ಬೆಳಿಗ್ಗೆ ಏಳುವಷ್ಟರಲ್ಲಿಯೇ ಒಮ್ಮೊಮ್ಮೆ ನಿಮ್ಮ ಮನಸ್ಸು ಆಹ್ಲಾದಕರವಾಗಿರುತ್ತದೆ; ಸಂತೋಷವಿರುತ್ತದೆ. ಕೆಲವು ದಿನ ಏಳುವಾಗ ಸೋಮಾರಿತನವವೊ, ಆಲಸ್ಯವೊ, ಮಾನಸಿಕ ಕ್ಷೋಭೆಯೊ – ಅಂತೂ ಹೇಳಲಾಗದ ಸ್ಥಿತಿಯಲ್ಲಿರುತ್ತೀರಿ. ಏಕೆ ಹೀಗೆ? ಕೆಲವು ದಿನ ಇದ್ದ ಸಂತೋಷ ಎಲ್ಲ ದಿನವೂ ಏಕಿರುವುದಿಲ್ಲ? ಇದಕ್ಕೆ ನಮ್ಮ ಶರೀರದಲ್ಲಿ ಉತ್ಪನ್ನವಾಗುವ ‘ಡೊಪಮೈನ್’ ಎಂಬ ರಸಾಯನವೇ ಕಾರಣ.
ಏನಿದು ಡೊಪಮೈನ್?
ಇದೊಂದು ನರಪ್ರೇಷಕ. ನರಪ್ರೇಷಕ ಎಂದರೆ ನರಜೀವಕೋಶಗಳಲ್ಲಿ ಸಂವೇದನೆಯನ್ನು ಒಂದು ನರಕೋಶದಿಂದ ಇನ್ನೊಂದು ನರಕೋಶಕ್ಕೆ ವರ್ಗಾಯಿಸುವ ರಸಾಯನ. ಎಲ್ಲ ಆರೋಗ್ಯವಂತ ವ್ಯಕ್ತಿಗಳ ಮಿದುಳಿನಲ್ಲಿಯೂ ಡೊಪಮೈನ್ ಇರುತ್ತದೆ. ಮಾನವ ದೇಹದಲ್ಲಿ ಅದರದು ಬಹುಮುಖಿ ಪಾತ್ರ. ಡೊಪಮೈನ್ ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಶ್ಲೇಷಣೆಯಾಗುತ್ತದೆ. ಒಮ್ಮೆ ಉತ್ಪಾದನೆಯಾದ ನಂತರ, ಇದು ನಿರ್ದಿಷ್ಟ ಗ್ರಾಹಕಗಳೊಂದಿಗೆ ಸಂವಹನ ನಡೆಸುತ್ತದೆ. ವಿವಿಧ ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸುತ್ತದೆ. ವೈವಿಧ್ಯಮಯ ಕಾರ್ಯಗಳಿಗೆ ನೆರವಾಗುವುದರ ಜೊತೆಗೆ ವಿವಿಧ ನರಕೋಶಗಳ ನಡುವೆ ಸಂವಹನವನ್ನು ಸುಗಮಗೊಳಿಸುತ್ತದೆ, ಕೇಂದ್ರ ನರಮಂಡಲ ಮತ್ತು ಬಾಹ್ಯ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಸಂತೋಷ, ಬಲವರ್ಧನೆ, ವಿವಿಧ ಅಂಗಗಳು ಚಟುವಟಿಕೆಗಳಲ್ಲಿ ತೊಡಗಿದಾಗ (ಉದಾ: ತಿನ್ನುವುದು, ಇತರರೊಡನೆ ಬೆರೆಯುವುದು ಅಥವಾ ಗುರಿಗಳನ್ನು ಸಾಧಿಸುವುದು), ಡೊಪಮೈನ್ ಮಟ್ಟವು ಹೆಚ್ಚಾಗುತ್ತದೆ. ಪರಿಣಾಮವಾಗಿ ಅದು ಸಂತೋಷದ ಭಾವನೆಗಳನ್ನು ಉಂಟುಮಾಡುತ್ತದೆ.
ಸಂವೇದನೆಯನ್ನು ಒಂದು ನರಕೋಶದಿಂದ ಇನ್ನೊಂದು ನರಕೋಶಕ್ಕೆ ಸಾಗಿಸುವುದಕ್ಕೆ ಡೊಪಮೈನ್ ಸಹಾಯ ಮಾಡುತ್ತದೆ. ತನ್ಮೂಲಕ ಅನೇಕ ಮಾನಸಿಕ ಕ್ರಿಯೆಗಳು ಸುಸೂತ್ರವಾಗಿ ಸಾಗುತ್ತವೆ. ಶರೀರವು ಯಾವುದೇ ಸಂವೇದನೆಯನ್ನು ಗ್ರಹಿಸುವಾಗ ಅದು ವಿದ್ಯುತ್‍ಪ್ರವಾಹದೋಪಾದಿಯಲ್ಲಿ ನರಕೋಶಗಳನ್ನು ಪ್ರವೇಶಿಸುತ್ತದೆ. ನರಕೋಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿದ್ಯುತ್ ಪ್ರವಾಹದೋಪಾದಿಯಲ್ಲಿಯೇ ಸಾಗುತ್ತದೆ, ಒಂದು ನರಕೋಶದಿಂದ ಇನ್ನೊಂದು ನರಕೋಶಕ್ಕೆ ಜೀವರಾಸಾಯನಿಕ ಕ್ರಿಯೆಯ ರೂಪದಲ್ಲಿ ವರ್ಗಾವಣೆಯಾಗುತ್ತದೆ. ಈ ರಾಸಾಯನಿಕ ಕ್ರಿಯೆಗಳು ಡೊಪಮೈನ್ ಅಥವಾ ಇತರ ನರಪ್ರೇಷಕಗಳ ಉಪಸ್ಥಿತಿಯಲ್ಲಿ ನಡೆಯುತ್ತವೆ. ಸಂವೇದನೆ ಅಂತಿಮವಾಗಿ ಮಿದುಳಿಗೆ ತಲುಪುತ್ತದೆ. ಮಿದುಳು ಸಂವೇದನೆಯನ್ನು ಪರಿಷ್ಕರಿಸಿ ನಿರ್ದಿಷ್ಟ ಅಂಗಕ್ಕೆ ಸೂಕ್ತವಾದ ಕ್ರಿಯೆಯನ್ನು ಮಾಡಲು ಆದೇಶ ನೀಡುತ್ತದೆ. ಉದಾಹರಣೆಗೆ, ಬಿಸಿಯಾದ ವಸ್ತುವೊಂದು ನಿಮ್ಮ ಬೆರಳಿಗೆ ತಗಲುತ್ತದೆ ಎಂದು ಭಾವಿಸಿ. ಬೆರಳಿನಲ್ಲಿರುವ ನರಕೋಶಗಳ ತುದಿಯು ಶಾಖವನ್ನು ಗ್ರಹಿಸಿ ಅದನ್ನು ವಿದ್ಯುತ್‍ಪ್ರವಾಹವಾಗಿ ಪರಿವರ್ತಿಸುತ್ತದೆ. ನರಕೋಶದ ಮುಖಾಂತರ ವಿದ್ಯುತ್‍ಪ್ರವಾಹದೋಪಾದಿಯಲ್ಲಿ ಸಂವೇದನೆ (ಬಿಸಿಯ ಅನುಭವ) ಮಿದುಳಿಗೆ ತಲುಪುತ್ತದೆ. ಈ ಸಂವೇದನೆ ಡೊಪಮೈನ್‍ನಂತಹ ನರಪ್ರೇಷಕಗಳಿಂದ ಒಂದು ನರಕೋಶದಿಂದ ಇನ್ನೊಂದು ನರಕೋಶಕ್ಕೆ ಸಾಗುತ್ತದೆ. ಮಿದುಳು ಶಾಖವನ್ನು ಗ್ರಹಿಸಿ ಕೈಬೆರಳುಗಳನ್ನು ಹಿಂದಕ್ಕೆ ಎಳೆದುಕೊಳ್ಳಲು ಆದೇಶ ನೀಡುತ್ತದೆ. ಈ ಆದೇಶವೂ ಸಂವೇದನೆಯ ರೂಪದಲ್ಲಿಯೇ ಬೆರಳಿಗೆ ರವಾನೆಯಾಗುತ್ತದೆ. ಈ ಎಲ್ಲ ಕ್ರಿಯೆಗಳು ಕ್ಷಣಮಾತ್ರದಲ್ಲಿ ಸಂಭವಿಸುತ್ತವೆ. ಅಂತಿಮವಾಗಿ ನೀವು ‘ಆ’ ಎನ್ನುತ್ತ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳುತ್ತೀರಿ!
ಈ ಜೀವರಾಸಾಯನಿಕ ಪ್ರತಿಕ್ರಿಯೆಗಳು ನಮ್ಮ ನಡವಳಿಕೆಗಳನ್ನು ಬಲಪಡಿಸುತ್ತವೆ. ಅವುಗಳನ್ನು ಪುನರಾವರ್ತಿಸಲು ನಮ್ಮನ್ನು ಪ್ರೋತ್ಸಾಹಿಸುತ್ತವೆ. ಡೊಪಮೈನ್ ಇಲ್ಲವಾದರೆ ಈ ಪ್ರತಿಕ್ರಿಯೆಯ ಹಾದಿಯಲ್ಲಿ ಅಡಚಣೆಗಳು ಉಂಟಾಗಬಹುದು. ವ್ಯಸನದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಪ್ರೇರಣೆ ಮತ್ತು ಕಲಿಕೆಗಳಿಗೆ ಕೂಡ ಡೊಪಮೈನ್ ಅತ್ಯಗತ್ಯ. ಇದು ಗಮನ, ಸ್ಮರಣೆ ಮತ್ತು ಸಮಸ್ಯಾ ಪರಿಹಾರದ ಕೌಶಲಗಳನ್ನು ಹೆಚ್ಚಿಸುವ ಮೂಲಕ ಅರಿವಿನ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ಡೊಪಮೈನ್ ಮಟ್ಟ ಹೆಚ್ಚಿದರೆ ವ್ಯಕ್ತಿಗಳು ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಹೆಚ್ಚು ಪ್ರಯತ್ನಿಸುತ್ತಾರೆ; ಹೆಚ್ಚು ಸಫಲರಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಡೊಪಮೈನ್ ಮಟ್ಟ ನಿರಾಸಕ್ತಿ ಮತ್ತು ಕಡಿಮೆ ಪ್ರೇರಣೆಗೆ ಕಾರಣವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಪ್ರಭಾವವನ್ನು ಉಂಟುಮಾಡಬಹುದು.
ಡೊಪಮೈನ್‍ನ ಪ್ರಭಾವವು ಕೇವಲ ಸಂತೋಷ ಮತ್ತು ಕ್ರಿಯಾಸಾಫಲ್ಯಗಳಿಗಷ್ಟೇ ಸೀಮಿತವಲ್ಲ. ಇದು ಹಲವಾರು ಮಾನಸಿಕ ಅಸ್ವಸ್ಥತೆಗಳೊಂದಿಗೆ ಸಂಕೀರ್ಣ ಸಂಬಂಧವನ್ನು ಹೊಂದಿದೆ. ಮಿದುಳೂ ಸೇರಿದಂತೆ ನರವ್ಯೂಹದಲ್ಲಿ ಡೊಪಮೈನ್ ಮಟ್ಟದ ಅಸಮತೋಲನವು ಖಿನ್ನತೆ ಮತ್ತು ಆತಂಕಗಳನ್ನು ಉಂಟುಮಾಡುತ್ತದೆ. ಡೊಪಮೈನ್‍ನ ನಿಯಂತ್ರಣವಿಲ್ಲದಿದ್ದರೆ ಸ್ಕಿಜೋಫ್ರೇನಿಯಾ ಅಥವಾ ಛಿದ್ರಮನಸ್ಕತೆ ಉಂಟಾಗುತ್ತದೆ. ಈ ರೋಗಪೀಡಿತರು ಯೋಚನಾಶಕ್ತಿ ಹಾಗೂ ಅನುಭವ ಮುಂತಾದವುಗಳ ಅರಿವನ್ನು ಕಳೆದುಕೊಂಡಿರುತ್ತಾರೆ. ಸ್ಕಿಜೋಫ್ರೇನಿಯಾಪೀಡಿತರ ಮಿದುಳಿನಲ್ಲಿ ಅತಿಯಾದ ಡೊಪಮೈನ್ ತಯಾರಾಗುತ್ತಿದ್ದು ಅಂಥ ವ್ಯಕ್ತಿಗಳು ಭ್ರಮೆಗೊಳಗಾಗುತ್ತಾರೆ; ಕೆಲವೊಮ್ಮೆ ಕಲ್ಪನಾ ಜಗತ್ತಿನಲ್ಲಿ ವಿಹರಿಸುತ್ತಾರೆ. ಅದರಿಂದ ಹಲವು ಬಗೆಯ ಅವಘಡಗಳು ಸಂಭವಿಸುವುದೂ ಉಂಟು. ಸ್ಕಿಜೋಫ್ರೇನಿಯಾಪೀಡಿತರಿಗೆ ಡೊಪಮೈನ್ ಮಟ್ಟವನ್ನು ಕಡಿಮೆ ಮಾಡುವುದಕ್ಕೆ ಕೆಲವು ಆ್ಯಂಟಿಸೈಕೊಟಿಕ್ ಔಷಧಗಳನ್ನು ನೀಡಲಾಗುತ್ತದೆ.
ಔಷಧಸೇವನೆ (ಡ್ರಗ್ ಅಡಿಕ್ಷನ್), ಕುಡಿತ ಮುಂತಾದ ವ್ಯಸನಗಳನ್ನು ಉಂಟುಮಾಡುವುದರಲ್ಲಿಯೂ ಡೊಪಮೈನ್‍ನ ಕೈವಾಡ ಇದೆ. ಡೊಪಮೈನ್ ಮಟ್ಟ ಹೆಚ್ಚಾದಾಗ ಅತಿಯಾದ ಉದ್ರೇಕ ಹಾಗೂ ಸಂತೋಷಗಳು ಉಂಟಾಗಿ, ವಾಸ್ತವತೆಯನ್ನು ಮರೆಸಿ ವ್ಯಕ್ತಿಯನ್ನು ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ. ಈ ಕಾರಣದಿಂದಲೇ ಅಂಥ ವ್ಯಕ್ತಿ ವ್ಯಸನಗಳ ದಾಸನಾಗುತ್ತಾನೆ. ಮಾನಸಿಕ ಆರೋಗ್ಯದ ಹೊರತಾಗಿ, ಡೊಪಮೈನ್ ದೈಹಿಕ ಯೋಗಕ್ಷೇಮದ ಮೇಲೂ ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಪಾರ್ಕಿನ್‍ಸನ್ ಕಾಯಲೆ ಉದಾಹರಣೆ.
ಡೊಪಮೈನ್ ಹೃದಯಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿಯೂ ಮುಖ್ಯ ಪಾತ್ರವಹಿಸುತ್ತದೆ. ಡೊಪಮೈನ್‍ನ ಅಸಮತೋಲನವು ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡಬಹುದು. ಉದಾಹರಣೆಗೆ, ಡೊಪಮೈನ್ ಮಟ್ಟ ಹೆಚ್ಚಾದಾಗ ಹೃದಯಬಡಿತದ ವೇಗ ಹೆಚ್ಚುತ್ತದೆ, ಕಡಿಮೆಯಾದಾಗ ರಕ್ತದ ಒತ್ತಡ ಕಡಿಮೆಯಾಗುತ್ತದೆ.
ಡೊಪಮೈನ್ ಆಹಾರಸೇವನೆ ಮತ್ತು ಹಸಿವಿನ ನಿಯಂತ್ರಣದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಡೊಪಮೈನ್ ನಿಯಂತ್ರಣವಿಲ್ಲದ ವ್ಯಕ್ತಿಗಳು ಹಸಿವು ಮತ್ತು ಆಹಾರಸೇವನೆಯನ್ನು ನಿಯಂತ್ರಿಸಿಕೊಳ್ಳಲಾರರು. ಅಂಥ ವ್ಯಕ್ತಿಗಳಲ್ಲಿ ಸ್ಥೂಲಕಾಯತೆ ಉಂಟಾಗಬಹುದು.
ನಿಯಮಿತ ವ್ಯಾಯಾಮ, ನಿದ್ರೆಯಂತಹ ಜೀವನಶೈಲಿ ಅಂಶಗಳು ಡೊಪಮೈನ್ ಮಟ್ಟವನ್ನು ಗಮನಾರ್ಹವಾಗಿ ನಿಯಂತ್ರಣದಲ್ಲಿರಿಸುತ್ತವೆ. ನಿದ್ರಾಹೀನತೆ ಡೊಪಮೈನ್ ಗ್ರಾಹಕಗಳ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.