ADVERTISEMENT

ಗರ್ಭಿಣಿಯರು ಯಾವ ರೀತಿಯ ವ್ಯಾಯಾಮ ಮಾಡಬಹುದು? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 12:58 IST
Last Updated 25 ನವೆಂಬರ್ 2025, 12:58 IST
   

ಸಾಮಾನ್ಯವಾಗಿ ಗರ್ಭಿಣಿಯರು ವ್ಯಾಯಾಮ ತಪ್ಪಿಸಿ ಕೇವಲ ವಿಶ್ರಾಂತಿ ಪಡೆಯಬೇಕು ಎಂದು ಹಲವರು ಹೇಳುತ್ತಾರೆ. ಇದು ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವ್ಯಾಯಾಮ ವಾಸ್ತವವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಗುವಿನ ಬೆಳವಣಿಗೆ ಹಾಗೂ ಹೆರಿಗೆಯನ್ನು ಸುಗಮಗೊಳಿಸುತ್ತದೆ.

ನಿಯಮಿತ ಮತ್ತು ಸರಳ ವ್ಯಾಯಾಮಗಳು ದೇಹವನ್ನು ಸದೃಢವಾಗಿಡಲು ಸಹಕಾರಿಯಾಗಿದೆ. ರಕ್ತ ಪರಿಚಲನೆ, ಸ್ನಾಯುಗಳ ಬಲಪಡಿಸುವಿಕೆ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಲು ಸಹಕಾರಿಯಾಗಿದೆ. ಇದರ ಜೊತೆಗೆ ಬೆನ್ನು ನೋವು, ಕಾಲು ಊತ, ಮಲಬದ್ಧತೆ ಮತ್ತು ನಿದ್ರೆಯ ತೊಂದರೆಗಳನ್ನು ಕಡಿಮೆ ಮಾಡುತ್ತವೆ.

ಪ್ರತಿ ದಿನ ಅರ್ಧ ಗಂಟೆ ವ್ಯಾಯಾಮ ಮಾಡುವುದು ಯಾವುದೇ ಅಪಾಯವಿಲ್ಲ. ಪ್ರಮುಖವಾಗಿ ನಡೆಯುವುದು, ಯೋಗ, ಕಾಲು ಹಾಗೂ ಕೈಗಳ ಹಿಗ್ಗಿಸುವಿಕೆ ಮಾಡಬಹುದು.

ADVERTISEMENT

ಈ ವ್ಯಾಯಾಮಗಳು ಹೊಟ್ಟೆಯ ಮೇಲೆ ಯಾವುದೇ ಒತ್ತಡವನ್ನು ಹಾಕುವುದಿಲ್ಲ. ಕೊನೆಯ ಒಂದು ತಿಂಗಳಿನಲ್ಲಿ ಸಹ ಗರ್ಭಿಣಿಯರು ವ್ಯಾಯಾಮ ಮಾಡಬಹುದಾಗಿದೆ. ಸಾಮಾನ್ಯವಾಗಿ ಗರ್ಭಧಾರಣೆಗೆ ಮುಂಚೆ ಮಹಿಳೆಯರು ದೈಹಿಕವಾಗಿ ಸದೃಢವಾಗಬೇಕಾಗುತ್ತದೆ. ಇದಕ್ಕೆ ವ್ಯಾಯಾಮ ಸಹಕಾರಿಯಾಗಿದೆ.

ವ್ಯಾಯಾಮದಿಂದ ಅನಗತ್ಯ ತೂಕದ ಹೆಚ್ಚಳವನ್ನು ಮಿತಗೊಳಿಸಬಹುದು. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ತಡೆಯಬಹುದಾಗಿದೆ. ಸೋಮಾರಿಯಾಗದೆ ದೈಹಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಸುಲಭವಾದ ಹೆರಿಗೆ ಮತ್ತು ತ್ವರಿತವಾಗಿ ಹೆರಿಗೆಯ ನಂತರ ಚೇತರಿಕೆ ಕಾಣುತ್ತಾರೆ. ವಿಶೇಷವಾಗಿ ಸೊಂಟ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುವುದರಿಂದ ಹೆರಿಗೆ ಸಮಯದಲ್ಲಿ ಹಾಗೂ ನಂತರದ ಅವಧಿಯಲ್ಲಿ ಮಹಿಳೆಯರ ಆರೋಗ್ಯಕ್ಕೆ ಸಹಕಾರಿಯಾಗಲಿದೆ.

ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯ ವ್ಯಾಯಾಮಗಳನ್ನು ಮಾಡಬಹುದಾ? 

ಖಂಡಿತವಾಗಿಯೂ ಎಲ್ಲಾ ರೀತಿಯ ವ್ಯಾಯಾಮಗಳನ್ನು ಮಾಡಬಾರದು. ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಭಾರ ಎತ್ತುವುದು, ಹೆಚ್ಚಿನ ತೀವ್ರತೆಯ ವ್ಯಾಯಾಮಗಳು, ಕ್ರೀಡೆಗಳು ಹಾಗೂ ಬೀಳುವ ಸಾಧ್ಯತೆಯಿರುವ ಚಟುವಟಿಕೆ ಮಾಡಬಾರದು. 

ಎರಡು ಮತ್ತು ಮೂರನೇ ತಿಂಗಳು ತುಂಬಿದ ನಂತರ ಮಲಗಿ ಮಾಡುವ ವ್ಯಾಯಾಮಗಳನ್ನು ಮಾಡುವಂತಿಲ್ಲ.  ಒಂದು ವೇಳೆ ತಲೆ ತಿರುಗುವಿಕೆ, ಉಸಿರಾಟದ ತೊಂದರೆ, ಎದೆ ನೋವು, ರಕ್ತಸ್ರಾವ ಅಥವಾ ತೀವ್ರ ಅಸ್ವಸ್ಥತೆ ಇದ್ದರೆ, ವ್ಯಾಯಾಮವನ್ನು ತಕ್ಷಣ ನಿಲ್ಲಿಸಬೇಕು.

ಹೃದಯ ರೋಗ, ತೀವ್ರ ರಕ್ತಹೀನತೆಯಂತಹ ಕೆಲವು ಆರೋಗ್ಯ ಸಮಸ್ಯೆಗಳಿರುವ ಮಹಿಳೆಯರು ವ್ಯಾಯಾಮದಿಂದ ದೂರವಿರುವುದು ಒಳ್ಳೆಯದು. ಆದ್ದರಿಂದ ವ್ಯಾಯಾಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

(ಡಾ. ಸುಮನ್ ಸಿಂಗ್, ಸಲಹೆಗಾರರು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ರೇನ್‌ಬೋ ಮಕ್ಕಳ ಆಸ್ಪತ್ರೆ, ಬನ್ನೇರುಘಟ್ಟ.)