ADVERTISEMENT

ಆರೋಗ್ಯ | ಥೈರಾಯ್ಡ್‌ ಸಮಸ್ಯೆ: ಬೇಡ ನಿರ್ಲಕ್ಷ್ಯ

ಡಾ.ಕುಶ್ವಂತ್ ಕೋಳಿಬೈಲು
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
   

ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯನ್ನು ನಾವು ಥೈರಾಯ್ಡ್ ಎಂದು ಕರೆಯುತ್ತೇವೆ. ನಮ್ಮ ದೇಹದ ಕಾರ್ಯಚಟುವಟಿಕೆಗಳ ಮೇಲೆ ಹಲವಾರು ರೀತಿಯ ಪ್ರಭಾವವನ್ನು ಬೀರುವ ಥೈರಾಯ್ಡ್ ಹಾರ್ಮೊನುಗಳನ್ನು ಈ ಗ್ರಂಥಿಯು ಉತ್ಪಾದನೆ ಮಾಡುತ್ತದೆ. ಮುಖ್ಯವಾಗಿ ಈ ಗ್ರಂಥಿ ಹೊರಚೆಲ್ಲುವ ‘ಥೈರಾಕ್ಸಿನ್’ (T4) ಮತ್ತು ‘ಟ್ರೈಯೋಡೋಥೈರೋನಿನ್’ (T3) ಹಾರ್ಮೋನುಗಳನ್ನು ನಮ್ಮ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ನಮ್ಮ ದೇಹದ ಚಯಾಪಚಯ (metabolism) ಕ್ರಿಯೆಯ ವೇಗವನ್ನು ಈ ಹಾರ್ಮೋನುಗಳು ನಿಯಂತ್ರಿಸುವುದರಿಂದ ಈ ಹಾರ್ಮೋನುಗಳ ಸಂಖ ಹೆಚ್ಚು ಕಡಿಮೆಯಾದಲ್ಲಿ ದೇಹದ ಚಯಾಪಚಯದಲ್ಲಿ ಹಲವಾರು ವ್ಯತ್ಯಾಸಗಳಾಗುತ್ತದೆ. ನಮ್ಮ ದೇಹದ ಉಷ್ಣತೆಯಿಂದ ಹಿಡಿದು ಹೃದಯಬಡಿತದ ವೇಗದಲ್ಲಿಯೂ ವ್ಯತ್ಯಾಸವಾಗಬಹುದು. ಬೆಳೆಯುವ ಮಕ್ಕಳಲ್ಲಿ ಮಿದುಳು ಮತ್ತು ದೇಹದ ಬೆಳವಣಿಗೆಗೆ ಈ ಹಾರ್ಮೋನ್‌ಗಳು ಅತ್ಯಗತ್ಯವಾಗಿದೆ.

ನವಜಾತ ಶಿಶುವಿನಲ್ಲಿ ಥೈರಾಯ್ಡ್ ಹಾರ್ಮೋನ್‌ಗಳ ಕೊರತೆಯಾದಲ್ಲಿ ಆ ಮಗುವಿಗೆ ಶಾಶ್ವತ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯವಿರುತ್ತದೆ. ಈ ಕಾರಣದಿಂದಾಗಿ ಪ್ರತಿ ಗರ್ಭಿಣಿಯಲ್ಲಿ ಮತ್ತು ನವಜಾತ ಶಿಶುವಿನಲ್ಲಿ ಥೈರಾಯ್ಡ್ ಹಾರ್ಮೋನಿನ ಪರೀಕ್ಷೆ ನಡೆಸುವುದು ಕಡ್ಡಾಯವಾಗಿರುತ್ತದೆ. ತಡೆಗಟ್ಟಬಹುದಾದ ಬುದ್ಧಿಮಾಂದ್ಯತೆ ಕಾಯಿಲೆಗಳಲ್ಲಿ ಈ ಕಾಯಿಲೆಯೇ ಪ್ರಮುಖವಾದ ಕಾಯಿಲೆ. ಆದುದರಿಂದ ನವಜಾತಶಿಶುವು ಆಸ್ಪತ್ರೆಯಿಂದ ಮನೆಗೆ ತೆರಳುವ ಮುನ್ನ ಥೈರಾಯ್ಡ್ ಹಾರ್ಮೋನಿನ ಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ‘ಕ್ಯಾಲ್ಸಿಟೋನಿನ್’ ಹಾರ್ಮೋನ್‌ ಕೂಡ ಥೈರಾಯ್ಡ್ ಗ್ರಂಥಿಯಲ್ಲಿ ಉತ್ಪಾದನೆಯಾಗುತ್ತದೆ.

ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೆ, ಅಂತಹ ಸಮಸ್ಯೆಯನ್ನು ನಾವು ‘ಹೈಪೊಥೈರಾಯ್ಡ್’ ಎಂದು ಕರೆಯುತ್ತೇವೆ. ಆಹಾರದಲ್ಲಿ ಅಯೋಡಿಯನ್‌ ಕೊರತೆ, ಕೆಲವು ಆನುವಂಶೀಯ ಕಾಯಿಲೆಗಳು, ಸೋಂಕುಗಳು ಮತ್ತು ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಗಳು ಥೈರಾಯ್ಡ್‌ ಗ್ರಂಥಿಯಲ್ಲಿನ ಹಾರ್ಮೋನಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಥೈರಾಯ್ಡ್ ಹಾರ್ಮೋನು ಕಡಿಮೆಯಾದಲ್ಲಿ ದೇಹದ ತೂಕ ಹೆಚ್ಚಾಗುವುದು, ಹೆಚ್ಚಿನ ಚಳಿಯಾಗುವುದು, ಧ್ವನಿಯಲ್ಲಿ ಬದಲಾವಣೆ, ಮಲಬದ್ಧತೆ ಮತ್ತು ಆಲಸ್ಯ ಮುಂತಾದ ಗುಣಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೆಂಗಸರಲ್ಲಿ ಮುಟ್ಟಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ADVERTISEMENT

ಥೈರಾಯ್ಡ್ ಹಾರ್ಮೋನಿನ ಪ್ರಮಾಣವು ದೇಹದಲ್ಲಿ ಹೆಚ್ಚು ಉತ್ಪಾದನೆಯಾಗುವುದು ಕೂಡ ದೇಹಕ್ಕೆ ಮಾರಕವಾಗುತ್ತದೆ. ಥೈರಾಯ್ಡ್ ಗ್ರಂಥಿಯಲ್ಲಿ ಹುಟ್ಟಿಕೊಳ್ಳುವ ಚಿಕ್ಕಪುಟ್ಟ ಗೆಡ್ಡೆಗಳು ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನನ್ನು ಉತ್ಪಾದನೆ ಮಾಡುತ್ತದೆ. ಈ ಸಮಸ್ಯೆಯನ್ನು ನಾವು ‘ಹೈಪರ್ ಥೈರಾಯ್ಡಿಸಮ್’ ಎಂದು ಕರೆಯುತ್ತೇವೆ. ಈ ಕಾಯಿಲೆಯಿಂದ ಬಳಲುವವರಲ್ಲಿ ದೇಹದ ತೂಕ ಕಡಿಮೆಯಾಗುವುದು, ಹೃದಯ ಬಡಿತವು ಹೆಚ್ಚಾಗಿರುವುದು,
ಮಾನಸಿಕ ಆತಂಕ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಥೈರಾಯ್ಡ್ ಗ್ರಂಥಿಯು ಊದಿಕೊಂಡಿದ್ದರೆ ಅದನ್ನು ನಾವು ‘ಗಾಯ್ಟರ್’ ಎಂದು ಕರೆಯುತ್ತೇವೆ. ಊದಿಕೊಂಡಿರುವ ಥೈರಾಯ್ಡ್ ಗ್ರಂಥಿಯಿಂದ ಹೊರಬರುವ ಹಾರ್ಮೋನಿನ ಪ್ರಮಾಣದ ಮೇಲೆ ಥೈರಾಯ್ಡ್ ಸಮಸ್ಯೆಯು ನಿರ್ಧಾರವಾಗುತ್ತದೆ.

ಥೈರಾಯ್ಡ್ ಸಮಸ್ಯೆಯು ನಮ್ಮ ದೇಹದ ಕೂದಲು ಮತ್ತು ಉಗುರಿನಿಂದ ಹಿಡಿದು ಹೃದಯ ಮತ್ತು ಮಿದುಳಿನ ತನಕ ಪ್ರಭಾವಿಸುವುದರಿಂದ ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಕಾಯಿಲೆಯ ಗುಣಲಕ್ಷಣಗಳು ನಿಖರವಾಗಿ ಹೊರಹೊಮ್ಮದ ಕಾರಣದಿಂದಾಗಿ ವೈದ್ಯರಿಂದ ಈ ಕಾಯಿಲೆಯನ್ನು ಪತ್ತೆ ಹಚ್ಚುವಲ್ಲಿ ತಡವಾಗಬಹುದು. ಏಕೆಂದರೆ ಎಲ್ಲ ಸಮಯದಲ್ಲಿ ಥೈರಾಯ್ಡ್ ಗ್ರಂಥಿಯು ಊದಿಕೊಳ್ಳುವುದಿಲ್ಲ, ಬದಲಿಗೆ ಹಾರ್ಮೋನಿನ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಾಗಿರುತ್ತದೆ. ಗುಡ್ಡಗಾಡು ಪ್ರದೇಶದ ಜನರಲ್ಲಿ ಅಯೋಡಿನ್‌ ಕೊರತೆಯು ಹೆಚ್ಚಾಗಿರುವುದರಿಂದ ಅವರಲ್ಲಿ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಕಂಡು
ಬರುತ್ತವೆ.

ಅಡುಗೆಯ ಉಪ್ಪಿನಲ್ಲಿ ಅಯೋಡಿನ್ ಸೇರಿಸುವ ಕ್ರಮದಿಂದಾಗಿ ಹೈಪೊಥೈರಾಯ್ಡ್ ಕಾಯಿಲೆಯ ಪ್ರಮಾಣವು ಕಡಿಮೆಯಾಗಿದೆ. ಆದರೂ ಭಾರತದಲ್ಲಿ ಸುಮಾರು ನಾಲ್ಕು ಕೋಟಿ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಹಾರ್ಮೋನಿನ ಪ್ರಮಾಣವು ಅಗತ್ಯಕ್ಕಿಂತ ಕಡಿಮೆಯಾಗಿದ್ದಲ್ಲಿ ರೋಗಿಯು ನಿತ್ಯ ಥೈರಾಯ್ಡ್ ಹಾರ್ಮೋನಿನ ಅಂಶವಿರುವ ಗುಳಿಗೆಯನ್ನು ಜೀವನಪರ್ಯಂತ ಸೇವಿಸಬೇಕಾಗುತ್ತದೆ.

ಇದರ ಜೊತೆಗೆ ತಾನು ತೆಗೆದುಕೊಳ್ಳುವ ಔಷಧದಿಂದಾಗಿ ದೇಹದೊಳಗಿರಬೇಕಾದ ಹಾರ್ಮೋನಿನ ಪ್ರಮಾಣವು ಸರಿಯಾಗಿದೆಯೆ ಎಂದು ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಥೈರಾಯ್ಡ್ ಹಾರ್ಮೋನಿನ ಉತ್ಪಾದನೆಯು ದೇಹದೊಳಗೆ ಜಾಸ್ತಿಯಾದ ಕಾರಣದಿಂದಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೆ ಥೈರಾಯ್ಡ್ ಗ್ರಂಥಿಯಿಂದ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲು ಹಲವು ವಿಧಗಳಿವೆ. ಔಷಧಗಳ ಮೂಲಕ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ. ಮುಂದುವರೆದಿರುವ ವೈದ್ಯಕೀಯ ತಂತ್ರಜ್ಞಾನವು ಥೈರಾಯ್ಡ್ ಕಾಯಿಲೆಯ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಸುಲಭವಾಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.