ADVERTISEMENT

ಫಿಟ್‌ನೆಸ್‌ಗೆ ‘ಕಿಚ್ಚ’ ಮಾಡಿದ್ದೇನು? ಪೈಲ್ವಾನ್‌ ಕಲಿಸಿದ ಶಿಸ್ತಿನ ಪಾಠ

ಕೆ.ಎಚ್.ಓಬಳೇಶ್
Published 22 ಜುಲೈ 2019, 4:21 IST
Last Updated 22 ಜುಲೈ 2019, 4:21 IST
ಸುದೀಪ್
ಸುದೀಪ್   

ಜಿಮ್‌ ಎಂದರೆ ನನಗೆ ಅಲರ್ಜಿ. ಹಿಂದೆಯೂ ಇಷ್ಟಪಟ್ಟಿಲ್ಲ. ಇಂದಿಗೂ ಇಷ್ಟಪಡುವುದಿಲ್ಲ. ನನ್ನ ಗೆಳೆಯರು ಜಿಮ್‌ ಹೋಗುತ್ತಿದ್ದಾಗ ಅವರು ಜೀವನದ ಅಮೂಲ್ಯ ಸಮಯವನ್ನು ಕೊಲ್ಲುತ್ತಿದ್ದಾರೆ ಎಂದು ಅನಿಸುತ್ತಿತ್ತು. ನನ್ನ ಪಾಕಶಾಲೆಗೆ ಬನ್ನಿ. ನಾನು ತಯಾರಿಸುವ ಅಡುಗೆಯ ರುಚಿ ಸವಿಯಿರಿ ಎಂದು ಹೇಳುತ್ತಿದ್ದೆ. ನಿರ್ದೇಶಕ ಕೃಷ್ಣ ‘ಪೈಲ್ವಾನ್’ ಕಥೆ ತೆರೆದಿಟ್ಟಾಗಲೇ ನನಗೆ ಫಿಟ್‌ನೆಸ್‌ನ ಮಹತ್ವ ಅರಿವಾದದ್ದು.

ಕೈಗೆ ಸಿಕ್ಕಿದ ತಿಂಡಿ, ತಿನಿಸು ತಿನ್ನುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಹಾಗಾಗಿಯೇ, ಕುಸ್ತಿ ಕಥೆ ಆಧಾರಿತ ಸಿನಿಮಾ ಮಾಡಬೇಕು ಎಂದಾಗ ಮೊದಲಿಗೆ ಹಿಂಜರಿದಿದ್ದು ನಿಜ. ಕೊನೆಗೊಂದು ದಿನ ನನ್ನಿಂದ ದೇಹ ಹುರಿಗೊಳಿಸಲು ಸಾಧ್ಯವೇ ಎಂದು ನನ್ನೊಳಗೆ ಪ್ರಶ್ನಿಸಿಕೊಂಡೆ. ಮೊದಲಿಗೆ ರಕ್ತಪರೀಕ್ಷೆ ಮಾಡಿಸಿದೆ. ಅಲ್ಲಿ ದೊರೆತ ಸಕಾರಾತ್ಮಕ ಫಲಿತಾಂಶದಿಂದಲೇ ‘ಪೈಲ್ವಾನ್‌’ನ ಅಖಾಡಕ್ಕೆ ಇಳಿಯಲು ಮುಂದಾದೆ.

‘ಪೈಲ್ವಾನ್‌’ನಲ್ಲಿ ನನ್ನ ಎದುರಾಳಿ ನಟ ಕಬೀರ್ ಸಿಂಗ್‌ ದುಹಾನ್. ಶೂಟಿಂಗ್‌ನಲ್ಲಿ ಪೋಷಕ ನಟನ ಮುಂದೆ ಶರ್ಟ್‌ ಬಿಚ್ಚಿಕೊಂಡು ನಿಲ್ಲುವಾಗ ನನ್ನ ಮರ್ಯಾದೆ ಹೋಗಬಾರದು ಎಂಬ ತೀರ್ಮಾನಕ್ಕೆ ಬಂದೆ. ಸೆಟ್‌ನಲ್ಲಿ ಕಬೀರ್‌ನನ್ನು ನೋಡುವವವರೆಗೂ ನಾನು ಜಿಮ್‌ ಅನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.

ADVERTISEMENT

ನನ್ನ ಅಡುಗೆ ಮನೆಗೆ ಬಂದ ಎಲ್ಲರಿಗೂ ಕೈಯಾರೆ ಅಡುಗೆ ಮಾಡಿ ಬಡಿಸುತ್ತಿದ್ದೆ. ಆದರೆ, ದೇಹ ಹುರಿಗೊಳಿಸಲು ಮುಂದಾದಾಗಲೇ ಊಟದ ಮಹತ್ವದ ಅರಿವಾಯಿತು. ಜಿಮ್‌ನಲ್ಲಿ ದಿನಕ್ಕೆ ಮೂರ್ನಾಲ್ಕು ತಾಸು ಬೆವರು ಸುರಿಸುತ್ತಿದ್ದೆ. ಅನ್ನ ಸೇವಿಸುವಂತಿರಲಿಲ್ಲ. ಸಕ್ಕರೆ, ಉಪ್ಪು ಇಲ್ಲದ ಊಟ ಸೇವಿಸಿ ಬದುಕೇ ಸಪ್ಪೆಯಾದಂತೆ ಅನಿಸುತ್ತಿತ್ತು. ಮೊದಲ ಒಂದು ತಿಂಗಳು ಈ ಊಟ ಸೇವಿಸಿದಾಗ ವಾಂತಿ ಬರುತ್ತಿತ್ತು. ಆದರೆ, ನನ್ನ ಕಣ್ಣ ಮುಂದೆ ಕುಸ್ತಿಯ ಅಖಾಡ ಮಾತ್ರ ಕಾಣುತ್ತಿತ್ತು. ಹಾಗಾಗಿ, ಎಲ್ಲಾ ಕಷ್ಟ ನುಂಗಿಕೊಂಡು ಜಿಮ್‌ನಲ್ಲಿ ಬೆವರು ಹರಿಸಿದೆ.

‘ಪೈಲ್ವಾನ್‌’ ಚಿತ್ರ ಒಪ್ಪಿಕೊಳ್ಳುವ ಮೊದಲು ನನ್ನಲ್ಲಿ ಬೇರೆಯದೆ ಹಟವಿತ್ತು. ಒಪ್ಪಿಕೊಂಡ ಬಳಿಕ ಹುಟ್ಟಿಕೊಂಡ ಹಟವೇ ಬೇರೆ.‌‌ ಇಂದು ವ್ಯಾಯಾಮ ಮಾಡುವುದು ಒಂದು ಪರಿಪಾಠವಾಗಿದೆ. ಇದು ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಶಿಸ್ತು ಕೂಡ ಬೆಳೆದಿದೆ. ಸದೃಢ ಆರೋಗ್ಯಕ್ಕೆ ಜಿಮ್‌ ಅತಿಮುಖ್ಯ. ಆದರೆ, ಕಸರತ್ತಿಗೆ ಕೊನೆಯಿಲ್ಲ. ಒಂದು ತಿಂಗಳು ನಾವು ಸುಮ್ಮನೇ ಕೂತರೆ ದೇಹವೂ ವಿಕಾರವಾಗುತ್ತದೆ.

ಹಿಂದಿ ಚಿತ್ರ ‘ದಬಾಂಗ್‌ 3’ ಸೆಟ್‌ನಲ್ಲಿ ನಾನು ಮತ್ತು ಸಲ್ಮಾನ್‌ ಖಾನ್‌ ಒಟ್ಟಾಗಿ ವರ್ಕ್‌ಔಟ್‌ ಮಾಡುತ್ತೇವೆ. ಅವರ ಯುವಕರಾಗಿದ್ದಾಗಿನಿಂದಲೇ ಜಿಮ್‌ನಲ್ಲಿ ಬೆವರು ಸುರಿಸಿದ್ದಾರೆ. ಮೂರು ದಶಕಗಳ ಕಾಲ ಬೆವರು ಸುರಿಸಿದ್ದಾರೆ. ಚಿತ್ರರಂಗದ ಹಲವು ಕಲಾವಿದರು ದಿನವೂ ಕಸರತ್ತು ಮಾಡುತ್ತಾರೆ. ಅವರ ದಿನಚರಿ ಪಾಲಿಸುವುದು ನನ್ನಿಂದ ಕಷ್ಟಸಾಧ್ಯ. ಇದು ನನ್ನ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.