ADVERTISEMENT

ಜಂಕ್‌ ಫುಡ್‌ ಹೋಯ್ತು; ಆರೋಗ್ಯಕರ ತಿನಿಸು ಬಂತು!

ಸುಧಾ ಹೆಗಡೆ
Published 25 ಆಗಸ್ಟ್ 2020, 19:30 IST
Last Updated 25 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಸ್ನೇಹಿತೆಗೆ ಫೋನ್‌ ಮಾಡಿದಾಗಲೆಲ್ಲ ಆಕೆಯದು ಒಂದೇ ದೂರು, ‘ಈ ಕೋವಿಡ್‌–19 ಯಾಕಾದರೂ ಶುರುವಾಯಿತೋ! ಮನೆಯಲ್ಲೇ ಇರುವ ಗಂಡ, ಮಕ್ಕಳಿಗೆ ತಿಂಡಿ ಒದಗಿಸಿ ಸಾಕಾಯಿತು. ಎಷ್ಟು ಹೊತ್ತು ಕಿಚನ್‌ನಲ್ಲೇ ಗ್ಯಾಸ್‌ ಮುಂದೆ ನಿಲ್ಲಬೇಕು? ಮಳೆ, ಚಳಿ ಎಂದೆಲ್ಲ ಬಿಸಿ ಬಿಸಿ ತಿಂಡಿ ಪೂರೈಸಬೇಕು. ಎಣ್ಣೆಯಲ್ಲಿ ಕರಿದರೆ ಆರೋಗ್ಯ ಕೆಡುತ್ತೆ ಅಂತ ಹೆಲ್ದಿ ತಿಂಡಿಯನ್ನೇ ಮಾಡಬೇಕು’.

ಮನೆಯಿಂದಲೇ ಕಚೇರಿ ಕೆಲಸ ಮಾಡುವ ಪುಟ್ಟ ಮಕ್ಕಳ ತಾಯಂದಿರಿಗಂತೂ ಮಕ್ಕಳ ಹಸಿವನ್ನು ತಣಿಸಲು ಆನ್‌ಲೈನ್‌ನಲ್ಲಿ ‘ಹೆಲ್ದಿ ಫುಡ್ಸ್‌’, ‘ಹೆಲ್ದಿ ಸ್ನ್ಯಾಕ್ಸ್‌’ ವಿಭಾಗವನ್ನು ಹುಡುಕುವ ಕೆಲಸ. ಜೊತೆಗೆ ಅದರಲ್ಲಿರುವ ಸಾಮಗ್ರಿಗಳ ಮೇಲೆ ಕಣ್ಣಾಡಿಸಿ, ಟ್ರಾನ್ಸ್‌ಫ್ಯಾಟ್‌ ಅಂಶ, ಬಳಸಿದ ಖಾದ್ಯ ತೈಲ, ಸಕ್ಕರೆ ಪ್ರಮಾಣ... ಹೀಗೆ ಎಲ್ಲವನ್ನೂ ತಪಾಸಣೆ ಮಾಡಿ ಆರ್ಡರ್‌ ಮಾಡಬೇಕು.

ಜಂಕ್‌ ಫುಡ್‌ಗೆ ಬೈ

ADVERTISEMENT

ಇದು ಕೊರೊನಾ ಕಾಲದ ಮತ್ತೊಂದು ಮಹತ್ವದ ಬದಲಾವಣೆ ಎನ್ನಬಹುದು. ಕೇವಲ ಆರು ತಿಂಗಳ ಹಿಂದೆ ಫುಡ್‌ ಜಾಯಿಂಟ್‌, ಹೋಟೆಲ್‌ ಮಾತ್ರವಲ್ಲ, ಬೀದಿ ಬದಿಯ ಗಾಡಿಗಳಲ್ಲಿ ಚಾಟ್ಸ್‌, ಪಿಜ್ಜಾ, ಬರ್ಗರ್‌, ನೂಡಲ್ಸ್‌, ಮಂಚೂರಿ ಎಂದು ಬಾಯಲ್ಲಿ ನೀರೂರಿಸಿಕೊಂಡು ತಿನ್ನುತ್ತಿದ್ದವರು ಅದನ್ನೆಲ್ಲ ಮರೆತುಬಿಟ್ಟಿದ್ದಾರೆ. ಹೊಸ ಜೀವನಶೈಲಿ ಅನುಸರಿಸಬೇಕಾದ ಪಟ್ಟಿಯಲ್ಲಿ ಮುಖಗವಸು, ಸ್ಯಾನಿಟೈಸರ್‌ ನಂತರದ ಆದ್ಯತೆ ಬಹುಶಃ ಆರೋಗ್ಯಕರ ತಿನಿಸಿಗೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು– ತರಕಾರಿ, ಮೀನು– ಮೊಟ್ಟೆ, ಒಣ ಹಣ್ಣು, ಬಾದಾಮಿ– ಪಿಸ್ತಾದಂತಹ ನಟ್ಸ್‌, ಸೂರ್ಯಕಾಂತಿ, ಕಲ್ಲಂಗಡಿ ಬೀಜ, ನ್ಯೂಟ್ರಿ ಬಾರ್‌ ಒಲವು ಈಗಿನ ಟ್ರೆಂಡ್‌; ಈ ಶಕ್ತಿಯನ್ನು ಕುಂದಿಸುವ ಎಣ್ಣೆಯಲ್ಲಿ ಕರಿದ ಚಿಪ್ಸ್‌, ಕುರ್‌ಕುರೆ, ಹೆಚ್ಚು ಕೊಬ್ಬಿನಂಶವಿರುವ ಅಂದರೆ ಟ್ರಾನ್ಸ್‌ ಫ್ಯಾಟ್ ಇರುವ ಪಿಜ್ಜಾ, ಬರ್ಗರ್‌ಗಳಿಗೆ ಹಲವರು ಬೈಬೈ ಹೇಳಿಬಿಟ್ಟಿದ್ದಾರೆ.

‘ಮನೆಯಲ್ಲೇ ಮಾಡುವ ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿಗೆ ಮರಳಿದ್ದೇವೆ. ಮನೆಯಲ್ಲೇ ಇವನ್ನೆಲ್ಲ ಮಾಡಲು ಸಮಯ ಜಾಸ್ತಿ ಬೇಕು ಎಂದು ಕೆಲವೊಮ್ಮೆ ರೆಡಿ ಟು ಈಟ್‌ ಉಪಮಾ, ಅವಲಕ್ಕಿ ಪ್ಯಾಕ್‌ ತರಿಸುತ್ತೇನೆ. ಆದರೆ ಮೈದಾ ಮತ್ತು ಫ್ಯಾಟ್‌ ಇರುವ ನೂಡಲ್ಸ್‌, ಪಾಸ್ತಾ ಬಿಟ್ಟು ತಿಂಗಳುಗಳೇ ಕಳೆದವು’ ಎನ್ನುವ ಎಚ್‌ಆರ್‌ ಕನ್ಸಲ್ಟೆಂಟ್‌ ಮೇಧಾ ಗಾಂವ್ಕಾರ್‌, ‘ಮಕ್ಕಳು ಬಾಯಾಡಲು ಕೇಳಿದರೆ ಹುರಿದ ಕಡಲೆ ಬೀಜ, ನೆನೆ ಹಾಕಿದ ಬಾದಾಮಿ, ಒಣ ದ್ರಾಕ್ಷಿ ಕೈಗಿಡುತ್ತೇನೆ. ಫ್ರೂಟ್ಸ್‌ ಬೌಲ್‌, ಚಾಟ್ಸ್‌ ಮನೆಯಲ್ಲೇ ಮಾಡಿ ಕೊಡುತ್ತೇನೆ’ ಎನ್ನುತ್ತಾರೆ.

ಹಾಗೆಯೇ ಸಿರಿಧಾನ್ಯಗಳಿಂದ ಮಾಡಿದ ‘ರೆಡಿ ಟು ಈಟ್‌’ ತಿನಿಸುಗಳಿಗೂ ಬೇಡಿಕೆ ಒಂದೇ ಸಮನೆ ಏರಿದೆ. ಓಟ್ಸ್‌, ಸೋಯಾ ಚಂಕ್ಸ್‌, ಮುಸ್ಲಿ, ಕೀನ್‌– ವಾ ಜೊತೆಗೆ ಗೋಧಿ ಕಾರ್ನ್‌ ಫ್ಲೇಕ್‌ ಅನ್ನು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆರಂಭವಾದಾಗ ಆಲೂ ಚಿಪ್ಸ್‌, ಚಕ್ಕುಲಿ– ಕೋಡುಬಳೆ, ಕರಿದ ಕಡಲೆ ಬೀಜದ ಪ್ಯಾಕ್‌ಗಳನ್ನು ಅಂಗಡಿಗಳಿಂದ ಹೊರೆಗಟ್ಟಲೆ ಒಯ್ದಿದ್ದ ಗ್ರಾಹಕರು ಈಗ ಅದರೆಡೆಗೆ ಆಸಕ್ತಿ ತೋರದಿರುವುದಕ್ಕೆ ಕಾರಣ ‘ರೋಗ ನಿರೋಧಕ ಶಕ್ತಿ’ ಎಂಬ ಜಾದೂ ಶಬ್ದ.

ಮಾರುಕಟ್ಟೆಯೂ ಇದನ್ನು ನಗದೀಕರಿಸಿಕೊಳ್ಳುತ್ತಿದೆ. ಬಾದಾಮಿ ಬಳಸಿದ ಕುಕೀಸ್‌, ಓಟ್ಸ್‌ ಬಿಸ್ಕಿಟ್‌, ಖಾಕ್ರಾ, ಬಿಸಿಲಲ್ಲಿ ಒಣಗಿಸಿ, ಓವನ್‌ನಲ್ಲಿ ಮಾಡಿದ ಹೆಲ್ದಿ ಚಿಪ್ಸ್‌, ಮಿಶ್ರ ಒಣಹಣ್ಣುಗಳ ಜೊತೆ ಕಾರ್ನ್‌ಫ್ಲೇಕ್ಸ್‌ ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ. ರೆಡಿ ಟು ಈಟ್‌ ಪಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಗೋಧಿ ಶ್ಯಾವಿಗೆಯಂಥವು ಸ್ಥಾನ ಪಡೆಯುತ್ತಿವೆ.

ಈ ಆರೋಗ್ಯಕರ ಜೀವನಶೈಲಿ ಹೀಗೇ ಮುಂದುವರಿದರೆ ಆಹಾರದಲ್ಲೇ ಔಷಧ ಎಂಬ ಘೋಷವಾಕ್ಯಕ್ಕೆ ಇನ್ನಷ್ಟು ಬಲ ಬಂದೀತು.

ಬೇಕರಿ ಉತ್ಪನ್ನ ನೀಡಬೇಡಿ

ನ್ಯೂಟ್ರಿಷನಿಸ್ಟ್‌ಉಷಾ ಧರ್ಮಾನಂದ ಬಿ.

ಮಕ್ಕಳಿಗೆ ಒಂದೇ ಬಾರಿ ಹೆಚ್ಚು ಊಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಧ್ಯೆ ಮಧ್ಯೆ ಸಣ್ಣ ಪ್ರಮಾಣದಲ್ಲಿ ತಿನಿಸುಗಳನ್ನು ನೀಡಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಬೇಕರಿ ಉತ್ಪನ್ನ, ಕರಿದ ತಿಂಡಿ, ಹೆಚ್ಚು ಸಕ್ಕರೆ ಮತ್ತು ಉಪ್ಪು, ಟ್ರಾನ್ಸ್‌ ಫ್ಯಾಟ್‌ ಇರುವ ತಿನಿಸು ನೀಡಬೇಡಿ. ಅದರ ಬದಲು ಹಣ್ಣಿನ ಚೂರು, ಕತ್ತರಿಸಿದ ಸೌತೆಕಾಯಿ, ಕ್ಯಾರಟ್‌, ಚೆರ‍್ರಿ ಟೊಮ್ಯಾಟೊ, ನಟ್ಸ್‌ ಮತ್ತು ಒಣ ಹಣ್ಣು, ಹುರಿದ ತರಕಾರಿ, ಸೂಪ್‌, ಬೇಯಿಸಿದ ಮೊಟ್ಟೆ, ತರಕಾರಿ ಸೇರಿಸಿದ ಆಮ್ಲೆಟ್‌ ನೀಡಬಹುದು. ಒಂದು ಟ್ರೇನಲ್ಲಿ ಇವನ್ನೆಲ್ಲ ಜೋಡಿಸಿಟ್ಟರೆ ಮಕ್ಕಳು ತಮಗೆ ಬೇಕಾದಾಗ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ ಎನ್ನುತ್ತಾರೆ ಬೆಂಗಳೂರುವಿಕ್ರಂ ಆಸ್ಪತ್ರೆಯಕನ್ಸಲ್ಟೆಂಟ್‌ ನ್ಯೂಟ್ರಿಷನಿಸ್ಟ್‌ಉಷಾ ಧರ್ಮಾನಂದ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.