ADVERTISEMENT

ಅಪ್ಪಿತಪ್ಪಿಯೂ ಬಾಯಿ ಹುಣ್ಣುಗಳನ್ನು ನಿರ್ಲಕ್ಷಿಸಬೇಡಿ: ರೋಗಕ್ಕೆ ಕಾರಣವಾಗುವುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 11:08 IST
Last Updated 10 ಫೆಬ್ರುವರಿ 2026, 11:08 IST
   

ನಮ್ಮಲ್ಲಿ ಹೆಚ್ಚಿನವರು ಯಾವುದಾದರೊಂದು ಸಂದರ್ಭದಲ್ಲಿ ಬಾಯಿ ಹುಣ್ಣಿನ ಸಮಸ್ಯೆಯನ್ನು ಎದುರಿಸಿಯೇ ಇರುತ್ತೇವೆ. ಈ ಹುಣ್ಣುಗಳು ಸಣ್ಣದಾಗಿದ್ದರೂ ನೋವಿನಿಂದ ಕೂಡಿರುತ್ತವೆ. ಮಸಾಲೆಯುಕ್ತ ಆಹಾರವನ್ನು ತಿನ್ನಲು ಅಥವಾ ಬಿಸಿ ಪಾನೀಯಗಳನ್ನು ಕುಡಿಯಲು ಕಷ್ಟವಾಗುವಂತೆ ಮಾಡುತ್ತವೆ. ಇವು ಸಾಮಾನ್ಯವಾಗಿ ಎಲ್ಲರಿಗೂ ಬರುವುದರಿಂದ ಇವುಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಹುಣ್ಣುಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ವಾರಗಳಲ್ಲಿ ಮಾಯವಾಗುತ್ತವೆ.

ಆದರೆ, ಈ ಹುಣ್ಣು ಬೇಗ ವಾಸಿಯಾಗದಿದ್ದರೆಮ ಪದೇ ಪದೇ ಮರುಕಳಿಸುತ್ತಿದ್ದರೆ ಅಥವಾ ದೊಡ್ಡದಾಗುತ್ತಿದ್ದರೆ ಅದು ಬಾಯಿ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಯ ಬಗ್ಗೆ ದೇಹವು ನೀಡುತ್ತಿರುವ ಎಚ್ಚರಿಕೆಯಾಗಿರಬಹುದು. ಭಾರತದಲ್ಲಿ, ವಿಶೇಷವಾಗಿ 35 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚು ಕಂಡುಬರುತ್ತಿದೆ. ಬಾಯಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುವುದರಿಂದ ಜತೆಗೆ ಯಾವುದೇ ನೋವು ಕಾಣಿಸಿಕೊಳ್ಳದ ಕಾರಣ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಹೀಗಾಗಿ ಅನೇಕ ಪ್ರಕರಣಗಳು ತಡವಾಗಿ ಪತ್ತೆಯಾಗುತ್ತಿವೆ.

ಬಾಯಿಯ ಒಳಪದರವು ತನ್ನನ್ನು ತಾನು ಸರಿಪಡಿಸಿಕೊಳ್ಳುವುದರಿಂದ ಸಾಮಾನ್ಯ ಬಾಯಿ ಹುಣ್ಣುಗಳು ಏಳರಿಂದ 14 ದಿನಗಳೊಳಗೆ ವಾಸಿಯಾಗುತ್ತವೆ. ಆದರೆ ಮೂರು ವಾರಗಳ ನಂತರವೂ ಹುಣ್ಣು ವಾಸಿಯಾಗದಿದ್ದರೆ ಸೂಕ್ತ ಚಿಕಿತ್ಸೆ ಅಗತ್ಯವಾಗಿರುತ್ತದೆ. ಏಕೆಂದರೆ ಬಾಯಿಯ ಒಳಪದರದಲ್ಲಿರುವ ಜೀವಕೋಶಗಳು ಅಂದರೆ ನಾಲಿಗೆ, ಒಸಡುಗಳು, ಕೆನ್ನೆಯ ಒಳಭಾಗ, ಬಾಯಿಯ ತಳ ಅಥವಾ ಬಾಯಿಯ ಮೇಲ್ಭಾಗದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಬಾಯಿ ಕ್ಯಾನ್ಸರ್ ಆರಂಭವಾಗುತ್ತದೆ. ಹೀಗಾಗಿ, ಹುಣ್ಣು ವಾಸಿಯಾಗುವ ಬದಲು ಹಾಗೆಯೇ ಉಳಿಯುತ್ತದೆ, ಅದರ ಅಂಚುಗಳು ಗಟ್ಟಿಯಾಗುತ್ತವೆ ಅಥವಾ ನಿಧಾನವಾಗಿ ಗಾತ್ರದಲ್ಲಿ ದೊಡ್ಡದಾಗುತ್ತವೆ. ಈ ಕಾರಣಕ್ಕಾಗಿಯೇ, ‘ವಾಸಿಯಾಗದ ಹುಣ್ಣು’ ಕ್ಯಾನ್ಸರ್‌ನ ಆರಂಭಿಕ ಮತ್ತು ಪ್ರಮುಖ ಎಚ್ಚರಿಕೆಯ ಚಿಹ್ನೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ADVERTISEMENT

ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳೇನು?

  • ಆರಂಭಿಕ ಹಂತಗಳಲ್ಲಿ ನೋವು ಇರುವುದೇ ಇಲ್ಲ. ಜನರು ವೈದ್ಯರ ಬಳಿಗೆ ಹೋಗಲು ವಿಳಂಬ ಮಾಡಲು ಇದೂ ಒಂದು ಪ್ರಮುಖ ಕಾರಣವಾಗಿದೆ.

  • ಕೆಲವೊಮ್ಮೆ, ಬಾಯಿ ಕ್ಯಾನ್ಸರ್‌ನ ಆರಂಭಿಕ ಹಂತವು ಸಣ್ಣ ಕಿರಿಕಿರಿ ಅಥವಾ ಒರಟಾದ ಚರ್ಮದಂತೆ ಕಂಡುಬರಬಹುದು. ಅಥವಾ ಹಲ್ಲಿನಿಂದ ಕಚ್ಚಿದ ಗಾಯದಂತೆ ಕಾಣಿಸಬಹುದು.

  • ಜನರು ತಮ್ಮ ಬಾಯಿಯಲ್ಲಿ ಕೆಂಪು ಕಲೆ, ಬಿಳಿ ಕಲೆ ಅಥವಾ ಕೆಂಪು ಮತ್ತು ಬಿಳಿ ಮಿಶ್ರಿತ ಕಲೆಗಳನ್ನು ಗಮನಿಸಬಹುದು. ಜೀವಕೋಶಗಳು ಸರಿಯಾಗಿ ಬೆಳೆಯದಿರುವುದೇ ಇದಕ್ಕೆ ಕಾರಣ.

  • ಕೆಂಪು ಕಲೆಗಳಿಂದ ಸುಲಭವಾಗಿ ರಕ್ತಸ್ರಾವವಾಗಬಹುದು ಮತ್ತು ಬಿಳಿ ಕಲೆಗಳು ದಪ್ಪಗಿದ್ದು ಸುಲಭವಾಗಿ ಕೆರೆದು ತೆಗೆಯಲು ಬರುವುದಿಲ್ಲ.

  • ಗಮನಕ್ಕೆ ಬಾರದಿರುವ ಮತ್ತೊಂದು ಲಕ್ಷಣವೆಂದರೆ ಕೆನ್ನೆ, ನಾಲಿಗೆ ಅಥವಾ ಒಸಡುಗಳಲ್ಲಿ ಕಂಡುಬರುವ ಗೆಡ್ಡೆ ಅಥವಾ ದಪ್ಪಗಾದ ಭಾಗ. ಇದನ್ನು ಬೆರಳಿನಿಂದ ಅಥವಾ ನಾಲಿಗೆಯಿಂದ ಮುಟ್ಟಿ ನೋಡಿದಾಗ ಗಟ್ಟಿಯಾಗಿರುತ್ತದೆ. ಈ ಗೆಡ್ಡೆಯು ಮನೆಯ ಮದ್ದು ಅಥವಾ ಆ್ಯಂಟಿ ಬಯೋಟಿಕ್ ಬಳಕೆಯಿಂದ ಕಡಿಮೆಯಾಗುವುದಿಲ್ಲ.

  • ಕೆಲವು ರೋಗಿಗಳು ಬಿಸಿ ಅಥವಾ ಖಾರವಾದ ಆಹಾರವನ್ನು ಸೇವಿಸಿದಾಗ ಬಾಯಿ ಉರಿ ಅನುಭವಿಸಬಹುದು ಅಥವಾ ಗಂಟಲಿನಲ್ಲಿ ಏನೋ ಸಿಲುಕಿಕೊಂಡಂತಾಗಬಹುದು. ಕ್ಯಾನ್ಸರ್ ಗಡ್ಡೆಯು ಸುತ್ತಮುತ್ತಲಿನ ಸ್ನಾಯುಗಳ ಮೇಲೆ ಪರಿಣಾಮ ಬೀರುವುದರಿಂದ, ಅಗಿಯುವುದು, ನಾಲಿಗೆಯ ಚಲನೆ ಅಥವಾ ಬಾಯಿಯನ್ನು ಪೂರ್ತಿಯಾಗಿ ತೆರೆಯುವುದು ಕಷ್ಟವಾಗಬಹುದು.

  • ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಸಹ ಹೋಗದ ದುರ್ವಾಸನೆ ಮತ್ತೊಂದು ಸೂಕ್ಷ್ಮ ಲಕ್ಷಣವಾಗಿದೆ. ಕ್ಯಾನ್ಸರ್ ಜೀವಕೋಶಗಳು ಅಂಗಾಂಶಗಳನ್ನು ನಾಶಪಡಿಸಲು ಪ್ರಾರಂಭಿಸಿದಾಗ, ಅವು ಸೋಂಕು ಮತ್ತು ಅಂಗಾಂಶಗಳ ಸಾವಿಗೆ ಕಾರಣವಾಗುತ್ತವೆ.

  • ಬಾಯಿ ಅಥವಾ ನಾಲಿಗೆಯಿಂದ ಆಕಸ್ಮಿಕ ರಕ್ತಸ್ರಾವ, ತುಟಿಗಳಲ್ಲಿ ಮರಗಟ್ಟುವಿಕೆ ಅಥವಾ ಹಲ್ಲಿನ ಸಮಸ್ಯೆಗಳಿಲ್ಲದಿದ್ದರೂ ಸಡಿಲವಾಗುವುದು ಇತರೆ ಲಕ್ಷಣಗಳಾಗಿವೆ. ಕಿವಿ ಅಥವಾ ದವಡೆಗೆ ಹರಡುವ ನೋವು ರೋಗವು ಉಲ್ಬಣಗೊಂಡ ಹಂತದಲ್ಲಿ ಕಾಣಿಸಿಕೊಳ್ಳಬಹುದು, ಆದರೆ ಅಷ್ಟರಲ್ಲಾಗಲೇ ಕ್ಯಾನ್ಸರ್ ಹೆಚ್ಚು ಹರಡಿರುವ ಸಾಧ್ಯತೆ ಇರುತ್ತದೆ.

ತಂಬಾಕು, ಸೇದುವ ರೂಪದಲ್ಲಿರಲಿ ಅಥವಾ ಅಗಿಯುವ ರೂಪದಲ್ಲಿರಲಿ, ಬಾಯಿಯ ಒಳಪದರ ಮತ್ತು ಜೀವಕೋಶಗಳಿಗೆ ಪದೇ ಪದೇ ಹಾನಿ ಮಾಡುತ್ತದೆ. ಮದ್ಯಪಾನವು ಬಾಯಿಯ ರಕ್ಷಣಾತ್ಮಕ ಪದರವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಸಹಜ ಜೀವಕೋಶಗಳು ವೃದ್ಧಿಯಾಗುವುದು ಸುಲಭವಾಗುತ್ತದೆ. ಕಳಪೆ ದಂತ ಆರೋಗ್ಯ, ಬಾಯಿಗೆ ಸರಿಯಾಗಿ ಹೊಂದದ ಮತ್ತು ಕಿರಿಕಿರಿ ಉಂಟುಮಾಡುವ ಕೃತಕ ಹಲ್ಲುಗಳು ಮತ್ತು ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ ಪಿ ವಿ) ಸೋಂಕು ಕೂಡ ಅಪಾಯಕಾರಿ ಅಂಶಗಳಾಗಿವೆ. ಆದರೆ, ತಂಬಾಕು ಬಳಸದ ವ್ಯಕ್ತಿಗಳಲ್ಲೂ ಬಾಯಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು ಎಂಬುದು ಗಮನಿಸಬೇಕಾದ ವಿಷಯ. ಅದಕ್ಕಾಗಿಯೇ ಸೂಕ್ಷ್ಮ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.

ಆರಂಭಿಕ ಹಂತದಲ್ಲೇ ಪತ್ತೆಯಾದರೆ, ಬಾಯಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಚಿಕಿತ್ಸೆಯು ಗಡ್ಡೆಯ ಗಾತ್ರ ಮತ್ತು ಅದು ಹರಡಿರುವ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದ ಸಣ್ಣ ಕ್ಯಾನ್ಸರ್‌ ಗಳನ್ನು ಕೇವಲ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು, ಇದರಿಂದ ಮಾತನಾಡುವ ಮತ್ತು ಆಹಾರ ನುಂಗುವ ಸಾಮರ್ಥ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಕೆಲವು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆಯ ನಂತರ ಉಳಿದಿರುವ ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡಲು ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ. ರೋಗವು ಮುಂದಿನ ಹಂತಗಳಿಗೆ ತಲುಪಿದ್ದಲ್ಲಿ, ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವ ಔಷಧಿಗಳ ಸಂಯೋಜಿತ ಚಿಕಿತ್ಸೆ ಬೇಕಾಗಬಹುದು. ರೋಗವು ಎಷ್ಟು ಬೇಗ ಪತ್ತೆಯಾಗುತ್ತದೆಯೋ, ಚಿಕಿತ್ಸೆಯು ಅಷ್ಟು ಸರಳವಾಗಿರುತ್ತದೆ ಮತ್ತು ಗುಣಮುಖರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಬಾಯಿಯ ಕ್ಯಾನ್ಸರ್ ದೇಹಕ್ಕೆ ಎಚ್ಚರಿಕೆ ನೀಡುವುದು ಹೇಗೆ?

ಬಾಯಿ ಕ್ಯಾನ್ಸರ್ ಜೀವಕ್ಕೆ ಸಂಚಕಾರ ತರುವ ಮೊದಲೇ ದೇಹವು ಎಚ್ಚರಿಕೆಗಳನ್ನು ನೀಡುತ್ತದೆ. ಬಾಯಿ ಹುಣ್ಣು ಕೇವಲ ಹಲ್ಲಿನ ಸಮಸ್ಯೆಯಲ್ಲ, ಬದಲಿಗೆ ಅದೊಂದು ಗಂಭೀರ ಸಂದೇಶ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಕನ್ನಡಿಯ ಮುಂದೆ ನಿಂತು ನಿಯಮಿತವಾಗಿ ಬಾಯಿಯನ್ನು ಸ್ವತಃ ಪರೀಕ್ಷಿಸಿಕೊಳ್ಳುವುದು, ಬಾಯಿಯ ಸ್ವಚ್ಛತೆಯನ್ನು ಕಾಪಾಡುವುದು, ತಂಬಾಕು ಬಿಡುವುದು, ಮದ್ಯಪಾನವನ್ನು ಮಿತಿಗೊಳಿಸುವುದು ಮತ್ತು ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸುವುದು ನಿಮ್ಮ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ತರಬಲ್ಲದು.

ಒಂದು ವೇಳೆ ಹುಣ್ಣು ಎರಡು ವಾರಗಳಿಗಿಂತ ಹೆಚ್ಚು ಕಾಲ ಉಳಿದಿದ್ದರೆ, ಚಿಕಿತ್ಸೆ ಪಡೆಯಲು ನೋವು ಹೆಚ್ಚಾಗುವವರೆಗೆ ಕಾಯಬೇಡಿ. ನಿಮ್ಮ ಬಾಯಿ ನಿಮಗೆ ಎಚ್ಚರಿಕೆ ನೀಡಬಲ್ಲದು. ಅದಕ್ಕೆ ಕಿವಿಗೊಡಿ. ಏಕೆಂದರೆ ನಿಮ್ಮ ಜೀವನವೇ ಈ ಸೂಚನೆಯ ಮೇಲೆ ಅವಲಂಬಿತವಾಗಿರಬಹುದು.

(ಲೇಖನರು: ಡಾ. ವಿಜಯ್ ಪಿಳ್ಳೈ, ಸೀನಿಯರ್ ಕನ್ಸಲ್ಟೆಂಟ್, ಹೆಡ್ ಅಂಡ್ ನೆಕ್ ಸರ್ಜಿಕಲ್ ಆಂಕಾಲಜಿ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.