ADVERTISEMENT

ತುಳಸಿ ಔಷಧವಾಗಿ ನಿತ್ಯ ಬಳಸಿ!

ಡಾ.ಶ್ವೇತಾ ಹೊನ್ನುಂಗರ
Published 8 ನವೆಂಬರ್ 2019, 19:30 IST
Last Updated 8 ನವೆಂಬರ್ 2019, 19:30 IST
   

ಔಷಧೀಯ ಸಸ್ಯ ತುಳಸಿಯ ವಿವಿಧ ಭಾಗಗಳನ್ನು ಹಲವಾರು ಕಾಯಿಲೆಗಳಿಗೆ ಮದ್ದಾಗಿ ಬಳಸಬಹುದು. ಆಯುರ್ವೇದದಲ್ಲಿ ಮಾತ್ರವಲ್ಲ, ಅಲೋಪಥಿಯಲ್ಲೂ ಇದರ ಬಳಕೆ ಹೆಚ್ಚಾಗಿದೆ.

ತುಳಸಿ. ಮನೆಯ ಮುಂದೆ ಧಾರ್ಮಿಕ ಆಚರಣೆಗೆ ಪೂರಕವಾಗಿ ಬೆಳೆಸುವ ಈ ಸಸ್ಯ ಔಷಧೀಯ ಗುಣಗಳ ಆಗರ. ಆಯುರ್ವೇದದಲ್ಲಂತೂ ಇದನ್ನು ಅಮೂಲ್ಯ ಸಸ್ಯವೆಂದು ಪರಿಗಣಿಸಿ, ಎಲೆ, ತೊಗಟೆ, ಬೇರನ್ನು ವಿವಿಧ ಕಾಯಿಲೆಗಳಿಗೆ ಔಷಧವಾಗಿ ಬಳಸುವ ಪದ್ಧತಿ ಹಿಂದಿನಿಂದಲೂ ಇದೆ. ಅಷ್ಟೇಕೆ, ನಿತ್ಯ ಇದನ್ನು ಬಳಸಿದರೆ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿಯೇ ಹಲವರು ಊಟದ ನಂತರ ಒಂದೆರಡು ತುಳಸಿ ಎಲೆಗಳನ್ನು ಅಗಿಯುವ ಅಭ್ಯಾಸ ಬೆಳೆಸಿಕೊಳ್ಳುವುದು. ಎಲೆಗಳನ್ನು ನೀರಿಗೆ ಸೇರಿಸಿ ತೀರ್ಥರೂಪದಲ್ಲಾದರೂ ಒಂದೆರಡು ಚಮಚ ಕುಡಿಯುವ ಕ್ರಮ ಇಟ್ಟುಕೊಂಡಿರುತ್ತಾರೆ.

ತುಳಸಿಯಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳಿವೆ. ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ವನ ತುಳಸಿ. ತುಳಸಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಜಿಂಕ್, ಕಬ್ಬಿಣಾಂಶ ಅಪಾರ ಪ್ರಮಾಣದಲ್ಲಿದ್ದು, ಬ್ಯಾಕ್ಟೀರಿಯ ವಿರೋಧಿ ಹಾಗೂ ಕ್ರಿಮಿನಾಶಕ ಗುಣಗಳನ್ನು ಹೊಂದಿರುತ್ತದೆ.

ADVERTISEMENT

ಮನೆಮದ್ದಾಗಿ ತುಳಸಿಯ ಉಪಯೋಗ
ತುಳಸಿ ಎಲೆಗಳು ನರಗಳ ಟಾನಿಕ್ ಇದ್ದಂತೆ. ಪ್ರತಿದಿನ ಇದರ ಸೇವನೆಯಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ ಹಾಗೂ ಇದು ಒತ್ತಡ ಕಡಿಮೆಗೊಳಿಸುತ್ತದೆ.

ಜ್ವರ/ ಮಲೇರಿಯಾ: ಮಳೆಗಾಲದಲ್ಲಿ ಬರುವ ಮಲೇರಿಯಾ, ಡೆಂಗಿ ಜ್ವರಕ್ಕೆ ತುಳಸಿಯ ಎಲೆಗಳನ್ನು ಚಹಾದ ಜೊತೆಗೆ ಕುದಿಸಿ ಕುಡಿಯಬೇಕು. ತೀವ್ರವಾದ ಜ್ವರವಿದ್ದರೆ ತುಳಸಿ ಎಲೆಗಳು, ಏಲಕ್ಕಿ ಪುಡಿಯನ್ನು ಅರ್ಧ ಲೀಟರ್ ನೀರಿಗೆ ಹಾಕಿ ಕುದಿಸಿ. ಜೊತೆಗೆ ಹಾಲು, ಸಕ್ಕರೆ ಸೇರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.

ಕೆಮ್ಮು, ಶೀತ: ಹುರಿದ ಲವಂಗವನ್ನು ತುಳಸಿ ಎಲೆಯ ಜೊತೆ ತೆಗೆದುಕೊಂಡರೆ ಎಲ್ಲ ತರಹದ ಕೆಮ್ಮು ವಾಸಿಯಾಗುತ್ತದೆ. ಆಯುರ್ವೇದದ ಹಲವು ಕೆಮ್ಮಿನ ಔಷಧಗಳಲ್ಲಿ ತುಳಸಿ ಮುಖ್ಯವಾದುದು.

ಗಂಟಲು ಬೇನೆ: ತುಳಸಿ ಕಷಾಯವನ್ನು ಕುಡಿಯಲು ಹಾಗೂ ಬಾಯಿ ಮುಕ್ಕಳಿಸಲು ಬಳಸಬಹುದು.

ಮೂತ್ರಪಿಂಡದ ಕಲ್ಲು: ತುಳಸಿ ರಸ ಮತ್ತು ಜೇನುತುಪ್ಪವನ್ನು ದಿನನಿತ್ಯ 6 ತಿಂಗಳವರೆಗೆ ತೆಗೆದುಕೊಂಡರೆ ಕಲ್ಲು ಮೂತ್ರದಲ್ಲಿ ಜಾರಿ ಹೋಗುತ್ತದೆ.

ಹೃದಯ ಸಮಸ್ಯೆ: ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಚಿಕ್ಕ ಮಕ್ಕಳ ಆರೋಗ್ಯ ಸಮಸ್ಯೆ: ನೆಗಡಿ, ಜ್ವರ, ಭೇದಿ, ವಾಂತಿ ಎಲ್ಲದಕ್ಕೂ ತುಳಸಿ ರಸ ಸಹಾಯಕ.

ಒತ್ತಡ ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು: ನಿತ್ಯ ಆರೋಗ್ಯವಂತರೂ ಕೂಡಾ 12 ತುಳಸಿ ಎಲೆಗಳನ್ನು ದಿನಕ್ಕೆರಡು ಬಾರಿ ಸೇವಿಸಬೇಕು.

ಕೀಟ / ಸೊಳ್ಳೆ ಕಚ್ಚಿದರೆ: ತುಳಸಿ ರಸವನ್ನು ಒಂದೊಂದು ಚಮಚ ಪ್ರತಿ 3 ಗಂಟೆಗೊಮ್ಮೆ ಕುಡಿಯುವುದು ಹಾಗೂ ರಸವನ್ನು ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.

ಚರ್ಮದ ತೊಂದರೆ: ತುಳಸಿ ರಸ ಹಚ್ಚುವುದು ಹಾಗೂ ಸೇವಿಸುವುದು.

ಹಲ್ಲಿನ ಸಮಸ್ಯೆಗೆ: ತುಳಸಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಲ್ಲು ಉಜ್ಜಲು ಅಥವಾ ಆ ಪುಡಿಯಲ್ಲಿ ಸಾಸಿವೆ ಎಣ್ಣೆಯನ್ನು ಬೆರೆಸಿ ಪೇಸ್ಟ್‌ ರೀತಿ ಬಳಸಬಹುದು.

ತಲೆ ನೋವಿಗೆ: ಹೊಟ್ಟೆಗೆ ತುಳಸಿ ಕಷಾಯ ಅಥವಾ ತುಳಸಿ ಎಲೆ ಮತ್ತು ಶ್ರೀಗಂಧದ ಪೇಸ್ಟ್‌ ಅನ್ನು ಹಣೆಗೆ ಹಚ್ಚುವುದರಿಂದ ಉಷ್ಣತೆ ಹಾಗೂ ತಲೆನೋವು ಕಡಿಮೆಯಾಗುತ್ತದೆ.

ಕಣ್ಣಿನ ಸಮಸ್ಯೆಗೆ: ಎರಡು ಹನಿ ಕಪ್ಪು ತುಳಸಿ ರಸವನ್ನು ಪ್ರತಿದಿನ ರಾತ್ರಿ ಕಣ್ಣಿಗೆ ಹಾಕುವುದರಿಂದ ಕಣ್ಣುಉರಿ, ನಕ್ತಾಂಧತೆ ಕಡಿಮೆಯಾಗುತ್ತದೆ.

ಆಯುರ್ವೇದದಲ್ಲಿ ತುಳಸಿಯನ್ನು ಹಲವಾರು ಸಮಸ್ಯೆಗಳಿಗೆ ಬೇರೆ ಬೇರೆ ಸಸ್ಯಗಳ ಜೊತೆ ಬೆರೆಸಿ ಔಷಧಿಗಳನ್ನು ತಯಾರಿಸುತ್ತಾರೆ.

ಸಂಶೋಧನೆಯ ಪ್ರಕಾರ ತುಳಸಿಯು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅದನ್ನು ತಡೆಗಟ್ಟಲು ಹಾಗೂ ರೇಡಿಯೇಷನ್‌ನಿಂದ ಆಗುವ ಅಡ್ಡ ಪರಿಣಾಮಗಳನ್ನು ಸಹ ತಡೆಗಟ್ಟಲು ಉಪಯೋಗಿಸುತ್ತಾರೆ. ದಿನಾ ತುಳಸಿ ಎಲೆಗಳನ್ನು ನುಂಗುವುದರಿಂದ ಕ್ಯಾನ್ಸರ್ ಅನ್ನು ಕೆಲವು ಮಟ್ಟಿಗೆ ತಡೆಗಟ್ಟಬಹುದು.

ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ..
ಹೊಟ್ಟೆಯ ಹುಣ್ಣು, ಹೆಚ್ಚಿದ ಕೊಲೆಸ್ಟ್ರಾಲ್, ಬೊಜ್ಜು, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹಾಗೂ ಏಡ್ಸ್‌ನಂತಹ ಗಂಭೀರ ಸಮಸ್ಯೆಗಳಲ್ಲಿ ತುಳಸಿಯನ್ನು ಬಳಸಲಾಗುತ್ತಿದೆ. ಸೌಂದರ್ಯ ಚಿಕಿತ್ಸೆಗಾಗಿ ಹಾಗೂ ವೃದ್ಧಿಗಾಗಿ ಸಹ ತುಳಸಿ ಪುಡಿಯನ್ನು ಮುಖಲೇಪದಂತೆ ಬಳಸುತ್ತಾರೆ. ಇದರಿಂದ ಕಪ್ಪುಕಲೆ, ಸುಕ್ಕು ಕಡಿಮೆಯಾಗಿ ಚರ್ಮವು ತಾಜಾತನದಿಂದ ಹೊಳೆಯುತ್ತದೆ.

ಆಹಾರವಾಗಿ..
ತುಳಸಿಯನ್ನು ಚಹಾದ ರೂಪದಲ್ಲಿ, ವೆಜಿಟೇಬಲ್ ಸೂಪ್‌ನಲ್ಲಿ, ಚಟ್ನಿಗಳಲ್ಲಿ ಬಳಸುತ್ತಾರೆ. ತುಳಸಿ ಬೀಜಗಳಿಂದ ಸಿಹಿ ತಿಂಡಿಗಳನ್ನು ಕೂಡ ತಯಾರಿಸಬಹುದು. ಇದಲ್ಲದೆ ತುಳಸಿಯ ತುಪ್ಪ, ಎಣ್ಣೆ ಹಾಗೂ ಪುಡಿಗಳನ್ನು ಬೇರೆ ಬೇರೆ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತಿದೆ.

ಸ್ವಾನ್ ಫ್ಲೂ / H1N1 ನಂತಹ ಮಾರಕ ವೈರಲ್ ಕಾಯಿಲೆಗಳಲ್ಲೂ ತುಳಸಿಯನ್ನು ಚಿಕಿತ್ಸೆಗೆ ಬಳಸುತ್ತಿದ್ದಾರೆ ಹಾಗೂ ಇದರ ಉಪಯೋಗದಿಂದ ಇಂತಹ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.

4–5 ಹನಿ ತುಳಸಿ ರಸದ ಜೊತೆ ಸ್ವಲ್ಪ ಉಪ್ಪನ್ನು ಸೇರಿಸಿ ಮೂರ್ಛೆ ಹೋದವರ ಮೂಗಿಗೆ ಹಾಕಿದರೆ ತಕ್ಷಣ ಎಚ್ಚರಗೊಳ್ಳುತ್ತಾರೆ.

10 ಗ್ರಾಂ ತುಳಸಿ ರಸ ಮತ್ತು 5 ಗ್ರಾಂ ಜೇನುತುಪ್ಪವು ಆಸ್ತಮ ಮತ್ತು ಬಿಕ್ಕಳಿಕೆಯನ್ನು ಕಡಿಮೆ ಮಾಡುತ್ತದೆ.

ತುಳಸಿ ಕಷಾಯದ ಜೊತೆ ಸ್ವಲ್ಪ ಸೈಂಧವ ಉಪ್ಪು ಹಾಗೂ ಶುಂಠಿ ಪುಡಿಯನ್ನು ಸೇರಿಸಿ ತೆಗೆದುಕೊಂಡರೆ ಮಲಬದ್ಧತೆ ಕಡಿಮೆಯಾಗುತ್ತದೆ.

ತುಳಸಿ ರಸವನ್ನು ಉಗುರು ಬೆಚ್ಚಗೆ ಮಾಡಿ 4–5 ಹನಿ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ.

ದೇಹದ ತೂಕ ಕಡಿಮೆ ಮಾಡಬೇಕಾದರೂ ಅಥವಾ ಹೆಚ್ಚಿಸಬೇಕಾದರೂ ತುಳಸಿ ಉಪಯೋಗಕಾರಿ. ಇದು ಮೆಟಬಾಲಿಸಂ ಅನ್ನು ವೃದ್ಧಿಗೊಳಿಸಿ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

(ಲೇಖಕಿ ಬೆಂಗಳೂರಿನ ಲೋಟಸ್ ಆಯುರ್‌ಕೇರ್‌ನಲ್ಲಿ ಆಯುರ್ವೇದ ತಜ್ಞೆ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.