
ಚಿತ್ರ: ಗೆಟ್ಟಿ
ಹೃದಯಾಘಾತ ಒಮ್ಮೆಗೆ ಸಂಭವಿಸುವುದಲ್ಲ. ಅನೇಕ ಬಾರಿ ನಿಧಾನವಾಗಿ ಸಣ್ಣ ಸೂಚನೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೂಚನೆಯನ್ನು ‘ಲಘು ಹೃದಯಾಘಾತ’ (Minor Heart Attack) ಎಂದು ಕರೆಯಲಾಗುತ್ತದೆ. ಈ ಸಂದರ್ಭಗಳಲ್ಲಿ ಎಚ್ಚರ ವಹಿಸುವುದರಿಂದ ಭಾರಿ ಹೃದಯಾಘಾತವನ್ನು ತಪ್ಪಿಸಬಹುದು ಎಂದು ವೈದ್ಯರಾದ ಡಾ. ಬಿ. ಗಿರೀಶ್ ಹೇಳುತ್ತಾರೆ.
ಲಘು ಹೃದಯಾಘಾತ ಎಂದರೇನು?
ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಕೊರೊನರಿ ಧಮನಿಯೊಳಗೆ ಕೊಬ್ಬಿನಾಂಶ ಅಥವಾ ರಕ್ತ ಹೆಪ್ಪುಗಟ್ಟುವಿಕೆ (clot) ಯಿಂದ ಲಘು ಹೃದಯಾಘಾತ ಉಂಟಾಗುತ್ತದೆ. ಇದರಿಂದಾಗಿ ಹೃದಯದ ಒಂದು ಭಾಗಕ್ಕೆ ರಕ್ತ ಸರಿಯಾಗಿ ಪೂರೈಕೆಯಾಗದೇ ಇದ್ದಾಗ ಹೃದಯದ ಮಾಂಸಖಂಡಗಳಿಗೆ ಸಣ್ಣ ಪ್ರಮಾಣದ ಹಾನಿ ಉಂಟಾಗುತ್ತದೆ.
ಇದನ್ನು ‘Non-ST Elevation Myocardial Infarction (NSTEMI)’ ಎಂದೂ ಕರೆಯಲಾಗುತ್ತದೆ.
ಲಘು ಹೃದಯಾಘಾತದ ಲಕ್ಷಣಗಳು ಬಹಳ ಸೌಮ್ಯವಾಗಿರಬಹುದು. ಅನೇಕರು ಅದನ್ನು ‘ಗ್ಯಾಸ್ಟ್ರಿಕ್’ ಅಥವಾ ‘ಆಮ್ಲಪಿತ್ತ’ ಎಂದು ತಪ್ಪಾಗಿ ಊಹಿಸಿ ನಿರ್ಲಕ್ಷ್ಯ ಮಾಡುತ್ತಾರೆ.
ಗಮನಿಸಬೇಕಾದ ಪ್ರಮುಖ ಲಕ್ಷಣಗಳು:
ಎದೆ ನೋವು ಅಥವಾ ಒತ್ತಡ: ಎದೆಯಲ್ಲಿ ಭಾರವಾದ, ಬಿಗಿಯಾದ ಅಥವಾ ಬೆಂಕಿ ಉರಿಯುವ ಅನುಭವವು ಕೆಲ ನಿಮಿಷಗಳವರೆಗೆ ಅಥವಾ ಆಗಾಗ ಕಾಣಿಸಿಕೊಳ್ಳಬಹುದು.
ಭುಜ, ಬೆನ್ನು, ಕುತ್ತಿಗೆ, ತೋಳು ಅಥವಾ ಹಲ್ಲು, ದವಡೆ ಭಾಗಕ್ಕೆ ನೋವು ವಿಸ್ತರಿಸುತ್ತದೆ.
ದೌರ್ಬಲ್ಯ ಅಥವಾ ದಣಿವು: ಹೆಚ್ಚು ದಣಿವಾಗುತ್ತದೆ. ಕೆಲಸದಲ್ಲಿ ಆಲಸ್ಯ ಉಂಟಾಗುತ್ತದೆ.
ಉಸಿರಾಟದ ತೊಂದರೆ: ಲಘು ಕೆಲಸಗಳಿಗೂ ಎದುಸಿರು ಬರುತ್ತದೆ.
ಬೆವರು, ವಾಕರಿಕೆ, ತಲೆ ಸುತ್ತು, ಅಜೀರ್ಣ, ಹೊಟ್ಟೆ ಉರಿಯುವುದು ಅಥವಾ ಉಬ್ಬುವುದು ಕಂಡುಬರುತ್ತದೆ.
ತ್ವರಿತ ಪರೀಕ್ಷೆ ಹಾಗೂ ಚಿಕಿತ್ಸೆ:
ಆಸ್ಪತ್ರೆಯಲ್ಲಿ ಇಸಿಜಿ (ECG) ಹಾಗೂ ರಕ್ತಪರೀಕ್ಷೆ (Troponin test) ಮೂಲಕ ಹೃದಯಾಘಾತವನ್ನು ಪತ್ತೆ ಹಚ್ಚಬಹುದು.
ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತಿದ್ದರೆ, ಅದನ್ನು ಔಷಧಿಗಳ ಮೂಲಕ ಅಥವಾ ಆಂಜಿಯೋಪ್ಲಾಸ್ಟಿ (angioplasty) ಮೂಲಕ ತೆರವುಗೊಳಿಸಲಾಗುತ್ತದೆ.
ಚಿಕಿತ್ಸೆ ತಡವಾದರೆ ಹೃದಯದ ಶಕ್ತಿ ಶಾಶ್ವತವಾಗಿ ಕುಗ್ಗಬಹುದು.
ಹೃದಯವನ್ನು ರಕ್ಷಿಸುವ ಸರಳ ಮಾರ್ಗಗಳು:
ಧೂಮಪಾನ ಹಾಗೂ ತಂಬಾಕನ್ನು ಸಂಪೂರ್ಣವಾಗಿ ನಿಲ್ಲಿಸಿ.
ಪ್ರತಿ ದಿನ ಕನಿಷ್ಠ 30 ನಿಮಿಷಗಳ ಚುರುಕಾದ ನಡಿಗೆ ಅಥವಾ ವ್ಯಾಯಾಮ.
ರಕ್ತದ ಒತ್ತಡ, ಮಧುಮೇಹ ಹಾಗೂ ಕೊಬ್ಬಿನಾಂಶವನ್ನು ನಿಯಂತ್ರಣವಾಗಿಡಿ. ಆಗಾಗ ಪರೀಕ್ಷಿಸುವುದು ಉತ್ತಮ.
ಮಾನಸಿಕ ಒತ್ತಡದ ನಿಯಂತ್ರಣಕ್ಕಾಗಿ ಯೋಗ ಹಾಗೂ ಧ್ಯಾನ ಮಾಡುವುದು.
ನಿಯಮಿತವಾಗಿ ಆರೋಗ್ಯದ ಪರೀಕ್ಷೆ ಹಾಗೂ ವೈದ್ಯರ ಸಲಹೆ ಪಡೆಯುವುದು.
ಲಘು ಹೃದಯಾಘಾತ ಎಂದರೆ, ಸಣ್ಣ ಸಮಸ್ಯೆ ಎಂದು ಅರ್ಥವಲ್ಲ. ಅದು ನಿಮ್ಮ ಹೃದಯದಿಂದ ಬಂದ ಎಚ್ಚರಿಕೆಯ ಸಂಕೇತ. ಎದೆನೋವು, ಉಸಿರಾಟದ ತೊಂದರೆ ಹಾಗೂ ಅಸಹಜ ದಣಿವನ್ನು ಎಂದಿಗೂ ಕಡೆಗಣಿಸಬೇಡಿ.
ಲೇಖಕರು: ಡಾ. ಗಿರೀಶ್ ಬಿ. ನವಸುಂಡಿ, ನಿರ್ದೇಶಕರು, ಕ್ಯಾಥ್‌ಲ್ಯಾಬ್, ಅಪೊಲೊ ಆಸ್ಪತ್ರೆ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.