
ಚಿತ್ರ: ಗೆಟ್ಟಿ
ಮುಖ ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಹಲವರು ಭಾವಿಸುತ್ತಾರೆ. ಆದರೆ, ಮುಖದಲ್ಲಿನ ಜೀವಸತ್ವ ಕಳೆದುಕೊಂಡ ಚರ್ಮದ ಕೋಶ (ಡೆಡ್ ಸ್ಕಿನ್) ಗಳು ಮುಖದ ಅಂಧವನ್ನು ಹಾಳು ಮಾಡುತ್ತವೆ. ಈ ಸಮಸ್ಯೆಗೆ ಕಾರಣಗಳು ಮತ್ತು ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ನಮ್ಮ ಚರ್ಮವು ಪ್ರತಿ 28 ದಿನಗಳಿಗೊಮ್ಮೆ ನವೀಕರಣಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಹಳೆಯ ಮತ್ತು ಜೀವಸತ್ವ ಕಳೆದುಕೊಂಡ ಚರ್ಮಕೋಶಗಳು ದೇಹದ ಮೇಲ್ಮೈಯಲ್ಲಿ ಹರಡಿಕೊಂಡಿರುತ್ತದವೆ. ವಯಸ್ಸಾದಂತೆ ಈ ಪ್ರಕ್ರಿಯೆ ನಿಧಾನವಾಗುವುದರಿಂದ ಜೀವಸತ್ವ ಕಳೆದುಕೊಂಡ ಚರ್ಮಕೋಶಗಳು ಹೆಚ್ಚು ಸಂಗ್ರಹವಾಗುತ್ತದೆ.
ಪರಿಣಾಮ ಬೀರುವ ಅಂಶಗಳು:
ಧೂಳು, ಮಾಲಿನ್ಯ, ಸೂರ್ಯನ ನೇರಳಾತೀತ ಕಿರಣ ಹಾಗೂ ಹವಾಮಾನ ಬದಲಾವಣೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ.
ಶುಷ್ಕ ವಾತಾವರಣ ಚರ್ಮವನ್ನು ಒಣಗಿಸಿ, ಜೀವಸತ್ವ ಕಳೆದುಕೊಂಡ ಚರ್ಮಕೋಶಗಳ ರಚನೆಯನ್ನು ಹೆಚ್ಚಿಸುತ್ತದೆ.
ನಿಯಮಿತವಾಗಿ ಮುಖ ತೊಳೆಯುವುದು, ಮೇಕಪ್ ಮಾಡಿದ ನಂತರ ಸರಿಯಾಗಿ ಸ್ವಚ್ಚಗೊಳಿಸದೆ ಇರುವುದು ಮತ್ತು ಮಾಯ್ಶ್ಚರೈಸರ್ ಬಳಸದಿರುವುದು ಜೀವಸತ್ವ ಕಳೆದುಕೊಂಡ ಚರ್ಮ ಕೋಶಗಳು ಹರಡಿಕೊಳ್ಳಲು ಕಾರಣವಾಗುತ್ತದೆ.
ಕಡಿಮೆ ನೀರು ಕುಡಿಯುವುದು ಈ ಸಮಸ್ಯೆಗೆ ಕಾರಣವಾಗಬಹುದು.
ಪರಿಹಾರಗಳು:
ನಿಯಮಿತ ಎಕ್ಸ್‌ಫೋಲಿಯೇಶನ್: ವಾರಕ್ಕೆ 2 ರಿಂದ 3 ಬಾರಿ ನಿಧಾನವಾಗಿ ಸ್ಕ್ರಬ್ ಬಳಸಿ ಮುಖವನ್ನು ಎಕ್ಸ್‌ಫೋಲಿಯೇಟ್ ಮಾಡಬೇಕು. ಇದು ಜೀವಸತ್ವ ಕಳೆದುಕೊಂಡ ಚರ್ಮ ಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. (ಅತಿಯಾದ ಎಕ್ಸ್‌ಫೋಲಿಯೇಶನ್ ಚರ್ಮಕ್ಕೆ ಹಾನಿಕಾರಕವಾಗಬಹುದು.)
ಮೊಸರು ಹಚ್ಚಿ : ಮೊಸರನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ತೊಳೆಯಿರಿ. ಇದು ಜೀವಸತ್ವ ಕಳೆದುಕೊಂಡ ಚರ್ಮವನ್ನು ತೆಗೆಯಲು ಸಹಾಯ ಮಾಡುತ್ತದೆ.
ಜೇನು ಮತ್ತು ಬಾದಾಮಿ ಪುಡಿ: ಈ ಮಿಶ್ರಣವು ಚರ್ಮವನ್ನು ಮೃದುವಾಗಿಸಿ ಜೀವಸತ್ವ ಕಳೆದುಕೊಂಡ ಚರ್ಮವನ್ನು ತೆಗೆದುಹಾಕುತ್ತದೆ.
ಪಪಾಯಿ ಮತ್ತು ಜೇನು: ಪಪಾಯಿಯಲ್ಲಿರುವ ಎಂಜೈಮ್‌ಗಳು ನೈಸರ್ಗಿಕವಾಗಿ ಜೀವಸತ್ವ ಕಳೆದುಕೊಂಡ ಚರ್ಮಕೋಶಗಳನ್ನು ಕರಗಿಸುತ್ತವೆ.
ಸರಿಯಾದ ಚರ್ಮ ನಿರ್ವಹಣೆಯ ದಿನಚರಿ: ದಿನಕ್ಕೆ ಎರಡು ಬಾರಿ ಸೌಮ್ಯವಾದ ಫೇಸ್‌ವಾಶ್‌ನಿಂದ ಮುಖ ತೊಳೆಯಿರಿ. ತೊಳೆದ ನಂತರ ಟೋನರ್ ಮತ್ತು ಮಾಯ್ಶ್ಚರೈಸರ್ ಬಳಸುವುದು ಅತ್ಯವಶ್ಯಕ. ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆಯುವುದನ್ನು ಮರೆಯಬೇಡಿ.
ಸ್ಟೀಮಿಂಗ್ (ಬಿಸಿ ಆವಿ): ವಾರಕ್ಕೊಮ್ಮೆ ಮುಖಕ್ಕೆ ಬಿಸಿ ಆವಿ ಕೊಡುವುದರಿಂದ ಮುಖದ ರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದಾಗಿ ಜೀವಸತ್ವ ಕಳೆದುಕೊಂಡ ಚರ್ಮವನ್ನು ಸುಲಭವಾಗಿ ತೆಗೆದು ಹಾಕಬಹುದು. 5 ರಿಂದ 10 ನಿಮಿಷ ಬಿಸಿ ಆವಿ ನೀಡಬೇಕು.
ಜೀವನಶೈಲಿ ಬದಲಾವಣೆ: ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯಿರಿ. ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಸಾಕಷ್ಟು ನಿದ್ರೆ ಮತ್ತು ವ್ಯಾಯಾಮ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ.
ಸನ್‌ಸ್ಕ್ರೀನ್ ಬಳಕೆ: ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಎಸ್‌ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಪ್ರತಿದಿನ ಬಳಸಿರಿ.
ಜೀವಸತ್ವ ಕಳೆದುಕೊಂಡ ಚರ್ಮಕೋಶಗಳನ್ನು ತೆಗೆಯುವುದು ಆರೋಗ್ಯಕರ ಅಭ್ಯಾಸವಾಗಿದೆ. ನಿಯಮಿತ ಚರ್ಮದ ನಿರ್ವಹಣೆ, ನೈಸರ್ಗಿಕ ಪರಿಹಾರ ಕ್ರಮ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
(ಡಾ. ಶಿರಿನ್ ಫುರ್ಟಾಡೋ, ಹಿರಿಯ ಸಲಹೆಗಾರರು – ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞರು, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.