ADVERTISEMENT

ಉಸಿರಾಟದ ಸಮಸ್ಯೆ: ನಿರ್ಲಕ್ಷ್ಯ ಬೇಡ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 9:12 IST
Last Updated 22 ಡಿಸೆಂಬರ್ 2025, 9:12 IST
   

ಶ್ವಾಸಕೋಶಗಳು ದೇಹದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್‌ ಸಾಮಾನ್ಯ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಉಸಿರಾಟದ ವೈಫಲ್ಯದ ಸಮಸ್ಯೆ ಉಂಟಾಗುತ್ತದೆ. ಇಡೀ ಉಸಿರಾಟ ವ್ಯವಸ್ಥೆಗೆ ದೇಹದಲ್ಲಿರುವ ಜಾಗ ಬಹಳ ಚಿಕ್ಕದು. ಹೀಗಾಗಿ, ಇದಕ್ಕಾಗುವ ಸಣ್ಣ ಅಡಚಣೆಗಳು ಸಹ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಅದೃಷ್ಟವಶಾತ್, ಇಂದಿನ ತಾಂತ್ರಿಕ ಪ್ರಗತಿ ಉಸಿರಾಟವನ್ನು ಸ್ಥಿರವಾಗಿ ಮತ್ತು ಪರಿಣಾಮಕಾರಿಯಾಗಿಡಲು ನಮಗೆ ಹಲವಾರು ಮಾರ್ಗಗಳನ್ನು ಒದಗಿಸುತ್ತಿದೆ. 

ಟೈಪ್–1 ಹಾಗೂ ಟೈಪ್–2 ಉಸಿರಾಟದ ವೈಫಲ್ಯ:

ಹಲವು ಬಗೆಯ ಶ್ವಾಸಕೋಶದ ಕಾಯಿಲೆಗಳು ನಮ್ಮ ಉಸಿರಾಟದ ಕಾರ್ಯಗಳನ್ನು ದುರ್ಬಲಗೊಳಿಸಬಹುದು. ಕೆಲವೊಮ್ಮೆ ಉಸಿರಾಟ ವೈಫಲ್ಯವಾಗಬಹುದು. ಇದಕ್ಕೆ ಪರಿಣಾಮ ಬೀರುವ ಪ್ರಧಾನ ಅನಿಲವನ್ನು ಅವಲಂಬಿಸಿ ಇದನ್ನು ಟೈಪ್ 1 ಅಥವಾ ಟೈಪ್ 2 ಉಸಿರಾಟದ ವೈಫಲ್ಯ ಎಂದು ಕರೆಯಲಾಗುತ್ತದೆ. ಶ್ವಾಸಕೋಶಗಳು ಅಂಗಾಂಶಗಳಿಗೆ ಅಗತ್ಯ ಆಮ್ಲಜನಕವನ್ನು ತಲುಪಿಸಲು ವಿಫಲವಾಗುವುದನ್ನು ಟೈಪ್ 1 ಅಥವಾ ಹೈಪೋಕ್ಸಿಕ್ ಉಸಿರಾಟದ ವೈಫಲ್ಯವೆಂದು, ದೇಹವು ಹೆಚ್ಚುವರಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕಲು ವಿಫಲವಾದಾಗ  ಟೈಪ್ 2 ಅಥವಾ ‘ಹೈಪರ್-ಕ್ಯಾಪ್ನಿಕ್' ವೈಫಲ್ಯವೆಂದು ಪರಿಗಣಿಸಲಾಗುತ್ತದೆ. 

ADVERTISEMENT

ನ್ಯುಮೋನಿಯಾ ಮತ್ತು ಪಲ್ಮನರಿ ಎಂಬಾಲಿಸಮ್ (ಶ್ವಾಸಕೋಶದೊಳಗೆ ಹೆಪ್ಪುಗಟ್ಟುವಿಕೆ) ಟೈಪ್ 1 ವೈಫಲ್ಯದ ಉದಾಹರಣೆಗಳಾಗಿವೆ. COPD/ಎಂಫಿಸೆಮಾ ಸಾಮಾನ್ಯವಾಗಿ ಟೈಪ್–2 ವೈಫಲ್ಯದಿಂದ ಬರುವ ಸಮಸ್ಯೆ.

ಉಸಿರಾಟದ ವೈಫಲ್ಯ ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು, ನ್ಯುಮೋನಿಯಾ ತಾತ್ಕಾಲಿಕ ಉಸಿರಾಟದ ವೈಫಲ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುವುದು ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ಮರಳಿಸುತ್ತದೆ. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ (ಒಂದು ರೀತಿಯ ಶ್ವಾಸಕೋಶದ ಫೈಬ್ರೋಸಿಸ್) ಶಾಶ್ವತ ಉಸಿರಾಟದ ವೈಫಲ್ಯಕ್ಕೆ ಒಂದು ಉದಾಹರಣೆಯಾಗಿದೆ. ಶ್ವಾಸಕೋಶ ಕಸಿ ಮಾಡದಿದ್ದರೆ (ಶ್ವಾಸಕೋಶಕ್ಕೆ ಚಿಕಿತ್ಸೆ)ಇದು ತೀವ್ರವಾದ ಶ್ವಾಸಕೋಶದ ಕಾಯಿಲೆಗಳು ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

ವೈಫಲ್ಯದ ಲಕ್ಷಣಗಳು:

ಉಸಿರಾಟದ ವೈಫಲ್ಯದ ಲಕ್ಷಣಗಳು ಹೆಚ್ಚಾಗಿ ವೈಫಲ್ಯಕ್ಕೆ ಕಾರಣವಾದ ಕಾಯಿಲೆಯನ್ನು ಅವಲಂಬಿಸಿರುತ್ತದೆ. ನ್ಯುಮೋನಿಯಾ ಹೊಂದಿರುವ ರೋಗಿಯು ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಪಲ್ಸ್ ಆಕ್ಸಿಮೆಟ್ರಿಯಲ್ಲಿ ಆಮ್ಲಜನಕದ ಮಟ್ಟ ಕೊರತೆಯಂಥ ಲಕ್ಷಣಗಳನ್ನು ಹೊಂದಿರಬಹುದು. COPD ಅಥವಾ ಆಸ್ತಮಾ ರೋಗಿಗಳು ಉಬ್ಬಸ ಮತ್ತು ಉಸಿರಾಟದ ತೊಂದರೆ ಹೊಂದಿರಬಹುದು - ಮತ್ತು ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟ ಹೆಚ್ಚಿರಬಹುದು. ಇಂಗಾಲ ಅಧಿಕವಾಗಿರುವುದು ಗೊಂದಲ, ಆಲಸ್ಯ ಮತ್ತು ಅರೆನಿದ್ರಾವಸ್ಥೆಗೆ ಕಾರಣವಾಗಬಹುದು.

ದೇಹದಲ್ಲಿ ಆಮ್ಲಜನಕ ಅಥವಾ ಇಂಗಾಲ ಮಟ್ಟದಲ್ಲಿನ ವ್ಯತ್ಯಯವು ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತವೆ ಮತ್ತು ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಹೃದಯ ಬಡಿತ ನಿಲ್ಲುವಿಕೆಗೆ ಕಾರಣವಾಗಬಹುದು.

ಲಭ್ಯವಿರುವ ಚಿಕಿತ್ಸೆಗಳು:

ಉಸಿರಾಟದ ವೈಫಲ್ಯದ ತಕ್ಷಣದ ಚಿಕಿತ್ಸೆಯು ಆಮ್ಲಜನಕ ಮಟ್ಟ ಸರಿ ಸ್ಥಿತಿಗೆ ತರುವುದು ಮತ್ತು 'ವೆಂಟಿಲೇಟರ್' ಮೂಲಕ ಹೆಚ್ಚುವರಿ ಇಂಗಾಲವನ್ನು ತೆಗೆದುಹಾಕುವ ಪ್ರಕ್ರಿಯೆ ಹೊಂದಿರುತ್ತದೆ. ವೆಂಟಿಲೇಟರ್ ಎನ್ನುವುದು ಶ್ವಾಸಕೋಶಗಳು ಚೇತರಿಸಿಕೊಳ್ಳುವವರೆಗೆ ಉಸಿರಾಟದ ಪ್ರಕ್ರಿಯೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿರ್ವಹಿಸುವ ಯಂತ್ರವಾಗಿದೆ. ಇದು ಶ್ವಾಸಕೋಶಕ್ಕೆ ಆಮ್ಲಜನಕ ಮತ್ತು ಗಾಳಿಯ ನಿಯಂತ್ರಿತ ಮಿಶ್ರಣವನ್ನು ತಲುಪಿಸುತ್ತದೆ. ಇಂದು ಲಭ್ಯವಿರುವ ಅತ್ಯಾಧುನಿಕ ವೆಂಟಿಲೇಟರ್‌ಗಳು ದೀರ್ಘಕಾಲದವರೆಗೆ ಸುರಕ್ಷಿತ ಉಸಿರಾಟವನ್ನು ಬೆಂಬಲಿಸುವಿಕೆಯನ್ನು ಸಾಧ್ಯವಾಗಿಸಿದೆ ಮತ್ತು ಐಸಿಯುನಲ್ಲಿ ಈ ಯಂತ್ರಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ.

ಕೆಲವು ಸಂದರ್ಭಗಳಲ್ಲಿ, ಉಸಿರಾಟದ ವೈಫಲ್ಯವು ತುಂಬಾ ಗಂಭೀರವಾಗಿದ್ದು, ಸಾಕಷ್ಟು ಔಷಧಿ ವಿನಿಮಯವನ್ನು ನಿರ್ವಹಿಸಲು ವೆಂಟಿಲೇಟರ್‌ಗಳು ಸಹ ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನರೇಷನ್‌ (ECMO) ಸಾಧನವು ಜೀವ ಉಳಿಸುವ ಏಕೈಕ ಮಾರ್ಗವಾಗಿದೆ. ಡಯಾಲಿಸಿಸ್ ಯಂತ್ರದಂತೆಯೇ, ಇದು ಕ್ಯಾತಿಟರ್ ಮೂಲಕ ದೇಹದಿಂದ ರಕ್ತವನ್ನು ತೆಗೆದುಹಾಕುತ್ತದೆ, ಅನಿಲಗಳ ಮಟ್ಟವನ್ನು ಸರಿಪಡಿಸಿ ಬೇರೆ ಕ್ಯಾತಿಟರ್ ಮೂಲಕ ಮತ್ತೆ ದೇಹಕ್ಕೆ ಮರು ರವಾನಿಸುತ್ತದೆ. ದುಬಾರಿ ಮತ್ತು ಸಂಕೀರ್ಣವಾದ ಕಾರ್ಯವಿಧಾನವಾಗಿದ್ದರೂ, ಸಂಭಾವ್ಯ ಅಡ್ಡಪರಿಣಾಮಗಳೊಂದಿಗೆ ಇದು ಉಸಿರಾಟದ ವೈಫಲ್ಯದ ಅತ್ಯಂತ ತೀವ್ರ ರೀತಿಯ ಚಿಕಿತ್ಸೆಯಾಗಿದೆ.

ವೆಂಟಿಲೇಟರ್‌ಗಳು ಉಸಿರಾಟವನ್ನು ಬೆಂಬಲಿಸಬಹುದಾದರೂ, ಅವು ನಿರ್ಣಾಯಕ ಚಿಕಿತ್ಸೆಯಲ್ಲ. ನಿರ್ಣಾಯಕ ಚಿಕಿತ್ಸೆಯು ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ: ನ್ಯುಮೋನಿಯಾಗೆ ಪ್ರತಿಜೀವಕಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಎಂಫಿಸೆಮಾ ಅಥವಾ COPD ಸಮಸ್ಯೆಗಳಿಗೆ ನೆಬ್ಯುಲೈಸೇಶನ್ ಮತ್ತು ಸ್ಟೀರಾಯ್ಡ್‌ಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ನಿರ್ಣಾಯಕ ಚಿಕಿತ್ಸೆಯು ಉಸಿರಾಟದ ವೈಫಲ್ಯಕ್ಕೆ ಕಾರಣವಾಗುವ ಅಂಶವನ್ನು ನಿರ್ಮೂಲನೆ ಮಾಡುವ ಕಾರ್ಯವಿಧಾನವನ್ನು ಹೊಂದಿರುತ್ತದೆ. 

ಇಂಟರ್‌ಸ್ಟೀಷಿಯಲ್ ಲಂಗ್‌ ಫೈಬ್ರೋಸಿಸ್‌ನಂತಹ ಕೆಲವು ರೋಗಗಳು ಪ್ರಸ್ತುತ ಲಭ್ಯವಿರುವ ವೈದ್ಯಕೀಯ ಚಿಕಿತ್ಸೆಯಿಂದ ವಾಸಿಯಾಗದಿರಬಹುದು ಮತ್ತು ಶ್ವಾಸಕೋಶದ ಕಸಿ ಮಾತ್ರ ಅಂತಿಮ ಪರಿಹಾರವಾಗಿರಬಹುದು. ಇದು ರೋಗಿಯ ಇತರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಒಟ್ಟಾರೆಯಾಗಿ, ಶ್ವಾಸಕೋಶಗಳು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಉಸಿರಾಟದ ವೈಫಲ್ಯವು ಬಹು ರೋಗಗಳ ಪರಿಣಾಮವಾಗಿದೆ. ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಮಾರಣಾಂತಿಕ ಅಪಾಯವೂ ಇದೆ ಎನ್ನುತ್ತಾರೆ ಶ್ವಾಸಕೋಶ ತಜ್ಞರು.  

(ಲೇಖಕರು: ಡಾ. ವಿ.ಎಸ್. ಹರಿಪ್ರಸಾದ್, ಶ್ವಾಸಕೋಶ ತಜ್ಞರು, ಅಪೋಲೋ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.