ADVERTISEMENT

ಚಿಕ್ಕ ವಯಸ್ಸಿನಲ್ಲೆ ಬಿಳಿ ಕೂದಲಿನ ಸಮಸ್ಯೆಯೇ? ಚಿಂತೆಬಿಡಿ, ಈ ಕ್ರಮಗಳನ್ನು ಪಾಲಿಸಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 11:44 IST
Last Updated 10 ಡಿಸೆಂಬರ್ 2025, 11:44 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಬಿಳಿ ಕೂದಲು ಎಂಬುದು ಎಲ್ಲಾ ವಯಸ್ಸಿನವರಿಗೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ವಯಸ್ಸಾದವರಲ್ಲಿ ಬಿಳಿ ಕೂದಲಾಗುವುದು ಸಹಜ. ಕಿರಿಯ ವಯಸ್ಸಿನಲ್ಲೇ ಬಿಳಿ ಕೂದಲು ಬರುವುದು ಆತಂಕಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಕಾರಣ ಹಾಗೂ ಪರಿಹಾರ ತಿಳಿದುಕೊಳ್ಳೊಣ.

ಬಿಳಿ ಕೂದಲು ಬರಲು ಮುಖ್ಯ ಕಾರಣಗಳು:

ಕೂದಲಿನಲ್ಲಿರುವ ಮೆಲನಿನ್ ವರ್ಣಕ ಕಡಿಮೆಯಾದಾಗ ಬಿಳಿ ಕೂದಲು ಬೆಳೆಯುತ್ತದೆ. ಅನುವಂಶಿಕತೆ, ಅತಿಯಾದ ಮಾನಸಿಕ ಒತ್ತಡ, ಪೌಷ್ಟಿಕಾಂಶಗಳ ಕೊರತೆ, ಧೂಮಪಾನ, ಥೈರಾಯ್ಡ್ ಮತ್ತು ವಿಟಮಿನ್ ಬಿ12 ನ ಕೊರತೆ ಮುಖ್ಯ ಕಾರಣಗಳಾಗಿವೆ. ರಾಸಾಯನಿಕ ಕೂದಲು ಬಣ್ಣಗಳು ಮತ್ತು ಕಠಿಣ ಶ್ಯಾಂಪೂಗಳ ಬಳಕೆ ಸಹ ಈ ಸಮಸ್ಯೆಗೆ ಕಾರಣವಾಗುತ್ತದೆ.

ADVERTISEMENT

ಪೌಷ್ಟಿಕ ಆಹಾರಗಳ ಪ್ರಾಮುಖ್ಯತೆ:

ಆರೋಗ್ಯಕರ ಆಹಾರವು ಬಿಳಿ ಕೂದಲನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ12, ಕಬ್ಬಿಣ, ತಾಮ್ರ, ಸತು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಹಸಿರು ಎಲೆಯ ತರಕಾರಿ, ಬೀಜ, ಕಾಳು, ಹಾಲು, ಮೊಟ್ಟೆ, ಮೀನು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಕರಿಯ ಎಳ್ಳು, ಬಾದಾಮಿ ಮತ್ತು ಕರಿಬೇವು ಕೂದಲಿಗೆ ಅತ್ಯಂತ ಪ್ರಯೋಜನಕಾರಿ.

ನೈಸರ್ಗಿಕ ಪರಿಹಾರಗಳು: 

  • ಕರಿಬೇವಿನ ಎಲೆ ಮತ್ತು ತೆಂಗಿನ ಎಣ್ಣೆ: ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕಾಯಿಸಿ, ತಣ್ಣಗಾದ ನಂತರ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು. ಇದು ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

  • ಮೆಂತ್ಯ: ಮೆಂತ್ಯವನ್ನು ತೆಂಗಿನ ಎಣ್ಣೆಯಲ್ಲಿ ಕಾಯಿಸಿ ವಾರಕ್ಕೆ ಮೂರು ಬಾರಿ ಬಳಸಬೇಕು. ಮೆಂತ್ಯದ ಬೀಜಗಳನ್ನು ನೀರಿನಲ್ಲಿ ನೆನೆಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಬಹುದು.

  • ಬೆಲ್ಲ ಮತ್ತು ಅಡಿಕೆ: ಪ್ರತಿದಿನ ಬೆಲ್ಲದ ತುಂಡನ್ನು ಸೇವಿಸುವುದರಿಂದ ಕೂದಲಿಗೆ ಅಗತ್ಯವಾದ ಖನಿಜಗಳು ಸಿಗುತ್ತವೆ.

ಜೀವನಶೈಲಿಯ ಬದಲಾವಣೆಗಳು:

ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬೇಕು. ಸಾಕಷ್ಟು ನಿದ್ದೆ ಮತ್ತು ನೀರನ್ನು ಕುಡಿಯುವುದು ಅತ್ಯಗತ್ಯ. ಧೂಮಪಾನ ಮತ್ತು ಮದ್ಯಪಾನ ಸೇವನೆಯನ್ನು ತಪ್ಪಿಸಬೇಕು. ನೈಸರ್ಗಿಕ ಕೂದಲು ಉತ್ಪನ್ನಗಳನ್ನು ಬಳಸುವುದು ಉತ್ತಮ.

ಸರಿಯಾದ ಕೂದಲು ಆರೈಕೆ: ಕೂದಲನ್ನು ಸೌಮ್ಯ ಶ್ಯಾಂಪೂನಿಂದ ತೊಳೆಯಬೇಕು. ಬಿಸಿ ನೀರಿನ ಬದಲು ಸಾಮಾನ್ಯ ತಾಪಮಾನದ ನೀರು ಬಳಸಬೇಕು. ವಾರಕ್ಕೊಮ್ಮೆ ಎಣ್ಣೆ ಮಸಾಜ್ ಮಾಡುವುದು ಕೂದಲ ಬೇರುಗಳಿಗೆ ಪೋಷಣೆ ನೀಡುತ್ತದೆ. ಸೂರ್ಯನ ಕಿರಣ ಮತ್ತು ಮಾಲಿನ್ಯದಿಂದ ಕೂದಲನ್ನು ರಕ್ಷಿಸಬೇಕು.

ಬಿಳಿ ಕೂದಲನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದರೂ, ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆರೈಕೆಯಿಂದ ಅದರ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನೈಸರ್ಗಿಕ ಪರಿಹಾರಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತವೆ. 

ಲೇಖಕರು: ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು – ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ವಿಭಾಗ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.