ADVERTISEMENT

ಮೆನೋಪಾಸ್ ಮತ್ತು ಮನಸ್ಸು: ಯಾರೂ ಮಾತನಾಡದ ಭಾವನಾತ್ಮಕ ಸವಾಲುಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 11:01 IST
Last Updated 10 ಅಕ್ಟೋಬರ್ 2025, 11:01 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಜನರು ಋತುಬಂಧದ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಹಾಟ್‌ ಫ್ಲಾಷ್‌ಗಳು, ರಾತ್ರಿಯ ಬೆವರುವಿಕೆ ಅಥವಾ ಮುಟ್ಟಿನ ಚಕ್ರಗಳ ಬದಲಾವಣೆಗಳಂತಹ ದೈಹಿಕ ಲಕ್ಷಣಗಳ ಸುತ್ತ ಸುತ್ತುತ್ತದೆ. ಆದರೆ ಅದಕ್ಕಿಂತಲೂ ಮಿಗಿಲಾಗಿ ಈ ಸಮಯದಲ್ಲಿ ಅನೇಕ ಮಹಿಳೆಯರು ಭಾವನಾತ್ಮಕ ಮತ್ತು ಮಾನಸಿಕ ಬದಲಾವಣೆಗಳನ್ನು ಮೌನವಾಗಿಯೇ ಅನುಭವಿಸುತ್ತಾರೆ. ಇದರಿಂದ ದೇಹ ಬದಲಾವಣೆಯೊಂದಿಗೆ ಮನಸ್ಸು ಕೂಡ ಬದಲಾಗುತ್ತದೆ. ಋತುಬಂಧದ ವಿಚಾರವು ಬಹಿರಂಗವಾಗಿ ಮಾತನಾಡಲು ಖಂಡಿತಾ ಅರ್ಹವಾಗಿದೆ.

ಋತುಬಂಧದ ಸಮಯದಲ್ಲಿ ಏನಾಗುತ್ತದೆ?

ADVERTISEMENT

ಸರಳವಾಗಿ ಹೇಳುವುದಾದರೆ, ಋತುಬಂಧ ಎಂದರೆ ಮಹಿಳೆಯ ಋತುಚಕ್ರ ಶಾಶ್ವತವಾಗಿ ನಿಲ್ಲುವುದು. ನಂತರ ಆಕೆ ಸ್ವಾಭಾವಿಕವಾಗಿ ಗರ್ಭಿಣಿಯಾಗಲು ಸಾಧ್ಯವಿಲ್ಲ. ಋತುಬಂಧ, ಮಹಿಳೆಯ ಸಂತಾನೋತ್ಪತ್ತಿ ಸಾಮರ್ಥ್ಯದ ಸ್ವಾಭಾವಿಕ ಅಂತ್ಯವೆಂದೇ ಹೇಳಬಹುದು. ಇದು ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವಿನ ವಯಸ್ಸಿನಲ್ಲಿ ಸಂಭವಿಸುತ್ತದೆ.

ಈ ಅವಧಿಯಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಕುಸಿಯುತ್ತವೆ. ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪ್ರಭಾವ ಬೀರುತ್ತದೆ. ಮನಸ್ಥಿತಿಯ ನಿಯಂತ್ರಣ, ನಿದ್ರೆ ಮತ್ತು ಗ್ರಹಿಕೆಯ ಸಾಮರ್ಥ್ಯದಲ್ಲಿ ಈಸ್ಟ್ರೊಜೆನ್ ಪಾತ್ರ ವಹಿಸುತ್ತದೆ. ಅದರ ಏರಿಳಿತ ದೈಹಿಕ ಆರೋಗ್ಯದಷ್ಟೇ ಭಾವನಾತ್ಮಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು.

ಋತುಬಂಧ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಋತುಬಂಧ ಪ್ರಾರಂಭವಾಗುವ ಮುನ್ನವೇ ಅನೇಕ ಮಹಿಳೆಯರು ಭಾವನಾತ್ಮಕ ಲಕ್ಷಣಗಳನ್ನು ಕಂಡುಕೊಳ್ಳುತ್ತಾರೆ. ಪೆರಿಮೆನೋಪಾಸ್‌, ಅಂದರೆ ಹಾರ್ಮೋನ್ ಮಟ್ಟಗಳು ಬದಲಾಗಲು ಪ್ರಾರಂಭಿಸಿದಾಗ ಆ ಅವಧಿಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಈ ಕೆಳಗಿನ ಲಕ್ಷಣಗಳನ್ನು ಒಳಗೊಂಡಿರುತ್ತವೆ.

ಮನಸ್ಥಿತಿಯ ಬದಲಾವಣೆಗಳು (ಮೂಡ್‌ ಸ್ವಿಂಗ್ಸ್‌):

ಮನಸ್ಥಿತಿಯ ಹಠಾತ್ ಬದಲಾವಣೆಗಳು, ಕಿರಿಕಿರಿಯಿಂದ ದುಃಖ, ಆತಂಕ ಹೆಚ್ಚುವುದು, ಗೊಂದಲ ಮತ್ತು ಭಾವನೆಗಳ ತೀವ್ರತೆಯ ಅನುಭವ.

ಆತಂಕ ಮತ್ತು ಖಿನ್ನತೆ:

ಹಾರ್ಮೋನುಗಳ ಅಸಮತೋಲನೆ, ಮೊದಲೇ ಇರುವ ಆತಂಕ ಮತ್ತು ಖಿನ್ನತೆಯನ್ನು ಮತ್ತಷ್ಟು ಪ್ರಚೋದಿಸಬಹುದು ಅಥವಾ ಪರಿಸ್ಥಿತಿಯನ್ನು ಹದಗೆಡಿಸಬಹುದು. ಇದು ಸಾಮಾನ್ಯವಾಗಿ ಅನಿಶ್ಚಿತತೆ ಅಥವಾ ಸ್ವಯಂ ನಿಯಂತ್ರಣ ಕಳೆದುಕೊಂಡ ಭಾವನೆಯನ್ನು ಮೂಡಿಸುತ್ತದೆ.

ನಿದ್ರೆಯ ತೊಂದರೆ:

ರಾತ್ರಿಯಲ್ಲಿ ಬೆವರು ಮತ್ತು ನಿದ್ರಾಹೀನತೆ, ಆಯಾಸ, ಮೆದುಳು ಮಂಜಾಗುವುದು ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗಬಹುದು.

ನೆನಪು ಮತ್ತು ಗಮನ:

ಅನೇಕ ಮಹಿಳೆಯರು ನೆನಪು ಅಥವಾ ಏಕಾಗ್ರತೆಯ ತೊಂದರೆಯನ್ನು ಅನುಭವಿಸುತ್ತಾರೆ. ಇದನ್ನು ಸಾಮಾನ್ಯವಾಗಿ ’ಮೆನೊಪಾಸ್‌ ಬ್ರೈನ್‌ ’ ಎಂದು ವಿವರಿಸಲಾಗುತ್ತದೆ.

ಗುರುತು ಮತ್ತು ಆತ್ಮಗೌರವ:

ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯ ಕೊನೆಗೊಳ್ಳುತ್ತಿದ್ದಂತೆ, ಕೆಲವು ಮಹಿಳೆಯರು ತಮ್ಮನ್ನು ತಾವು ನೋಡುವ ರೀತಿಯಲ್ಲಿ ಬದಲಾವಣೆ ಕಂಡುಬರುತ್ತದೆ. ವಿಶೇಷವಾಗಿ ಋತುಬಂಧ ದೇಹದ ಚಿತ್ರಣ, ಸಂಬಂಧಗಳು ಹಾಗೂ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಅವರು ವಿಚಲಿತಗೊಳ್ಳುತ್ತಾರೆ.

ನಾವು ಅದರ ಬಗ್ಗೆ ಏಕೆ ಹೆಚ್ಚು ಮಾತನಾಡುವುದಿಲ್ಲ?

ಋತುಬಂಧದ ಭಾವನಾತ್ಮಕ ಅಂಶವು ಅದರ ದೈಹಿಕ ಲಕ್ಷಣಗಳಿಂದ ಮರೆಮಾಚಲ್ಪಡುತ್ತದೆ. ಅನೇಕ ಸಂಪ್ರದಾಯವಾದಿ ಮನೆಗಳಲ್ಲಿ ಋತುಬಂಧವನ್ನು ನಿರ್ವಹಿಸುವ ಬದಲು ’ಸಹಿಸಿಕೊಳ್ಳಬೇಕಾದದ್ದು’ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಮಹಿಳೆಯರು ತಮ್ಮ ಬದಲಾಗುತ್ತಿರುವ ಭಾವನೆಗಳ ಬಗ್ಗೆ ನಾಚಿಕೆ ಅಥವಾ ಗೊಂದಲ ಅನುಭವಿಸುತ್ತಾರೆ. ವಿಶೇಷವಾಗಿ ಸಮಾಜದಲ್ಲಿ ಅವರು ದೃಢವಾಗಿ ಮತ್ತು ಸ್ಥಿರವಾಗಿ ಉಳಿಯಬೇಕೆಂದು ನಿರೀಕ್ಷಿಸಿದಾಗ ಈ ವಿಚಾರಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ.

ಈ ಹಂತವನ್ನು ಉತ್ತಮವಾಗಿ ನಿಭಾಯಿಸಲು ಏನು ಮಾಡಬಹುದು?

ಋತುಬಂಧ ಕೇವಲ ಮಹಿಳೆಯರಿಗೆ ಸಂಭವಿಸಬೇಕಾಗಿಲ್ಲ. ಸರಿಯಾದ ಬೆಂಬಲ ಮತ್ತು ಜಾಗೃತಿಯಿಂದ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.

ಕೆಲವು ಉಪಯುಕ್ತ ಕ್ರಮಗಳು ಹೀಗಿವೆ:

ಮುಕ್ತವಾಗಿ ಮಾತನಾಡಿ:

ನೀವು ಏನನ್ನು ಅನುಭವಿಸುತ್ತಿದ್ದೀರಿ ಎಂಬುದರ ಬಗ್ಗೆ ಸ್ತ್ರೀರೋಗ ತಜ್ಞರು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮುಕ್ತವಾಗಿ ಹೇಳಿಕೊಳ್ಳಿ. ಸಂಕ್ಷಿಪ್ತ ಸಮಾಲೋಚನೆಯೂ ಸಾಮಾನ್ಯ ಹಾರ್ಮೋನ್‌ಗಳ ಬದಲಾವಣೆ ಮತ್ತು ಹೆಚ್ಚು ಗಂಭೀರ ಪರಿಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುತ್ತದೆ.

ನಿದ್ರೆ ಮತ್ತು ಪೋಷಣೆಗೆ ಆದ್ಯತೆ ನೀಡಿ:

ಸಮತೋಲಿತ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ಉತ್ತಮ ನಿದ್ರೆಯನ್ನು ಕಾಯ್ದುಕೊಳ್ಳುವುದು, ದೈಹಿಕ ಮತ್ತು ಮಾನಸಿಕ ರೋಗ ಲಕ್ಷಣಗಳನ್ನು ಹೋಗಲಾಡಿಸಬಹುದು.

ಕ್ರಿಯಾಶೀಲರಾಗಿರಿ:

ನಿಯಮಿತ ವ್ಯಾಯಾಮ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡ ಮತ್ತು ಮನಸ್ಸಿಲ್ಲದಿರುವ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುತ್ತದೆ.

ಮನಸ್ಸು-ದೇಹದ ಅಭ್ಯಾಸಗಳು:

ಯೋಗ, ಧ್ಯಾನ ಮತ್ತು ಸಾವಧಾನತೆ, ಭಾವನೆಗಳನ್ನು ನಿಯಂತ್ರಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದೇ ಸಮಸ್ಯೆ ಎದುರಿಸುತ್ತಿರುವವರೊಂದಿಗೆ ಮಾತನಾಡಿ:

ಸಪೋರ್ಟ್‌ ಗ್ರೂಪ್‌ಗಳು ಅಥವಾ ಇದೇ ಹಂತದಲ್ಲಿರುವ ಮಹಿಳೆಯರೊಂದಿಗೆ ಅನೌಪಚಾರಿಕ ಸಂಭಾಷಣೆಗಳು ದೊಡ್ಡ ವ್ಯತ್ಯಾಸ ಉಂಟುಮಾಡಬಲ್ಲವು.

ಜಾಗೃತಿ ಏಕೆ ಮುಖ್ಯ?

ಋತುಬಂಧದ ಭಾವನೆಗಳನ್ನು ತೆರೆದ ಮನಸ್ಸಿನಿಂದ ಮಾತನಾಡಿದರೆ, ಮಹಿಳೆಯರು ’ನಾನು ಹುಚ್ಚಲ್ಲ’ ಅಥವಾ ’ಇದು ವಯಸ್ಸಾದ್ದರಿಂದ ಅಲ್ಲ’ ಎಂದು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಕೇವಲ ದೇಹದೊಳಗಿನ ಹಾರ್ಮೋನುಗಳ ಬದಲಾವಣೆಗೆ ಸಹಜ ಪ್ರತಿಕ್ರಿಯೆಯಾಗಿದ್ದು, ಯಾರ ತಪ್ಪೂ ಅಲ್ಲ. ಮಹಿಳೆಯರು ತಮಗೆ ಯಾರೋ ಕೇಳುತ್ತಿದ್ದಾರೆ, ಬೆಂಬಲಿಸುತ್ತಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದರೆ, ಈ ಸಮಯದಲ್ಲಿ ಬರುವ ಭಾವನಾತ್ಮಕ ಏರಿಳಿತಗಳನ್ನು ಬಹಳ ಸುಲಭವಾಗಿ ನಿಭಾಯಿಸಬಹುದು.

ಋತುಬಂಧ ನಮ್ಮ ಚೈತನ್ಯದ ಮುಕ್ತಾಯವಲ್ಲ; ಇದು ಜೀವನದ ಹೊಸ ಹಂತದ ಆರಂಭ. ಈ ಹಂತಕ್ಕೆ ಸಹಾನುಭೂತಿ ಮತ್ತು ತಿಳುವಳಿಕೆ ಬೇಕಾಗಿವೆ. ಋತುಬಂಧದ ಸಮಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ಮಾತನಾಡಲು ನಾವು ಶುರು ಮಾಡಿದರೆ, ಮಹಿಳೆಯರು ಈ ಪರಿವರ್ತನೆಯನ್ನು ಹೆಚ್ಚು ಸಶಕ್ತವಾಗಿ, ಸ್ಪಷ್ಟತೆಯಿಂದ ಮತ್ತು ಸ್ವಾಭಿಮಾನದಿಂದ ಎದುರಿಸಲು ಸಾಧ್ಯವಾಗುತ್ತದೆ.

ಡಾ.ಕವಿತಾ ಕೋವಿ, ಮುಖ್ಯಸ್ಥೆ- ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.