಗೂ ಜಂತು ಹುಳು ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಸ್ಚಚ್ಛತೆಯೇ ಸೂತ್ರವಾಗಿದೆ.
ಡಾ. ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.