ADVERTISEMENT

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಎಷ್ಟು ಆರೋಗ್ಯಕರ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 10:40 IST
Last Updated 23 ಜನವರಿ 2026, 10:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗೆಟ್ಟಿ ಚಿತ್ರ

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ. ಸಾಮಾನ್ಯವಾಗಿ 6 ರಿಂದ 8 ಗಂಟೆಗಳ ಕಾಲ ನಿದ್ದೆಯಲ್ಲಿರುತ್ತೇವೆ. ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ನಿರ್ಜಲೀಕರಣ ತಡೆಯಲು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಉತ್ತಮ. ಇದರಿಂದ ಆರೋಗ್ಯಕ್ಕೆ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

ADVERTISEMENT

ಜೀರ್ಣಕ್ರಿಯೆ ಮತ್ತು ಚಯಾಪಚಯಕ್ಕೆ ಸಹಕಾರಿ

ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಅಥವಾ ತಣ್ಣಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನಿದ್ದೆಯಲ್ಲಿದ್ದಾಗ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದ ಜೀರ್ಣಕ್ರಿಯೆ ತಾತ್ಕಾಲಿಕವಾಗಿ ನಿಂತಿರುತ್ತದೆ. ನೀರು ಕುಡಿದ ತಕ್ಷಣ ಕರುಳು ಹಾಗೂ ಜಠರ ತಮ್ಮ ಕಾರ್ಯವನ್ನು ವೇಗಗೊಳಿಸುತ್ತವೆ. ಅಲ್ಲದೇ ಮಲಬದ್ಧತೆ ನಿವಾರಣೆಯಾಗುತ್ತದೆ. ಕರುಳಿಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಮೂತ್ರಪಿಂಡವು ವಿಷಕಾರಿ ರಾಸಾಯನಿಕಗಳನ್ನು ದೇಹದಿಂದ ಹೊರ ಹಾಕಲು ಸಹಕಾರಿಯಾಗಿದೆ.

ಪೋಷಕಾಂಶಗಳ ಹೀರಿಕೊಳ್ಳಲು ಸಹಕಾರಿ

ಬೆಳಿಗ್ಗೆ ಎದ್ದ ತಕ್ಷಣ ಆಯಾಸದ ಅನುಭವವಾಗುತ್ತಿದ್ದರೆ, ನೀರು ಕುಡಿಯುವುದರಿಂದ ಇದನ್ನು ಪರಿಹರಿಸಬಹುದು. ದೇಹ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ನೀರು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

ಆಮ್ಲಜನಕದ ಪೂರೈಕೆ

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದರಿಂದ ದೇಹವು ಸಂಪೂರ್ಣವಾಗಿ ಎಚ್ಚರಗೊಳ್ಳುತ್ತದೆ. ಇದರಿಂದ ದೇಹದ ಪ್ರತಿ ಭಾಗಕ್ಕೂ ಆಮ್ಲಜನಕದ ಪೂರೈಕೆಯಾಗುತ್ತದೆ. ಏಕಾಗ್ರತೆ ಹಾಗೂ ಸೃಜನಶೀಲ ಆಲೋಚನೆಗಳಿಗೆ ಮಿದುಳನ್ನು ಸಕ್ರಿಯಗೊಳಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ನೀರು ದುಗ್ಧರಸ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಅತ್ಯಗತ್ಯ. ಇದು ದೇಹದ ವಿವಿಧ ಭಾಗಗಳಿಗೆ ರೋಗನಿರೋಧಕ ಜೀವಕೋಶಗಳನ್ನು ಸಾಗಾಣಿಕೆ ಮಾಡುತ್ತದೆ. ಇದರಿಂದ ಲಾಲಾರಸ ಮತ್ತು ಲೋಳೆಯ ಉತ್ಪಾದನೆ ಸರಾಗವಾಗುತ್ತದೆ.

ಚರ್ಮದ ಮತ್ತು ಹೃದಯ ಆರೋಗ್ಯ

ಚರ್ಮದ ಆರೋಗ್ಯಕ್ಕೆ ನೀರು ಸಹಕಾರಿಯಾಗಿದೆ. ಇದು ಒಣ ಚರ್ಮದ ಸಮಸ್ಯೆಯನ್ನು ದೂರ ಮಾಡುತ್ತದೆ. ಚರ್ಮದಲ್ಲಿನ ವಿಷಕಾರಿ ರಾಸಾಯನಿಕಗಳನ್ನು ಬೆವರಿನ ಮೂಲಕ ಹೊರಹಾಕಲು ಸಹಕಾರಿಯಾಗಿದೆ. ಚರ್ಮದ ಕಾಂತಿ ಹೆಚ್ಚಾಗುತ್ತದೆ. ಹೆಚ್ಚು ಸಮಯದವರೆಗೆ ನೀರು ಕುಡಿಯದಿರುವುದರಿಂದ ಹೃದಯಕ್ಕೆ ಒತ್ತಡ ಉಂಟಾಗುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಒಳ್ಳೆಯದು.

ಬಿಸಿ ನೀರು ಅಥವಾ ತಣ್ಣಗಿನ ನೀರು ಈ ಎರಡರಲ್ಲಿ ಅಷ್ಟೇನು ವ್ಯಾತ್ಯಾಸವಿಲ್ಲ. ಅನಾರೋಗ್ಯದ ವೇಳೆ ಬಿಸಿನೀರು ಉತ್ತಮವಾಗಿದೆ. ಆದರೆ ಹೆಚ್ಚು ಬಿಸಿಯಾದ ನೀರು ಕುಡಿಯುವ ಬದಲು, ಕಾಯಿಸಿ ತಣ್ಣಗಾದ ಮೇಲೆ ಕುಡಿಯುವುದು ಸೂಕ್ತವಾಗಿದೆ.

ಲೇಖಕರು: ಡಾ. ಅರವಿಂದ್ ಎಸ್. ಎನ್. ಪ್ರಮುಖ ಸಲಹೆಗಾರ, ಆಂತರಿಕ ಔಷಧ, ಆಸ್ಟರ್ ಆರ್ವಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.