ಪ್ರಸ್ತುತ ದಿನಗಳಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕೆಂದು ಪ್ರತಿಯೊಬ್ಬರು ಯೋಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸಲೆಬ್ರೆಟಿಗಳು ತಮ್ಮ ದೇಹದ ರಚನೆಯ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ಅವರು ಸದಾ ಯೌವನದಿಂದ ಕಾಣಿಸಿಕೊಳ್ಳಬೇಕು ಎಂದು ಯೋಚಿಸುತ್ತಾರೆ. ಕೆಲವರು ತಮ್ಮ ಫಿಟ್‌ನೆಸ್‌ಗಾಗಿ ಹೆಚ್ಚು ಸಮಯ ಜಿಮ್‌ನಲ್ಲಿ ಕಳೆಯುವುದನ್ನು ಕಾಣಬಹುದು. ಆದರೆ ಸರಳವಾದ ವ್ಯಾಯಾಮದ ಅಭ್ಯಾಸ ಮಾಡುವುದರಿಂದಲೂ ದೇಹವನ್ನು ಸಧೃಡವಾಗಿರಿಸಿಕೊಳ್ಳಬಹುದು ಎಂದು ನಟಿ ಮಲೈಕಾ ಅರೋರಾ ತೋರಿಸಿಕೊಟ್ಟಿದ್ದಾರೆ.
ನಟಿ ಮಲೈಕಾ ಅರೋರಾ ಅವರಿಗೆ ಸದ್ಯ 51 ವರ್ಷ. ಆದರೂ ಕೂಡ ಅವರು ಯುವತಿಯರೇ ಬೇರಗಾಗುವಷ್ಟು ಫಿಟ್ ಆಗಿದ್ದಾರೆ. ನನ್ನ ಫಿಟ್‌ನೆಸ್ ಹಿಂದಿದೆ ಈ 6 ಸರಳ ವ್ಯಾಯಾಮಗಳು ಎಂದು ಮಲೈಕಾ ಅರೋರಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಲೈಕಾ ಅರೋರಾ ತಿಳಿಸಿದ ಆ 6 ವ್ಯಾಯಾಮಗಳು ಯಾವುವು? ಅವುಗಳಿಂದಾಗುವ ಲಾಭಗಳೇನು ಎಂಬನ್ನು ತಿಳಿಯೋಣ ಬನ್ನಿ.
6 ಸರಳವಾದ ಟಿಪ್ಸ್‌ಗಳನ್ನು ಪಾಲಿಸುವುದರ ಮೂಲಕ ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಎಂದು ನಟಿ ಪೋಸ್ಟ್ ಮಾಡಿದ್ದಾರೆ. ಬೆನ್ನು ಮೂಳೆಯಿಂದ ಹಿಡಿದು ಸೊಂಟದ ಫಿಟ್‌ನೆಸ್, ಭುಜ ಹಾಗೂ ದೇಹವನ್ನು ಸದೃಢಗೊಳಿಸಲು ವಿವಿಧ ಭಂಗಿಯ ಸರಳ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮಾರ್ಜರಿಯಾಸನ: ಬೆನ್ನುಮೂಳೆಯನ್ನು ಬಾಗಿಸಿ ಮತ್ತು ಹಿಗ್ಗಿಸಲು ಸಹಾಯ ಮಾಡುವ ಚಲನೆಯ ಅನುಕ್ರಮವಾಗಿದೆ. ಇದನ್ನು 2 ಕೈಗಳ ಮೇಲೆ ನಿಂತು ಮಾಡಲಾಗುತ್ತದೆ. ಉಸಿರಾಡುವಾಗ ಹಸುವಿನ ಭಂಗಿಗೆ ಹೋಲುವಂತೆ ಬೆನ್ನನ್ನು ಬಾಗಿಸಿ, ಹೊಟ್ಟೆಯನ್ನು ಕೆಳಕ್ಕೆ ಇರಿಸಿ ಮತ್ತು ತಲೆಯನ್ನು ಮೇಲೆತ್ತಬೇಕು. ನಂತರ ಉಸಿರು ಬಿಡುವಾಗ ಬೆಕ್ಕಿನ ಆಕಾರಕ್ಕೆ ಹೋಲುವಂತೆ ಬೆನ್ನನ್ನು ಕಮಾನು ಮಾಡಿ, ಹೊಟ್ಟೆಯನ್ನು ಒಳಕ್ಕೆ ತಂದು ತಲೆ ಮತ್ತು ಸೊಂಟವನ್ನು ಕೆಳಕ್ಕೆ ತರಲಾಗುತ್ತದೆ.
90–90 ಡಿಗ್ರಿ ಕೋನದಲ್ಲಿ ಸೊಂಟದ ಕೀಲುಗಳ ಸಾಮರ್ಥ್ಯ ವೃದ್ದಿಸಲು ಮಾಡುವ ವ್ಯಾಯಾಯ. ಈ ವ್ಯಾಯಾಮವು ಸೊಂಟದ ಚಲನಶೀಲತೆ ಸುಧಾರಿಸಲು, ಸೊಂಟದ ಸುತ್ತಲಿನ ಬಿಗಿತವನ್ನು ಕಡಿಮೆ ಮಾಡಲು ಮತ್ತು ಸೊಂಟದ ಕೀಲುಗಳ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಉತ್ಥಾನ ಶಿಶೋ ಆಸನ: ಇದು ಸೊಂಟ, ಒಳ ತೊಡೆಗಳು ಮತ್ತು ತೊಡೆಸಂದುಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
ಕಪೋತಾಸನ : ಇದು ಸೊಂಟದ ಆರೋಗ್ಯ ವೃದ್ಧಿಸಿಕೊಳ್ಳಲು ಅನುಕೂಲವಾಗಿರುವ ಭಂಗಿಯಾಗಿದೆ. ಇದನ್ನು ಸೊಂಟ ಶಕ್ತಿ ವೃದ್ದಿಸುವ ವ್ಯಾಯಾಮವಾಗಿದೆ. ಸೊಂಟವನ್ನು ಮುಂದಕ್ಕೆ ಬಾಗಿಸಿ ಹೊಂದಾಣಿಕೆ ಮಾಡಿ ವ್ಯಾಯಾಮ ಮಾಡಬೇಕು. ತೊಡೆಸಂದು, ಕೆಳ ಬಾಗದ ಬೆನ್ನು ಮತ್ತು ಸೊಂಟವನ್ನು ಏಕಕಾಲದಲ್ಲಿ ಗುರಿಯಾಗಿಟ್ಟುಕೊಂಡು ಮಾಡುವ ಆಸನವಾಗಿದೆ.
ಭುಜಂಗಾಸನ: ನಾಗರ ಭಂಗಿ ಇದು ಯೋಗದಲ್ಲಿ ಬೆನ್ನನ್ನು ಬಾಗಿಸುವ ಆಸನವಾಗಿದ್ದು, ಹಾವಿನ ಆಕಾರಕ್ಕೆ ಹೋಲುತ್ತದೆ. ಇದರಿಂದಾಗಿ ಬೆನ್ನು ಮೂಳೆಗಳನ್ನು ಗಟ್ಟಿಯಾಗಿಸಬಹುದು.
ಮಂಡೂಕಾಸನ: ಇದು ಒಂದು ಆಳವಾದ ಯೋಗದ ಭಂಗಿ ಅಥವಾ ಹಿಗ್ಗಿಸುವಿಕೆಯ ವ್ಯಾಯಾಮವಾಗಿದ್ದು, ಮಂಡಿಗಳನ್ನು ಅಗಲವಾಗಿಟ್ಟು, ದೇಹವನ್ನು ಸಮತಟ್ಟಾಗಿ ಇರಿಸಿ ಸುಲಭವಾಗಿ ಮಾಡುವ ವ್ಯಾಯಾಮದ ವಿಧಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.