
ಚಿತ್ರ:ಗೆಟ್ಟಿ
ಪಪ್ಪಾಯಿ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣನ್ನು ಬೆಳಗಿನ ಉಪಾಹಾರದ ಸಾಧಾರಣ ಭಾಗವೆಂದು ಪರಿಗಣಿಸಲಾಗಿದ್ದರೂ, ಪಪ್ಪಾಯಿ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಚರ್ಮದ ಆರೋಗ್ಯ ಮತ್ತು ಹೃದಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶಗಳ ಭಂಡಾರವಾಗಿದೆ. ನೈಸರ್ಗಿಕ ಕಿಣ್ವಗಳು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ನಾರಿನಾಂಶದಿಂದ ಕೂಡಿರುವ ಈ ಉಷ್ಣವಲಯದ ಹಣ್ಣು ದೈನಂದಿನ ಆರೋಗ್ಯದ ಸಾಧನವಾಗಿ ಸ್ಥಾನ ಗಳಿಸಿದೆ.
ಪಪ್ಪಾಯಿ ಜೀರ್ಣಕ್ರಿಯೆಯ ಮೇಲಿನ ಪ್ರಭಾವ ಬೀರಲಿದೆ. ಈ ಹಣ್ಣು ಪಪೈನ್ ಎಂಬ ನೈಸರ್ಗಿಕ ಜೀರ್ಣ ಕಿಣ್ವವನ್ನು ಹೊಂದಿದೆ. ಇದು ಪ್ರೋಟೀನ್‌ಗಳನ್ನು ವಿಘಟಿಸಲು ಸಹಾಯ ಮಾಡುತ್ತದೆ. ಊಟದ ನಂತರ ಹೊಟ್ಟೆ ಉಬ್ಬುವಿಕೆ, ಅಜೀರ್ಣ ಅಥವಾ ಹೊಟ್ಟೆ ಭಾರವನ್ನು ಅನುಭವಿಸುವ ಜನರಿಗೆ ಪಪ್ಪಾಯಿ ಸೇವನೆ ಅನುಕೂಲವಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯಿ ಪ್ರಭಾವಶಾಲಿಯಾಗಿದೆ. ಹಣ್ಣಿನ ಒಂದು ಸಣ್ಣ ಭಾಗದ ಸೇವನೆ ವಿಟಮಿನ್ ಸಿ ಸೇವನೆಗಿಂತ ಹೆಚ್ಚಿನ ಕೊಡುಗೆ ನೀಡುತ್ತದೆ. ವಿಟಮಿನ್ ಎ ಮತ್ತು ರೋಗನಿರೋಧಕ ಕ್ರಿಯೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಿ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಆನಾರೋಗ್ಯದಲ್ಲಿ ಚೇತರಿಕೆ ಕಾಣಬಹುದು.
ಕ್ಯಾರೊಟಿನೋಯಿಡ್ಸ್ ಎಂಬ ನೈಸರ್ಗಿಕ ಆಹಾರ ವರ್ಣಕವು ಪಪ್ಪಾಯಿಗೆ ಕಿತ್ತಳೆ, ಹಳದಿ ಮತ್ತು ಗುಲಾಬಿ ಬಣ್ಣಗಳನ್ನು ನೀಡುತ್ತದೆ. ಕ್ಯಾರೆಟ್‌ಗಳಂತೆ, ಪಪ್ಪಾಯಿಗಳು ವಿಶೇಷವಾಗಿ ಬೀಟಾ-ಕ್ಯಾರೋಟಿನ್‌ನ ಹೊಂದಿವೆ. ದೇಹವು ಬೀಟಾ-ಕ್ಯಾರೋಟಿನ್ ಅನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ಈ ಪೋಷಕಾಂಶಗಳು ಕಣ್ಣಿನ ದೃಷ್ಟಿಗೆ ಅತ್ಯಗತ್ಯ. ಒಂದು ಕಪ್ ಕತ್ತರಿಸಿದ ಪಪ್ಪಾಯಿಯು 68 ಮೈಕ್ರೋ ಗ್ರಾಂ ವಿಟಮಿನ್ ಎ ಹೊಂದಿದೆ.
ಪಪ್ಪಾಯಿ ಹೃದಯ ರಕ್ತನಾಳದ ಆರೋಗ್ಯವನ್ನು ಬೆಂಬಲಿಸುವ ಮೂಲಕ ದೀರ್ಘಕಾಲೀನ ಪ್ರಯೋಜನಗಳಿಗೂ ಸಹಕಾರಿಯಾಗಿದೆ. ಇದರ ನಾರು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಲೈಕೋಪೀನ್‌ನಂತಹ ಉತ್ಕರ್ಷಣ ನಿರೋಧಕಗಳು ಹೃದಯ ಕಾಯಿಲೆಯಲ್ಲಿ ಒಳಗೊಂಡಿರುವ ಉತ್ಕರ್ಷಣ ಹಾನಿಯನ್ನು ಎದುರಿಸುತ್ತವೆ. ಹಣ್ಣಿನ ಪೊಟ್ಯಾಸಿಯಮ್ ಅಂಶವು ಹೆಚ್ಚುವರಿ ಸೋಡಿಯಂ ಅನ್ನು ಎದುರಿಸಲು ಸಹಾಯ ಮಾಡುವ ಮೂಲಕ ರಕ್ತದೊತ್ತಡದ ಸಮತೋಲನಕ್ಕೆ ಕೊಡುಗೆ ನೀಡುತ್ತದೆ.
ಚರ್ಮ ಆರೈಕೆಯಲ್ಲಿ ಪಪ್ಪಾಯಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಸಿ, ವಿಟಮಿನ್ ಎ ಮತ್ತು ಹಣ್ಣಿನ ಕಿಣ್ವಗಳ ಸಂಯೋಜನೆಯು ಚರ್ಮದ ಅಂಗಾಂಶಗಳನ್ನು ದುರಸ್ತಿ ಮಾಡಲು, ವರ್ಣ ದ್ರವ್ಯವನ್ನು ಕಡಿಮೆ ಮಾಡಲು ಮತ್ತು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ನೀವು ನೈಸರ್ಗಿಕ ಹೊಳಪು ಅಥವಾ ಸುಧಾರಿತ ವಿನ್ಯಾಸವನ್ನು ಹುಡುಕುತ್ತಿದ್ದರೆ, ನಿಮ್ಮ ಆಹಾರಕ್ಕೆ ಪಪ್ಪಾಯಿ ಸೇರಿಸಿ. ಪಪ್ಪಾಯಿ ಚರ್ಮವನ್ನು ಪೋಷಿಸುತ್ತದೆ.
ಯಾವಾಗ, ಎಷ್ಟು ಪ್ರಮಾಣದಲ್ಲಿ ಪಪ್ಪಾಯಿ ಸೇವಿಸಬೇಕು?
ಪಪ್ಪಾಯಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುವುದು ಉತ್ತಮ. ಇದರಿಂದಾಗಿ ಹಣ್ಣಿನಲ್ಲಿರುವ ಕಿಣ್ವಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಇದು ದಿನವಿಡೀ ಜೀರ್ಣಕ್ರಿಯೆಯನ್ನು ಅತ್ಯುತ್ತಮಗೊಳಿಸುತ್ತದೆ.
ಊಟದ ನಂತರದ ಹೊಟ್ಟೆ ಉಬ್ಬುವಿಕೆಯನ್ನು ಅನುಭವಿಸುತ್ತಿದ್ದರೆ, ಸಂಜೆಯ ವೇಳೆಯಲ್ಲಿ ಸಹ ಇದನ್ನು ಸೇವಿಸಬಹುದು.
ವಯಸ್ಕರು ದಿನಕ್ಕೆ 150 ರಿಂದ 200 ಗ್ರಾಂ ಮಾಗಿದ ಪಪ್ಪಾಯಿ ಸೇವನೆ ಸೂಕ್ತವಾಗಿದೆ. ಈ ಪ್ರಮಾಣದಲ್ಲಿ ಹೆಚ್ಚುವರಿ ಸಕ್ಕರೆ ಅಥವಾ ಕ್ಯಾಲೋರಿಗಳನ್ನು ಸೇರಿಸದೆ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹ ಹೊಂದಿರುವವರು ಸಹ ಪಪ್ಪಾಯಿಯನ್ನು ಸೇವಿಸಬಹುದು.
ಲ್ಯಾಟೆಕ್ಸ್ ಅಲರ್ಜಿ ಹೊಂದಿರುವವರು ಜಾಗರೂಕರಾಗಿರಬೇಕು. ಏಕೆಂದರೆ ಪಪ್ಪಾಯಿ ಸೂಕ್ಷ್ಮ ವ್ಯಕ್ತಿಗಳಲ್ಲಿ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ವೈದ್ಯರ ಸಲಹೆಯಿಲ್ಲದೆ ಗರ್ಭಾವಸ್ಥೆಯಲ್ಲಿರುವವರು ಹಸಿರು ಪಪ್ಪಾಯಿ ಸೇವನೆ ತಪ್ಪಿಸಿ.
ಪಪ್ಪಾಯಿ ಅಸಾಧಾರಣ ಪೌಷ್ಟಿಕಾಂಶಗಳನ್ನು ಹೊಂದಿರುವ ಸರಳ ಹಣ್ಣು. ಸರಿಯಾದ ಪ್ರಮಾಣ ಹಾಗೂ ಸರಿಯಾದ ಸಮಯದಲ್ಲಿ ಸೇವಿಸಿದಾಗ ಇದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಚರ್ಮ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
(ಡಾ. ಅದಿತಿ ಪ್ರಸಾದ್ ಆಪ್ಟೆ, ಹಿರಿಯ ಕ್ಲಿನಿಕಲ್ ಪೌಷ್ಟಿಕತಜ್ಞ, ಆಸ್ಟರ್ ಆರ್‌ವಿ ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.