ಹೆಣ್ಣಿನ ಬದುಕಿನಲ್ಲಿ ತಾಯ್ತನವೆಂಬುದು ಸುಂದರ ಗಳಿಗೆಗಳನ್ನು ಕೂಡಿಡುವ ಘಟ್ಟವಾದರೂ, ಹೆರಿಗೆ ಮತ್ತು ಅದರ ನೋವನ್ನು ನೆನೆಸಿಕೊಂಡೇ ಸಹಜವಾಗಿ ಆತಂಕಕ್ಕೆ ಈಡಾಗುವ ಹೆಣ್ಣುಮಕ್ಕಳ ಸಂಖ್ಯೆ ದೊಡ್ಡದೇ ಇದೆ. ಇದಕ್ಕಾಗಿ ಗರ್ಭಧಾರಣೆಯನ್ನು ಮುಂದೂಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ.
ಗರ್ಭಿಣಿಯಾದಾಗ ಸಹಜವಾಗಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಏರಿಳಿತಗಳಿರುತ್ತವೆ. ಪ್ರತಿಯೊಬ್ಬರ ತಾಯ್ತನದ ಅನುಭವ ಬೇರೆಯಾದರೂ ಹೆರಿಗೆ ನೋವು ಅಂದಾಕ್ಷಣ, ಅದರ ಬಗ್ಗೆ ಭಯವಂತೂ ಇದ್ದೇ ಇರುತ್ತದೆ. ಅಧ್ಯಯನಗಳ ಪ್ರಕಾರ ಶೇ 6ರಿಂದ ಶೇ 10ರಷ್ಟು ಗರ್ಭಿಣಿಯರು ಹೆರಿಗೆ ಭಯವನ್ನು ಹೊಂದಿರುತ್ತಾರೆ. ಈ ಭಯವು ಮುಖ್ಯವಾಗಿ ವೈದ್ಯಕೀಯ ಮಾಹಿತಿ ಕೊರತೆಯಿಂದ ಆಗಿರುತ್ತದೆ. ಜತೆಗೆ ಬಂಧುಗಳು, ಕುಟುಂಬದ ಸದಸ್ಯರು ಅನುಭವಿಸಿದ ಹೆರಿಗೆ ನೋವಿನ ಕಥೆಯು ಭಯವನ್ನು ಹೆಚ್ಚು ಮಾಡಿರುತ್ತದೆ.
ತಾಯ್ತನದಲ್ಲಿ ಆರೈಕೆಯೆಂಬುದು ಅತಿ ಅಗತ್ಯವಾದರೂ ವಿನಾಕಾರಣ ಆತಂಕಕ್ಕೆ ಒಳಗಾಗಬೇಕಿಲ್ಲ ಎಂಬುದನ್ನು ಗರ್ಭಿಣಿಯರು ಅರಿಯಬೇಕು. ಗರ್ಭಾವಸ್ಥೆಯಲ್ಲಿ ಎಷ್ಟು ಪೌಷ್ಟಿಕಾಂಶ ಸೇವನೆ ಮಾಡಬೇಕು, ದೈಹಿಕ ಚಟುವಟಿಕೆ ಹೇಗಿರಬೇಕು, ಯಾವ ಹಂತದಲ್ಲಿ ಪ್ರಯಾಣ ಮಾಡಿದರೆ ಒಳಿತು, ಮಗುವಿನ ಒದೆಯುವಿಕೆ ಎಷ್ಟಿರಬೇಕು, ಎಂಥ ಸಂದರ್ಭದಲ್ಲಿ ಸ್ತ್ರೀರೋಗತಜ್ಞರನ್ನು ಭೇಟಿ ಮಾಡಬೇಕು ಎಂಬೆಲ್ಲ ಪ್ರಶ್ನೆಗಳಿರುತ್ತವೆ. ಸರಿಯಾದ ಮಾರ್ಗದರ್ಶನವಿದ್ದಾಗ ಅನವಶ್ಯಕ ಭಯ ಇರುವುದಿಲ್ಲ.
ಆರೈಕೆ ಹೇಗಿರಬೇಕು?
ಸಾಂಪ್ರದಾಯಿಕ ಹಾಗೂ ಆಧುನಿಕ ಪದ್ಧತಿಯ ಆರೈಕೆಗಳೆರಡಕ್ಕೂ ಪ್ರಾಮುಖ್ಯ ನೀಡಬಹುದು. ಆದರೆ, ವಿನಾಕಾರಣ ಭಯ ಪಡುವುದನ್ನು ಬಿಡಿ. ಗರ್ಭ ಧರಿಸುವುದು ಎಂದರೆ ಕಾಯಿಲೆಯಲ್ಲ. ಬದುಕಿನ ಸಂತಸ ಘಟ್ಟ ಎಂಬುದನ್ನು ಮರೆಯಬಾರದು. ಎಂಥದ್ದೇ ಸಂದರ್ಭದಲ್ಲಿಯೂ ಸಕಾರಾತ್ಮಕ ಧೋರಣೆಯನ್ನು ಬಿಡಬೇಡಿ. ಇದರ ಜತೆಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ಸೇವನೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದ ಇರಿ. ಗರ್ಭಿಣಿಯರು ಆತ್ಮವಿಶ್ವಾಸದಿಂದ ಇರುವುದು ಮುಖ್ಯ.
ಗರ್ಭ ಧರಿಸಿದಾಗಿನಿಂದ ಹೆರಿಗೆಯವರೆಗೆ ಕಾಲ ಕಾಲಕ್ಕೆ ಮಗು ಮತ್ತು ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಹಲವು ತಂತ್ರಜ್ಞಾನಗಳಿವೆ. ಎ.ಐ ಆಧಾರಿತ ಆ್ಯಪ್‌ಗಳು ಲಭ್ಯ ಇವೆ. ಇದರಲ್ಲಿ ಸ್ತ್ರೀರೋಗತಜ್ಞರು, ಪೌಷ್ಟಿಕತಜ್ಞರು, ಯೋಗಪಟುಗಳು, ಫಿಸಿಯೋಥೆರಪಿಸ್ಟ್ ಸೇರಿದಂತೆ ತಜ್ಞರ ಜಾಲವಿರುತ್ತದೆ. ಜತೆಗೆ ಔಷಧ ಸೇವನೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಗುವಿನ ಬೆಳವಣಿಗೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇರುತ್ತದೆ. ಇಂಥದ್ದನ್ನು ಬಳಸಿಕೊಳ್ಳುವುದು ಕೂಡ ಅಗತ್ಯ. ಹಿಲೋಫೈ, ಮದರ್‌ಹುಡ್ ಕೇರ್ ಆ್ಯಪ್‌ಗಳು ಸಹಾಯಕ್ಕೆ ಬರುತ್ತವೆ. ಈ ಆ್ಯಪ್‌ಗಳು ಆಯಾ ತಾಯಂದಿರ ಅಗತ್ಯವನ್ನು ಅರಿತು ಅದಕ್ಕೆ ತಕ್ಕಂಥ ಸೇವೆ ನೀಡುತ್ತವೆ. ಪ್ರತಿ ಹಂತದಲ್ಲೂ ಅಗತ್ಯವಿರುವ ಮಾರ್ಗದರ್ಶನ ಮಾಡುತ್ತವೆ. ಬಳಸುವ ವಿವೇಚನೆ ನಮ್ಮದಾಗಿರಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.