ADVERTISEMENT

ಪುರುಷ ಕ್ಯಾನ್ಸರ್‌ ರೋಗಿಗಳಿಗೆ ಫಲವತ್ತತೆಯ ಸಲಹೆ ಅಗತ್ಯ

ಡಾ.ಎಸ್.ಎಸ್.ವಾಸನ್
Published 4 ಅಕ್ಟೋಬರ್ 2019, 19:30 IST
Last Updated 4 ಅಕ್ಟೋಬರ್ 2019, 19:30 IST
   

ಕ್ಯಾನ್ಸರ್‌ ಪೀಡಿತ ಪುರುಷರಲ್ಲಿ ಹೆಚ್ಚಿನವರು ಫಲವತ್ತತೆ ಕುರಿತ ಸಲಹೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಇತ್ತೀಚೆಗೆ ಫಲವತ್ತತೆ ಕುರಿತ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಮುಖ ಸಂಶೋಧನ ಪ್ರಬಂಧದಲ್ಲಿ ಇದನ್ನು ವಿವರಿಸಲಾಗಿದೆ.

ಕಿಮೋಥೆರಪಿ ಹಾಗೂ ರೇಡಿಯೊಥೆರಪಿ ಚಿಕಿತ್ಸೆಗಳನ್ನು ಪಡೆದ ಕ್ಯಾನ್ಸರ್‌ ಪೀಡಿತ ಪುರುಷರು ದೀರ್ಘಾವಧಿ ಫಲವತ್ತತೆ ಕೊರತೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಇಂಥವರಿಗೆ ವೀರ್ಯ ಬ್ಯಾಂಕಿಂಗ್‌ನಲ್ಲಿ ವೀರ್ಯಾಣುವನ್ನು ಕಾದಿರಿಸುವಂತೆ ಸಲಹೆ ನೀಡಬೇಕು.

ಫಲವತ್ತತೆ ಶಾಶ್ವತವೋ ಅಥವಾ ತಾತ್ಕಾಲಿಕವೋ ಎಂಬುದು ಅವರವರ ಆರೋಗ್ಯ ಹಾಗೂ ಇತರ ಅಂಶಗಳ ಮೇಲೆ ಅವಲಂಬಿತ. ಕ್ಯಾನ್ಸರ್‌ ಚಿಕಿತ್ಸೆ ಮುಗಿದ ಮೇಲೆ ಪುರುಷರು ಫಲವತ್ತತೆ ಕುರಿತ ಸಮಾಲೋಚನೆಗೆ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.

ADVERTISEMENT

ಈ ಕುರಿತು ವಿದೇಶದಲ್ಲಿ ನಡೆದ ಅಧ್ಯಯನವೊಂದರಲ್ಲಿ ಐದು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ 18ರಿಂದ 55 ವರ್ಷ ವಯಸ್ಸಿನ 499 ಪುರುಷರಿಗೆ ಈ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರೆಲ್ಲ ತಮ್ಮ ವೀರ್ಯಾಣುಗಳನ್ನು ಕಾದಿರಿಸುವಲ್ಲಿ ಸಫಲರಾಗಿದ್ದರು. ಆದರೆ ಭಾರತದಲ್ಲಿ ಶೇ. 97ರಷ್ಟು ಮಂದಿ ಪುರುಷ ಕ್ಯಾನ್ಸರ್‌ ಪೀಡಿತರು ವೀರ್ಯಾಣುವನ್ನು ಕಾದಿರಿಸುವಲ್ಲಿ ವಿಫಲರಾಗಿರುವುದು ಅಧ್ಯಯನದಿಂದ ಗೊತ್ತಾಗಿದೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ 36ರಷ್ಟು ಮಂದಿ ಚಿಕಿತ್ಸೆಯ ನಂತರ ಸಮಾಲೋಚನೆಗೆ ವೈದ್ಯರನ್ನು ಭೇಟಿ ಮಾಡಲು ಬಂದಿರಲಿಲ್ಲ.

ಕೆಲವು ಪುರುಷರು ವೀರ್ಯಾಣುವನ್ನು ಕಾದಿರಿಸಿದ್ದರೂ ಕೂಡ ಮತ್ತೆ ವೀರ್ಯ ಬ್ಯಾಂಕ್‌ ಅನ್ನು ಸಂಪರ್ಕಿಸಿರಲಿಲ್ಲ. ಬ್ಯಾಂಕ್‌ ಜೊತೆ ಸಂಪರ್ಕದಲ್ಲಿರಬೇಕು ಎಂದು ಕಾನೂನು ಕೂಡ ಹೇಳುತ್ತದೆ. ಚಿಕಿತ್ಸೆ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಡ್ಡ ಪರಿಣಾಮ ಅನುಭವಿಸಿದ ಪುರುಷರಲ್ಲೇ ಈ ರೀತಿಯ ನಡವಳಿಕೆ ಕಂಡು ಬಂದಿದೆ. ವೀರ್ಯಾಣು ಕಾದಿರಿಸಬೇಕು ಹಾಗೂ ನಂತರ ವೀರ್ಯ ಬ್ಯಾಂಕ್‌ನಿಂದ ಅದನ್ನು ತೆಗೆಯಬೇಕು ಎಂಬುದರ ಕುರಿತು ಒಂದು ರೀತಿಯ ಅಸಡ್ಡೆ ಕಂಡು ಬಂದಿದೆ.

ಕ್ಯಾನ್ಸರ್‌ನಿಂದ ಬದುಕುಳಿದವರು ಫಲವತ್ತತೆ ಕುರಿತು ಸಲಹೆ ಕೇಳಲು ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುವುದರ ಹಿಂದೆ ಅವರಿಗೆ ಸೌಲಭ್ಯದ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದು ಕಾರಣ ಎನ್ನಬಹುದು. ತಮ್ಮಲ್ಲಿರುವ ಫಲವತ್ತತೆ ಕೊರತೆ ಸಾಬೀತಾಗದಿದ್ದರೆ ಈ ವೀರ್ಯವನ್ನು ನಾಶಪಡಿಸಲಾಗುವುದು ಎಂಬ ಮಾಹಿತಿಯೂ ಹಲವರಿಗೆ ಗೊತ್ತಿರುವುದಿಲ್ಲ. ಇದು ಅವರ ಮುಂದಿನ ಬದುಕಿನ ಆಯ್ಕೆ ಹಾಗೂ ಮಕ್ಕಳನ್ನು ಹೊಂದುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಕ್ಯಾನ್ಸರ್‌ನಿಂದ ಬದುಕುಳಿದ ಪುರುಷರಿಗೆ ಈ ವಿಷಯದಲ್ಲಿ ಮಾಹಿತಿ ನೀಡುವುದು, ಫಲವತ್ತತೆ ಕುರಿತು ವೈದ್ಯರ ಸಲಹೆ ಕೇಳುವುದು ಮೊದಲಾದವುಗಳ ಬಗ್ಗೆ ಆಸ್ಪತ್ರೆಗಳು ಸೂಕ್ತ ಅರಿವು ನೀಡಬೇಕಾದ ಅಗತ್ಯವಿದೆ. ಕ್ಯಾನ್ಸರ್‌ ಚಿಕಿತ್ಸೆ ಮುಗಿದ ನಂತರ ಮಕ್ಕಳನ್ನು ಪಡೆಯುವ ಇಚ್ಛೆಯುಳ್ಳ ಪುರುಷರು ವೀರ್ಯ ಬ್ಯಾಂಕ್‌ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಅವಶ್ಯಕತೆ ಇದೆ.

ಕ್ಯಾನ್ಸರ್‌ ಚಿಕಿತ್ಸೆಯಿಂದ ಫಲವತ್ತತೆ ಹೇಗೆ ಕುಂಠಿತವಾಗುತ್ತದೆ ಅಥವಾ ನಂತರದ ದಿನಗಳಲ್ಲಿ ಫಲವತ್ತತೆಯನ್ನು ಮರಳಿ ಪಡೆಯಬಹುದು ಎಂಬುದರ ಬಗ್ಗೆ ಪುರುಷರಿಗೆ ಹೆಚ್ಚು ಮಾಹಿತಿ ಇಲ್ಲ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಕ್ಯಾನ್ಸರ್‌ ಇದೆ ಎಂಬುದು ಪತ್ತೆಯಾದ ತಕ್ಷಣ ಅದರ ಚಿಕಿತ್ಸೆ ಹಾಗೂ ಅಡ್ಡ ಪರಿಣಾಮದ ಕುರಿತು ತಕ್ಷಣ ತಿಳಿದುಕೊಳ್ಳಬೇಕು. ಹೀಗಾಗಿ ಈ ಬಗ್ಗೆ ಸೂಕ್ತವಾದ ಮಾಹಿತಿ ವಿಧಾನಗಳನ್ನು ರೂಪಿಸುವ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.