ADVERTISEMENT

ಶ್ವಾಸಕೋಶದ ಕ್ಯಾನ್ಸರ್‌: ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 12:45 IST
Last Updated 20 ಡಿಸೆಂಬರ್ 2025, 12:45 IST
<div class="paragraphs"><p>ಚಿತ್ರ:ಗೆಟ್ಟಿ</p></div>
   

ಚಿತ್ರ:ಗೆಟ್ಟಿ

ಶ್ವಾಸಕೋಶದ ಕ್ಯಾನ್ಸರ್ ಇತರೆ ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿದೆ. ಹೆಚ್ಚಿನ ತಂಬಾಕು ಬಳಕೆಯಿಂದ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ. ಪ್ರಪಂಚದಾದ್ಯಂತ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ 85‌ರಷ್ಟು ಧೂಮಪಾನದಿಂದ ಬರುತ್ತಿದೆ. 20ನೇ ಶತಮಾನದ ಆರಂಭದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪರೂಪದ ಕಾಯಿಲೆಯಾಗಿತ್ತು. ಈಗ ಇದು ಸಾಮಾನ್ಯವಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಲು ಕಾರಣಗಳು

ADVERTISEMENT

ತಂಬಾಕು ಬಳಕೆ: ತಂಬಾಕಿನಿಂದ ಹೊರಬರುವ ಹೊಗೆಯು ಸುಮಾರು 7,000 ರಾಸಾಯನಿಕಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 70 ರಾಸಾಯನಿಕಗಳು ಶ್ವಾಸಕೋಶದ ಕೋಶಗಳ ಡಿಎನ್‌ಎಗೆ ಹಾನಿಯನ್ನುಂಟು ಮಾಡುವ ಕ್ಯಾನ್ಸರ್ ಜನಕಗಳಾಗಿವೆ.

ಇನ್ನೊಂದು ವಿಷಯವೆಂದರೆ ತಂಬಾಕಿನ ದುಷ್ಪರಿಣಾಮಗಳು ಕಾಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದು ಕೆಲವೊಮ್ಮೆ ವರ್ಷಗಳಾಗಿರಬಹುದು ಅಥವಾ ಅಲ್ಪಾವಧಿಯಲ್ಲಿಯೇ ಪರಿಣಾಮ ಕಾಣಿಸಬಹುದು. ಆದರೆ ಇದರಿಂದ ಉಂಟಾಗುವ ಹಾನಿ ಮಾತ್ರ ದೀರ್ಘಾವಧಿಯದ್ದು.

ವ್ಯಾಪಕವಾದ ಮಾನ್ಯತೆ: ತಂಬಾಕು ಬಳಕೆಯು ಇಂದು ಸಾಮಾನ್ಯ ಎನ್ನುವಷ್ಟು ವ್ಯಾಪಿಸಿದೆ. ಆರೋಗ್ಯ ದೃಷ್ಟಿಯಿಂದ ಮತ್ತು ಜಾಗೃತಿಯಿಂದಾಗಿ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದರ ಬಳಕೆ ಇಳಿಕೆಯಾಗುತ್ತಿದೆ. ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದರ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ.

ಅಪಾಯಕಾರಿ ಅಂಶಗಳು: ಧೂಮಪಾನಿಗಳಲ್ಲದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಸಂಭವ ಹೆಚ್ಚುತ್ತಿದೆ. ಧೂಮಪಾನ ಮಾಡುವವರ ಬಳಿ ನಿಂತು ಹೊಗೆ ಸೇವಿಸುವುದು, ತಂಬಾಕಿನ ಹೊಗೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ತಂಬಾಕು ಅಗಿಯುವುದು, ಇ-ಸಿಗರೇಟ್‌ಗಳಂತಹ ಹೊಗೆ ರಹಿತ ತಂಬಾಕಿನ ಬಳಕೆಯು ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಬಹುದು. 

ವಾಯು ಮಾಲಿನ್ಯ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ಚೀನಾದ ಇತ್ತೀಚಿನ ಅಧ್ಯಯನಗಳು ವಾಯು ಮಾಲಿನ್ಯ ಪರೋಕ್ಷವಾಗಿ ಕ್ಯಾನ್ಸರ್‌ ಕಾರಕ ಎಂಬುದನ್ನು ಸೂಚಿಸಿವೆ.

ಔದ್ಯೋಗಿಕ ಮತ್ತು ಪರಿಸರದ ಅಪಾಯಗಳು: ಆರ್ಸೆನಿಕ್ ಮತ್ತು ಡೀಸೆಲ್ ಹೊರ ಸೂಸುವ ಹೊಗೆ ಹಾಗೂ ವಿವಿಧ ಕೈಗಾರಿಕಾ ರಾಸಾಯನಿಕಗಳಂತಹ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಈ ಅಪಾಯ ಹೆಚ್ಚಾಗುತ್ತದೆ.‌

ಆನುವಂಶೀಯ ಪರಿಸ್ಥಿತಿಗಳು: ಕುಟುಂಬದ ಇತಿಹಾಸ, ಕೆಲವು ಆನುವಂಶೀಯ ರೂಪಾಂತರಗಳು ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳ ಇತಿಹಾಸವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ತಡೆಯುವುದು ಹೇಗೆ?

ಧೂಮಪಾನವನ್ನು ತ್ಯಜಿಸಿ: ಯಾವುದೇ ವಯಸ್ಸಿನಲ್ಲಿ ಧೂಮಪಾನವನ್ನು ತ್ಯಜಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. 10 ವರ್ಷಗಳ ನಂತರ, ನಿರಂತರ ಧೂಮಪಾನಿಗಳಿಗೆ ಹೋಲಿಸಿದರೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವು ಶೇ 30 ರಿಂದ ಶೇ 60ರಷ್ಟು ಕಡಿಮೆಯಾಗಬಹುದು.

ಆರೋಗ್ಯಕರ ಜೀವನಶೈಲಿ ಮತ್ತು ತಪಾಸಣೆ

ಆರೋಗ್ಯಕರ ಆಹಾರವನ್ನು ಸೇವನೆ: ವಿವಿಧ ಹಣ್ಣು, ತರಕಾರಿ ಮತ್ತು ಧಾನ್ಯಗಳಿಂದ ಸಮೃದ್ಧವಾಗಿರುವ ಆಹಾರವು ನಿಮ್ಮ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧೂಮಪಾನಿಗಳು ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್‌ಯುಕ್ತ ಆಹಾರಗಳನ್ನು ಸೇವಿಸದಿರುವುದು ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.

ನಿಯಮಿತವಾಗಿ ವ್ಯಾಯಾಮ ಮಾಡಿ: ದೈಹಿಕ ಚಟುವಟಿಕೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. 

ಲೇಖಕರು: ಡಾ. ಆದಿತ್ಯ ಮುರಳಿ ಹಿರಿಯ ಸಲಹೆಗಾರರು, ವೈದ್ಯಕೀಯ ಆಂಕೊಲಾಜಿ, ಅಪೋಲೋ ಆಸ್ಪತ್ರೆ ಶೇಷಾದ್ರಿಪುರಂ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.