ಭಾಸ್ಕರನಿಂದ ಆರೋಗ್ಯವನ್ನು ಪಡೆಯುವ ಪರಿಕಲ್ಪನೆಯು ಸೂರ್ಯೋಪಾಸನೆಯ ಮೊದಲ ಮಜಲು. ಸೂರ್ಯನಮಸ್ಕಾರದಡಿ ಯೋಗದ ಸಕಲ ಭಂಗಿಗಳು ಅಡಕವಾಗಿವೆ
‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂಬ ಮಾತಿದೆ. ಅಂದರೆ ನಮಗೆ ಆರೋಗ್ಯ ಬೇಕೇ? ಅದನ್ನು ನೀಡುವಾತನು ಸೂರ್ಯ ಅಥವಾ ಭಾಸ್ಕರ! ಅದು ಹೇಗೆ? ಆಯುರ್ವೇದದ ಪ್ರಕಾರ ಸೋಮ ಮತ್ತು ಸೂರ್ಯ ಎಂಬ ಶಕ್ತಿಗಳಿಂದ ಇಡೀ ಜಗದ ಸಕಲ ವ್ಯಾಪಾರ ಘಟಿಸುತ್ತವೆ. ಮೂರನೆಯ ಅತ್ಯಂತ ಪ್ರಖರ ಶಕ್ತಿ ವಾಯು. ಇವನ್ನೇ ಆಯುರ್ವೇದವು ತ್ರಿದೋಷ ಎಂದು ಸಕಲ ಜೀವರಾಶಿಯಲ್ಲಿ ಗುರುತಿಸುತ್ತದೆ. ವಾಯುವೇ ವಾತ. ಸೋಮ ಶಕ್ತಿ ಎಂದರೆ ಚಂದ್ರನ ಶೀತ ತತ್ವ. ಅದು ಕಫ. ಮೂರನೆಯದು ರವಿ. ಪ್ರಖರ ಕಿರಣಗಳೂ ದಯಪಾಲಿಸುವ ರವಿಯಿಂದ ಜೀವರಾಶಿಗಳ ‘ಮೆಟಬಾಲಿಸಂ’, ಎಂದರೆ ಜೀವಕೋಶದಲ್ಲಿ ಜರಗುವ ಸೃಷ್ಟಿ, ಸ್ಥಿತಿ ಮತ್ತು ವಿನಾಶ ಪ್ರಕ್ರಿಯೆ ನಿರಂತರತೆಯದು.
ಸೂರ್ಯನ ಬೆಳಕಿನಡಿ ನಡೆಯುವ ಜೀವನ ವ್ಯಾಪಾರ ಮತ್ತು ಉಪಕಾರಗಳನ್ನು ನೆನೆಯೋಣ. ಇದೀಗ ಧನುರ್ಮಾಸ. ಸುದೀರ್ಘ ಇರುಳು. ಮುಂಜಾನೆ ಬೇಗ ಎದ್ದು ಸೂರ್ಯನಿಗೆ ಮೈ ಒಡ್ಡೋಣ. ವೈಕುಂಠ ಏಕಾದಶಿಯ ಸಂದರ್ಭ ಎಂದರೆ ರವಿಯುದಯದ ಸಂಗಡ ಆತನ ಪ್ರಖರತೆ ಏರುವ ಹೊತ್ತು. ಅನಂತರದ ದಿನಗಳಲ್ಲಿ ಬಿಸಿಯೇರುವ, ಬಿಸಿಲೇ ಆಳುವ ಮಕರ ಮಾಸದುದಯ! ಉತ್ತರಾ ಯಣದಿಂದ ಮತ್ತೆ ದೇಹದ ‘ಚಯಾಪಚಯ’ (ಮೆಟಬಾಲಿಸಂ) ಬದಲಾಗುತ್ತದೆ. ಅಂತಹ ಸೌರಮಂಡಲದ ಪ್ರಭಾವ ಮತ್ತು ಆರೋಗ್ಯದ ಮಜಲುಗಳನ್ನು ನಮ್ಮ ಆರೋಗ್ಯ ಸಂಹಿತೆಗಳು ಹಾಗೂ ಇಂದಿನ ಆಧುನಿಕ ವಿಜ್ಞಾನ ಗುರುತಿಸಿವೆ; ಅವನ್ನು ತಿಳಿಯಿರಿ. ಅದು ನಮ್ಮ ದೇಹಾರೋಗ್ಯಕ್ಕೆ ಪೂರಕ. ‘ಆತಪ’ ಎಂದರೆ ಬಿಸಿಲು. ಅದು ಬೆವರಿಳಿಸುವ ಒಂದು ಬಗೆಯ ಚಿಕಿತ್ಸೆಯ ವಿಧಾನ. ‘ಸೌನಾ ಬಾತ್’ ಎಂಬ ಪ್ರಕೃತಿ ಚಿಕಿತ್ಸೆಯಂತೂ ಸೂರ್ಯನ ಮೂಲಕ ಆರೋಗ್ಯವನ್ನು ಸಾಧಿಸುವ ಸುಲಭ ವಿಧಾನ; ಬೊಜ್ಜು ತಡೆಯುವ ಬೆವರಿಳಿಸುವ ಕ್ರಮ.
ಚರ್ಮ – ಮೂಳೆಗಳ ಆರೋಗ್ಯವನ್ನು ಕಾಪಾಡಲು ಸೂರ್ಯನ ಬೆಳಕು ಮುಖ್ಯವಾಗಿ ಬೇಕು
ಪ್ರತಿ ಬಾರಿಯ ವಾರ್ಷಿಕ ಅಥವಾ ನಿಯತಕಾಲಿಕ ರಕ್ತತಪಾಸಣೆಯ ಸಂದರ್ಭದಲ್ಲಿ ಕಂಡು ಬರುವ ದೊಡ್ಡ ಕೊರತೆ ಡಿ ವಿಟಮಿನ್ ಕೊರತೆ! ನಾಲ್ಕೈದು ದಶಕಗಳ ಹಿಂದೆ ಈ ಪ್ರಸಂಗಗಳೇ ಇರಲಿಲ್ಲ. ಬಿ1, ಬಿ6, ಬಿ12 ಇತ್ಯಾದಿ ನ್ಯೂನತೆಗಳು, ಕ್ಯಾಲ್ಸಿಯಂ ಕೊರತೆಗಳು ಇಂದು ಢಾಳಾಗಿ ತಪಾಸಣೆ ವರದಿಗಳಲ್ಲಿ ದಪ್ಪಕ್ಷರಗಳಡಿ ನಮೂದಿತ. ಹೊಸ ಬಗೆಯ ಹಲವಾರು ಮಾತ್ರೆಗಳ ಚಲಾವಣೆಯಂತೂ ಹೊಸ ಯುಗದಲ್ಲಿ ನಿಚ್ಚಳವಾಗುತ್ತಿದೆ. ಬಾಟಲೀಕೃತ ನೀರಿನ ಬಳಕೆಯಿಂದ, ಕೊಳವೆ ಬಾವಿಯ ನೀರಿನ ಬಹು ಬಳಕೆ ಇದೀಗ ಏರುಮುಖ. ಅಷ್ಟೆ ಅಲ್ಲ, ಯೂರಿಯಾದಂತಹ ರಸಗೊಬ್ಬರಗಳು, ಕೀಟನಾಶಕಗಳು ಹಾಗೂ ಕಳೆನಾಶಕಗಳು ಜಲ ಮೂಲಗಳನ್ನು ಹಾಳುಗೆಡವುವು. ಆಹಾರದ ಕಲಬೆರಕೆಗೆ ಇವು ಹೆದ್ದಾರಿ. ಅತಿ ಪ್ಲಾಸ್ಟಿಕ್ ಬಳಕೆಯ ಗೀಳು ಮತ್ತು ಅದರ ‘ಥಯಲೇಟ್’ ಎಂಬ ರಾಸಾಯನಿಕದ ಕಣಕಣಗಳು ನಮ್ಮ ಜೀವನ ವ್ಯಾಪಾರದ ಏರುಪೇರುಗಳಿಗೆ ಮೂಲಕಾರಣ ಎಂಬ ಕೆಲವು ವರದಿಗಳಿವೆ.
ಭಾಸ್ಕರನಿಂದ ಆರೋಗ್ಯವನ್ನು ಪಡೆಯುವ ಪರಿಕಲ್ಪನೆಯು ಸೂರ್ಯೋಪಾಸನೆಯ ಮೊದಲ ಮಜಲು. ಸೂರ್ಯನಮಸ್ಕಾರದಡಿ ಯೋಗದ ಸಕಲ ಭಂಗಿಗಳು ಅಡಕವಾಗಿವೆ.
ಸೂರ್ಯನ ಕಿರಣಗಳ ಅಲ್ಟ್ರಾ ವಯಲೆಟ್ ರೇಡಿಯೇಷನ್ ದೇಹದ ಡಿ3 ಅನ್ನಾಂಗದ ಪರಿವರ್ತನೆ ಮತ್ತು ಚರ್ಮಾರೋಗ್ಯದ ಮತ್ತು ಮೂಳೆಗಳ ಹಾಗೂ ಮಜ್ಜೆಯ ಸಾಂದ್ರತೆ ಹೆಚ್ಚಳದ ಸುಲಭದ ಹಾದಿ. ಹುಟ್ಟಿದ ಶಿಶುವಿನ ಕಾಮಾಲೆಯನ್ನು ಗುಣಪಡಿಸಲು ಮಗುವನ್ನು ಸೂರ್ಯನ ಶಾಖದಡಿ ಕೆಲಹೊತ್ತು ಇಡುವ ಪರಿಪಾಠ ಸರ್ವೇ ಸಾಮಾನ್ಯ. ಇದು ಕಾಮಾಲೆಕಾರಿ ಲಿವರನ್ನು ಸರಿ ಪಡಿಸುವ ಸುಲಭದ ಹಾದಿ ಕೂಡ.
ಧನುರ್ಮಾಸ ಬಂದಿದೆ. ಬೇಗನೆ ಏಳಿರಿ. ಮೈಗೆಣ್ಣೆ ಹದ ಬಿಸಿ ಎಳ್ಳೆಣ್ಣೆ ಸವರಿಕೊಳ್ಳಿರಿ. ಹೋತ್ತೇರುವ ಹೊತ್ತಿಗೆ ಸೂರ್ಯನ ಎಳೆ ಕಿರಣಗಳಿಗೆ ಮೈ ಒಡ್ಡಿಕೊಳ್ಳಿರಿ. ದೇಹಾರೋಗ್ಯದ ಸಂಗಡ ರೋಗನಿರೋಧಕ ಶಕ್ತಿ ಏರಿಸಲು ಇದು ಹೆದ್ದಾರಿ. ಮೂಳೆ, ಮಜ್ಜೆಯ ಗಟ್ಟಿಗತನಕ್ಕಿದುವೆ ಸುಲಭ ಉಪಾಯ. ಬೆಳಗಿನ ಹೊತ್ತು ಕಷ್ಟವೇ? ಸಂಜೆಯ ಸೂರ್ಯಪಾದವಾದರೂ ಸೈ. ಸಂಜೆ ನಾಲ್ಕರ ಅನಂತರದ ರವಿರಶ್ಮಿಯಿಂದ ಕೂಡ ಚರ್ಮ ಮತ್ತು ಮೂಳೆಯ ಗಟ್ಟಿಗತನ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.