ADVERTISEMENT

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು! ಆರೋಗ್ಯಕ್ಕಾಗಿ ಸಮತೋಲನ ಆಹಾರ ಮುಖ್ಯ

ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ ಆಹಾರವನ್ನು ಸೇವಿಸಲು ಆಹಾರದ ಬಗ್ಗೆ ಸೂಕ್ತ ಜ್ಞಾನವಿರಬೇಕಾಗುತ್ತದೆ.

ಡಾ.ಕುಶ್ವಂತ್ ಕೋಳಿಬೈಲು
Published 31 ಡಿಸೆಂಬರ್ 2024, 1:16 IST
Last Updated 31 ಡಿಸೆಂಬರ್ 2024, 1:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉತ್ತಮ ಆರೋಗ್ಯಕ್ಕಾಗಿ ಸಮತೋಲನಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಮತೋಲನವಾದ ಆಹಾರವನ್ನು ದೊರಕಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಮಾಡಿವೆ. ಹಸಿರು ಕ್ರಾಂತಿಯ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದ ಕಾರಣ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಬಹಳ ಜಾಸ್ತಿಯಿತ್ತು.

ಆದರೆ, ಇಂದು ಸರ್ಕಾರದ ಯೋಜನೆಗಳಿಂದ ಮತ್ತು ಸುಧಾರಿಸಿದ ಜೀವನಮಟ್ಟದ ಕಾರಣದಿಂದ ಜನರಿಗೆ ಆಹಾರವು ಸುಲಭವಾಗಿ ಲಭ್ಯವಾಗುತಿದೆ. ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ ಆಹಾರವನ್ನು ಸೇವಿಸಲು ಆಹಾರದ ಬಗ್ಗೆ ಸೂಕ್ತ ಜ್ಞಾನವಿರಬೇಕಾಗುತ್ತದೆ.

ADVERTISEMENT

ನಮ್ಮ ದೇಶದಲ್ಲಿ ಬಹು ಸಂಸ್ಕೃತಿಯ ಆಚಾರ–ವಿಚಾರಗಳನ್ನು ಪಾಲಿಸುವ ಜನರಿರುವುದರಿಂದ ಅವರ ಆಹಾರಪದ್ಧತಿಗಳು ವಿಭಿನ್ನವಾಗಿದೆ. ಭಾರತದಲ್ಲಿ ಮೀನು, ಮಾಂಸ ಮತ್ತು ಮೊಟ್ಟೆಯನ್ನು ಸೇವಿಸದೆ ಸಸ್ಯಾಹಾರವನ್ನು ಮಾತ್ರ ಸೇವಿಸುವವರ ಬಹಳಷ್ಟು ಮಂದಿಯಿದ್ದಾರೆ. ಅಂಥವರು ತಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್‌ ಮತ್ತು ಕೊಬ್ಬಿನ ಅಂಶವನ್ನು ಸೇವಿಸುವುದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಸಸ್ಯಾಹಾರಿಗಳು ಅನ್ನ, ರಾಗಿ, ಜೋಳ, ಗೋಧಿ ಮುಂತಾದ ಆಹಾರವನ್ನು ಸೇವಿಸುವುದರಿಂದ ಅವರಿಗೆ ಅಗತ್ಯ ಪ್ರಮಾಣದ ಕಾರ್ಬೊಹೈಡ್ರೇಟ್ ದೊರಕುತ್ತದೆ. ತುಪ್ಪ, ಬೆಣ್ಣೆ ಮತ್ತು ಎಣ್ಣೆಯನ್ನು ಅವರು ಸರಿಯಾದ ಪ್ರಮಾಣದಲ್ಲಿ ಸೇವಿಸಬಲ್ಲರು. ಆದರೆ ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪ್ರೋಟೀನ್‌ನ ಅಂಶ ಕಡಿಮೆಯಾಗದಂತೆ ಎಚ್ಚರವನ್ನು ವಹಿಸಬೇಕು. ಪ್ರೋಟೀನ್ ನಮ್ಮ ದೇಹದ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ. ಪ್ರೋಟೀನ್ ಅಂಶ ಕಡಿಮೆಯಾದರೆ ದೇಹವು ದುರ್ಬಲವಾಗುತ್ತದೆ, ಮತ್ತು ಮಾಂಸಖಂಡಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ದೇಹದಲ್ಲಿ ಮಾಂಸಖಂಡಗಳು ಬಲಿಷ್ಠವಾಗಿದ್ದಲ್ಲಿ ಅವು ಬಹಳಷ್ಟು ಸಕ್ಕರೆಯ ಅಂಶಗಳನ್ನು ಕರಗಿಸಿಕೊಳ್ಳುತ್ತವೆ.

ಇನ್ಸುಲಿನ್ ಹಾರ್ಮೋನಿನ ಶಕ್ತಿಯನ್ನು ಮಾಂಸಖಂಡಗಳು ವೃದ್ಧಿಸುವುದರಿಂದ ಮಧುಮೇಹವನ್ನು ನಿಯಂತ್ರಿಸುವುದರಲ್ಲಿಯೂ ಬಲಿಷ್ಠ ಮಾಂಸಖಂಡಗಳು ಸಹಕಾರಿಯಾಗಬಲ್ಲದು. ಆಹಾರದಲ್ಲಿ ಪ್ರೋಟೀನ್ ಅಂಶವು ಜಾಸ್ತಿಯಾಗಿದ್ದಲ್ಲಿ ಅದು ನಮ್ಮ ಹಸಿವನ್ನು ಕೂಡ ನಿಯಂತ್ರಿಸುತ್ತದೆ. ದೇಹದಲ್ಲಿಯ ಹಾರ್ಮೋನಿನಿಂದ ಹಿಡಿದು ಹೀಮೋಗ್ಲೋಬಿನ್ ಉತ್ಪಾದನೆಯವರೆಗೂ ಪ್ರೋಟೀನ್‌ನ ಅಂಶ ನಮಗೆ ಬೇಕಾಗುತ್ತದೆ.

ಉತ್ತಮ ಪ್ರೋಟೀನನ್ನು ಹೊಂದಿರುವ ಅಹಾರಗಳ ಬಗ್ಗೆ ಸಸ್ಯಾಹಾರಿಗಳಿಗೆ ಹೆಚ್ಚಿನ ಅರಿವಿನ ಅಗತ್ಯವಿದೆ. ಹಾಲು ಮತ್ತು ಕಾಳುಗಳು ಅವರಿಗೆ ಪ್ರೋಟೀನನ್ನು ನೀಡಬಲ್ಲದು. ಆದರೆ ದಿನನಿತ್ಯದ ಆಹಾರವಾದ ಅನ್ನ ಅಥವಾ ರಾಗಿಯಲ್ಲಿ ಪ್ರೋಟೀನ್ ಅಂಶವು ದೇಹಕ್ಕೆ ಬೇಕಿದ್ದಷ್ಟು ಸಿಗುವುದಿಲ್ಲ. ಎಪ್ಪತ್ತು ಕೆಜಿ ತೂಗುವ ವ್ಯಕ್ತಿಯೊಬ್ಬನಿಗೆ ಕನಿಷ್ಠ ಎಪ್ಪತ್ತು ಗ್ರಾಂನಷ್ಟು ಪ್ರೋಟೀನಿನ ಅವಶ್ಯಕತೆಯಿರುತ್ತದೆ.

ಬೆಳೆಯುವ ವಯಸ್ಸಿನಲ್ಲಿರುವವರಿಗೂ, ಗರ್ಭಿಣಿ ಮತ್ತು ಹಾಲು ಉಣಿಸುವ ಮಹಿಳೆಯರಿಗೂ ಪ್ರೋಟೀನ್‌ನ ಅಗತ್ಯ ಜಾಸ್ತಿಯಿರುತ್ತದೆ. ಬಲಿಷ್ಠ ಮಾಂಸಖಂಡಗಳನ್ನು ಬೆಳೆಸುವ ಉದ್ದೇಶದಿಂದ ವ್ಯಾಯಾಮವನ್ನು ಮಾಡುವವರು ಮತ್ತು ಕ್ರೀಡಾಪಟುಗಳು ತಮ್ಮ ದೇಹದ ತೂಕದ ಆಧಾರದಲ್ಲಿ ತಮ್ಮ ಪ್ರತಿ ಕಿಲೋಗ್ರಾಮ್ ದೇಹದ ತೂಕಕ್ಕೆ ಎರಡು ಗ್ರಾಮಿನಷ್ಟು ಪ್ರೋಟೀನನ್ನು ಸೇವಿಸಬೇಕಾಗುತ್ತದೆ.

ಪ್ರೋಟೀನ್‌ಗಳು ನಮಗೆ ಎಷ್ಟು ಮುಖ್ಯ ಎಂಬುದನ್ನು ಅರಿತಿರುವ ಸಸ್ಯಹಾರಿಗಳು ಕಾಳುಗಳನ್ನು ತಮ್ಮ ಪ್ರತಿ ಊಟದ ಜೊತೆಗೆ ಸೇವಿಸುತ್ತಾರೆ. ಹಾಲಿನಲ್ಲಿಯೂ ಅವರಿಗೆ ಪ್ರೊಟೀನ್ ದೊರಕಬಲ್ಲದು. ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಉತ್ತಮವಾದ ಪ್ರೋಟೀನ್ ದೊರಕುತ್ತದೆ. ಹಾಲಿನಿಂದ ತಯಾರಿಸಿದ ಪನ್ನೀರು ಮತ್ತು ಸೋಯಾ ಬೀನಿನಲ್ಲಿಯು ಪ್ರೋಟೀನ್ ಹೇರಳವಾಗಿದೆ.

ನೆಲಗಡಲೆ, ಬಾದಾಮಿ, ಗೇರುಬೀಜ ಮುಂತಾದ ಬೀಜಗಳಲ್ಲಿಯೂ ಉತ್ತಮ ಗುಣಮಟ್ಟದ ಪ್ರೋಟೀನ್ ದೊರಕುತ್ತದೆ. ಸಸ್ಯಾಹಾರಿಗಳು ದಿನಕ್ಕೆ ಕನಿಷ್ಠ ಇಪ್ಪತ್ತು ಇಂಥ ಬೀಜಗಳನ್ನು ಸೇವಿಸುವುದರಿಂದ ಪ್ರೋಟೀನ್‌ ಅಂಶವನ್ನು ಅವರು ಪಡೆಯಬಲ್ಲರು.  ಕೇವಲ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಇರುವ ಸಿಹಿ ತಿಂಡಿಗಳು ಮತ್ತು ಬೇಕರಿಯ ತಿನಿಸುಗಳು ನಮ್ಮ ಸಕ್ಕರೆಯ ಅಂಶವನ್ನು ಮಾತ್ರವೇ ಹೆಚ್ಚಿಸಬಲ್ಲದು; ಈ ತಿನಿಸುಗಳಲ್ಲಿ ಯಾವುದೇ ಪ್ರೋಟೀನ್‌ನ ಅಂಶವೂ ಇರುವುದಿಲ್ಲ. ಭಾರತದಲ್ಲಿ ಮಧುಮೇಹದ ಅಂಶವು ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ಎಂದರೆ ನಾವು ಇಲ್ಲಿಯವರು ಕಡಿಮೆ ಪ್ರೋಟೀನನ್ನು ಸೇವಿಸುತ್ತಿರುವುದು ಕೂಡ ಒಂದು.

ಈಗಿನ ತಲೆಮಾರಿನ ಬಹುಪಾಲು ಜನರು ಹೆಚ್ಚಿನ ಸಮಯ ‌ಕುಳಿತುಕೊಂಡೇ ಕೆಲಸ ಮಾಡುತ್ತಾರಷ್ಟೆ. ಆದ ಕಾರಣ ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಆಹಾರವನ್ನು ಈ ಗುಂಪಿನ ಜನರು ಕರಗಿಸುವುದರಲ್ಲಿ ವಿಫಲಾರಾಗುತ್ತಾರೆ. ಹೀಗೆ ಶೇಖರಣೆಯಾದ ಕಾರ್ಬೊಹೈಡ್ರೇಟ್ ದೇಹದೊಳಗೆ ಕೊಬ್ಬಾಗಿ ಪರಿವರ್ತನೆಯಾಗುತ್ತದೆ; ದೇಹದ ತೂಕಕ್ಕೂ ಇದೇ ಕಾರಣವಾಗಿರುತ್ತದೆ.

ಪ್ರೋಟೀನ್‌ನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದರಿಂದ ದೇಹದ ತೂಕವನ್ನು ಮತ್ತು ಹಸಿವನ್ನು ಕೂಡ ನಿಯಂತ್ರಿಣದಲ್ಲಿಡಬಹುದು. ನಾವು ತಿನ್ನುವ ಆಹಾರದಲ್ಲಿ ಯಾವ ಅಂಶಗಳು ಎಷ್ಟು ಪ್ರಮಾಣದಲ್ಲಿ ಇದೆಯೆಂಬ ಸ್ಪಷ್ಟವಾದ ಅರಿವು ಇದ್ದಲ್ಲಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.