ADVERTISEMENT

ಸ್ಪಂದನ: ಬಿಳಿಮುಟ್ಟಾದರೆ ಮಕ್ಕಳಾಗುವುದಿಲ್ಲವೇ?

ಡಾ.ವೀಣಾ ಎಸ್‌ ಭಟ್ಟ‌
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನನಗೆ 22ವರ್ಷ. ಆಗಾಗ ಬಿಳಿಮುಟ್ಟು ಆಗುತ್ತಿರುತ್ತದೆ. ಇದರಿಂದ ಮಕ್ಕಳಾಗುವುದಿಲ್ಲ ಎನ್ನುತ್ತಾರೆ, ಅದು ಹೌದೇ? ಯಾವ ವೈದ್ಯರ ಬಳಿಯೂ ತೋರಿಸಿಲ್ಲ. ಏನು ಮಾಡಲಿ?

-ಹೆಸರಿಲ್ಲ, ಊರು ಬೇಡ

ಉತ್ತರ: ಪ್ರತಿ ಹೆಣ್ಣಿನಲ್ಲೂ ಹದಿವಯಸ್ಸಿನಿಂದ ಹಿಡಿದು ಮುಟ್ಟು ನಿಲ್ಲುವವರೆಗೂ ಯೋನಿಮಾರ್ಗ ತೇವವಾಗಿಡಲು ಯೋನಿದ್ರವ ಸ್ವಲ್ಪ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತದೆ. ಇದಕ್ಕೆ ಯಾವುದೇ ಬಣ್ಣ ಅಥವಾ ವಾಸನೆ ಇರುವುದಿಲ್ಲ. ಇದರಿಂದ ಜನನಾಂಗದ ಭಾಗದಲ್ಲಿ ಯಾವುದೇ ರೀತಿಯ ಕೆರೆತ ಕೂಡಾ ಆಗುವುದಿಲ್ಲ. ಕೆಲವು ಸಹಜ ಪ್ರಕ್ರಿಯೆಗಳಲ್ಲಿ ಅಂದರೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಸಮಯದಲ್ಲೂ ಸಹಜವಾಗಿ ಒಂದೆರಡು ದಿನ ಬಿಳಿಮುಟ್ಟು ಆಗಬಹುದು. ಮುಟ್ಟು ಬರುವ ಮುನ್ನಾದಿನಗಳಲ್ಲಿ, ಗರ್ಭಧಾರಣೆಯಾದಾಗ, ಲೈಂಗಿಕವಾಗಿ ಉದ್ರೇಕಗೊಂಡ ಸಂದರ್ಭಗಳಲ್ಲೂ ಬಿಳಿಮುಟ್ಟು ಆಗುವುದು ಸಹಜ. ಈ ತರಹ ಬಿಳಿಮುಟ್ಟಿಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಕೆಲವೊಮ್ಮೆ ಅನಾರೋಗ್ಯ, ಅಪೌಷ್ಠಿಕತೆ, ಗರ್ಭದ್ವಾರ ಹಾಗೂ ಯೋನಿ ಮಾರ್ಗಕ್ಕೆ ಸೋಂಕು ಉಂಟಾದಾಗ, ದೀರ್ಘಕಾಲ ಆ್ಯಂಟಿಬಯೋಟಿಕ್ ಅಥವಾ ಸ್ಟಿರಾಯ್ಡ್‌ ಮಾತ್ರೆ ತೆಗೆದುಕೊಳ್ಳುವಂತಹ ಸಂದರ್ಭಗಳಲ್ಲಿ ಹೆಚ್ಚು ಬಿಳಿಮುಟ್ಟು ಹೋಗುವುದು, ವಾಸನೆ ಹಾಗೂ ತುರಿಕೆಯಿಂದ ಕೂಡಿರುವುದು, ಒಳ ಉಡುಪೆಲ್ಲಾ ಕಲೆಯಾಗುವುದು.. ಇಂಥವೆಲ್ಲ ಆಗುತ್ತದೆ. ಅಂತಹ ಸಂದರ್ಭದಲ್ಲಿ ಅದು ಅಸಹಜ ಬಿಳಿಮುಟ್ಟು ಎಂದೆನಿಸಿಕೊಳ್ಳುತ್ತದೆ. ಆಗ ತಜ್ಞವೈದ್ಯರ ತಪಾಸಣೆ ಹಾಗೂ ಚಿಕಿತ್ಸೆ ಅಗತ್ಯವಿದೆ. ನಿಮಗಾಗುತ್ತಿರುವ ಬಿಳಿಮುಟ್ಟು ಅಸಹಜವೆನಿಸಿದರೆ, ಸಂಕೋಚಪಡದೆ ತಕ್ಷಣವೇ ವೈದ್ಯರ ಸಲಹೆ ಪಡೆದುಕೊಳ್ಳಿ.

ADVERTISEMENT

*
ನನಗೆ 39 ವರ್ಷ. ಎರಡು ಬಾರಿ ಸಿಸೇರಿಯನ್ ಆಗಿದೆ. ನನಗೆ 8 ತಿಂಗಳು 15 ದಿನ ತುಂಬಿದ್ದಾಗಮೊದಲನೇ ಡೆಲಿವರಿಯಾಗಿ ಜನಿಸಿದ ಮಗು 25 ದಿನ ಐಸಿಯುನಲ್ಲಿತ್ತು. ಆಮೇಲೆ ತೀರಿಕೊಂಡಿತು. ಮತ್ತೆ 2 ವರ್ಷ 6 ತಿಂಗಳು ಬಿಟ್ಟು ಗರ್ಭಿಣಿಯಾದೆ. ಆಗಲೂ ಪ್ರಸವ ಅವಧಿಗಿಂತ 20 ದಿನ ಮುಂಚೆಯೇ ಡೆಲಿವರಿಯಾಯಿತು. ಮಗುವಿಗೆ ಈಗ 10 ತಿಂಗಳು. ಆರಾಮಾಗಿದೆ. ಮನೆಯಲ್ಲಿ ಮತ್ತೆ ಮಗು ಬೇಕು ಎಂದು ಹೇಳುತ್ತಿದ್ದಾರೆ. ನನಗೆ ಬೇಡ ಎನ್ನಿಸುತ್ತಿದೆ. ಏಕೆಂದರೆ ಇದೆ ಪ್ರತಿ ಸಲ ತೊಂದರೆಯಾಗಿ ಮಗು ಪಡೆಯುವುದಕ್ಕೆ ಕಷ್ಟ. ಹೊಟ್ಟೆಯಲ್ಲಿ ನೀರು ಬತ್ತಿ ಹೋಗಿ ಮಗುವಿನ ಬೆಳವಣಿಗೆ ಕಡಿಮೆಯಾಗುತ್ತದೆ. ನಾವು ಬಡವರಾಗಿರುವುದರಿಂದ ಕೆಲಸಕ್ಕೆ ಹೋಗಲೇ ಬೇಕಾಗಿರುವ ಪರಿಸ್ಥಿತಿ. ನಾನೇನು ಮಾಡಲೀ?

–ಹೆಸರಿಲ್ಲ, ಊರು ಬೇಡ

ಉತ್ತರ: ನಿಮಗೆ ಈಗಾಗಲೇ 39 ವರ್ಷವಾಗಿದೆ ಎನ್ನುತ್ತೀರಿ. ಎರಡು ಸಿಸೇರಿಯನ್ ಆಗಿದೆ ಮತ್ತು ಆರ್ಥಿಕವಾಗಿಯೂ ಸಾಕಷ್ಟು ತೊಂದರೆ ಇದೆ ಎಂದು ಹೇಳಿದ್ದೀರಿ. ಇಂಥ ಸಂದರ್ಭದಲ್ಲಿ ಮತ್ತೊಂದು ಮಗು ಪಡೆಯಲು ಮನೆಯವರ ಒತ್ತಾಯವಿದ್ದರೂ ನಿಮಗೆ ವೈಯಕ್ತಿಕವಾಗಿ ಇನ್ನೊಂದು ಮಗುವನ್ನು ಹೆತ್ತು ಸಾಕುವ ಸಾಮರ್ಥ್ಯ, ಆಸೆ ಇದ್ದರೆ ಮಾತ್ರ ಮಗು ಮಾಡಿಕೊಳ್ಳಿ.

ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದರೆ ಇನ್ನೊಂದು ಸಿಸೇರಿಯನ್ ಮಾಡಿಸಿಕೊಳ್ಳಲು ಏನು ತೊಂದರೆ ಇಲ್ಲ. ಆದರೆ ವೈದ್ಯಕೀಯವಾಗಿ ನಾನು ಇನ್ನೊಂದು ಮಗು ಪಡೆಯಲು ಸಲಹೆ ಕೊಡಬಹುದೇ ಹೊರತು ಅದರಿಂದ ಎದುರಿಸಬೇಕಾದ ನಿಮ್ಮ ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ನೀವೇ ನಿರ್ಣಯಿಸಬೇಕು.

*
ಮೇಡಂ, ನನಗೆ 30 ವರ್ಷ. ಮುಟ್ಟಾಗಿ 11ರಿಂದ 12 ನೇ ದಿನಕ್ಕೆ ಸ್ವಲ್ಪ ಕಿಬ್ಬೊಟ್ಟೆನೋವು ಸೊಂಟನೋವು ಹಾಗೂ ಬಿಳಿಮುಟ್ಟು ಆಗುತ್ತದೆ. ಇದಕ್ಕೆ ಸಲಹೆ ನೀಡಿ?

ಉತ್ತರ: ಮೇಡಂ ನಿಮಗೆ ಪ್ರತಿಬಾರಿಯೂ ಹೀಗಾಗುತ್ತಿದ್ದರೆ ಅದು ಅಂಡಾಶಯದಿಂದ ಅಂಡೋತ್ಪತ್ತಿಯಾಗುವ ಮುನ್ಸೂಚನೆ ಇರಬಹುದು. ಈ ಸಮಯದಲ್ಲಿ ಸ್ವಲ್ಪ ಹೊಟ್ಟೆನೋವು, ಸೊಂಟನೋವು ಬರುವುದು ಸಹಜ. ಜೊತೆಗೆ ಸ್ವಲ್ಪ ಬಿಳಿಮುಟ್ಟು ಕೂಡಾ ಆಗಬಹುದು ಚಿಂತಿಸಬೇಡಿ. ಪ್ರತಿಬಾರಿಯೂ ಹೀಗೆ ಆಗುತ್ತದೆ ಎಂದರೆ ಯಾವುದೇ ಆತಂಕಬೇಡ. ತುಂಬಾ ಬಿಳಿಮುಟ್ಟಾದರೆ ವಾಸನೆ, ಕೆರತ ಇದ್ದು, ಸೊಂಟನೋವು, ಕಿಬ್ಬೊಟ್ಟೆ ನೋವು ಇದ್ದರೆ, ಅದು ಗರ್ಭಕೋಶದ ಸೋಂಕಿನಿಂದಾಗಿರಬಹುದು. ನಿಮಗೆ ಅಂತಹ ರೋಗಲಕ್ಷಣವಿದ್ದರೆ ತಜ್ಞವೈದ್ಯರಿಂದ ಚಿಕಿತ್ಸೆಪಡೆದುಕೊಳ್ಳಿ.

*
ನಮಗೆ ಮದ್ವೆ ಆಗಿ ನಾಲ್ಕು ವರ್ಷ ಆಗಿದೆ. ಇನ್ನೂ ಮಗು ಆಗಿಲ್ಲ. ನಾವು ಗಂಡ – ಹೆಂಡತಿ ಚೆನ್ನಾಗಿ ಇದ್ದೀವಿ. ಆದರೂ ಮಗು ಆಗಿಲ್ಲ. ಆಸ್ಪತ್ರೆಗೂ ಹೋಗಿ ಪರೀಕ್ಷೆ ಮಾಡಿಸಿಕೊಂಡೆವು. ಯಾವುದೇ ತೊಂದರೆ ಇಲ್ಲಾ ಅಂತ ಹೇಳಿದ್ದಾರೆ. ಏನೂ ಮಾಡಬೇಕು ಹೇಳಿ?

ಉತ್ತರ: ಕೆಲವೊಮ್ಮೆ ಅಂದರೆ ಶೇ 25ರಷ್ಟು ಸಂದರ್ಭದಲ್ಲಿ ಏನೂ ಕಾರಣವಿಲ್ಲದೆ ಬಂಜೆತನ ಇರಬಹುದು. ಅಂದರೆ ನಿಮ್ಮಲ್ಲಿಯೂ ಗರ್ಭಕೋಶ, ಅಂಡೋತ್ಪತ್ತಿ ಆಗುವಿಕೆ ಹಾರ್ಮೋನುಗಳ ಮಟ್ಟ ಸರಿಯಿದ್ದು ನಿಮ್ಮ ಪತಿಯಲ್ಲಿಯೂ ವೀರ್ಯಾಣುಗಳ ಸಂಖ್ಯೆ ಸರಿಯಾಗಿರಬಹುದು. ನೀವು ಮಗು ಪಡೆಯುವ ಪ್ರಯತ್ನ ಮುಂದುವರೆಸಿ. ನಿರಾಸೆಗೊಳ್ಳದೆ ಮತ್ತೊಮ್ಮೆ ಬಂಜೆತನ ಚಿಕಿತ್ಸಾ ತಜ್ಞರ ಹತ್ತಿರ ತೋರಿಸಿಕೊಂಡು ಮಗು ಪಡೆಯಲು ಪ್ರಯತ್ನಿಸಿ. ಮಗು ಆಗಿಲ್ಲವೆಂಬ ನಿರಾಸೆಯನ್ನು ಮರೆತು ಆಶಾಭಾವದಿಂದರಲು ಪ್ರಯತ್ನಿಸಿದರೆ ಖಂಡಿತ ನಿಮಗೆ ಮಗು ಆಗುತ್ತದೆ.

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

-ಡಾ. ವೀಣಾ ಎಸ್‌. ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.